ಮನಸ್ಸಿನಿಂದ ಮನಸ್ಸಿಗೆ

ಕಿರಣ ಪ್ರಪಂಚ

Friday, October 18, 2019




                                                        "ಸಂವಹನ"

"VU2JAY ಕಾಲಿಂಗ್....VU2JAY ಕಾಲಿಂಗ್...ಕೆನ್ ಯು ಹಿಯರ್ ಮಿ", ರೇಡಿಯೊ ತರಂಗಗಳ ಮೂಲಕ ನನ್ನ ಸಂದೇಶವನ್ನು ಹರಿಯಬಿಟ್ಟೆ. ನನ್ನ ರಿಸೀವರ್ ಗೆ ಯಾವುದೋ ಸಂದೇಶವೂ ರವ್ವಾನೆಯಾಯ್ತು. ಸಿಗ್ನಲ್  ಅಷ್ಟು ಸ್ಪಷ್ಟವಾಗಿರಲಿಲ್ಲ. ಮಾತು ಅಸ್ಪಷ್ಟವಾಗಿ ಕೇಳುತ್ತಿದ್ದಿತು. ಆಂಟೆನಾ ಸರಿ ಮಾಡಲು ಟೆರೇಸ್ ಮೇಲೆ ಹೋದೆ. ಅದನ್ನು ಸ್ವಲ್ಪ ತಿರುಗಿಸಿದ ಮೇಲೆ ರಿಸೀವರ್ ಗೆ ಬಂದ ಸಂದೇಶ ಸ್ಪಷ್ಟವಾಗಿ ಕೇಳಿತು. "AB2OXZ ಸ್ಟ್ಯಾಂಡಿಂಗ್...", ಎಂದು ಅತ್ತಲಿಂದ  ಉತ್ತರ ಬಂದಾಗ ಕುತೂಹಲದಿಂದ ಆಲಿಸಿದೆ. ಅದು ಅಮೆರಿಕಾದ ಕಾಲ್ ಸೈನ್! ಹಾಗಾದರೆ ಈಗ ನನ್ನ ಜೊತೆ ಮಾತನಾಡುತ್ತಿರುವ ವ್ಯಕ್ತಿ ಅಮೆರಿಕಾದ ಹವ್ಯಾಸಿ ಹ್ಯಾಮ್. ಅವನ ಜೊತೆ ಮಾತು ಮುಂದುವರಿಸಿದೆ. ಟೆಕ್ಸಾಸ್ ರಾಜ್ಯದ ವೇಕೊ ನಗರದವನಾದ  ಆತನ ಹೆಸರು ಡಿಕ್ ಪೆರಿ ಎಂದು. ವಕೀಲನಾಗಿರುವ  ಅವನು ತುಂಬಾ ಉತ್ಸಾಹದಿಂದ ತನ್ನ ಹವ್ಯಾಸಗಳ ಬಗ್ಗೆ ಹೇಳುತ್ತಿದ್ದ. ಅಷ್ಟುಹೊತ್ತಿಗೆ ನನ್ನ ತಮ್ಮನ ಮಗಳು ಸಾನ್ವಿ ನನ್ನನ್ನು ಹುಡುಕುತ್ತಾ ಟೆರೇಸ್ ಗೆ ಬಂದಳು. "ಅತ್ತೇ, ನೀವು ಇಲ್ಲಿದ್ದೀರಾ?...ಊಟಕ್ಕೆ ಬರಬೇಕಂತೆ...ಎಲ್ರೂ ಕಾಯ್ತಾ ಇದ್ದಾರೆ", ಎಂದಳು. ನಾನು ಡಿಕ್ ಪೆರಿಗೆ "ಸೆವೆಂಟಿ ತ್ರೀ ಡೆ VU2JAY" ಎಂದು ಹೇಳಿ ಮಾತುಮುಗಿಸಿದೆ. "ಏನತ್ತೇ ಅದು?...ಸೆವೆಂಟಿ ತ್ರೀ ಎಂದು ಯಾಕೆ ಹೇಳಿದ್ರಿ?", ಸ್ವಾನಿ ಕಂಗಳನ್ನು ಅರಳಿಸಿ ಕೇಳಿದಳು. ನಾನು ರಿಸೀವರ್ ಆಫ್ ಮಾಡುತ್ತಾ "ಅದು ಹ್ಯಾಮ್ ನಲ್ಲಿ ಬಳಸುವ ಕೋಡ್ ಲಾಂಗ್ವೇಜ್...ಸೆವೆಂಟಿ ತ್ರೀ ಎಂದರೆ ಅಭಿನಂದನೆಗಳು ಅಂತ ಅರ್ಥ...", ಎಂದು ಅವಳಿಗೆ ವಿವರಿಸುತ್ತಾ ಕೆಳಗೆ ಬಂದೆ. ತಮ್ಮನ ಹೆಂಡತಿ ಉತ್ತರಾ , "ಅತ್ತಿಗೆ, ಬನ್ನಿ ಬನ್ನಿ...ನಿಮಗೆ ಇಷ್ಟ ಅಂತ ವತ್ತು ಶ್ಯಾವಿಗೆ ಮಾಡಿದ್ದೇನೆ", ಎಂದಳು. ವತ್ತು ಶ್ಯಾವಿಗೆ ಎಂದ ಕೂಡಲೇ ಅಮ್ಮನ ನೆನಪಾಯ್ತು. ನನಗೆ ಇಷ್ಟ ಅಂತ  ಅಮ್ಮ ವಾರಕ್ಕೊಮ್ಮೆಯಾದರೂ ಅದನ್ನು ಮಾಡುತ್ತಿದ್ದಳು. ಶ್ಯಾವಿಗೆ ಯಂತ್ರದ ಹಿಡಿ ತಿರುಗಿಸುವುದು ತಮ್ಮ ಅಂಕಿತ್ ನ ಕೆಲಸ. ಅವನು ತಿರುಗಿಸುತ್ತಿದ್ದರೆ ನಾನು ತಟ್ಟೆಯನ್ನು ಅದರ ಕೆಳಗೆ ಹಿಡಿದು ಮೆಲ್ಲಗೆ ತಿರುಗಿಸುತ್ತಾ ಶ್ಯಾವಿಗೆಯನ್ನು ಅಗಲವಾಗಿ ಬೀಳುವಂತೆ ನೋಡಿಕೊಳ್ಳಬೇಕಾಗಿತ್ತು. ಹಿಡಿಯನ್ನು ತಿರುಗಿಸಿ ತಿರುಗಿಸಿ ಕೈ ನೋಯುತ್ತಿದ್ದುದರಿಂದ ತಮ್ಮನಿಗೆ  ವತ್ತು ಶ್ಯಾವಿಗೆಯೆಂದರೆ ಎಲ್ಲಿಲ್ಲದ ಸಿಟ್ಟು. ಅದನ್ನು ಮಾಡಬೇಡಿ ಎಂದು ಕೂಗಾಡುತ್ತಿದ್ದ. " ಅದಿತಿಯಕ್ಕನಿಗೆ ಇಷ್ಟ  ಅಂತ ಯಾವಾಗ್ಲೂ ಅದನ್ನೇ ಮಾಡ್ತೀರಾ...", ಎಂದು ಜಗಳವಾಡ್ತಾ ಇದ್ದ. ಆಗ ಅಮ್ಮ " ಅವಳು ಮದುವೆಯಾಗಿ ಬೇರೆ ಮನೆಗೆ ಹೋಗೋ ಹುಡುಗಿ ಕಣೋ...ಅಮ್ಮನ ಮನೆಯಲ್ಲಿ ಇರೋ ತನಕ ಅವಳಿಗಿಷ್ಟದ ತಿನಿಸು ತಿನ್ನಲಿ ಬಿಡು", ಎನ್ನುತ್ತಿದ್ದರು. ಅದೇನೋ ಅಮ್ಮನಿಗೆ ನಾನು ಹುಟ್ಟಿದಾಗಿನಿಂದಲೂ ನನ್ನ ಮದುವೆಯದೇ ಕನಸು. ಯಾವ ಸಾಮಾನನ್ನೂ ನೋಡಿದರೂ ಸಾಕು "ಅದಿತಿ ಮದುವೆಗೆ ಬೇಕು", ಎಂದು ಎತ್ತಿಡುತ್ತಿದ್ದಳು. ನನಗೆ ಅಷ್ಟು ಆದ್ಯತೆ ಕೊಡುವುದನ್ನು ನೋಡಿ ಅಂಕಿತ್ ಸಿಟ್ಟು ಇನ್ನೂ ಹೆಚ್ಚಾಗುತ್ತಿದ್ದಿತು. "ಅವಳನ್ನು ಇಲ್ಲೇ ಇಟ್ಟುಕೊಳ್ಳಿ...ನಾನೇ ಮದುವೆಯಾಗಿ ಬೇರೆ ಮನೆಗೆ ಹೋಗ್ತೇನೆ. ನನಗಿಷ್ಟವಾದ್ದನ್ನೇ ಮಾಡಿ", ಎಂದು ಮುನಿಸಿಕೊಂಡು ಹೇಳುವಾಗ ನಾವೆಲ್ಲಾ ಜೋರಾಗಿ ನಗುತ್ತಿದ್ದೆವು. ಅದೆಲ್ಲಾ ನೆನಪಾಗಿ ನನ್ನ ಕಂಗಳಲ್ಲಿ ತೆಳುವಾಗಿ ನೀರು ತುಂಬಿಕೊಂಡಿತು. ಈಗ ಅಮ್ಮ ಇಲ್ಲ. ನಾನು ಶಾಶ್ವತವಾಗಿ ತವರುಮನೆಯಲ್ಲಿಯೇ ಉಳಿದೆ. ಯಾವುದೂ ನಾವೆಣಿಸಿದಂತೆ ಆಗುವುದೇ ಇಲ್ಲವೆಂದೆನ್ನಿಸಿ ಹೃದಯ ಭಾರವಾಯ್ತು. ನನಗೆ ನೆನಪಾದುದೆಲ್ಲಾ ಅಂಕಿತ್ ಗೂ ನೆನಪಾಗಿರಬೇಕು. ಅವನ ಕಂಗಳೂ ಹನಿಗೂಡಿದವು. "ಅದ್ಯಾವ ಘಳಿಗೆಯಲ್ಲಿ ನಾನು ಹಾಗೆಂದೆನೋ ಕಣೇ...ನೀನು ಒಂಟಿಯಾಗಿ ಉಳಿಯಬೇಕಾಯ್ತು....ಸಾರಿ ಕಣೇ... ನಿನ್ನ ಮದುವೆ ಬಗ್ಗೆ ಅಮ್ಮ  ಅದೆಷ್ಟು ಕನಸು  ಕಂಡಿದ್ದಳು...ಆದರೆ ಅದೇ ನೆರವೇರಲಿಲ್ಲ ನೋಡು", ಎಂದನು. "ಹೋಗಲಿ ಬಿಡೋ...ನಾನೇನು ಒಂಟಿಯಲ್ಲ. ನನಗೆ ಎಷ್ಟೊಂದು ಹವ್ಯಾಸಗಳಿವೆಯಲ್ಲಾ...ಅದಕ್ಕೇ ನಾನು ಹ್ಯಾಮ್ ಕಲಿತದ್ದು. ಪರಿಚಯವೇ ಇಲ್ಲದ ವ್ಯಕ್ತಿ ಜೊತೆ ಮಾತಾಡುವಾಗ ನಾನು ಕ್ಷಣಕ್ಷಣಕ್ಕೂ ಹೊಸ ಅದಿತಿಯಾಗಿಬಿಡ್ತೇನೆ...ಈಗ ಹಳೆಯ ಮಾತೇಕೆ...ನೆಮ್ಮದಿಯಾಗಿ ವತ್ತು ಶ್ಯಾವಿಗೆ ತಿನ್ನಲು ಬಿಡು", ತಮಾಷೆ ಮಾಡಿ ವಾತಾವರಣವನ್ನು ತಿಳಿ ಮಾಡಿದೆ. 


      ಊಟ ಮಾಡಿದ ಮೇಲೆ ರೂಮಿಗೆ ಬಂದು ಮತ್ತೇ ಹ್ಯಾಮ್ ರಿಸೀವರ್  ಹಿಡಿದು ಕುಳಿತೆ. ಅಮ್ಮನ ನೆನಪು ಒತ್ತರಿಸಿಕೊಂಡು ಬಂದಿತು. ನಾನು ಡಿಗ್ರಿ ಮುಗಿಸಿದ ಕೂಡಲೇ ಒಳ್ಳೇ ಹುಡುಗನನ್ನು ನೋಡಿ ಮದುವೆ ಮಾಡಬೇಕೆಂದು ಅಮ್ಮನ ಜೀವಮಾನದ ಕನಸು. ನಾನು ನೋಡಲು ಸುಂದರವಾಗಿ ಇದ್ದುದರಿಂದ ಅವಳ ಕನಸಿಗೆ ಇನ್ನಷ್ಟು ರೆಕ್ಕೆಗಳು ಮೂಡಿದ್ದವು. ನಾನು ಎಂ.ಎ ಮಾಡುತ್ತೇನೆಂದು ಹಠ ಮಾಡಿದ್ದರಿಂದ ಮನಸ್ಸಿಲ್ಲದಿದ್ದರೂ ಓದಲು ಮೈಸೂರಿಗೆ ಕಳಿಸಿದಳು. ಅಲ್ಲಿ ಪರಿಚಯವಾದ ವಿನೀತ್ ಮುಂದೆ ಪ್ರೇಮಿಯಾದ. ಅವನ ಜಾತಿ ಬೇರೆಯಾದ್ದರಿಂದ ಆಮ್ಮ  ಬಿಲ್ಕುಲ್ ಒಪ್ಪಲಾರಳೆಂದು ಯಾರಿಗೂ ಸುಳಿವು ಬಿಟ್ಟುಕೊಡದೆ ಗುಟ್ಟಾಗಿ ಮದುವೆಯಾದೆ. ವಿಷಯ ಗೊತ್ತಾಗಿ ಅಮ್ಮ ಹಾಸಿಗೆ ಹಿಡಿದಳು. ಮದುವೆಯಾದಮೇಲೆಯೇ ಗೊತ್ತಾಗಿದ್ದು ವಿನೀತ್ ತೀರಾ ಮುಂಗೋಪಿ ಅಂತ!!  ನನ್ನ ಮಾತುಗಳನ್ನು ಬಲುಬೇಗನೇ ಅಪಾರ್ಥ ಮಾಡಿಕೊಳ್ತಿದ್ದ. ಹೊಸತರಲ್ಲಿ ಅವನಿಗೆ ತಿಳಿಸಿ ಹೇಳಲು ತುಂಬ ಪ್ರಯತ್ನ ಪಡುತ್ತಿದ್ದೆ. ಯಾರಾದರೂ ಹೊಸಬರು, "ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತಾಡ್ತೀರಿ?, " ಅಂತಾ ಕೇಳಿದರೆ, ನಾನಾಗ, " ನಾವು ಕನ್ನಡವನ್ನೇ ಮಾತಾಡ್ತೇವೆ. ಆದರೆ ನನ್ನ ಕನ್ನಡ ಬೇರೆ, ಅವನದು ಬೇರೆ", ಎಂದು ತಮಾಷೆಯಾಗಿ ಎನ್ನುತ್ತಿದ್ದೆ. ಅದೆಲ್ಲಾ ನೆನಪಾಗಿ ಮುಗುಳ್ನಗೆ ಮೂಡಿತು. ಹ್ಯಾಮ್ ರೀಸೀವರ್ ಗೆ ಯಾವುದೋ ಸಿಗ್ನಲ್  ಬಂದಿದ್ದರಿಂದ ಗೊರ್ ಗೊರ್ ಎಂದಿತು. ಈಗ ಯಾರು ಸಂಪರ್ಕಕ್ಕೆ ಬರಬಹುದು ಎಂದುಕೊಳ್ಳತ್ತಲೇ "ಅಲ್ಲಾ, ಎಷ್ಟು ವಿಚಿತ್ರ!!...ಪ್ರಪಂಚದ ಯಾವ ಭಾಗದವರೋ ಏನೋ...ಯಾವ ಭಾಷೆಯವರೋ ಏನೋ...ಆದರೂ ಅವರ ಜೊತೆ ಎಷ್ಟು ಚೆನ್ನಾಗಿ ಮಾತನಾಡಬಹುದು...ಎಷ್ಟು ಚೆನ್ನಾಗಿ ಪರಸ್ಪರ  ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು...ಯಾರೋ ತಿಳಿಯದ ಅಪರಿಚಿತ ವ್ಯಕ್ತಿಯ ಜೊತೆ ಅಷ್ಟು ಚೆನ್ನಾಗಿ ಸಂವಹನ ಮಾದುತ್ತೇವೆ...ನಮ್ಮ ಹತ್ತಿರವೇ ಇರುವ ಮನಸುಗಳ ಜೊತೆ ಯಾಕೆ ಹೊಂದಾಣಿಕೆ ಆಗುವುದಿಲ್ಲ?!...ಎಷ್ಟು  ವಿಚಿತ್ರ ಅಲ್ವಾ.... ವಿನೀತ್ ನ ಬಿಟ್ಟು ಬಂದ ಘಳಿಗೆಯಿನ್ನೂ  ಹಸಿಯಾಗಿ ನೆನಪಿದೆ. ಕೋತಿ, ಆದಿನ ಹೇಗೆ ನಡೆದುಕೊಂಡುಬಿಟ್ಟ. ಅವನಿಗೆ ಇಷ್ಟ ಅಂತ ಮಲ್ಲಿಗೆ ದೋಸೆ ಮಾಡಿದ್ದೆ. ನಾನು ಬಿಸಿಬಿಸಿಯಾಗಿ ದೋಸೆ ಹಾಕಿಕೊಟ್ಟರೆ ಖುಷಿಯಾಗಿ ತಿಂದ. ಆಮೇಲೆ ನಾನು ತಿನ್ನಲು ಕುಳಿತೆ. ಟಿ.ವಿ.ಯಲ್ಲಿ ನನಗಿಷ್ಟವಾದ ಕಾರ್ಯಕ್ರಮ ಬರುತ್ತಿದ್ದುದರಿಂದ ಟ.ವಿ. ಮುಂದೆ ತಿನ್ನುತ್ತಾ ಕುಳಿತೆ. ಹಂಚಿನ ಮೇಲೆ ದೋಸೆ ಹಾಕಿದ್ದರಿಂದ ಅಲ್ಲೇ ಇದ್ದ ವಿನೀತ್ ಗೆ, "ವಿನೂ, ಹಂಚಿನ ಮೇಲೆ ದೋಸೆ ಹಾಕಿದ್ದೇನೆ. ತಂದುಕೊಡೋ...", ಎಂದೆ. ನಾನು ಸಹಜವಾಗಿಯೇ ಹೇಳಿದ್ದೆ. ಆದರೆ ಅವನಿಗೆ ಏನನ್ನಿಸಿತೋ ಏನೋ...ಒಂದೇ ಬಾರಿಗೆ ರೊಚ್ಚಿಗೆದ್ದ. "ಏನೇ...ನನಗೇ ಅಡುಗೆ ಮನೆ ಕೆಲಸ ಹೇಳ್ತೀಯಾ?...ನಿನಗಿಂತ ನನ್ನ ಸಂಬಳ ಕಡಿಮೆ ಅಂತಾ ನನ್ನನ್ನು ಹಿಂಗೆ ಹಂಗಸ್ತೀಯಲ್ಲಾ...ಯೂ ಬಿಚ್", ಎಂದು ಜೋರಾಗಿ ರಿಮೋಟ್ ತೆಗೆದುಕೊಂಡು ನನ್ನ ಮುಖದ ಮೇಲೆ ಎಸೆದ. ಅದು ಸೀದಾ ನನ್ನ ಕಣ್ಣಿಗೆ ಬಿದ್ಡಿತು. ಅಮ್ಮಾ ಎಂದು ಜೋರಾಗಿ ಕೂಗಿದೆ. ಅವನು ಇನ್ನಷ್ಟು ಹೀಯಾಳಿಸತೊಡಗಿದ. ನನಗೂ ಅದೆಲ್ಲಿತ್ತೋ ಅಷ್ಟೊಂದು ಕೋಪ..."ಏ ಈಡಿಯೆಟ್..., ನೀನು ಮನುಷ್ಯನೇ ಅಲ್ಲ. ಸ್ಯಾಡಿಸ್ಟ್ ನೀನು...", ಎಂದು ಜೋರಾಗಿ ಕೂಗಾಡಿ ಮನೆಯಿಂದ ಹೊರಗೆ ಬಂದುಬಿಟ್ಟೆ. ರಾತ್ರಿ ಹತ್ತು ಗಂಟೆ. ಎಲ್ಲಿಗೆ ಹೋಗಬೇಕೆಂದು ತಿಳಿಯಲಿಲ್ಲ. ಅಮ್ಮ  ಹತ್ತಿರ ಸೇರಿಸೋಲ್ಲ ಅಂತ ಗೊತ್ತಿತ್ತು. ಆದರೆ ಬೇರೆ ವಿಧಿಯಿಲ್ಲದೆ ನೇರವಾಗಿ ಅಮ್ಮನ ಮನೆಗೇ ಹೋದೆ. ಬಾಗಿಲು ತೆಗೆದ ಅಂಕಿತ್ ಬೆರಗಾಗಿ ನಿಂತ. ಅವನನ್ನು ತಳ್ಳಿಕೊಂಡೇ ಅಮ್ಮನ ರೂಮಿಗೆ ದೌಡಾಯಿಸಿದೆ. ನನ್ನನ್ನು ನೋಡಿ ಅಮ್ಮನೂ ದಿಗ್ಬ್ರಾಂತಿಯಾದಳು. ನಾನು ಸೀದಾ ಅವಳ ಬಳಿಗೆ ಹೋಗಿ ಅವಳ ಕಾಲುಗಳನ್ನು ಹಿಡಿದುಕೊಂಡು ನಡೆದುದನ್ನೆಲ್ಲಾ ಅಳುತ್ತಲೇ ಹೇಳಿದೆ. ಅವಳು ಒಂದೂ ಮಾತನಾಡದೆ ಸುಮ್ಮನೇ ಕೇಳಿಸಿಕೊಂಡಳು. ನಾನು ಆ ಮನೆಯಲ್ಲಿರಲು ಅವಳು ಒಪ್ಪಲಾರಳೆಂದು ಭಾವಿಸಿ ದೀನಳಾಗಿ ಅವಳ ಮುಖ ನೋಡಿದೆ. ಅವಳೂ ಸಹ ನನ್ನ ಮುಖವನ್ನೇ ಕೆಲನಿಮಿಷ ದೃಷ್ಟಿಸಿ ನೋಡಿ, "ಹೋಗಲಿ ಬಿಡು. ನಾವು ಎಷ್ಟೇ ಬೆಲೆಬಾಳುವ ಚಪ್ಪಲಿಯನ್ನು ತೆಗೆದುಕೊಂಡರೂ ಹೊರಗೇ ಬಿಡುತ್ತೇವಲ್ಲಾ...ಹಾಗೆ ಎಂತಹುದೇ ಸಂಬಂಧವಾದರೂ ಅದು ಸರಿಯಿಲ್ಲ  ಎಂದರೆ ಅದು ಚಪ್ಪಲಿಗೇ ಸಮ. ಹೊರಗೆ ತಳ್ಳಿಬಿಡಬೇಕು...", ಎಂದಳು. ಅವಳ ಮಾತನ್ನು ಕೇಳಿ ನಾನು ಬೆರಗಾದೆ. ಅಮ್ಮನಿಂದ ಆ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಅನಕ್ಷರಸ್ತೆ  ಅಮ್ಮ ಅಷ್ಟು ಧೈರ್ಯವಾಗಿ ಸಮಾಧಾನ ಮಾಡಿದಾಗ ನನಗೆ ದುಃಖ ಉಮ್ಮಳಿಸಿಕೊಂಡು ಬಂದು ಅವಳನ್ನು ತಬ್ಬಿಕೊಂಡು ಜೋರಾಗಿ ಅತ್ತುಬಿಟ್ಟಿದ್ದೆ. ಮುಂದೆ ವಿನೀತ್ ನಿಂದ ಡಿವೊರ್ಸ್ ತೆಗೆದುಕೊಂಡು, ಅಮ್ಮನ ಮನೆಯಲ್ಲಿಯೇ ಇರುವಂತಾಯ್ತು. ಅದೇ ಚಿಂತೆಯಲ್ಲಿ ಅಮ್ಮ ಅಸುನೀಗಿದಳು...  

   ಮತ್ತೇ ಹ್ಯಾಮ್ ರಿಸೀವರ್ ಸದ್ದು ಮಾಡಿತು. ಯಾರೋ ವ್ಯಕ್ತಿ ದೆಹಲಿಯಿಂದ ಮಾತನಾಡುತ್ತಿದ್ದನು. ನಾನು  ನೋವಿನ ನೆನಪಿನಿಂದ ಹೊರಬಂದು ಉತ್ಸಾಹದಿಂದ ಮಾತನಾಡತೊಡಗಿದೆ. ಸ್ವಲ್ಪಹೊತ್ತು ಮಾತನಾಡಿದ ಮೇಲೆ ಮನಸ್ಸು ಹಗುರವಾಯ್ತು. ಯಾರೋ ಏನೋ...ಕೇವಲ ಹವ್ಯಾಸಿ ಹ್ಯಾಮ್ ಎಂದು ಮಾತ್ರ ಗೊತ್ತು. ರೇಡಿಯೋ ತರಂಗಗಳ ಮೂಲಕ ಹಾದು ಬರುವ ಆ ದ್ವನಿಗಳ  ಜೊತೆ ಎಷ್ಟು ಆತ್ಮೀಯವಾಗಿ ಮಾತನಾಡಬಹುದು. ಅದೇ ಮನಸ್ಸು ಸರಿಯಿಲ್ಲದವರ ಜೊತೆ ಎಷ್ಟು ಹತ್ತಿರವಿದ್ದರೂ ಆತ್ಮೀಯವಾಗಿ ಮಾತನಾಡಲಾಗುವುದಿಲ್ಲ. ಮಾತುಗಳಲ್ಲಿ ಅದೆಷ್ಟು ಅಪಾರ್ಥಗಳು ಕಾಣುತ್ತವೆ. ಎಂಥ ವಿಪರ್ಯಾಸ...ಸಂವಹನ ಹತ್ತಿರವಿದ್ದಾಗಲೇ ಸರಿಯಾಗಿರುವುದಿಲ್ಲವೇನೋ...ತೀರಾ ಸಮೀಪದಲ್ಲಿದ್ದಾಗಲೇ ಹೃದಯದ ಸಿಗ್ನಲ್  ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲವೇನೋ... ಇದು ಇಂದು ನಿನ್ನೆಯ ಸಮಸ್ಯೆ ಅಲ್ಲ... ದೇವಾನು ದೇವತೆಗಳಿಗೂ ಸಂವಹನ ಸರಿಯಾಗಿ ಆಗಿಲ್ಲದೆ ಎಷ್ಟೋ ಸಂದರ್ಭಗಳು ಜರುಗಿವೆ...ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧ ನಡೆಯಲು ಸಹ ಸಂವಹನ ಸರಿಯಾಗಿ ಆಗದ ಕಾರಣ...ದ್ರೌಪದಿಯನ್ನು ಸ್ವಯಂವರದಲ್ಲಿ  ಅರ್ಜುನ ಗೆದ್ದುಕೊಂಡು ಮನೆಗೆ ಬಂದವನು ಬಾಗಿಲಲ್ಲಿ ನಿಂತು, ಒಳಗಿದ್ದ ಕುಂತಿಗೆ, "ಅಮ್ಮಾ, ಹೆಣ್ಣನ್ನು ಗೆದ್ದುಕೊಂಡು ಬಂದೆ" , ಅನ್ನುತ್ತಾನಂತೆ. ಅದನ್ನು ಸರಿಯಾಗಿ ಕೇಳಿಸಿಕೊಳ್ಳದ ಕುಂತಿ, ಹೆಣ್ಣು ಎಂಬ ಪದವನ್ನು ಹಣ್ಣು ಎಂದು ಭಾವಿಸಿ , "ಐವರೂ ಸಮನಾಗಿ ಹಂಚಿಕೊಳ್ಲಿ" ಎಂದಳಂತೆ. ಆಗ ದ್ರೌಪದಿ ಪಾಂಚಾಲಿ ಆದಳು... ಮುಂದೆ ಕುರುಕ್ಷೇತ್ರ ಯುದ್ದಕ್ಕೆ ಕಾರಣವೂ ಆದಳು !!!...ಅಂದರೆ ಹತ್ತಿರವಿದ್ದಾ ಗಲೇ ಸಂವಹನ ಸರಿಯಾಗಿ ಆಗದೆ ಅಪಾರ್ಥಗಳು ನಡೆಯುತ್ತವೆಯೋ ಏನೋ...ದೂರದ ದನಿಗೇ ಹೃದಯದ ಸಿಗ್ನಲ್ ಸ್ಪಂಧಿಸುವುದೊ ಏನೋ...ದೃಶ್ಯಕ್ಕಿಂತಲೂ ಶ್ರವಣ ಆಪ್ತವಾಗುವುದು ಇದೇ ಕಾರಣಕ್ಕೆ ಇರಬಹುದು....ನನ್ನ ಲಾಜಿಕ್ ಗೆ ನಾನೇ ನಗತೊಡಗಿದೆ. ಅದೇ ಸಮಯಕ್ಕೆ ಟಿ.ವಿ.ಯಲ್ಲಿ "ಈ ಸಂಭಾಷಣೇ...ನಮ್ಮ ಈ ಪ್ರೇಮ ಸಂಭಾಷಣೇ...ಅತಿ ನವ್ಯ...",ಎಂಬ ಹಾಡು ಮೂಡಿಬಂದದ್ದನ್ನು ಕೇಳಿ ಇನ್ನಷ್ಟು ಜೋರಾಗಿ ನಗು ಬಂದಿತು. ನಾನು ನಗುವ ಸದ್ದು ಕೇಳಿ ಪುಟ್ಟ ಸ್ವಾನಿ ಓದಿಬಂದು, "ಅತ್ತೇ, ಯಾಕೆ ನಗ್ತಾ ಇದ್ದೀರ...ನಂಗೂ ಹೇಳಿ", ಎಂದಳು. "ಏನೋ ನೆನಪಾಯ್ತು ಕಂದಾ...ಅದಕ್ಕೇ ನಕ್ಕೆ ಅಷ್ಟೇ...ಅದಿರಲಿ, ನಿನ್ನ   ಹೋಮ್ ವರ್ಕ್ ಆಯ್ತಾ...", ಎಂದೆ. "ಇಲ್ಲಾ ಅತ್ತೇ...ಇನ್ನೂ ತುಂಬಾ ಇದೆ", ಎಂದಳು ತುಟಿಯನ್ನು ಉದ್ದ ಮಾಡಿ. "ಹೌದಾ ಕಂದ, ಹಾಗಾದರೆ ಎಲ್ಲಾ ಬರಿ. ನಿನ್ನನ್ನು ಲಾಂಗ್ ಢ್ರೈವ್ ಕರೆದುಕೊಂಡು ಹೋಗಿ ಐಸ್ ಕ್ರೀಂ ಕೊಡಿಸುತ್ತೇನೆ ", ಎಂದೆ. ಅವಳು ಖುಷಿಯಿಂದ ತಲೆಯಾಡಿಸಿ, ಓಡಿಹೋಗಿ ಒಂದೇ ನಿಮಿಷಕ್ಕೆ ವಾಪಸ್ಸು ಬಂದು, "ಆಯ್ತು ಅತ್ತೇ...ಬನ್ನಿ ಹೋಗೋಣ", ಎಂದಳು. "ಅರೆರೆ, ಇಷ್ಟು ಬೇಗ  ಆಯ್ತಾ?!!!", ನಾನು ಅಚ್ಚರಿಯಿಂದ ಕೇಳಿದೆ. "ಓ...", ಎಂದು ಪುಸ್ತಕವನ್ನು ತೋರಿಸಿದಳು. ಅಲ್ಲಿ "ಎಲ್ಲಾ" ಎಂದು ಮಾತ್ರ ಬರೆದಿದ್ದಳು. ನಾನು ಕಣ್ಣರಳಿಸಿ ನೋಡಿದಾಗ, ಅವಳು ,"ನೀವೇ ತಾನೇ "ಎಲ್ಲಾ" ಬರಿ ಅಂತಾ ಹೇಳಿದ್ದು. ಅದಕ್ಕೇ ಬರೆದೆ...", ಎಂದಳು, ಕಣ್ಣುಹೊಡೆದು. ನಾನು ನಗು ತಡೆಯಲಾರದೆ, "ಹೌದೌದು ಬಿಡು...ಪದಗಳಿಗೆ ನಾನಾ ಅರ್ಥಗಳಿವೆ...ಅವರವರ ಭಾವಕ್ಕೆ ಆ ಆ ಅರ್ಥಗಳನ್ನು ಕೊಡುತ್ತವೆ...", ಎಂದು ಅವಳನ್ನು  ನನ್ನ ಬೆನ್ನ ಮೇಲೆ ಕೂಸುಮರಿ ಮಾಡಿ ಎತ್ತಿಕೊಂಡು ಕಾರ್ ನೆಡೆಗೆ ನಡೆಯುತ್ತ , " ಈ ಶ್ಲೋಕವನ್ನು ಹೇಳು ಮರಿ... ವಾಗರ್ಥವಿವ  ಸಂಪೃಕ್ತೌ  ವಾಗರ್ಥ ಪ್ರತಿ ಪತ್ಯಯೆ, ಜಗತಃ  ಪಿತರೌ ವಂದೇ ಪಾರ್ವತಿ ಪರಮೇಶ್ವರಹ..." ಎಂದು ಹೇಳಿಕೊಡತೊಡಗಿದೆ. ಸ್ವಾನಿ ತೊದಲು ಮಾತಿನಲ್ಲಿ ಮುದ್ದಾಗಿ ಹೇಳತೊಡಗಿದಳು....ಅದನ್ನು ಕೇಳುತ್ತಾ ಹೊರಗಿನ ತಂಗಾಳಿಗೆ ಮುಖ ವೊಡ್ಡಿದಾಗ ಮನಸ್ಸು ಯಾಕೋ ಉಲ್ಲಾಸಗೊಂಡಿತು...

- ಕಿರಣ್ ಪ್ರಸಾದ್ ರಾಜನಹಳ್ಳಿ

From,
Mrs. Kiran Prasad Rajanahally
#247, "Elegant grandeur"
Flat number-401
Jayanagar 7th block
(Opp to Jayanagar National College Play ground)
Bangalore-560070
Phone:9449459766


Posted by ಮನಸ್ಸಿನಿಂದ ಮನಸ್ಸಿಗೆ at 11:39 PM No comments:

Friday, June 21, 2019




         "ಯೋಧ"
"ಖಾಲಾ...,  ನಿಮ್ ಕೈಲಿ ಆಗ್ದಿದ್ರೆ ಇಲ್ಲೇ ಇಟ್ಬಿಡಿ...ನಾನೇ ಮನೆಗೆ ತರ್ತೇನೆ...", ಅಬೀದಾ ಚಿಕ್ಕಮ್ಮ ಹಫೀಜಾಳಿಗೆ ಹೇಳಿದಳು. "ಹೌದು, ತುಂಬಾ ಸುಸ್ತಾಗ್ತಿದೆ...ಇಲ್ಲೇ ಇಡ್ತೀನಿ...ನಾನಿಲ್ಲೇ ಸ್ವಲ್ಪ ಹೊತ್ತು ಮರದ ಕೆಳಗೆ ಕೂತಿರ್ತೇನೆ...ನೀನು ಮನೆಗೆ ಹೋಗಿ ನಿನ್ನ ಹೊರೆಯನ್ನು ಇಳಿಸಿ ಬಾ...ಹಾಗೆ ಬರ್ತಾ ಬಿಸಿ ಬಿಸಿ ಖಾಹ್ವಾ ತಕ್ಕೊಂಡು ಬಾ...ಗಂಟಲು ಕಟ್ಟಿದೆ...", ಹಫೀಜಾ ಅಲ್ಲೇ ಇದ್ದ ಮರದ ಬುಡಕ್ಕೆ ಒರಗಿ ಕುಳಿತು "ಅಲ್ಲಾ...", ಎಂದು ನಿಟ್ಟುಸಿರು ಬಿಟ್ಟಳು.
  ಪಹೆಲ್ಗಾಮ್ ...ನಿಸರ್ಗದ ಚೆಲುವನ್ನೆಲ್ಲಾ ಬಾಚಿ ಹೊದ್ದುಕೊಂಡು ಕಾಶ್ಮೀರದಲ್ಲಿ ಮೈಚೆಲ್ಲಿರುವ ಪ್ರದೇಶ. ಎಲ್ಲಿ ನೋಡಿದರೂ ಹಚ್ಚ ಹಸಿರು. ಜೂನ್ ತಿಂಗಳ  ಆ ಪರಿಸರದಲ್ಲಿ ಸ್ವರ್ಗದ ತುಣುಕು ಅಲ್ಲೇ ಬಿದ್ದಿದೆ ಎಂಬಂಥ ಪ್ರಕೃತಿ. ಕಣ್ಣ ದೃಷ್ಟಿ ಹಾಯುವವರೆಗೂ ಹಸಿರು ಹೊದಿಕೆಯನ್ನು ಹೊದ್ದ ನೆಲ...ದಾರಿಯುದ್ದಕ್ಕೂ ವೃಕ್ಷಸಿರಿ...ಹಕ್ಕಿಗಳ ನಿನಾದ...ಬೆಳಗಿನ ಚುಮುಚುಮು ಚಳಿಯಲ್ಲಿ ಅಬೀದಾ ತನ್ನ ಚಿಕ್ಕಮ್ಮ ಹಫೀಜಾಳ ಜೊತೆ ಕಟ್ಟಿಗೆ ತುಂಡುಗಳನ್ನು ತರಲು ಹೋಗಿದ್ದಳು. ಆಗಲೇ ಹಫೀಜಾಗೆ ಸುಸ್ತಾಗಿದ್ದು!
   ಭೂಲೋಕದ ಸ್ವರ್ಗವಾದ ಕಾಶ್ಮೀರಕ್ಕೆ ಅಸಂಖ್ಯ ಪ್ರವಾಸಿಗರು ಬಂದು ಹೋಗುತ್ತಲೇ ಇರುತ್ತಾರೆ. ನಿಸರ್ಗಮಾತೆಯ ತುಂಬು ಯೌವನದ ಚೆಲುವನ್ನು ಕಣ್ತುಂಬಾ ತುಂಬಿಕೊಂಡು, ಜೀವನ ಪೂರ್ತಿ ಮರೆಯಲಾಗದ ಸ್ವರ್ಗ ನೋಟವನ್ನು ಹೃದಯದಲ್ಲಿಟ್ಟುಕೊಂಡು ವಾಪಸ್ಸು ತಮ್ಮ ಊರಿಗೆ ಹಿಂದಿರುಗುತ್ತಾರೆ. ಕಾಶ್ಮೀರದಲ್ಲೇ ವಾಸಿಸುವವರನ್ನು ಅದೃಷ್ಟವಂತರೆಂದು ಭಾವಿಸುತ್ತಾರೆ. ಅದು ನಿಜವೂ ಕೂಡ...ಕಾಶ್ಮೀರಿ ಜನರನ್ನು ನೋಡಿದಾಗ ಹಾಗೆಯೇ ಅನ್ನಿಸುತ್ತದೆ. ಅವರ ಕಾಯ, ಹಾಲಿನ ಮೈಬಣ್ಣ, ತಿದ್ದಿತೀಡಿದ ಅಂಗಾಂಗಗಳನ್ನು ನೋಡಿದಾಗ "ದೇವರು, ಇಲ್ಲಿ ಪ್ರಕೃತಿ ಸಿರಿಯನ್ನಷ್ಟೇ ಕೊಟ್ಟಿಲ್ಲ...ಇಲ್ಲಿರುವ ಜನರಿಗೂ ರಮ್ಯ ರೂಪ ಕೊಟ್ಟಿದ್ದಾನಲ್ಲಾ ", ಎಂಬ ಅಸೂಯೆಯೂ ಆಗುತ್ತದೆ. ಆದರೆ ಆ ಕಾಶ್ಮೀರಿ ಜನರ ನಿತ್ಯ ಜೀವನವನ್ನು ಕೇಳಿದಾಗ ಬೇರೆ ಪ್ರದೇಶಗಳಲ್ಲಿರುವವರ ಮನಸ್ಸು ಕರಗುವುದು ಖಂಡಿತ. ಚೆಂದುಳ್ಳಿ ಚೆಲುವೆಯರಾದ ಕಾಶ್ಮೀರಿ ಮಹಿಳೆಯರು ದಿನಾ ಬೆಳಿಗ್ಗೆ ಎದ್ದು ಕಾಡಿಗೆ ಹೋಗಿ ಕಟ್ಟಿಗೆ ತುಂಡುಗಳನ್ನು ಆರಿಸಿ, ಹೊರೆ ಕಟ್ಟಿಕೊಂಡು, ತಲೆಯ ಮೇಲಿಟ್ಟುಕೊಂಡು ಮನೆಗೆ ಬರಬೇಕು. ಮನೆಯ ಮುಂದಿನ ಪಡಸಾಲೆಯಲ್ಲಿ ಕಟ್ಟಿಗೆ ಇಡುವುದಕ್ಕೆಂದೇ ಒಂದು ಜಾಗ ಮಾಡಿರುತ್ತಾರೆ. ಅಲ್ಲಿ ಸಂಗ್ರಹ ಮಾಡುತ್ತಾ ಹೋಗಬೇಕು. ಅದು ಅಲ್ಲಿನ ಮಹಿಳೆಯರು ಚಾಚೂ ತಪ್ಪದೆ ಮಾಡುವಂತಹ ನಿತ್ಯ ಕಾಯಕ. ಏಕೆಂದರೆ ವರ್ಷದಲ್ಲಿ ಕೇವಲ ಆರೇಳು ತಿಂಗಳಷ್ಟೇ ಅವರು ಹೊರಗೆ ಓಡಾಡಬಹುದು. ಆಮೇಲೆ ಇನ್ನಾರು ತಿಂಗಳು ಮಂಜುಮುಸುಕಿ, ಇಡೀ ಪ್ರದೇಶ ಹಿಮದಿಂದ ಮುಚ್ಚಿಕೊಂಡುಬಿಡುತ್ತದೆ. ಆಗ ಯಾರೂ ಮನೆಯಿಂದ ಹೊರಗೆ ಹೆಜ್ಜೆಯಿಡುವುದಕ್ಕೂ ಸಾಧ್ಯವಿಲ್ಲ. ಆರು ತಿಂಗಳಿಗಾಗುವಷ್ಟು ಸಂಗ್ರಹಿಸಿದ್ದ ದವಸ-ಧಾನ್ಯಗಳಲ್ಲೇ ಜೀವನ ನಡೆಸಬೇಕು. ಕಾಡಿಗೆ ಹೋಗಿ ತಂದು ಶೇಖರಿಸಿದ್ದ ಕಟ್ಟಿಗೆಯನ್ನು ಉರಿಸಿ ಅಡುಗೆ ಮಾಡಿಕೊಳ್ಳಬೇಕು. ಹಾಗಾಗಿ ಅಲ್ಲಿನ ಮಹಿಳೆಯರು ದಿನವೂ ಕಟ್ಟಿಗೆ ತರಲು ಹೋಗಲೇಬೇಕು. ಗಂಡಸರು ಟ್ಯಾಕ್ಸಿ ಓಡಿಸುತ್ತಲೋ, ವ್ಯಾಪಾರ ಮಾಡುತ್ತಲೋ ಹಣ ಸಂಗ್ರಹ ಮಾಡುತ್ತಾರೆ. ಹಿಮ ಮುಸುಕಿದಾಗ ಅವರೂ ಸಹ ಮನೆಯೊಳಗೆ ಬಂಧಿಗಳಾಗಬೇಕು....ಅಷ್ಟೇ ಅವರ ಜೀವನ...ಅಲ್ಲಿ ಇನ್ನಾವುದೇ ರೋಚಕತೆಯಿಲ್ಲ, ಮನರಂಜನೆಯಿಲ್ಲ...ಅರ್ಧ ವರ್ಷ ಬಂಧನದ ಜೀವನ...ಇನ್ನರ್ಧ ವರ್ಷ ದುಡಿಮೆ...ಇದುವೇ ಆ ಸ್ವರ್ಗವಾಸಿಗಳ ಜೀವನ ರಾಗ.
 ಅಬೀದಾ ಸುಂದರಿಯರಲ್ಲಿ ಸುಂದರಿ. ಹಾಲ್ಬಿಳಿಪಿನ ಮೈಬಣ್ಣಕ್ಕೆ ನೀಳ ಮೂಗು, ಬೊಗಸೆ ಕಂಗಳು, ಕೆನ್ನೆ ಮೇಲಿನ ಗುಳಿ...ಇನ್ನಷ್ಟು ಮೆರುಗು ನೀಡಿದ್ದವು. ತುಂಬುಗೆನ್ನೆಗಳು ಯಾವಾಗಲೂ ಸೇಬಿನಂತೆ ರಾಗರಂಜಿತವಾಗಿರುತ್ತಿದ್ದವು. ತುಂಬು ಹರೆಯ  ಇನ್ನಷ್ಟು ಚೆಲುವನ್ನು ತುಂಬಿತ್ತು. ಮನೆಯಲ್ಲಿ ಆಗಲೇ ಮದುವೆಯನ್ನೂ ಮಾಡುವ ಆಲೋಚನೆಯೂ ಅಂಕುರಿಸಿತ್ತು. ಪಹೆಲ್ಗಾಮ್ ಮುಖ್ಯರಸ್ತೆಯೊಂದಕ್ಕೆ ಅಂಟಿಕೊಂಡ ಒಂದು ಸಣ್ಣ ಓಣಿಯಲ್ಲಿ ಅಬೀದಾಳ ಪುಟ್ಟ ಮನೆಯಿತ್ತು. ಅಬೀದಾ ಮನೆಗೆ ಹೋಗಬೇಕೆಂದರೆ ಮುಖ್ಯರಸ್ತೆಯ ಮೂಲಕವೇ ಹೋಗಬೇಕಾಗಿತ್ತು. ಅಲ್ಲಿ ದೊಡ್ಡ ದೊಡ್ಡ ಅಂಗಡಿಗಳಿದ್ದವು. ಹಾಗಾಗಿ ಜನರ ಓಡಾಟದ ಜಾಗವಾಗಿತ್ತು. ತುಂಬಾ ಜನರು ಓಡಾಡುತ್ತಾರೆಂದು ಅಲ್ಲಿರುವ ಅಂಗಡಿಗಳ ಮುಂದೆ ಸದಾಕಾಲವೂ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ದರು. ಒಂದೊಂದು ಅಂಗಡಿಯ ಮುಂದೆ ಒಬ್ಬರು ಅಥವ ಮೂವರು ಆಯುಧದಾರಿಗಳಾಗಿ, ಸಜ್ಜಾಗಿ ವಿಗ್ರಹಗಳಂತೆ ನಿಂತೇ ಇರುತ್ತಿದ್ದರು. ಅವರ ಪಾಳಿ ಮುಗಿದಮೇಲೆ ಬೇರೆ ಸೈನಿಕರು ಬಂದು ಕಾವಲು ಮುಂದುವರೆಸುತ್ತಿದ್ದರು. ಅಬೀದಾ ಮನೆಯ ಬಳಿ ಇರುವ ರಸ್ತೆಯಲ್ಲಿ ಬೆಳಗಿನ ಹೊತ್ತು ನಿಲ್ಲುವ ಕಾಯಕ ವೀರಶೇಖರನದಾಗಿತ್ತು. ವೀರಶೇಖರ ಕರ್ನಾಟಕದ ಬೀದರ್ ಜಿಲ್ಲೆಯ ಭಾಲ್ಕಿ ಎಂಬ ಪುಟ್ಟ ಗ್ರಾಮದವನು. ತಂದೆ ತಾಯಿ ಇಬ್ಬರೂ ಅಂಗೈಯಗಲದ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದರು. ವೀರಶೇಖರ ಮೂರನೆಯಮಗ. ಇಬ್ಬರು ಅಕ್ಕಂದಿರಿಗೆ ಮದುವೆಯಾಗಿತ್ತು. ಇನ್ನೂ ಇಬ್ಬರು ತಮ್ಮಂದಿರು, ಒಬ್ಬ ತಂಗಿ ಇದ್ದ ಕಡುಬಡತನದ ಕುಟುಂಬ ಅವನದು. ಚಿಕ್ಕಂದಿನಿಂದ ದೇಶಪ್ರೇಮ ನರನಾಡಿಗಳಲ್ಲಿ ವ್ಯಾಪಿಸಿದ್ದರಿಂದ ದೊಡ್ಡವನಾದ ಮೇಲೆ ಸೈನ್ಯಕ್ಕೆ ಸೇರಿದ. ಬಡತನದಲ್ಲೇ ಬೆಳೆದಿದ್ದರೂ ವೀರಶೇಖರ ಕಟ್ಟುಮಸ್ತಾದ ಆಳಾಗಿಯೇ ಇದ್ದ. ಎತ್ತರದ ನಿಲುವು, ಆಕರ್ಷಕ ಮೈಕಟ್ಟು, ತೇಜೋವಂತ ಮೊಗವನ್ನು ಹೊಂದಿದ್ದ ವೀರಶೇಖರ ಯೋಧನ ಉಡುಪಿನಲ್ಲಿ ಚೆಲುವನಾಗಿ ಕಾಣಿಸುತ್ತಿದ್ದ. ಎದೆ ಸೆಟೆಸಿ ವಿಗ್ರಹದಂತೆ ನಿಂತಿರುವ ಅವನನ್ನು ನೋಡಿದರೆ ಹೆಮ್ಮೆಯ ಭಾವ ಮೂಡುವಂತಿತ್ತು. 
       ದಿನವೂ ಅಬೀದಾ ಕಟ್ಟಿಗೆಯನ್ನು ಹೊತ್ತು ಮನೆಗೆ ಬರುವ ಸಮಯದಲ್ಲೇ ವೀರಶೇಖರ ಅಂಗಡಿಯ ಮುಂದೆ ಪಹರೆಗೆ ನಿಲ್ಲುತ್ತಿದ್ದ. ವಿಗ್ರಹದಂತೆ ಅಲುಗಾಡದೆ ನಿಲ್ಲುತ್ತಿದ್ದ ಅವನ ಕಣ್ಣ ಗುಡ್ಡೆಗಳು ಮಾತ್ರ ಕಂಡೂ ಕಾಣದಂತೆ ಅಲುಗಾಡುತ್ತಾ ಸುತ್ತಲೂ ವೀಕ್ಷಿಸುತ್ತಿದ್ದವೇ ಹೊರತು, ಅವನು ಮಾತ್ರ ಒಂದು ಹೆಜ್ಜೆಯೂ ಕದಲದೆ ನಿಲ್ಲುತ್ತಿದ್ದ. ಒಂದು ದಿನ ಅಬೀದಾ ಅವನ ಮುಂದೆ ಹಾದು ಹೋಗುವಾಗ ಅವಳು ಕಿವಿಗೆ ಧರಿಸಿದ್ದ ಕುಂದಲಾ ಕಳಚಿ ಬಿದ್ದಿತು. ಎರಡೂ ಕೈಗಳಿಂದಲೂ ತಲೆಯ ಮೇಲೆ ಕಟ್ಟಿಗೆ ಹೊರೆ ಹೊತ್ತಿದ್ದರಿಂದ ಅವಳಿಗೆ ಬಗ್ಗಿ ಅದನ್ನು ತೆಗೆದುಕೊಳ್ಳಲಾಗಲಿಲ್ಲ. ಅಸಹಾಯಕಳಾಗಿ ಅವಳು ನಿಂತಿದ್ದರೂ ವೀರಶೇಖರ ಗಂಭೀರವಾಗಿ ನಿಂತೇ ಇದ್ದ. ಅವಳು ಕಟ್ಟಿಗೆ ಹೊರೆಯನ್ನು   ಕೆಳಗೆ ಇಳಿಸಿ, ವೀರಶೇಖರನ ಕಾಲಬುಡದಲ್ಲೇ ಬಿದ್ದ ಕುಂದಲಾ ತೆಗೆದುಕೊಂಡು, ತಲೆ ಎತ್ತಿದ ಆ ಒಂದು ಕ್ಷಣದಲ್ಲಿ ಇಬ್ಬರ ಕಣ್ಣುಗಳೂ ಸಂಧಿಸಿದವು. ಅದೇಕೋ ಇಬ್ಬರ ಮೈಯಲ್ಲೂ ಮಿಂಚಿನ ಸಂಚಾರವಾದಂತಾಯಿತು. ಒಂದೇ ಕ್ಷಣ...ಅವನು ಸ್ಥಬ್ಧನಾಗಿ ನಿಂತೇ ಇದ್ದ. ಅವಳು ಕಟ್ಟಿಗೆ ಹೊರೆ ಹೊತ್ತುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದಳು. ಅಂದಿನಿಂದ ದಿನವೂ ಅಬೀದಾ ಕಟ್ಟಿಗೆ ತರಲು ಹೋಗುವಾಗ, ಬರುವಾಗ ಎಲ್ಲೋ ಒಂದು ಕ್ಷಣ ಅವರ ನೋಟ ಸಂಧಿಸಿದಂತಾಗುತ್ತಿದ್ದಿತು. ಆದರೆ ಅದಕ್ಕೆ ಮೀರಿ ಮತ್ತೇನೂ ನಡೆಯಲೇ ಇಲ್ಲ. ಹೀಗೇ ಸುಮಾರು ದಿನಗಳಾದವು. ಬರುಬರುತ್ತಾ ಆ ಒಂದು ಕ್ಷಣಕ್ಕಾಗಿಯೇ ಕಾಯುತ್ತಿದ್ದೆವೇನೋ ಎಂಬ ಒಂದು ಸಣ್ಣ ಭಾವ ಇಬ್ಬರ ಮನದಲ್ಲೂ ಹರಿದಾಡತೊಡಗಿತು. 
            ಅಂದೂ ಸಹ ಹಾಗೇ ಆಯಿತು. ಕಡುಗೆಂಪು ಬಣ್ನದ ಫಿರನ್ ಮತ್ತು ಫೂಟ್ ತೊಟ್ಟ ಅಬೀದಾ ಎಂದಿಗಿಂತಲೂ  ಮೋಹಕವಾಗಿ ಕಾಣುತ್ತಿದ್ದಳು. ವೀರಶೇಖರನ ಕಣ್ಣುಗಳು ಕಂಡೂ ಕಾಣದಷ್ಟು ಮಿಸುಕಾಡಿದವು.  ಅಬೀದಾ ಅವನ ಮುಂದೆ ಬಂದಾಗ ಅವನೆಷ್ಟು ನಿಯಂತ್ರಿಸಿಕೊಂಡರೂ ಸಣ್ಣದಾಗಿ ಸೀನುವಂತಾಯ್ತು. ಅಬೀದಾ ಸುಮ್ಮನೆ ನಡೆದು ಮನೆಗೆ ಹೋದಳು. ಕಟ್ಟಿಗೆ ಹೊರೆಯನ್ನು ಮೂಲೆಯಲ್ಲಿ ಹಾಕಿ, ಚಿಕ್ಕಮ್ಮನಿಗಾಗಿ ಖಾಹ್ವಾ ಮಾಡಲು ಒಲೆಯ ಮೇಲೆ ನೀರಿಟ್ಟಳು. ಕುದಿಯುವ ನೀರನ್ನೇ ನೋಡುತ್ತಾ ನಿಂತಳು. ನೀರಿಗೆ ಕೇಸರಿ ದಳ, ಸಕ್ಕರೆ ಹಾಕಿದಳು. ಅದು ಕುದಿಯುತ್ತಿರುವಾಗ "ಏಕೋ ಅವನಿಗೂ ಶೀತ ಆದಂತಿದೆ.  ಸ್ವಲ್ಪ ಖಾಹ್ವಾ ಕೊಡಲೇ...", ಎಂದುಕೊಂಡಳು. ನಂತರ, "ನನಗೂ ಅವನಿಗೂ ಏನು ಸಂಬಂಧ...ಅಷ್ಟಕ್ಕೂ ಸೈನಿಕರಿಗೆ ನಾವೇನೂ ಕೊಡುವಂತಿಲ್ಲ. ಕೊಟ್ಟರೆ ಅನುಮಾನ ಬರುತ್ತದೆ...ದೊಡ್ಡ ಕದನವೇ ಆಗಬಹುದು!!  ಅವರೂ ಸಹ ಹಾಗೆಲ್ಲಾ ಏನೂ ತೆಗೆದುಕೊಳ್ಳುವುದಿಲ್ಲ...ಈ ಯೋಚನೆ ನನಗೇಕೆ ಬಂದಿತು...ಅಬ್ಬುಗೆ ಗೊತ್ತಾದರೆ ಏನಿಲ್ಲ", ಎಂದುಕೊಳ್ಳುತ್ತಾ ಚಕ್ಕೆ-ಏಲಕ್ಕಿಯ ಪುಡಿಯನ್ನು ಹಾಕಿ ಇನ್ನಷ್ಟು ಕುದಿಸಿದಳು. ಹೊಂಬಣ್ಣದ  ಖಾಹ್ವಾ ಸಿದ್ಧವಾದ ಮೇಲೆ ಪಿಂಗಾಣಿ ಕುಡಿಕೆಗೆ ಹಾಕಿಕೊಂಡು, ಚಿಕ್ಕಮ್ಮ ಹಫೀಜಾಗೆ ಕೊಡಲು ಹೋದಳು. ಅವಳು ಖಾಹ್ವಾ ಹಿಡಿದುಕೊಂಡು ಹೋಗುವಾಗ ಅದರ ಪರಿಮಳ ವೀರಶೇಖರನ ಮೂಗಿಗೆ ಬಡಿಯಿತು. "ನಾನೇಕೆ ಇವಳನ್ನು ಗಮನಿಸುತ್ತಿದ್ದೇನೆ....ಇದು ತಪ್ಪು...ನಾನು ಸೈನಿಕ...ಯಾರೋಡನೆಯೂ ಬೆರೆಯಬಾರದು...ಅದರಲ್ಲೂ ಅವಳು ಕಾಶ್ಮೀರಿ ಕನ್ಯೆ. ಎಷ್ಟೋ ಕಾಶ್ಮೀರಿಯರಿಗೆ ನಾವು ಸೈನಿಕರೆಂದರೆ ಆಗುವುದೇ ಇಲ್ಲ. ಅವಳನ್ನು ಮಾತನಾಡಿಸಿದರೂ ಸಾಕು...ದೊಡ್ಡ ಹಗರಣವಾಗುತ್ತದೆ...ಕ್ಯಾಪ್ಟನ್ ಏನಿಲ್ಲ...ಮಂಗಳಾರತಿ ಮಾಡಿಬಿಡುತ್ತಾರೆ...", ವೀರಸೇಖರ ಯೋಚನೆಗಳನ್ನು ಕೊಡವಿ ರಸ್ತೆಯೆಡೆಗೆ ದೃಷ್ಟಿ ನೆಟ್ಟ.
        ಮಾರನೆ ದಿನ ಅಬೀದಾ ಕಟ್ಟಿಗೆ ಹೊರೆ ಹೊತ್ತು ಬರುತ್ತಿರುವಾಗ ಅವಳ ಕಿವಿಯ ಕುಂದಲಾ ಮತ್ತೆ ಕೊಂಡಿ ಕಳಚಿ ಬಿದ್ದಿತು. ಈ ಬಾರಿ ವೀರಶೇಖರ ನಿಂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಬಿದ್ದಿತು. ವೀರಶೇಖರ ಸುಮ್ಮನೇ ನಿಂತಿದ್ದ. ಅಬೀದಾಳಿಗೆ ಏನನ್ನಿಸಿತೋ ಏನೋ ಒಂದರೆ ಕ್ಷಣ ನಿಂತವಳು, ಕಟ್ಟಿಗೆ ಹೊರೆಯನ್ನು ಕೆಳಗಿಳಿಸದೆ ಹಾಗೇ ಮುಂದೆ ಸಾಗಿ, ಮನೆಗೆ ಹೋದಳು. ಆಗಲೂ ವೀರಶೇಖರ ಸ್ಥಬ್ಧನಾಗಿ ನಿಂತೇ ಇದ್ದ. ಕುಂದಲಾ ಕಲ್ಲುಗಳ ಸಂಧಿಯಲ್ಲಿ ಬಿದ್ದಿದ್ದರಿಂದ ಅಲ್ಲಿ ನಡೆದಾಡುವ ಯಾರಿಗೂ ಕಾಣಲಿಲ್ಲ. ಮಧ್ಯಾಹ್ನವಾದಾಗ  ವೀರಶೇಖರನ ಪಾಳಿ ಮುಗಿಯಿತು. ಅವನ ಬದಲಿಗೆ ನಿಲ್ಲಲು ಬಲಬೀರ ಸಿಂಗ್ ಬಂದ. ಪರಸ್ಪರ ಸೆಲ್ಯೂಟ್ ಮಾಡಿದ ಮೇಲೆ, ವೀರಶೇಖರ ಆ ಜಾಗದಿಂದ ಕದಲಿದ. ಜೀಪ್ ಹತ್ತಲು ಹೋಗುವಾಗ , ಶೂ  ಸರಿ ಮಾಡಿಕೊಳ್ಳುವವನಂತೆ  ನಟಿಸಿ ಬಗ್ಗಿದ. ಮಿಂಚಿನಂತೆ ಆಕಡೆ ಈಕಡೆ ನೋಡಿ, ಅಬೀದಾಳ ಕಿವಿಯ ಕುಂದಲಾ ತೆಗೆದುಕೊಂಡು ಜೇಬಿಗಿಳಿಸಿದ. ಸಧ್ಯ ಯಾರೂ ಗಮನಿಸಲಿಲ್ಲ ಎಂದುಕೊಂಡು ಜೀಪ್ ಹತ್ತಿದ. ಆದರೆ ಅದನ್ನು ಇನ್ನೆರಡು ಕಂಗಳು ದಿಟ್ಟಿಸಿದವೆಂದು ಅವನಿಗೆ ಗೊತ್ತಾಗಲೇ ಇಲ್ಲ!! ಅಬೀದಾ ಮನೆಗೆ ಬಂದವಳೇ ಕಟ್ಟಿಗೆ ಹೊರೆಯನ್ನು ಮೂಲೆಗೆ ಹಾಕಿ,ಮನೆಯ ಹಿಂಬದಿಯ ಕಿಟಕಿಯಲ್ಲಿ ಕುಳಿತುಬಿಟ್ಟಿದ್ದಳು. ಆ ಕಿಟಕಿಯ ಮೂಲಕ ನೋಡಿದರೆ ವೀರಶೇಖರ ನಿಂತಿರುವುದು ಕಾಣಿಸುತ್ತಿದ್ದಿತು. ಅವಳಿಗೆಂತಹುದೋ ಕುತೂಹಲ. ಅಬ್ಬು ಬೇರೆ ಮನೆಯಲ್ಲಿ ಇರಲಿಲ್ಲ. ಅಮ್ಮಿ ತೀರಿ ಹೋಗಿ ನಾಲ್ಕು ವರಷಗಳಾಗಿದ್ದವು. ಹಫೀಜಾ ಚಿಕ್ಕಮ್ಮ ಅಮ್ಮಿಯ ತಂಗಿ. ಆಕೆಯನ್ನೇ ಅಬ್ಬು ಮರು ಮದುವೆಯಾಗಬಹುದಿತ್ತು. ಆದರೆ ಹಫೀಜಾ "ಅರ್ಧ ವಿಧವೆ". ಒಮ್ಮೆ ಅಬೀದಾಳೇ ತನ್ನ ಅಬ್ಬುನನ್ನು ಕೇಳಿದ್ದಳು. "ಅಬ್ಬು, ನೀನೇಕೆ ಖಾಲಾನ್ನ[ಚಿಕ್ಕಮ್ಮ] ಮದುವೆಯಾಗಬಾರದು?", ಎಂದು.  "ಅಯ್ಯೋ ಭೇಟಿ, ಹಫೀಜಾ ಅರ್ಧ ವಿಧವೆ. ಮದುವೆಯಾಗಲು ಬರುವುದಿಲ್ಲ" ಎಂದ ಅಬ್ಬು. ಮುಗ್ಧಳಾದ ಅಬೀದಾ ಏಕೆಂದು ಕೇಳಿದಾಗ, " ಗಂಡ ಸತ್ತಿರುವುದು ಖಚಿತವಾಗಿ ಗೊತ್ತಿದ್ದರೆ ಆಕೆ ವಿಧವೆ ಆಗ್ತಾಳೆ. ಆಗ ಅವಳನ್ನು  ಯಾರು ಬೇಕಾದರೂ ಮದುವೆಯಾಗಬಹುದು. ಆದರೆ ಹಫೀಜಾ ಗಂಡ ಭಯೋತ್ಪಾದನೆಯ ಚಟುವಟಿಕೆಯಲ್ಲಿ ಸಿಲುಕಿದ್ದ. ಅವನನ್ನು ಪೋಲೀಸರು ಬಂಧಿಸಿದ್ದರು ಅಂತ ಕೆಲವರು ಹೇಳ್ತಾರೆ. ಇನ್ನೂ ಕೆಲವರು ಭಯೋತ್ಪಾದಕರು ಕರೆದುಕೊಂಡು ಹೋದರು ಅಂತಾ ಹೇಳ್ತಾರೆ. ಇನ್ನೂ ಕೆಲವರು ಪೋಲೀಸರ ಗುಂಡಿಗೆ ಬಲಿಯಾದ ಅಂತಾನೂ ಹೇಳ್ತಾರೆ...ಹೀಗೆ ಗಂಡ ಸತ್ತಿರುವುದು ಅನುಮಾನವಿದ್ದಾಗ, ಆತನ ಹೆಂಡತಿಯನ್ನು ಅರ್ಧ ವಿಧವೆ ಎಂದು ಹೇಳ್ತಾರೆ. ಅವಳನ್ನು ಮದುವೆಯಾಗಲು ನಮ್ಮ ಧರ್ಮದಲ್ಲಿ ಸಮ್ಮತಿಯಿಲ್ಲ...", ಅಬ್ಬು ಹೇಳಿದಾಗ ಅಬೀದಾ ಸುಮ್ಮನಾಗಿದ್ದಳು. ಆಗಿನಿಂದ ಮದುವೆಯ ಬಗ್ಗೆ, ಗಂಡನ ಬಗ್ಗೆ ಅವಳಿಗೆ ಭಯ ಆವರಿಸಿತ್ತು. ಆ ಭಯವನ್ನೂ ಮೀರಿ ವೀರಶೇಖರನನ್ನು ನೋಡುವಾಗ ಒಂದು ತೆಳುವಾದ ಲಹರಿ ಹರಿದಾಡುತ್ತಿದ್ದಿತು. ಅವಳ ತಂದೆಗೋ ಇದ್ದೊಬ್ಬ ಮಗಳ ಮದುವೆ ಮಾಡುವ ಚಿಂತೆಯಷ್ಟೇ ಇದ್ದಿತು. ಆ ದಿನವೂ ಯಾವುದೋ ಗಂಡು ನೋಡಲು ಹೋಗಿದ್ದ. ಕೆಲಸವೇನೂ ಇರದಿದ್ದರಿಂದ ಅಬೀದಾ ಕಿಟಕಿಯ ಬಳಿಯೇ ಕುಳಿತಳು. ವೀರಶೇಖರ ಹೋಗುವಾಗ ತನ್ನ ಕುಂದಲಾ ತೆಗೆದುಕೊಂಡದ್ದು ಸ್ಪಷ್ಟವಾಗಿ ಕಂಡಿತು. ಅವಳ ಕಂಗಳು ಅರಳಿದವು. ಅವಳ ಹೃದಯ ನಗಾರಿಯಂತೆ ಹೊಡೆದುಕೊಂಡಿತು. 
       ಬೆಳಿಗ್ಗೆ ಅಬೀದಾ ಕಟ್ಟಿಗೆ ತರಲು ಹೊರಟಾಗ ಅವಳ ಅಬ್ಬು ," ಬೇಟಿ, ಬೇಗ ಬಂದು ಬಿಡು...ಇವತ್ತು ನಿನ್ನ ಮದುವೆ ನಿಶ್ಚಯ ಮಾಡ್ತೀವಿ, ಹಿಮ ಬೀಳೋದ್ರೊಳಗೆ ಮದುವೆ ಮಾಡ್ಬೇಕು", ಎಂದ. ಅಬೀದಾಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ತಲೆಯಾಡಿಸಿ ಕಟ್ಟಿಗೆ ತರಲು ಹೋದಳು. ಅಂಗಡಿಯ ಮುಂದೆ ಬಂದಾಗ, ಹೇಗೋ ಧೈರ್ಯ ಮಾಡಿ ಕಣ್ಣೆತ್ತಿ ನೋಡಿದಳು. ಆದರೆ ಅಲ್ಲಿ ವೀರಶೇಖರ  ಇರಲಿಲ್ಲ!! ಆ ಜಾಗದಲ್ಲಿ ಬೇರೆ ಸೈನಿಕ ನಿಂತಿದ್ದ. ಒಳಗೇ ವೇದನೆಯ ಎಳೆಯೊಂದು ಹರಿದಾಡಿದಂತಾಯ್ತು. "ಅವನೇಕೆ ಇಂದು ಬಂದಿಲ್ಲ...ಬೇರೆ ಏರಿಯಾದಲ್ಲಿ ಪಹರೆಗೆ ಹೋಗಿರಬಹುದೇ...ಏಕೆ...ಏಕೆ...ಇನ್ನು ಅವನು ನಂಗೆ ಸಿಗುವುದಿಲ್ಲ...ನಾನಿನ್ನು ಅವನ ಬಗ್ಗೆ ಯೋಚಿಸಬಾರದು...ಅಬ್ಬುಗೆ ಗೊತ್ತಾದರೆ ಏನಿಲ್ಲ. ಅಬ್ಬುಗೆ ಮೊದ್ಲೇ ಪೊಲೀಸರು, ಸೈನಿಕರು, ಭಯೋತ್ಪಾದಕರು...ಅಂದ್ರೇ ಆಗೋಲ್ಲ..ಎಲ್ಲಿ ನಾನೂ ಮುಂದೆ ಅರ್ಧ ವಿಧವೆ ಆಗಿಬಿಡ್ತಿನೋ ಅಂತಾ ಭಯ...ಅದಕ್ಕೇ ನನ್ನ ಯಾರಾದರೂ ವ್ಯಾಪಾರಿಗೊ, ಟ್ಯಾಕ್ಸಿ ಡ್ರೈವರ್ ಗೋ ಕೊಟ್ಟು ಮದುವೆ ಮಾಡಬೇಕಂತ ಇರೋದು...", ಯೋಚಿಸುತ್ತಲೇ ಕಟ್ಟಿಗೆ ಹೊರೆಯನ್ನು ಹೊತ್ತು ತಂದಳು. ಕೆಲವು ದಿನಗಳಾದವು. ಅವನು ಕಾಣಲೇ ಇಲ್ಲ. ಅವಳ ಮದುವೆಯೂ ಸರಳವಾಗಿ ನಡೆಯಿತು. ನೆಲಹಾಸು ಮಾರುವ ಇಮ್ರಾನ್ ಅವಳನ್ನು ವರಿಸಿ, ತನ್ನ ಮನೆಗೆ ಕರೆದುಕೊಂಡು ಹೋದ. ಗಂಡನ ಮನೆಗೆ ಹೋಗುವಾಗಲೂ ತಿರುತಿರುಗಿ ನೋಡಿದಳು. ಅಲ್ಲಿ ವೀರಶೇಖರ ಕಾಣಿಸಲಿಲ್ಲ!!
                                                            *                    *                      *                    *                   *
      ಅಂದು ಬೇತಾಬ್ ವ್ಯಾಲಿಯ ಪ್ರದೇಶದಲ್ಲಿ ಕೆಲಸ ಮುಗಿಸಿ, ಕ್ಯಾಂಪ್ ಗೆ ವಾಪಸ್ಸು ಬಂದ ವೀರಶೇಖರನಿಗೆ ತುಂಬಾ ಸುಸ್ತಾಗಿತ್ತು. ಹದವಾದ ಬಿಸಿನೀರಿನಲ್ಲಿ ತುಂಬಾ ಹೊತ್ತು ಸ್ನಾನ ಮಾಡಿ ಬಂದಮೇಲೆ ಮನಸ್ಸಿಗೆ ಸ್ವಲ್ಪ ಹಾಯೆನಿಸಿತು. ಊಟದ ಹಾಲಿಗೆ ಹೋಗಲು ಸಿದ್ಧನಾಗತೊಡಗಿದ. ವಾರ್ಡ್ ರೋಬ್ ತೆಗೆದು, ಅಡಿಯಲ್ಲಿದ್ದ ಟೀ ಶರ್ಟ್ ಎಳೆದು ತೆಗೆದುಕೊಂಡ. ಏನೋ ಕೆಳಗೆ ಬಿದ್ದಂತಾಯಿತು. ಜೊತೆಗೆ ಗೆಜ್ಜೆಯ ಸದ್ದೂ ಬಂದಿತು. ಕುತೂಹಲದಿಂದ ಬಗ್ಗಿ  ತೆಗೆದುಕೊಂಡು ನೋಡಿದರೆ ಅದು,  ಅಬೀದಾಳ ಕಿವಿಯ ಕುಂದಲಾ!! ಅದನ್ನು ಕೈಯಲ್ಲಿ ಹಿಡಿದು, "ಓ...ಇದಾ, ಆ ಹುಡುಗಿಯ ಕಿವಿಯ ಆಭರಣ...ಎಂಥ ಸುಂದರಿ ಆಕೆ...ಅವಳ ಮೇಲೆ ನನಗೇಕೆ ಮೋಹವಾಯ್ತೋ ಗೊತ್ತಿಲ್ಲ! ಅವಳಿಗೂ ನನ್ನ ಮೇಲೆ ಇಷ್ಟವಾಗಿತ್ತು...ಅವಳ ಕಣ್ಣುಗಳೇ ಹೇಳುತ್ತಿದ್ದವು...ಈ ಕುಂದಲಾನ್ನ ನಾನು ತೆಗೆದುಕೊಳ್ಳಲಿ ಅಂತಾನೇ ಅವಳು  ಆ ದಿನ  ಹಾಗೆ ಬಿಟ್ಟು ಹೋಗಿದ್ದು!! ಅವಳ  ಹೃದಯದ ಭಾಷೆ ನನಗೆ ಚೆನ್ನಾಗಿ ಅರ್ಥವಾಗಿತ್ತು...ಆದರೆ, ನಾವಿಬ್ಬರೂ ಒಂದಾಗೋದು ಈ ಜನ್ಮದಲ್ಲಿ ಸಾಧ್ಯವೇ?!!  ಎಂದಿಗೂ ಸಾಧ್ಯವಿಲ್ಲ...ಅವಳಿಗೆ  ಕಾಶ್ಮಿರ ಬಿಟ್ಟು ಬೇರೆ ಪ್ರದೇಶ ಗೊತ್ತಿಲ್ಲ....ನಾನು ನೋಡಿದ್ರೆ ಅಪ್ಪಟ ಬಯಲುಸೀಮೆಯವನು.  ಬೀದರ್ ನ ಆ ಉಗ್ರ ಬಿಸಿಲ ಝಳವನ್ನು ಈ ಹಾಲಿನ ಗೊಂಬೆ ತಡೆದುಕೊಂಡೀತೆ?! ...ಅವಳು ತಡೆದುಕೊಂಡರೂ...ಅವ್ವ ಅವಳನ್ನು  ಸೊಸೆಯೆಂದು ಸ್ವೀಕರಿಸಿಯಾಳೇ...ಈ ಕಾಶ್ಮೀರಿ ಹುಡುಗಿಯನ್ನು ನಾನೇನಾದರೂ ಮದುವೆಯಾದರೆ ಅವ್ವ ಎದೆ ಹೊಡೆದುಕೊಂಡಾಳು....ಇನ್ನೂ ನನಗೆ ತಮ್ಮ-ತಂಗಿಯರ ಜವಾಬ್ದಾರಿ ಇದೆ...ನಾನೀಗಲೇ ಮದುವೆಯಾಗುವ ಹಾಗಿಲ್ಲ...ಈ ಹುಡುಗಿಯನ್ನು ಮದುವೆಯಾಗಿ ನಾನು ಇಲ್ಲೇ  ನೆಲೆಸುವಂತೆಯೂ ಇಲ್ಲ!!  ಹಾಗೇನಾದರೂ ನಾನು ಆಲೋಚನೆ ಮಾಡೋದು ಗೊತ್ತಾದರೂ ಸಾಕು, ನನ್ನ ಕೆಲಸಾನೇ ಹೋಗುತ್ತೆ!...ಇದು ಸಾಧ್ಯವೇ ಇಲ್ಲದಿರುವಾಗ ಈ ರೀತಿ ಆಲೋಚನೆ ಮಾಡುವುದು ತರವೇ...?!   ಬೇಡವೇ ಬೇಡ...ನಾನು ಹೀಗೆ ಚಿಂತಿಸಲೇಬಾರದು...ಆ ಹುಡುಗಿ ನನ್ನ ಜೀವನದಲ್ಲಿ  ಒಂದು ಝಲಕ್ ಮಾತ್ರ!! ಅವಳೆಂದೂ ನನ್ನವಳಾಗಲು ಸಾಧ್ಯವೇ ಇಲ್ಲ...ಆ ಏರಿಯಾಕ್ಕೆ ನಾನು ಹೋಗೋದು ಮತ್ತೆ ಯಾವಾಗಲೋ ಏನೋ...ಮತ್ತೇ ಆ ಹುಡುಗಿಯನ್ನು ನಾನು ನೋಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ! ಅವಳೇನಿದ್ದರೂ  ಒಮ್ಮೆ  ನವಿರಾಗಿ  ಸೋಕಿದ ಒಂದು ಮೌನ ಲಹರಿಯಷ್ಟೇ....ಎಷ್ಟಾದರೂ ಯೋಧನಲ್ಲವೇ ನಾನು...ಎಲ್ಲದರ ವಿರುದ್ಧವೂ ಹೋರಾಡಬೇಕು...ಭಾವನೆಗಳ ವಿರುದ್ಧವೂ!! ನನ್ನ ಹಾಗೆ ಅವಳೂ ಸಹ ಯೋಧಳೇ!!... ಎಲ್ಲೇ ಇರಲಿ ಆ ಚೆಲುವೆ...ಸುಖವಾಗಿರಲಿ...", ಮುಗುಳ್ನಗುತ್ತಾ  ಕುಂದಲಾವನ್ನು  ಒಮ್ಮೆ ಪ್ರೀತಿಯಿಂದ ಸವರಿ,  ತನ್ನ ಸೂಟ್ ಕೇಸಿನ ತಳದಲ್ಲಿ  ಭದ್ರವಾಗಿ  ಮುಚ್ಚಿಟ್ಟ.
                                                               -ಕಿರಣ್ ಪ್ರಸಾದ್ ರಾಜನಹಳ್ಳಿ
# 691/ಸಿ, "ಅತೃ", 22ನೇ ಕ್ರಾಸ್,
19ನೇ ಮೇನ್, ಹೆಚ್.ಎಸ್.ಆರ್ 2ನೇ ಸೆಕ್ಟರ್,
ಬೆಂಗಳೂರು-560102
ಫೋನ್: 9449459766
Show quoted text
--
KIRAN PRASAD R
Posted by ಮನಸ್ಸಿನಿಂದ ಮನಸ್ಸಿಗೆ at 9:07 PM No comments:

                               

                                                
                        

"ಬಾಲ್ಕನಿಯಲ್ಲೊಂದು ಗೋರಂಟಿ ಗಿಡ"

          "ಒಂದು ದಿನ ಕಳೆದೇ ಬಿಟ್ಟಿತು..., ಅವನಿಲ್ಲವಾಗಿ!...ಇದೇ ಬಾಲ್ಕನಿಯಿಂದ, ನೆನ್ನೆ ಇದೇ ಹೊತ್ತಿಗೆ ಸರಿಯಾಗಿ ಗೇಟಿನ ಬಳಿ ಬಂದ ಅವನ ಜಡವಾದ ದೇಹವನ್ನು ನೋಡಿದ್ದು!!.... ಶಾಶ್ವತವಾಗಿ ನಿಶ್ಚಲನಾಗಿದ್ದ ಅವನನ್ನು  ಅಂಬುಲೆನ್ಸ್ ನಿಂದ  ಕೆಳಗಿಳಿಸಿದಾಗ, ನಾನು ಒಂದೇ ಉಸಿರಿನಲ್ಲಿ ಕೆಳಗೆ ಓಡಿಬಂದಿದ್ದು...ಎಲ್ಲಾ ಸಂಬಂಧಗಳನ್ನೂ ಕಳೆದುಕೊಂಡಿದ್ದೆ ಎಂದು ಭಾವಿಸಿದ್ದವಳು ಹಾಗೇಕೆ ಓಡಿಬಂದೆ...ಸಾವು  ಕ್ಷಣಮಾತ್ರದಲ್ಲಿ ಎಲ್ಲವನ್ನೂ ಮರೆಸಿಬಿಡುತ್ತಾ?...ಆದರೆ ನಾನೇಕೆ ದುಃಖಿಸಲಿಲ್ಲ?....ಒಂದು ಹನಿ ಕಣ್ಣೀರೂ ಕೆನ್ನೆ ಸೋಕಲಿಲ್ಲ!!...ಆಘಾತ  ಆಗಿದ್ದು ದಿಟ...ಕೆಲವೇ  ಕ್ಷಣಗಳಲ್ಲೇ ಚೇತರಿಸಿಕೊಂಡೆ...ಇವನ ಸಾವಿಗೆ ನಾನೇಕೆ ಸ್ಪಂಧಿಸಲಿ?....ಸೆಟೆದು ನಿಲ್ಲಬೇಕೆಂದುಕೊಳ್ಳುವಷ್ಟರಲ್ಲಿ ಸಾವಿರಾರು ಜನರು ನೆರೆದಿದ್ದರು...ಮೀಡಿಯಾದವರ ದೊಡ್ಡ ಗುಂಪು ಇನ್ನಷ್ಟು ಜನರು ಸೇರಲು ಕಾರಣವಾಯ್ತು...ಲೋಕದ ಕಣ್ಣಿಗೆ ನಾನು ಅವನ ಧರ್ಮಪತ್ನಿ....ಯಾರೋ ಸಾಂತ್ವನಿಸಿದರು...ಯಾರೋ ತಲೆ ಸವರಿದರು...ಮತ್ತಾರೋ ಅವನ ಜಡದೇಹದ ಪಕ್ಕವೇ ಕುರ್ಚಿ ಹಾಕಿ ನನ್ನನ್ನು ಕೂಡಿಸಿದರು...ಇನ್ನಾರೋ ಬಂದು ಅಪ್ಪಿಕೊಂಡು ಕಣ್ಣೀರು ಸುರಿಸಿದರು....ಅಲ್ಲಿಂದ ಹೇಗೆ ಕದಲಲಿ?...ಸಾವಿರ ಸಾವಿರ ಕಣ್ಣುಗಳು ಭೂತಕನ್ನಡಿಯಾಗಿದ್ದವು, ಜೊತೆಗೆ ಕ್ಯಾಮೆರಾಗಳ ಭೂತಕನ್ನಡಿಗಳು ನನ್ನ ಮೊಗದ ಮೇಲೇ ನೆಟ್ಟಿದ್ದವು...ಬೆಳಕಿನಲ್ಲಿ ಬಂಧಿಯಾಗಿದ್ದ ನಾನು ತಪ್ಪಿಸಿಕೊಳ್ಳುವುದೆಂತು?...ಸೆರಗನ್ನು  ಕುತ್ತಿಗೆಯ  ಪೂರಾ ಹೊದ್ದು, ಗಾಂಬಿರ್ಯದಿಂದ ಕುಳಿತು ಅವನನ್ನೇ ದಿಟ್ಟಿಸತೊಡಗಿದ್ದೆ....ಏಕೆಂದರೆ ಬೇರೆಲ್ಲೂ ನೋಡುವಂತಿರಲಿಲ್ಲ. ಅವನೊಬ್ಬನನ್ನು ಬಿಟ್ಟು ಉಳಿದೆಲ್ಲರೂ ನನ್ನನ್ನೇ ದಿಟ್ಟಿಸುತ್ತಿದ್ದರಲ್ಲ!!...ನನಗೆ ಎಲ್ಲ ಕೊಟ್ಟವನು...ಎಲ್ಲವನ್ನೂ ಕಸಿದುಕೊಂಡವನು....ಶಾಂತವಾಗಿ ಮಲಗಿದ್ದಾನೆ...ಎಷ್ಟೆಲ್ಲಾ ಬಣ್ಣಗಳನ್ನು ಎರಚಿದವನು...ಇಂದು ನಿತ್ರಾಣ!... ಅವನ ಮಾನಸ ಪುತ್ರ ಮೂರ್ತಿ ಸೋತು ಅವನ  ಪಕ್ಕದಲ್ಲೇ ನಿಂತಿದ್ದಾನೆ. ಆದರೂ  ಎಲ್ಲರನ್ನೂ...ಎಲ್ಲರನ್ನೂ ಸಂಭಾಳಿಸುತ್ತಿದ್ದಾನೆ. ಒಮ್ಮೆ ಮನಸಾರೆ ಅತ್ತುಬಿಡಮ್ಮಾ ಎಂದು ಉಲಿದ ದನಿಗಳು ಎಷ್ಟೋ...ಸುಮ್ಮನೆ ಕಣ್ಣೀರು ಬಂದೀತಾದರೂ ಹೇಗೆ?...ಬರುವುದಾದರೂ ಯಾಕೆ?...ಮೌನಕ್ಕೆ ಶರಣಾದೆ...ದುಃಖ ಹೆಪ್ಪುಗಟ್ಟಿದೆ ಎಂಬ ಗಾಬರಿ ಎಲ್ಲರಿಗೂ...ನನ್ನನ್ನು ಮಾತಬಾಡಿಸಲೂ ಹೆದರಿಕೆ ಜನರಿಗೆ...ಅದೇ ಸಮಯದಲ್ಲಿ ಯಾರೋ ಒಬ್ಬ ಬಂದು ಮೂರ್ತಿಯ ಕಿವಿಯಲ್ಲಿ ಏನೋ ಉಸಿರಿದ. ಎಷ್ಟೆಂದರೂ ಮೂರ್ತಿ ಅವನ ಬಲಗೈ ಬಂಟನಾಗಿದ್ದನಲ್ಲವೇ....ಅವನಿಗೆ ಗೊತ್ತಿಲ್ಲದ್ದು ಏನಿದೆ?...ಮೂರ್ತಿಯ ಮೊಗ ಮತ್ತಷ್ಟು ಗಾಬರಿಯಾಗಿದ್ದು ನನಗೆ ಗೋಚರಿಸಿತು...'ಏನಾಯ್ತು?' ಮೆಲ್ಲ ಪಿಸುಗುಟ್ಟಿದೆ...' ಆಕೆ ಮೂರ್ಚೆ ಹೋಗಿ ಬಿದ್ದುಬಿಟ್ಟಿದ್ದಾರಂತೆ...ಅಯ್ಯನವರ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದರಂತೆ' ಮೂರ್ತಿ ಅಳುಕುತ್ತಲೇ ಉಸುರಿದ. ನಾನು ಮತ್ತಷ್ಟು ಗಂಭೀರಳಾದೆ...ಈ ದಿನದ ನನ್ನ ಅಳುನುಂಗಿದ ಕಾರಣಗಳು ಒಂದೊಂದಾಗಿ ನೆನಪಾದವು....

"ಸುನೂ..., ನಿನ್ನ  ಉದ್ಯಮಕ್ಕೆ ಸಿಕ್ಕಾಪಟ್ಟೆ ಒಳ್ಳೇ ರೆಸ್ಪಾನ್ಸ್ ಬರ್ತಿದೆ. ಈಗ ಎಲ್ಲರಿಗೂ ಕಿರುಧಾನ್ಯಗಳ ಮಹತ್ವದ ಬಗ್ಗೆ ಅರಿವಾಗುತ್ತಿದೆ. ನಿನ್ನ ಫ್ಯಾಕ್ಟರಿಯಲ್ಲಿ ತಯಾರಾಗುವ ಕಿರುಧಾನ್ಯಗಳ ತಿನಿಸುಗಳು, ಪೇಯಗಳು ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಟ್ಟಿವೆ. ಅವುಗಳ ರುಚಿಗೆ,  ಶುದ್ಧ ಮೇಕಿಂಗ್ ಗೆ ಜನ ಮಾರುಹೋಗುತ್ತಿದ್ದಾರಂತೆ....ಬೇಡಿಕೆ ಅಪಾರವಾಗಿದೆ...ನೀನು ಇದನ್ನೇ ಮುಂದುವರಿಸು...ಈ ಉದ್ಯಮವನ್ನು ಇನ್ನಷ್ಟು ವಿಸ್ತರಿಸು...ಎಷ್ಟು ಸಾಧ್ಯವೋ ಅಷ್ಟು ಸಪೋರ್ಟ್ ನಾನು ಕೊಡ್ತೇನೆ...ನನ್ನ ರಾಜಕಾರಣದ ಕೆಲಸದಲ್ಲಿ ಬಿಡುವಾಗೋದು ಕಷ್ಟ...ಆದರೂ ಕೈಲಾದಷ್ಟು ಸಹಾಯ ಮಾಡುವೆ...", ಪತಿಯ ಪ್ರೀತಿಯ ಬೆಂಬಲಕ್ಕೆ ಕರಗಿಹೋದೆ. ಕಣಕಣದಲ್ಲೂ ಉತ್ಸಾಹದ ಹರಿದಾಟ. ಹುರುಪಿನಿಂದ ಮುನ್ನುಗ್ಗಿದೆ....ಒಂದೊಂದು ಮೆಟ್ಟಿಲೂ ಜಯದ ಪತಾಕೆ ಹಾರಿಸತೊಡಗಿತು...ನನ್ನದೇ ಐಡೆಂಟಿಟಿಯ ಪ್ರಖರ ಬೆಳಕಿನ ಕೆಳಗೆ ಮಬ್ಬುಗತ್ತಲು ಮೂಡತೊಡಗಿತು. ಸಮಯ ಎಂಬ ಸರದಾರ ಕ್ಷಣಮಾತ್ರವೂ ವಿರಮಿಸಲು ಬಿಡಲಿಲ್ಲ. ಮನೆಯ ಬಗ್ಗೆ ಚಿಂತಿಸಲೂ ಅವಕಾಶ ನೀಡಲಿಲ್ಲ. ಇಷ್ಟಾದರೂ  ಪತಿಯ ಮುಖದ ಮೇಲಿನ ಪ್ರೀತಿಯ ಮುಗುಳ್ನಗೆ ಮಾಸಲಿಲ್ಲ...ಜೊತೆಗೆ ಹೆಮ್ಮೆಯ ಭಾವವೂ ಸೇರಿದ್ದು ನೋಡಿ ಮಮತೆ, ಕರುಣೆ ಉಕ್ಕಿಬಂದಿತ್ತು. ಒಂದೆರಡು ಬಾರಿ ಆತ  ಊಟ ಮಾಡದೇ ಮಲಗಿದ್ದು ನೋಡಿ ನನ್ನೊಳಗಿನ ಅಮ್ಮ ಮಿಸುಕಾಡಿದಳು. ಮನೆಯ  ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳಲು ತಾಯಿಯಂತಹ ಹೆಂಗರಳು ಬೇಕೆಂಬ  ಆಲೋಚನೆ ಬಂದಾಗಲೇ ಆಕೆ ನೆನಪಾಗಿದ್ದು. ಗಂಡನನ್ನು ಕಳೆದುಕೊಂಡು ಮಾನಸಿಕ ಅಸ್ವಸ್ಥ ತಮ್ಮನನ್ನು ಸಾಕುತ್ತಾ  ಕುಗ್ರಾಮದಲ್ಲಿ ಬವಣೆ ಪಡುತ್ತಿದ್ದ ಆಕೆಯನ್ನು ಕರೆದುಕೊಂಡು ಬಂದು, ಮನೆಯ ಜವಾಬ್ದಾರಿ ಕೊಟ್ಟೆ. ಕೆಲವೇ ದಿನಗಳಲ್ಲಿ ಮನೆ ನಂದಗೋಕುಲದಂತೆ ಕಂಗೊಳಿಸತೊಡಗಿತು. ಎಲ್ಲಾ ಕಡೆ ಅಚ್ಚುಕಟ್ಟು...ಎಲ್ಲಾ ಕೆಲಸಗಳೂ ವ್ಯವಸ್ಥಿತವಾಗಿ ನಡೆಯತೊಡಗಿದಾಗ ನಿರಮ್ಮಳೆ ನಾನು...ಆದರೇನು ವಯಸ್ಸಿಗೂ, ದೇಹಕ್ಕೂ ಇರುವ  ಮತ್ಸರ ಮಾತ್ರ ನಿಲ್ಲಲಿಲ್ಲ. ಅದರ ಫಲವಾಗಿ ಕಪ್ಪು ಕೇಶರಾಶಿಯೊಳಗೆ ಬೆಳ್ಳಿ ರೇಖೆಯೊಂದು ಮಿನುಗಿತು. ಆಕೆಯೇ ಅದನ್ನು ಮೊದಲು ಗುರುತಿಸಿದ್ದು. "ಅಯ್ಯೋ, ಬಿಡು...ಬುದ್ದಿವಂತಿಕೆಯ ಲಕ್ಷಣ...ಬೇಸರವೇಕೆ...?", ಉಡಾಫೆ ನನ್ನದು. ಆಕೆ ಸುಮ್ಮನಿರಲಿಲ್ಲ. ಮನೆಯ ಹತ್ತಿರದ ನರ್ಸರಿಗೆ ಹೋಗಿ ಗೋರಂಟಿ ಸಸಿ ತಂದಳು. ಬಾಲ್ಕನಿಯಲ್ಲಿ ದೊಡ್ಡ ಕುಂಡದಲ್ಲಿ ಹಾಕಿ ಪೋಷಿಸತೊಡಗಿದಳು. ಅದು ತಮಾಷೆಯಾಗಿ ಕಂಡಾಗ, "ಅಲ್ವೇ...ಒಳ್ಳೊಳ್ಳೆ ಹೇರ್ ಡೈಗಳು ಸಿಗುತ್ತವೆ...ಸಿದ್ದಪಡಿಸಿದ ಮೆಹೆಂದಿ ಪುಡಿಯೇ ಸಿಗುತ್ತಲ್ಲಾ...ಇಷ್ಟು ಕಷ್ಟ ಪಡಬೇಕೆ?", ಎಂದಾಗಲೆಲ್ಲಾ ಆಕೆ ತಲೆಯಾಡಿಸುತ್ತಿದ್ದಳು. "ಅಕ್ಕಾ, ಅವೆಲ್ಲಾ ಒಳ್ಳೆಯದಲ್ಲಾ...ಕೂದಲು ಹಾಳಾಗುತ್ತದೆ...", ಹಠ ಅವಳದು. ಅವಳ ಆರೈಕೆಯಲ್ಲಿ ಗೋರಂಟಿ ಗಿಡ ಸೊಂಪಾಗಿ ಬೆಳೆಯಲೇ ಬೇಕಾಯ್ತು. ವಾರಕ್ಕೊಮ್ಮೆ ಅವಳ ಮಾತು ನಾನು ಕೇಳಲೇಬೇಕಾಯ್ತು. ಗೋರಂಟಿ ಗಿಡದಲ್ಲಿ ಬಲಿತ  ಎಲೆಗಳನ್ನು ಆರಿಸಿ, ಆರಿಸಿ ಕಿತ್ತು, ನೀರಿನಲ್ಲಿ ತೊಳೆದು ಕಲ್ಲಿನ ಮೇಲೆ ಅರೆಯಲು ಕುಳಿತಳೆಂದರೆ ಅವಳನ್ನು ಯಾರೂ ಕರೆಯುವಂತೆಯೇ ಇರಲಿಲ್ಲ. ನುಣ್ಣಗೆ ಅರಿದ ಮೇಲೆ, ಅದನ್ನೆಲ್ಲಾ ಪಿಂಗಾಣಿ ಬಟ್ಟಲಿಗೆ ಬಳಿದು, ಬಳಿದು ತುಂಬಿ, ಅದಕ್ಕೊಂದಿಷ್ಟು ತಾಜಾ  ಗಟ್ಟಿ ಮೊಸರು, ಒಂದೆರಡು ಹನಿ ನೀಲಗಿರಿ ಎಣ್ಣೆ,  ಒಂದು ಚಮಚ  ಬೆಟ್ಟದ ನಲ್ಲಿಕಾಯಿ ಪುಡಿ, ಅರ್ಧ ಹೋಳು ನಿಂಬೆರಸ  ಎಲ್ಲಾ ಹಾಕಿ, ಹದವಾಗಿ ಕಲಸಿ ಮುಚ್ಚಿಡುತ್ತಿದ್ದಳು. ಅದು ಚೆನ್ನಾಗಿ ಬಣ್ಣ ಬಿಟ್ಟುಕೊಂಡ ಮೇಲೆ ನನ್ನನ್ನು ಎಳೆದುಕೊಂಡು ಹೋಗಿ ಹಿತ್ತಲಲ್ಲಿ ಕುರ್ಚಿ ಹಾಕಿ ಕುಳ್ಳರಿಸುತ್ತಿದ್ದಳು. ನಾನು ರಗಳೆ ಮಾಡಬಾರದೆಂದು ನನ್ನಿಷ್ಟದ ಪುಸ್ತಕವೊಂದನ್ನು  ಕೈಯಲ್ಲಿಡುತ್ತಿದ್ದಳು. ನನ್ನ ಕೂದಲಿನ  ಎಳೆ ಎಳೆಯನ್ನೂ ಬಗೆದು ಗೋರಂಟಿಯನ್ನು  ಲೇಪಿಸುತ್ತಿದ್ದಳು. ಅವಳ ಲೇಪನದ ಹಿತಕ್ಕೆ ಕಣ್ಣುಗಳು ಮತ್ತಿನಲ್ಲಿ ಮೀಯುತ್ತಿದ್ದವು. ಕೈಯಲ್ಲಿದ್ದ ಪುಸ್ತಕವನ್ನು ಮುಚ್ಚಿಟ್ಟು , ಕಂಗಳನ್ನು ಅರೆಮುಚ್ಚಿ ಅವಳ ಕೈಯ ಮಾಲೀಶನ್ನು ಆಸ್ವಾದಿಸುತ್ತಿದ್ದೆ. ಮೆಹೆಂದಿ ಹಚ್ಚಿದ ಮೇಲೆ , ತಲೆಗೊಂದು ಶವರ್ ಕ್ಯಾಪ್ ಹಾಕಿ, "ಅಕ್ಕಾ, ಹಾಗೇ ಈ ಈಸೀ ಕುರ್ಚಿಯ ಮೇಲೆ ವಿರಮಿಸಿ. ಆಮೇಲೆ ನಾನೇ  ನಿಮ್ಮ ತಲೆ ತೊಳೆಯುತ್ತೇನೆ..," ಈ ವಿಷಯದಲ್ಲಿ ಅವಳದೇ ಆಜ್ಞೆ. ಅದರಲ್ಲಿ ಖಂಡುಗದಷ್ಟು ಹಿತವಿದ್ದುದರಿಂದ ನಾನೂ ಸುಮ್ಮನೆ ಕೇಳುತ್ತಿದ್ದೆ. ಅವಳು ಎಚ್ಚರಿಸಿದಾಗಲೇ ಸ್ನಾನದ ಮನೆಗೆ ಪ್ರವೇಶ. ಅಲ್ಲಿ ಹಂಡೆಯಲ್ಲಿ ಹದವಾಗಿ ಕಾದ ಬಿಸಿನೀರು. ಆ ಬಿಸಿನೀರಿನಲ್ಲಿ ಅವಳೇ ನನ್ನ ತಲೆಗೂದಲನ್ನು ನಾಜೂಕಾಗಿ ತಿಕ್ಕಿ ತೊಳೆದು, ಸ್ವಚ್ಚಮಾಡುತ್ತಿದ್ದಳು.  ತಲೆ ಸ್ನಾನ ಆದ ಮೇಲೆ, ಮತ್ತೆ ಹಿತ್ತಲಿನಲ್ಲಿ ಈಸೀ ಕುರ್ಚಿಯ ಮೇಲೆ ಕುಳ್ಳಿರಿಸಿ, ದೊಡ್ಡ ಟವೆಲ್ ತೆಗೆದುಕೊಂಡು, ಕೂದಲನ್ನು ನವಿರಾಗಿ ಉಜ್ಜಿ ಒರೆಸುತ್ತಿದ್ದಳು. ನನ್ನ ಕಣ್ಣುಗಳು ಮತ್ತೇ ಮತ್ತೇರಿಸಿಕೊಳ್ಳುತ್ತಿದ್ದವು. ಕೂದಲನ್ನು ಒರೆಸಿದ ನಂತರ ಅವಳು ಮಾಡುತ್ತಿದ್ದ ಮುಂದಿನ ಕೆಲಸ ಸುಖದ  ಇನ್ನೊಂದು ಮೆಟ್ಟಿಲನ್ನು ಏರಿಸುತ್ತಿತ್ತು! ಹಿಡಿಕೆಯಿರುವ ಪುಟ್ಟ ಕಬ್ಬಿಣದ ಬಾಣಲೆಯಲ್ಲಿ ಉರಿಯುತ್ತಿದ್ದ ಕೆಂಡವನ್ನು ಅದಾವ ಮಾಯೆಯಲ್ಲಿ ಸಿದ್ದಪಡಿಸುತ್ತಿದ್ದಳೋ ಗೊತ್ತಿಲ್ಲ. ಆ ಕೆಂಡದ ಮೇಲೆ ಸಾಂಭ್ರಾಣಿ ಪುಡಿಯನ್ನು ಹಾಕಿ, ನನ್ನ ಮಾರುದ್ದದ  ಕೂದಲನ್ನು ಒಂದು ಕೈಯಿಂದ  ಎತ್ತಿ  ಹಿಡಿದು, ಇನ್ನೊಂದು ಕೈಯಲ್ಲಿ ಸಾಂಭ್ರಾಣಿಯ ಹೊಗೆ ಲಾಸ್ಯವಾಡುತ್ತಿದ್ದ ಬಾಣಲೆಯನ್ನು ಕೂದಲ ಕೆಳಗೆ ಅತ್ತಿತ್ತ  ಆಡಿಸುತ್ತಾ ಶಾಖ ಕೊಡುತ್ತಿದ್ದರೆ....ಆಹಾ!...ಶಾಖವೂ ಇಷ್ಟು ತಂಪಾಗಿರುತ್ತದಾ ಎಂಬ ಅಚ್ಚರಿ ಎನಗೆ!!...ಸುಖಕ್ಕೆ ಬೇರೆ ವ್ಯಾಖ್ಯಾನವೇ ಇರಲಿಲ್ಲ...ಅದಾದ ನಂತರ  ಸುಖದ ಮತ್ತೊಂದು ಮಜಲಿನ ಪರಿಚಯ ಮಾಡಿಸುತ್ತಿದ್ದವಳೂ ಅವಳೇನೇ!!...ಸಾಂಬ್ರಾಣಿಯ ಹಿತವಾದ ಶಾಖಕ್ಕೆ ದೇಹ ಸಣ್ಣಗೆ ಬೆವರೊಡೆದಾಗ, ನಾಲಿಗೆ ಒಣಗಿದಂತೆನಿಸುತ್ತಿತ್ತು. ಇನ್ನೂ ಆ ಭಾವ ಸ್ಪಷ್ಟವಾಗುವ ಹೊತ್ತಿಗೆ ನನ್ನ ತುಟಿಯ ಬಳಿ ಘಮ್ಮೆನ್ನುವ ಫಿಲ್ಟರ್ ಕಾಫಿಯ ಲೋಟ ಪ್ರತ್ಯಕ್ಷವಾಗಿರುತ್ತಿತ್ತು! ಕಾಫಿಯ ಪರಿಮಳವನ್ನು ಆಘ್ರಾಣಿಸುತ್ತಾ, ಒಂದೊಂದೇ ಗುಟುಕನ್ನು ನಿಧಾನವಾಗಿ ಹೀರುತ್ತಿದ್ದರೆ ಸ್ವರ್ಗದ ವಿಳಾಸ ಸಿಕ್ಕಿಬಿಟ್ಟಿತೆಂದು ಗೊತ್ತಾಗಿಬಿಡುತ್ತಿತ್ತು. ಈ ಅಮಲು ನನ್ನನ್ನು  ಸಂಪೂರ್ಣವಾಗಿ ವಶಪಡಿಸಿಕೊಂಡಾದ ಮೇಲೆ, ಪ್ರತಿವಾರವೂ ಇದು ಪುರಾವರ್ತನೆಯಾಗತೊಡಗಿತು...ಗೋರಂಟಿ ಗಿಡವೂ ನಗುತ್ತಿತ್ತು!!

   ಮನೆಯಲ್ಲಿ ನಲಿದಾಡುತ್ತಿದ್ದ ಸಂತೃಪ್ತಿಯನ್ನು ನೋಡಿ ಸಾಧನೆಯ ಸುಧೆ ಇನ್ನಷ್ಟು ಗಾಢವಾಗಿ ವ್ಯಾಪಿಸತೊಡಗಿತು. ಮನೆಯ ಮೇಲ್ವಿಚಾರಣೆಯ  ಚಿಂತೆ ಇಲ್ಲ..., ಪತಿಯ ಯೋಗಕ್ಷೇಮದ ಬಗ್ಗೆ ನೆಮ್ಮಧಿಯ ಭಾವ...ಆಕೆ ಆಗ ದೇವತೆಯಂತೆ  ಕಂಡಳು...ಪತಿ ಹಿಮಾಲಯದಲ್ಲಿ ಆಸೀನನಾಗಿದ್ದ...ಬದುಕು ಇದಕ್ಕಿಂತ ಸುಂದರವಾಗಿರಲು ಸಾಧ್ಯವೇ ಇರಲಿಲ್ಲ !!!

      ತೇಲಿಹೋಗಿದ್ದೆ....ಯಶಸ್ಸು, ಕೀರ್ತಿಯ ಅಭಿಲಾಶೆಯ ಸಂಗಡದ ಭಾವಮೈಥುನದಲ್ಲಿ ಮುಳುಗಿ ಪರಮರಾಗ ಸುಖಿಯಾದೆ. ಪತಿಯ ಅಪ್ಪುಗೆಯಲ್ಲಿ ಕರಗಿ ಹೋಗುವ ಸುಖವನ್ನೂ ಮೀರಿಸುವ ಸುಖವಿದು. ಆಗಸದಲ್ಲಿ ವಿಹರಿಸುವವಳಿಗೆ ಭೂಮಿಯಲ್ಲಿಹ ಜೀವಿಯ ಮಿಸುಕಾಟ ಅರಿವಿಗೇ ಬರಲಿಲ್ಲ. ಅದಾವ ಘಳಿಗೆಯಲ್ಲಿ ಆಕೆ ಆತನ ರಾಧೆಯಾದಳೋ ಗೊತ್ತೇ ಆಗಲಿಲ್ಲ!!...ಉಪ್ಪರಿಗೆಯಲ್ಲಿದ್ದ  ಗೋರಂಟಿ ಗಿಡದ ಒಡನಾಟದಲ್ಲಿ ವಿಹರಿಸುತ್ತಿದ್ದವಳಿಗೆ , ಕೆಳಗೆ ಅಂಗಳದಲ್ಲಿ ಮಲ್ಲಿಗೆಯ ಮೊಗ್ಗೊಂದು ಹೂವಾಗಿ ಅರಳಿ, ಒಂಟಿಯಾಗಿದ್ದ ಜೀವವೊಂದನ್ನು  ತನ್ನ  ಸುಕೋಮಲ ಪಕಳೆಗಳಲ್ಲಿ ಬಂಧಿಸಿ, ನೇವರಿಸುತ್ತಿದೆಯೆಂದು!!...ಅರ್ಥವಾಗುವ ಹೊತ್ತಿಗೆ ಅವನ ಮೈಯ ತುಂಬಾ ಮಲ್ಲಿಗೆಯ ಪರಿಮಳ...ಉಪ್ಪರಿಗೆಯಲ್ಲಿನ ಬಣ್ಣ ತುಂಬುವ ಗಿಡಕ್ಕಿಂತ, ನೆಲದ ಮೇಲೆ ಬಿರಿದ ತಿಳಿಬಿಳಿಯ ಮಲ್ಲೆಯೇ ಅವನ ಆಯ್ಕೆಯಾಗಿತ್ತು. ಬಣ್ಣದ ಗಿಡವನ್ನು ತಾನೇ ಉಪ್ಪರಿಗೆ ಏರುವಂತೆ ಮಾಡಿದ್ದೆಂದು ಮರೆಯುವಷ್ಟು ಅವನು ಮಲ್ಲೆಯ ಘಮಕ್ಕೆ ಒಗ್ಗಿಕೊಂಡಿದ್ದ!!   

   ನನ್ನ ಹೆಣ್ತನಕ್ಕೆ ಇದಕ್ಕಿಂತ ಬೇರೆ ಅವಮಾನ ಬೇಕೆ?...ಇದಕ್ಕಿಂತ ನಂಬಿಕೆ ದ್ರೋಹವುಂಟೆ?...ಹಪಹಪಯುವಿಕೆಯಲ್ಲಿ ಬೆಂದೆ...ಬೆಂದು ಸುಮ್ಮನಿರಲಿಲ್ಲ...ಆಕೆಯನ್ನು ಹೊರಗಟ್ಟಿದೆ. ಮಾನಸಿಕ ಅಸ್ವಸ್ಥ ತಮ್ಮನನ್ನು ಕಟ್ಟಿಕೊಂಡು ಎಲ್ಲಿ ಹೋಗಲಿ ಎಂಬ ಅವಳ ಪ್ರಶ್ನೆಗೆ ವ್ಯಂಗ್ಯವಾಗಿ ನಕ್ಕೆ!!...ಆಕೆ ಎಲ್ಲೋ ದೂರ ಹೋದಳು. ಅವಳು ಹೋದ ಜಾಗ ಅವನಿಗೆ ಗೊತ್ತು ಎಂಬುದನ್ನು ನಾನು ಕಂಡುಹಿಡಿದೆ. ನನ್ನ ವಲಯದಿಂದ ಅವನನ್ನು ಎಂದೋ ದೂರತಳ್ಳಿದ್ದೂ ಆಗಿತ್ತು!!...ಪ್ರೀತಿ ಇರಲಿಲ್ಲ...ದ್ವೇಷವೂ ಇರಲಿಲ್ಲ!...ಸಾಮಿಪ್ಯ ಮಾತ್ರ ಬೇಡವಾಗಿತ್ತು!!!

 ಅಂದು ಮನಸಿನಿಂದ ದೂರ ಹೊದವನು, ಇಂದು ಜಡವಾಗಿ ಬಂದು ಅಂಗಳದಲ್ಲಿ  ಮಲಗಿದ್ದಾನೆ....ನನ್ನ ಕಂಗಳಲ್ಲಿ ಒಂದು ಹನಿ ಕಣ್ಣೀರೂ ಜಿನುಗುತ್ತಿಲ್ಲ....ಆಕೆ ನೋಡಿದರೆ  ಆಘಾತಗೊಂಡು ಸ್ಪೃಹೆ ತಪ್ಪಿದ್ದಾಳಂತೆ!!...ಯಾರ ಪ್ರೀತಿಯ ತೂಕ ಹೆಚ್ಚಿನದು?...ಗೊತ್ತಾಗುತ್ತಿಲ್ಲ!!...ಅಷ್ಟರಲ್ಲಿ ಒಬ್ಬ ಬಂದು ಮೂರ್ತಿಯ ಕಿವಿಯಲ್ಲಿ ಪಿಸುಗುಟ್ಟಿದ. ಮೂರ್ತಿ ತನ್ನ ಜೇಬಿನಿಂದ ನೂರು ರೂ ತೆಗೆದುಕೊಟ್ಟ. ನನ್ನ ಪ್ರಶ್ನಾರ್ಥಕದ ನೋಟ ಕ್ಕೆ, " ಏನಿಲ್ಲ, ಆಕೆಗೆ ಎಚ್ಚರವೇ ಇಲ್ಲವಂತೆ...ಆಸ್ಪತ್ರೆಗೆ ಹೋಗಲೂ ದುಡ್ಡಿಲ್ಲ ಆಕೆಯ ಮನೆಯಲ್ಲಿ...ಅದಕ್ಕೆ ದುಡ್ಡು ಕೊಟ್ಟೆ...ತಮ್ಮನ ಗೋಳು ನೋಡುವುದಕ್ಕಾಗುತ್ತಿಲ್ಲವಂತೆ", ಅಗತ್ಯಕ್ಕಿಂತ  ಉದ್ದದ  ಉತ್ತರ ಕೊಟ್ಟನಾತ.
ನಾನು ಪ್ರತಿಕ್ರಯಿಸಲಿಲ್ಲ....

      ಅವನಿದ್ದೂ ಇಲ್ಲದ  ಎಷ್ಟೋ ರಾತ್ರಿಗಳನ್ನು ಕಳೆದಿದ್ದರೂ,  ಅವನ  ಉಸಿರು ಈ ಭುವಿಯ ಮೇಲಿಲ್ಲದಂತಾದ ಮೇಲೆ ಒಂದು ರಾತ್ರಿಯನ್ನು ಕಳೆದ ಮೇಲೆ ಮನಸ್ಸು ಖಾಲಿಯಾದ ಭಾವ!...ತುಂಬಾ ಹತ್ತಿರದವರು ಘಾಸಿಗೊಳಿಸಿದಾಗ, ಅವರ ಮೇಲಿನ ಛಲಕ್ಕಾಗಿಯಾದರೂ ಮತ್ತೆ ಮತ್ತೆ ಬದುಕುತ್ತಿರುತ್ತೇವೆ. ಏಕೆಂದರೆ ಸೋತುಬಿಟ್ಟರೆ ಘಾಸಿಗೊಳಿಸಿದವರನ್ನು ಗೆಲ್ಲಿಸಿದಂತಾಗಿಬಿಡುತ್ತದೆ. ಅವರನ್ನು ಗೆಲ್ಲಿಸಲು ಇಷ್ಟವಿಲ್ಲದೆ ನಾವು ಸೋಲನ್ನು ಅಪ್ಪಿಕೊಳ್ಳುವುದಿಲ್ಲ. ಹಠಕ್ಕಾಗಿಯಾದರೂ ನೋವನ್ನು ಆಳಲು ಬಿಡುವುದಿಲ್ಲ. ಆದರೆ ಅವರೇ ಇಲ್ಲವಾದಾಗ...ಗಮ್ಯ ಶೂನ್ಯವಾದಂತೆನಿಸುತ್ತದೆ....!! ಯಾರಿಗಾಗಿ ಗೆಲ್ಲಬೇಕು...ಪ್ರತಿಸ್ಪರ್ಧಿಯೇ ಇಲ್ಲವೆಂದಾದ ಮೇಲೆ ಪಂದ್ಯವಾಡುವುದರಲ್ಲಿ ಅರ್ಥವಿದೆಯೇ...?!...ಗೊಂದಲವಾಗುತ್ತಿದೆ.

      ಮೂರ್ತಿ ಬಂದು ತಲೆತಗ್ಗಿಸಿ ನಿಂತಾಗ, ನಾನಾಗಲೇ ಸ್ವಲ್ಪ ಬಾಗಿದ್ದೆ. "ಅಮ್ಮಾ, ಆಕೆಯಿನ್ನೂ ಆಸ್ಪತ್ರೆಯಲ್ಲಿದ್ದಾಳೆ...ಅಯ್ಯಾವ್ರಿಗೆ ಹುಷಾರಿಲ್ಲ ಎಂದಾಗಿನಿಂದಲೂ ಆಕೆ ಸರಿಯಾಗಿ ಆಹಾರ ಸೇವಿಸಿಲ್ಲ...ಈಗ ಸಾವಿನ ಸುದ್ದಿ ಕೇಳಿದ ಮೇಲೆ ತುಂಬಾ ನಿತ್ರಾಣವಾಗಿದ್ದಾಳೆ...ಒಳ್ಳೆ ಚಿಕಿತ್ಸೆ ಕೊಡಿಸೋಣ  ಎಂದರೆ ಆಕೆಯ ಬಳಿ ಬಿಡಿಗಾಸೂ ಇಲ್ಲ...ತಮ್ಮನಿಗೆ ಏನೂ ಗೊತ್ತಿಲ್ಲ...", ಒಂದೊಂದೇ ಮಾತನ್ನೂ ನಿಧಾನವಾಗಿ ಹೇಳಿದ. "ಯಾಕೆ, ಹಣ-ಅಂತಸ್ತಿಗಾಗಿ ಮರುಳು ಮಾಡಿ, ಒಡೆಯನನ್ನು ಬುಟ್ಟಿಗೆ ಹಾಕಿಕೊಂಡವಳು...ದುಡ್ಡಿಲ್ಲವೇ ಅವಳ ಬಳಿ?...ನಿನ್ನ ಅಯ್ಯ ಚೆನ್ನಾಗಿ ಕೊಟ್ಟಿರಬೇಕಲ್ಲ?...", 
ಈ ಮಾತಿಗೆ ಮೂರ್ತಿ ವಿಷಾದದಿಂದ ದಿಟ್ಟಿಸಿದ ಕೆಲಕ್ಷಣಗಳ ಕಾಲ...."ಅಮ್ಮಾ..., ನಿಮಗೆ ಗೊತ್ತಿಲ್ಲ. ಅಯ್ಯಾವ್ರು  ಒಂದು ಬಿಡಿಗಾಸನ್ನೂ  ಆಕೆಗೆ ಕೊಟ್ಟಿಲ್ಲ. ಅವರ ಬಳಿಯಿದ್ದ ಸಮಸ್ತ ಆಸ್ತಿ, ಹಣ ಎಲ್ಲವನ್ನೂ ನಿಮ್ಮ ಹೆಸರಿಗೇ ಬರೆದಿದ್ದಾರೆ. ಅವರು ಯಾವ ಹಣವನ್ನೂ ಈ ಮನೆಯಿಂದ ಮುಟ್ಟಲಿಲ್ಲ....ಏಕೆಂದರೆ ಕೈ ಹಿಡಿದ ಮಡದಿಗೆ ಅನ್ಯಾಯ ಮಾಡಿ, ಪ್ರೇಯಸಿಗೆ ಹಣ ಕೊಟ್ಟೆ ಎಂಬ ಮಾತು ತಮ್ಮ ಮೇಲೆ ಬರದಿರಲಿ ಎಂದು ಮತ್ತು   ಹಣ, ಅಂತಸ್ತಿನ ಆಸೆಗಾಗಿ  ಒಡೆಯನನ್ನು ಸೆಳೆದು, ಒಡತಿಗೆ ಅನ್ಯಾಯ ಮಾಡಿದಳು ಎಂದು ಆಕೆಗೂ ಕೆಟ್ಟ ಹೆಸರು ಬರಬಾರದೆಂದು, ಎಷ್ಟು ಕಷ್ಟ ಬಂದರೂ ಇಲ್ಲಿಯ ಹಣ ಮುಟ್ಟಲಿಲ್ಲ ಅಮ್ಮಾ...ಆಕೆಯ ತೀರ್ಮಾನವೂ ಅದೇ ಆಗಿತ್ತು..., ನೀವು ಅವರ ಮೇಲೆ ತೀರಾ ಅಸಹ್ಯಿಸಿಕೊಂಡದ್ದರಿಂದ  ಈ ವಿಷಯ ಯಾವುದನ್ನೂ ತಿಳಿದುಕೊಳ್ಳಲಿಲ್ಲ...ನಿಮಗೆ ತಿಳಿಸುವ ಧೈರ್ಯವನ್ನೂ ನಾವಾರೂ ಮಾಡಲಿಲ್ಲ...ಅಷ್ಟಕ್ಕೂ ಈ ವಿಷಯ ಬೇರಾರಿಗೂ ಗೊತ್ತಿದ್ದರೆ ತಾನೇ...ನೀವು, ಅಯ್ಯ, ಆಕೆ ಮತ್ತು ನಾನು ಮಾತ್ರ  ಬಲ್ಲೆವು...ಯಾರಿಗೂ ಗೊತ್ತಾಗಬಾರದೆಂದು ಅಯ್ಯಾವ್ರು ತಾಕೀತು ಮಾಡಿದ್ದರು...ನೀವು ಯಾರ ಮುಂದೂ ತಲೆತಗ್ಗಿಸಬಾರದೆಂದು, ಅನುಕಂಪಕ್ಕೆ ಈಡಾಗಬಾರದೆಂದು ಅವರ  ಇಚ್ಛೆಯಾಗಿತ್ತು...ಈಗಲೂ ಜಗತ್ತಿನ ಕಣ್ಣಿಗೆ ನೀವೊಬ್ಬರೇ ಅಯ್ಯಾವ್ರ ಸಂಗಾತಿ...", ಮೂರ್ತಿಯ ಕಣ್ಣಲ್ಲಿ ನೀರಿತ್ತು. "ಪರವಾಗಿಲ್ವೇ...ಅನೈತಿಕ ಹಾದಿಯಲ್ಲೂ  ನೈತಿಕ  ನಡೆ....", ವ್ಯಂಗ್ಯದ ಭಾವ ನನ್ನಿಂದ ಹೋಗಲಿಲ್ಲ! ಮೂರ್ತಿ ಮತ್ತೇ ವಿಷಾದದಿಂದ ನೋಡಿದ. "ಸರಿ...ಸರಿ...ಈಗ ಆಕೆಯ ಚಿಕಿತ್ಸೆಗೆ ದುಡ್ಡು ಬೇಕಾ...?", ಕೋಪದಿಂದಲೇ ಕೇಳಿದೆ. ಅವನು ಬೇಕು ಎಂದಮೇಲೆ ಇನ್ನಷ್ಟು ಹಂಗಿಸುವ  ಇಂಗಿತ ಒಳಗಿತ್ತು!  "ಇಲ್ಲಾ...ಇಲ್ಲಾ...ಅಯ್ಯಾವ್ರು ನನ್ನನ್ನು ಸ್ವಂತ ತಮ್ಮನ ಹಾಗೆ ನೋಡಿಕೊಂಡಿದ್ದಾರೆ...ಅವರಿಗೆ ಬೇಕಾದವರ ಬಗ್ಗೆ ಕಾಳಜಿ ವಹಿಸಬೇಕಾದ್ದು ನನ್ನ ಧರ್ಮ...ಆಕೆ ನನಗೆ ತಾಯಿಯ ಸಮಾನ...ನಾನೇ ಹಣ ಕೊಡುತ್ತೇನೆ...ಅದರ ಚಿಂತೆ ಬೇಡ...ಯಾಕೋ ನಿಮಗೆ ವಿಷಯ ತಿಳಿಸಬೇಕು ಅನ್ನಿಸ್ತು, ಅದಕ್ಕೇ ಹೇಳಿದೆ....ಆಕೆ ನನಗೆ ತಾಯಿಯ ಸಮಾನ  ಆಗಿದ್ರೆ, ನೀವು ನನಗೆ ತಾಯಿಯೇ...", ಮೂರ್ತಿ ಹೊರಡಲು ಎದ್ದ. ನಾನೂ ಎದ್ದು ನಿಲ್ಲಬೇಕೆಂದುಕೊಂಡೆ. ಆದರೆ ನಿಲ್ಲಲು ತ್ರಾಣವೇ ಇಲ್ಲದ ಹಾಗಾಗಿತ್ತು!!  "ಹಾಗಾದರೆ ಇಲ್ಲಿ ಕೆಟ್ಟವರು ಯಾರು?...ನಾನೇ ಖಳನಾಯಕಿಯಾ...?!...ಇಷ್ಟು ದಿನ ಅವರಿಬ್ಬರೇ ನೀಚರೆಂದು, ಕ್ಷಮಿಸಲು ಸಹ ಅಯೋಗ್ಯರೆಂದು ಭಾವಿಸಿದ್ದೆ...ಆ ಭಾವ ಹಾಗೇ ಇರಲೆಂದು ಗೋರಂಟಿ ಗಿಡವನ್ನು ಹಾಗೇ ಉಳಿಸಿಕೊಂಡಿದ್ದೆ. ಅದನ್ನು ನೋಡಿದಾಗಲೆಲ್ಲಾ ಅವರಿಬ್ಬರ ಮೇಲಿನ ಹಗೆ ಹಸಿರಾಗುತ್ತಿದ್ದಿತು...ಆದರೆ ಈ ಕ್ಷಣದಲ್ಲಿ ನನಗೆ ಹೀಗೇಕೆ ಅನ್ನಿಸಿತು...ಈ ತಪ್ಪಿನಲ್ಲಿ ನನ್ನದೂ ಪಾಲಿದೆಯಾ....ನನ್ನ ಪಾತ್ರವೂ ಇದೆಯಾ...?", ಸಣ್ಣಗೆ ಅಪರಾಧಿ ಪ್ರಜ್ಞೆಯೊಂದು ಇಣುಕಿತು. ಆ ಪ್ರಜ್ಞೆಯನ್ನು ಅಲ್ಲಿಗೇ ತುಂಡರಿಸಲು ಮಾತು ಪ್ರಾರಂಭಿಸಿದೆ...

   "ಆಸ್ಪತ್ರೆಯಿಂದ ಬಂದ ಮೇಲೆ ಎಲ್ಲಿಗೆ ಹೋಗುತ್ತಾಳೆ ಅವಳು...ನಿನ್ನ ಮನೆಯಲ್ಲಿ ಇರುತ್ತಾಳಾ...ಆ ತಮ್ಮನ ಜೊತೆ...?!", ದನಿಯಲ್ಲಿ ಬಲವಂತವಾಗಿ ಗತ್ತನ್ನು ತುಂಬಿಕೊಂಡು ಕೇಳಿದೆ. ಮತ್ತೇ ಮೂರ್ತಿಯ ಮುಖದಲ್ಲಿ ವಿಷಾದದ ನಗೆ. "ಅದೇ ಚಿಂತೆ ನನಗೆ...ಆಕೆ ಇದ್ದ ಮನೆ ಜೋಪಡಿಯಂತದ್ದು...ಯಾವಾಗ ಬೀಳುತ್ತೋ ಗೊತ್ತಿಲ್ಲ...ನನ್ನ ಮನೆಗೆ ಕರೆದುಕೊಂಡು ಹೋಗೋಣವೆಂದರೆ, ನನ್ನ ಮಡದಿಗೆ ಅಂಥ ಉದಾರ ಮನಸ್ಸಿಲ್ಲ...ನೋಡಬೇಕು...ಏನಾದರೂ ವ್ಯವಸ್ಥೆ ಮಾಡ್ತೇನೆ...ಇಲ್ಲದಿದ್ದರೆ ಆಕೆಯ ಹಳ್ಳಿಗೇ ವಾಪಸ್ಸು ಕಳಿಸುತ್ತೇನೆ...", ಮೂರ್ತಿ ನನ್ನ  ಉತ್ತರಕ್ಕೂ ಕಾಯದೆ ಹೊಸಿಲು ದಾಟಿದ. "ಅಲ್ಲಾ..., ಬೇಕಾದರೆ ಇಲ್ಲಿಗೆ ಬಂದಿರಲಿ...ಆಕೆ ಹೋದಾಗಿನಿಂದ ಔಟ್ ಹೌಸ್ ಖಾಲಿಯಾಗಿಯೇ ಇದೆ...ಆದರೆ, ಪುಕ್ಕಟೆ ಅಲ್ಲ...ಮೊದಲಿನಂತೆ ಮನೆ ಕೆಲಸ  ಎಲ್ಲಾ ಮಾಡ್ತಾ ಇರಬೇಕು...ಅಷ್ಟಾದರೂ  ಆಸರೆ ಕೊಡದಿರುವಷ್ಟು ನಿರ್ದಯಿ ನಾನಲ್ಲ...ಆದರೆ, ಸುಮ್ಮನೆ  ಆಸರೆ  ಕೊಡುವಷ್ಟು ಮಹಾತ್ಮಳೂ ನಾನಲ್ಲ...ಏನು ಮಾಡೋದು....ಎಷ್ಟೆಂದರೂ  ನನ್ನ ಗಂಡನಾಗಿದ್ದವನ ಉನ್ಮತ್ತ ಉಸಿರನ್ನು  ಗಾಳಿಯಲ್ಲಿ ಲೀನವಾಗಲು ಬಿಡದೆ ತನ್ನೊಡಲಲ್ಲಿ ಬಂಧಿಸಿದವಳಲ್ಲವೇ...", ದುಃಖ, ನಿರಾಸೆಯ ದನಿ ನನ್ನದು. ಅದರ ಜೊತೆಗೇ ಬಂದ  ಇನ್ನೊಂದು ಮಾತು "ಈಗ ಅವನೇ ಇಲ್ಲವೆಂದ ಮೇಲೆ ಆಕೆಯ ಮೇಲೆ ಕೋಪವೇಕೆ...ತಾಪವೇಕೆ....", ಎಂಬುದು ಕೊರಳ ಅಂಚಿನಲ್ಲೇ ಕರಗಿ ಹೋಗಿದ್ದರಿಂದ ಹೊರಗೆ ಬರಲಿಲ್ಲ! ಮೂರ್ತಿ ಮಾತ್ರ  ಒಂದೆರಡು ನಿಮಿಷ  ಮೌನವಾಗಿ ನಿಂತೇ ಇದ್ದ.  ಉತ್ತರಕ್ಕಾಗಿ  ಕಾಯುತ್ತಿದ್ದೆ...ಮೂರ್ತಿ ನನ್ನ ಕಂಗಳನ್ನೇ ದಿಟ್ಟಿಸುತ್ತಾ, "ಅಮ್ಮಾ, ಈಗಲಾದರೂ ಸತ್ಯವನ್ನು ನಾನು ಹೇಳಲೇ ಬೇಕು...ಯಾವಾಗಲೋ ಹೇಳಬೇಕೆಂದಿದ್ದೆ...ಆದರೆ ನೀವು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ...ಆಗ ಹೇಳಿದ್ದರೂ  ನೀವು ನಂಬುತ್ತಲೂ ಇರಲಿಲ್ಲ...ಅಮ್ಮಾ..., ಅಯ್ಯಾವ್ರು ಮತ್ತು ಆಕೆಯ ಮಧ್ಯೆ ಇದ್ದದ್ದು ಊಹೆಗೆ ನಿಲುಕದ ಬಂಧ...ಅದನ್ನು ಸ್ನೇಹವೆನ್ನಬೇಕೋ, ಪ್ರೇಮವೆನ್ನಬೇಕೋ, ವಾತ್ಸಲ್ಯವೆನ್ನಬೇಕೋ....ತಿಳಿಯುತ್ತಿಲ್ಲ.  ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಇದ್ದದ್ದು ಅನ್ಯೋನ್ಯತೆ...ಅವಲಂಬಿತ್ವ...ಇಬ್ಬರ ಭಾವನೆಗಳು ಜೊತೆಯಾಗಿದ್ದವು, ಬೆಸೆದಿದ್ದವು....ಆದರೆ ಎಂದೂ ಹಾಸಿಗೆಯನ್ನು ಹಂಚಿಕೊಂಡವರಲ್ಲ....ಆ ವಿಷಯದಲ್ಲಿ ಅಯ್ಯಾವ್ರು ನಿಮಗೆಂದೂ ದ್ರೋಹ ಮಾಡಲಿಲ್ಲ.... ಗಂಡಸು ಮತ್ತು ಹೆಂಗಸಿನ ನಡುವೆ ಪರಿಶುದ್ಧವಾದ ಸ್ನೇಹವಿರಲು, ಅನ್ಯೋನ್ಯತೆಯಿರಲು ಸಾಧ್ಯವೇ ಇಲ್ಲವೆಂಬ ಅಲಿಖಿತ ನಿಯಮ  ಈ ಜಗತ್ತಿನಲ್ಲಿ ಇರುವವರೆಗೂ ಈ ಅಭಿಪ್ರಾಯವೂ ಇದ್ದೇ ಇರುತ್ತದೆ....ಹಾಗಾಗಿ ನಿಮ್ಮದೂ ತಪ್ಪಿಲ್ಲ... ಈಗಲೂ ನಿಮಗೆ ಹೇಳಬಾರದು ಎಂದೂ ಅನ್ನಿಸಿದ್ದು ನಿಜ... ಆದರೆ ನೆನ್ನೆ ಅಯ್ಯಾವ್ರ ಶವವನ್ನೂ ನೋಡುವಾಗಲೂ ನಿಮ್ಮ ಕಣ್ಣಲ್ಲಿ ಕೋಪ, ತಿರಸ್ಕಾರದ ಭಾವ ಇದ್ದುದನ್ನು ನಾನು ಗುರುತಿಸಿದೆ...ಇನ್ನಾದರೂ ಅವರ ಬಗ್ಗೆ ನೀವು ಹಾಗೆ ಭಾವಿಸಬಾರದೆಂದು ಈ ಸತ್ಯವನ್ನು ಹೇಳಿದೆ, ಅಷ್ಟೇ...", ಮೂರ್ತಿ ಮುಂದೆ ಮಾತನಾಡಲಾಗದೆ ಅಲ್ಲಿಂದ ಸರಸರನೆ ನಡೆದು ಹೋಗಿಬಿಟ್ಟ....ನನ್ನ ಕೆನ್ನೆಗಳು ಮಾತ್ರ  ಜಲಪಾತದಲ್ಲಿ  ಮೀಯುತ್ತಿದ್ದವು...

                                                                            -ಕಿರಣ್ ಪ್ರಸಾದ್ ರಾಜನಹಳ್ಳಿ

# 691/ಸಿ, "ಅತೃ", 22ನೇ ಕ್ರಾಸ್, 19ನೇ ಮೇನ್,
ಹೆಚ್.ಎಸ್.ಆರ್ 2ನೇ ಸೆಕ್ಟರ್,
ಬೆಂಗಳೂರು-560102
ಫೋನ್: 9449459766
Show quoted text
Posted by ಮನಸ್ಸಿನಿಂದ ಮನಸ್ಸಿಗೆ at 9:06 PM No comments:

Friday, February 3, 2017

 "ಹನಿ ಡೂ"
ಹೊರಗೆ  ಥರಗುಟ್ಟುವ  ಚಳಿ...ವಾಶಿಂಗ್ ಟನ್  ನಗರ ಮಂಜಿನಿಂದ ಆವೃತವಾಗಿದೆ. ಮನೀಶ್ ಮನೆಯಲ್ಲಿ ಜೋರಾಗಿ ಪಾರ್ಟಿ ನಡೆಯುತ್ತಿದೆ. ಹೆಂಗಸೆರೆಲ್ಲಾ ಒಂದು ಕಡೆ ಸೇರಿ ಗಹನ ಚರ್ಚೆ ನಡೆಸುತ್ತಿದ್ದರೆ, ಗಂಡಸರೆಲ್ಲಾ ಒಂದು ಕೋಣೆಯಲ್ಲಿ ಸೇರಿ ಭರ್ತಿ ಮಾಡಿದ ಗ್ಲಾಸು ಹಿಡಿದುಕೊಂಡು ಭರ್ಜರಿ ಹರಟೆ ಹೊಡೆಯುತ್ತಿದ್ದರು.  ಹಾಗೆಂದು ಹೆಂಗಸರ ಕೈಯಲ್ಲಿ ಗ್ಲಾಸು ಇರಲಿಲ್ಲವೆಂದಲ್ಲ! ಅವರ ಕೈಯಲ್ಲೂ ತುಂಬಿದ ಗ್ಲಾಸುಗಳೇ ಇದ್ದವು...ಮಾತುಗಳಲ್ಲಿ ಗಾಸಿಪ್ಪೂ ಇತ್ತು!! ಅಲ್ಲಿ ನೆರೆದಿದ್ದವರ ಪೈಕಿ ಮನೀಶ್ ಒಬ್ಬನೇ ಇತ್ತೀಚೆಗೆ ಮದುವೆಯಾದವನು...ಅವನ ಮದುವೆಯಾಗಿ ಆರು ತಿಂಗಳಾಗಿತ್ತು. ಉಳಿದವರೆಲ್ಲಾ ಅವನಿಗಿಂತ ಹೆಚ್ಚಿನ ಅನುಭವಿಗಳಾಗಿದ್ದರು, ಸಂಸಾರದಲ್ಲಿ!  ಚರ್ಚೆ ತಾರಕಕ್ಕೇರಿದಾಗ ಮನೀಶ್ ಹೆಂಡತಿ ವಿನುತಾ ಬಂದು , "ಮನೀಶ್, ಅಡುಗೆ ಮನೆಯಲ್ಲಿ ಸ್ನ್ಯಾಕ್ಸ್ ಇದೆ. ಸ್ವಲ್ಪ ತಂದು ಟೇಬಲ್ ಮೇಲೆ ಇಡಿ...ಅವು ಗಾಜಿನ ಪ್ಲೇಟ್ ಆದ್ದರಿಂದ ನನಗೆ ಭಾರ ಆಗುತ್ತೆ...ಬಿದ್ದರೆ ಒಡೆದು ಹೋಗುತ್ತಲ್ವಾ...ಆದ್ದರಿಂದ ನೀವೇ ತಂದು ಟೇಬಲ್ ಮೇಲಿಡಿ...ಪ್ಲೀಸ್ ಹನಿ ಡೂ...", ಎಂದು ಹೇಳಿ ಹೋದಳು. ಕುತೂಹಲಕರವಾದ ಚರ್ಚೆ ಬಿಟ್ಟು ಹೋಗಲು ಮನೀಶ್ ಗೆ ಮನಸ್ಸಿರಲಿಲ್ಲ. ಆದರೂ ಬೇರೆ ವಿಧಿಯಿಲ್ಲದೆ ಎದ್ದುಹೋಗಿ ತಿಂಡಿ ತಟ್ಟೆಗಳನ್ನು ತಂದು ಟೇಬಲ್ ಗಳ ಮೇಲಿಟ್ಟ. ಹೆಂಡತಿ ಹೇಳಿದ ಕೆಲಸವನ್ನು ಮಾಡಿ ಮುಗಿಸಿ ಬಂದು, ಮತ್ತೇ ಗ್ಲಾಸ್ ಹಿಡಿದು ಕೂತ.  "ಅಲ್ಲಾ...ಅಮೆರಿಕಾಗೆ ಬಂದ ತಕ್ಷಣ  ಈ ಮಡದಿಯರೆಲ್ಲಾ ಹೇಗೆ ಬದಲಾಗಿಬಿಡ್ತಾರಲ್ಲಾ...", ಮನೀಶ್ ಹೇಳಿದಾಗ ಗೆಳೆಯರು ಹೌದೆಂದು ತಲೆಹಾಕಿದರು. "ಹನಿ ಡೂ ಎಂಬುದು ಅಮೆರಿಕದ ಸಾಂಕ್ರಾಮಿಕ ರೋಗ! ಗಂಡಂದಿರು ಐ ಡೂ ಎನ್ನುವುದೇ ತಡ, ಹೆಂಡತಿಯರು ಆ ಪದವನ್ನು ಪಟ್ಟಾಗಿ ಹಿಡಿದುಕೊಳ್ತಾರೆ.  ತಕ್ಷಣ  ಮನೆಯ  ಎಲ್ಲಾ ಉಸಾಬರಿಯನ್ನು ಗಂಡಂದಿರ ಹೆಗಲಿಗೆ ಏರಿಸಿಬಿಡುತ್ತಾರೆ...ಇಲ್ಲಿ ಚಿಕ್ಕಪುಟ್ಟ ಕೆಲಸಗಳಿಗೆ ವಿಪರೀತ ದುಡ್ಡು ತೆರಬೇಕಾಗಿರುವುದರಿಂದ ಗಂಡಂದಿರ ಕೈಯಲ್ಲೇ ಎಲ್ಲಾ ಕೆಲಸ ಮಾಡಿಸಿಬಿಡುತ್ತಾರೆ...ಹಾಗಾಗಿ ನಾವು ನಮ್ಮ ವೃತ್ತಿಯ ಜೊತೆಗೆ ಪ್ಲಂಬಿಂಗ್, ಎಲೆಕ್ಟ್ರಕಲ್, ಗಾರ್ಡೆನಿಂಗ್...ಎಲ್ಲಾ ಕೆಲಸಗಳನ್ನೂ ಕಲೆತುಕೊಂಡಿರಬೇಕು...ಮನೆಯಲ್ಲಿ ಏನೆಲ್ಲಾ ಕೆಲಸಗಳು ಆಗಬೇಕೋ, ಅವುಗಳಿಗೆಲ್ಲ ಮಡದಿಯ  ಏಕಮೇವ  ಪರಿಹಾರ ಸೂತ್ರ ಎಂದರೆ 'ಹನಿ ಡೂ' ಎಂಬುದು! ಗಂಡನ ವಿರಾಮದ ವೇಳೆ ಹಾಳಾಗಿ ಹೋಗಲು ಹಾಗೂ ಆಗಬೇಕಿರುವ ಕೆಲಸಗಳ ಬಗ್ಗೆ ಸದಾ ನಿಗಾ ಇಡುವ, ನೆನಪಿಸುತ್ತಲೇ ಸುಲಭೋಪಾಯ ಕೂಡ  ಇದೇ 'ಹನಿ ಡೂ' ಎಂಬ ಮಂತ್ರ. ಈ ಅಗಬೇಕಿರುವ ಕೆಲಸಗಳನ್ನೆಲ್ಲ  ಒಂದು ರೀತಿಯಲ್ಲಿ ಕೊನೆ ಮೊದಲು ಇಲ್ಲ ಎಂಬಂತೆ ಬೆಳೆಯುವ ನಿರಂತರ ಪಟ್ಟಿ ಎಂದು ಗೊತ್ತಿರುವ ಕಾರಣಕ್ಕೋ ಏನೋ ಗಂಡ  ಎಂಬ ಸಂತನಿಗೆ ಅಂಥ ಕೆಲಸಗಳನ್ನು ಮಾಡಲು ಇರುವ  ಆಸಕ್ತಿ ಅಷ್ಟಕ್ಕಷ್ಟೇ ಎನ್ನಬಹುದು. ಹಾಗೆ ನೋಡಿದಲ್ಲಿ ಟಿಪಿಕಲ್ ಅಮೆರಿಕನ್ ಹೆಂಡತಿಯರ ಕನಸು ಮನಸ್ಸಿನಲ್ಲೂ ಯೋಚಿಸದಂಥ ವಿಷಯಗಳು ಭಾರತ ಸಂಜಾತ ಪತ್ನಿಯರ 'ಹನಿ ಡೂ' ಯಾದಿಯಲ್ಲಿ ಇರುತ್ತವೆ. ಈ ವೈವಾಹಿಕ ಕಿರುಕುಳವನ್ನು ತಪ್ಪಿಸಿಕೊಳ್ಳುವುದಾದರೂ ಹೇಗೆ ಗೆಳೆಯಾ...", ಮನೀಶ್ ತತ್ವಜ್ಞಾನಿಯಂತೆ ಕೇಳಿದ. ಅಷ್ಟೊತ್ತಿಗೆ ಅವನ ಕೈಯಲ್ಲಿದ್ದ ಗ್ಲಾಸು ಬರಿದಾಗಿತ್ತು. 
 
  ಅವನ ಮಾತು ಕೇಳಿದ ನಂತರ ಅಲ್ಲಿ ಒಂದೆರಡು ನಿಮಿಷಗಳ ಮೌನ ಆವರಿಸಿತು. ನಂತರ ಅರುಣ್ ಮೆಲ್ಲನೆ ಪ್ರಾರಂಭಿಸಿದ...."ಮನೀಶ್, ನೀನಿನ್ನು ಬಚ್ಚಾ...ಸಂಸಾರದ ವಿಷಯದಲ್ಲಿ. ಈ 'ಹನಿ ಡೂ' ಪದ ನಮ್ಮ  ಮೇಲೂ   ಸಹ  ಆಳ್ವಿಕೆ ನಡೆಸಿತ್ತು. ಅದರ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ನಾವೆಲ್ಲಾ ನಮ್ಮದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಂಡೆವು. ಅದು ಫಲಿಸಿದ್ದೂ ನಿಜ. ಆ ಟೆಕ್ನಿಕ್ ಗಳನ್ನು ನಿನಗೆ ಹೇಳಿಕೊಡ್ತೇವೆ....ನೀನು ಅದರಂತೆಯೇ ಮಾಡು...ಆಗ 'ಹನಿ ಡೂ' ಕಾಟದಿಂದ ತಪ್ಪಿಸಿಕೊಳ್ಳಬಹುದು...', ಅರುಣ್ ಮಾತು ಕೇಳಿ ಮನೀಶ್ ಚುರುಕಾದ. "ಹೌದೇ,....ಆ ರೀತಿ ತಂತ್ರಗಳಿವೆಯೇ...ದಯವಿಟ್ಟೂ ನನಗೂ ಹೇಳಿ...", ಕಣ್ಣರಳಿಸಿ ಕೇಳಿದ. ರಾಘವ್ ಹೇಳಲು ಪ್ರಾರಂಭಿಸಿದ....,"ಏನಿಲ್ಲ....ನನ್ನ ಹೆಂಡತಿಗೆ ಅಡುಗೆಯ ಖಯಾಲಿ.....ಅದೂ ನಾನೇ ಮಾಡಬೇಕೆನ್ನುವ  ಹೆಬ್ಬಯಕೆ...ನನಗೆ ಅಡುಗೆ ಅಷ್ಟಾಗಿ ಬರೋಲ್ಲ  ಎಂದೆ. ಸರಿ, ಸಹಾಯ ಮಾಡು ಬಾ ಅಂದಳು. ನಾನು ಅವಳ ಅಸಿಸ್ಟೆಂಟ್ ಥರ ಅವಳು ಹೇಳಿದ ಕೆಲಸವನ್ನೆಲ್ಲಾ ಮಾಡಬೇಕಿತ್ತು. ನಾನಾಗ ಒಂದು ಉಪಾಯ ಮಾಡಿದೆ. ಅವಳಿಗೆ ಯೋಚಿಸುವುದಕ್ಕೂ ಬಿಡದೆ ಸುಮ್ಮನೇ ಅದೂ ಇದೂ ಸಲಹೆ ಕೊಡತೊಡಗಿದೆ. ನನ್ನ  ಉಚಿತ ಸಲಹೆಗಳ ಸರಮಾಲೆ ಹೀಗಿರುತ್ತಿದ್ದಿತು... ಜಾನು, ಎಲೆಕ್ಟ್ರಿಕ್  ಸ್ಟೌ ಗಿಂತ  ಇದ್ದಿಲು ಒಲೆ ಒಳ್ಳೆಯದು...ಇದ್ದಿಲು ಒಲೆಯಲ್ಲಿ ಅಡುಗೆ ಮಾಡಿ ತಿಂದರೆ ವೃದ್ಧಾಪ್ಯದಲ್ಲಿ ಕೀಲು ನೋವುಗಳ ಸಮಸ್ಯೆಯಿಂದ ಪಾರಾಗಬಹುದು...ಆದರೆ ಕಣ್ಣುರೆಪ್ಪೆಗಳಿಗೆ ಇದ್ದಿಲು ಒಲೆ ಒಳ್ಳೆಯದಲ್ಲ ಬಿಡು...ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತಲ್ವಾ...ಅದರಿಂದ ತಪ್ಪಿಸಿಕೊಳ್ಳಲು ಶವರ್ ಬಿಟ್ಟುಕೊಂಡು ಈರುಳ್ಳಿ ಹೆಚ್ಚಬೇಕು!...ಕುಕ್ಕರ್ ನಲ್ಲಿ ಅನ್ನವನ್ನು ಅರ್ಧಬರ್ಧ ಬೇಯಿಸಬೇಕು.ಅರ್ಧಬರ್ಧ ಬೆಂದ ಬೇಳೆಯನ್ನು ಹಾಗೇ ತಿನ್ನಬೇಕು...ಗಜ್ಜರಿಯನ್ನು ಚಾಕುವಿನ ಬದಲಾಗಿ ಸುತ್ತಿಗೆಯಿಂದ ಬಡಿದು ಹೋಳು ಮಾಡಬೇಕು....ಐಸ್ ಕ್ರೀಂಗೆ ಒಂದಂಗುಲ ಟೂತ್ ಪೇಸ್ಟ್ ಸವರುವುದರಿಂದ ದಂತ ಪಂಕ್ತಿಯ ನಡುವಣ ಕಿಂಡಿಗಳನ್ನು ನಿವಾರಿಸಬಹುದು...ಹೀಗೆ ಬಾಯಿಗೆ ಬಂದದ್ದನ್ನೆಲ್ಲಾ ಅರಹುತ್ತಿದ್ದೆ. ನಾನು ಈ ಸಂಗತಿಗಳನ್ನೆಲ್ಲಾ ಆನ್ ಲೈನ್ ನಲ್ಲಿ ಆಫ್ರಿಕದ ಬಾಣಸಿಗನೊಬ್ಬನಿಂದ ಕಲಿತಿರುವುದಾಗಿ ಕೊಚ್ಚಿಕೊಳ್ಳುತ್ತಿದ್ದೆ...ನನ್ನ ಇಂತಹ ವಿಚಿತ್ರ ಸಲಹೆಗಳನ್ನು ಕೇಳಿಸಿಕೊಳ್ಳಲಾಗದೇ ಅವಳೇ ಒಂದು ತೀರ್ಮಾನಕ್ಕೆ ಬಂದಳು. 'ಹನಿ, ದಯವಿಟ್ಟೂ ಹೋಗಿ ಟಿ.ವಿ.ಯಲ್ಲಿ ಕ್ರಿಕೆಟ್ ನೋಡಿ...ನಾನು ಅಡುಗೆ ಮಾಡುವುದೆಲ್ಲಾ ಮುಗಿದ ಮೇಲೆ ಊಟಕ್ಕೆ ಕರೆಯುತ್ತೇನೆ...', ಎಂದಳು. ಅಂದಿನಿಂದ ನಾನು ಅಡುಗೆ ಕೆಲಸ ತಪ್ಪಿಸಿಕೊಂಡೆ...", ರಾಘವ್ ಹೇಳಿದಾಗ  ಎಲ್ಲರೂ ನಕ್ಕರು.  

    ಮುರಳಿ ತನ್ನ ತಂತ್ರ ಹೇಳಲಾರಂಭಿಸಿದ..."ನನ್ನ ಹೆಂಡತಿಗೆ ನನ್ನಿಂದ ಬಟ್ಟೆ ಒಗೆಸುವ ಉಗ್ರ  ಆಸೆ...ಮೊದಲ ಬಾರಿ ಅವಳು ಹೇಳಿದಾಗ ನಾನು ವಿದೇಯತೆಯಿಂದ ಒಪ್ಪಿಕೊಂಡೆ. ಅವಳು ಫುಲ್ ಖುಷಿಯಾಗಿ ಟಿ.ವಿ ನೋಡುತ್ತಾ ಕುಳಿತಳು. ನಾನು ಸಾಬೂನು ಪುಡಿಯನ್ನು ಅಗತ್ಯ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿ ಹಾಕಿ, ಉಷ್ಣಾಂಶವನ್ನು ಏರುಮುಖ ಮಾಡಿದೆ. ಆಕೆಯ ಕಡು ವರ್ಣದ ಜೀನ್ಸ್ ಸ್ಕರ್ಟ್ ಅನ್ನು, ಆಕೆಯ ಲಘು ವರ್ಣದ ಬಟ್ಟೆಗಳೊಂದಿಗೆ ಹಾಗೂ ಅಗತ್ಯವಿಲ್ಲದ ಗಲಿಜುಮಯ ವಸ್ತ್ರಗಳೊಂದಿಗೆ ಸಾಕು ಸಾಕೆನುಸುವಷ್ಟು ಭರ್ತಿ ಮಾಡಿದೆ. ನಂತರ ವಾಶಿಂಗ್ ಮೆಶಿನ್ ಗೆ  ಚಾಲನೆ ನೀಡಿ, ಏನೂ ಅರಿಯದವನಂತೆ ಗಾಲ್ಫ್ ಆಡಲೆಂದು ಜಾಗ ಖಾಲಿ ಮಾಡಿದೆ. ಮನೆಗೆ ಹಿಂತಿರುಗಿದಾಗಲೇ ನನಗೆ ಗೊತ್ತಾಗಿದ್ದು...ಎಲ್ಲೆಡೆ ಸಾಬೂನು ನೊರೆಯ ಪ್ರವಾಹ ವ್ಯಾಪಿಸಿದೆ ಎಂದು. ನನ್ನ ಹೆಂಡತಿಗೆ ಕೆಂಡಾಮಂಡಲ ಕೋಪ ಬಂದಿತ್ತು. ಅಲ್ಲದೆ ನಾನು ಯಾವ ರೀತಿಯ ಮನೆಯ ಕೆಲಸಕ್ಕೂ ನಾಲಾಯಕ್ಕು ಎಂಬುದು ಆಕೆಗೆ ಖಚಿತವೂ ಆಗಿತ್ತು! ಆದರೂ ಆಕೆಗೊಂದು ಅಚ್ಚರಿಯೂ ಇತ್ತು!! ಇಷ್ಟೆಲ್ಲಾ ಅದ್ವಾನಗಳ ಸರಮಾಲೆಯನ್ನು ಹೊಂದಿದ್ದರೂ ಸಹ, ಅದು ಹೇಗೆ ನಾನು ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿದ್ದೇನೆಂದು!!! ಇದೇ ಅವಳ ಅನುಮಾನ...ಆದಾಗ್ಯೂ ಆಕೆ ಅನಗತ್ಯ ಗೊಂದಲಗಳಿಗೆ ಇಂಬು ಕೊಡದೆ, ಬಾಯಿ ಬಿಟ್ಟು ಹೇಳಿಯೇ ಬಿಟ್ಟಳು, 'ಹನಿ, ಇನ್ನುಮುಂದೆ ನಾನೇ ಬಟ್ಟೆಗಳನ್ನು ಒಗಿಯುತ್ತೇನೆ..., ನೀನು ಅದರ ಬಗ್ಗೆ ಯೋಚಿಸುವುದು ಬೇಡ', ಎಂದು!! ಇಷ್ಟು ಹೇಳಿಸಿಕೊಂಡ ಮೇಲೆ ಮುಗಿಯಿತು...ಜೀವಮಾನವೆಲ್ಲಾ ನನಗೆ ದೋಬಿ ಕೆಲಸದಿಂದ ಮುಕ್ತಿ ಸಿಕ್ಕಂತಾಯಿತು....ಅದಷ್ಟೇ ಅಲ್ಲ, ಪಾತ್ರೆಯನ್ನು ತೊಳೆಯಲು ಹೇಳಿದಾಗ ಅವಳಿಗಿಷ್ಟದ ಗಾಜಿನ ಪಾತ್ರೆಗಳನ್ನು ಒಡೆದು ಹಾಕಿದೆ. ಡಿಶ್ ವಾಷರ್ ನಲ್ಲಿ ಹಾಕುವಾಗ ತಪ್ಪು ತಪ್ಪಾಗಿ ಇಡತೊಡಗಿದೆ. ಅವಳಿಗೆ ರೇಗಿ ಹೋಗಿ, ಆ ಕೆಲಸದಿಂದಲೂ ವಿನಾಯಿತಿ ನೀಡಿದಳು. ಎಷ್ಟು ವಿನಾಯಿತಿ ಎಂದರೆ, ಮನೆಯಲ್ಲಿ ಭೋಜನ ಕೂಟಗಳು ನಡೆದಾಗಲೂ, ಅವಳಿಗೆಷ್ಟೇ ಸುಸ್ತಾಗಿದ್ದರೂ ಪಾತ್ರೆಗಳನ್ನು ತೊಳೆಯಲು ನನ್ನನ್ನು ಕರೆಯುತ್ತಿರಲಿಲ್ಲ. 'ಹನಿ, ನೀನು ಪಾತ್ರೆ ತೊಳೆಯುವ ಯೋಚನೆ ಬಿಡು....', ಎಂದೇ ಈಗಲೂ ಹೇಳುವಳು. ಕೊನೆಯ ಪಕ್ಷ ಹರಡಿಕೊಂಡಿರುವ ಕಸವನ್ನಾದರೂ ಸ್ವಚ್ಛ ಮಾಡುವುದಾಗಿ ನಾನು ಹೇಳಿದರೆ, ಅದಕ್ಕೂ ಕೂಡ  ಆಕೆ ಸಮ್ಮತಿಸುವುದಿಲ್ಲ...ಹೀಗೆ ಆ ಎಲ್ಲಾ ಕೆಲಸಗಳಿಂದ ಮುಕ್ತನಾಗಿದ್ದೇನೆ", ಮುರಳಿಯ ಮಾತಿಗೆ ಅಲ್ಲಿ ಮತ್ತೇ ನಗು ಚೆಲ್ಲಾಡಿತು.

     ಈರುಳ್ಳಿ ಪಕೋಡ ಬಾಯಿಗಿಡುತ್ತಾ ಸುಮಂತ ಹೇಳತೊಗಿದ...," ನನ್ನ ಹೆಂಡತಿಯ ತಾಯಿಯ ಮನೆ ಅರ್ಲಿಂಗ್ ಟನ್ ನಲ್ಲಿದೆ. ಪದೇ ಪದೇ ತನ್ನ ತಾಯಿಯನ್ನು ಕರೆಸಿಕೊಳ್ಳುವುದು ಅವಳ ಭಯಂಕರ ಬಯಕೆ. ತಾಯಿ ಮನೆಗೆ ಬಂದರೆ ಸಾಕು...ಮನೆ ಕೆಲಸ  ಎಲ್ಲವನ್ನೂ ಮರೆತು ಮಾಲ್ ಗಳಲ್ಲಿ ಶಾಪಿಂಗ್ ಮಾಡಲು ಹೋಗಿಬಿಡುತ್ತಿದ್ದಳು. 'ಪ್ಲೀಸ್ ಹನಿ ಡೂ...', ಎಂದು ಹೇಳಿ ತಾಯಿ ಜೊತೆ ಹೋಗಿಬಿಡುತ್ತಿದ್ದಳು. ಮನೆಯ ಕೆಲಸವನ್ನೆಲ್ಲಾ ನಾನೇ ಮಾಡಬೇಕಾಗಿತ್ತು...! ನಾನೂ ಒಂದೆರಡು ಬಾರಿ ನೋಡಿದೆ...ಕೊನೆಗೊಂದು ದಿನ ಏನು ಮಾಡಿದೆನೆಂದರೆ ಒಮ್ಮೆ ಅತ್ತೆ ಮನೆಗೆ ಬಂದಾಗ ಅವರ ಕೊಠಡಿಯ ಹವಾ ನಿಯಂತ್ರಣ ವ್ಯವಸ್ಥೆಯನ್ನು ಗರಿಷ್ಟ ಪ್ರಮಾಣಕ್ಕೆ ಹೆಚ್ಚಿಸಿದೆ. ವಿದ್ಯುತ್ ಬಿಲ್ ಹೆಚ್ಚಾದರೂ ಪರವಾಗಿಲ್ಲ ಎಂದುಕೊಂಡೇ ಹಾಗೆ ಮಾಡಿದೆ...ಅದರಿಂದ ಅತ್ತೆಗೆ ನೆಗಡಿ, ಕೆಮ್ಮು ಬಂದಿತು. ಸಾಮಾನ್ಯವಾಗಿ ಶೇಕಡ 20ರಷ್ಟು ಬ್ರ್ಯಾಂಡಿ, ಜಿನ್ ಅಥವಾ ವೋಡ್ಕಾ ಹೊಂದಿರುವ ಕೆಮ್ಮಿನ ಔಷಧಿಯನ್ನು ತಂದು ಕೊಟ್ಟೆ. ಪ್ರತಿ ಎರಡು ಗಂಟೆಗೊಮ್ಮೆ 50 ಎಂ.ಎಲ್ ನಂತೆ ಹಗಲು ರಾತ್ರಿ ತೆಗೆದುಕೊಳ್ಳುವಂತೆ ತಿಳಿಸಿ, ಅವರು ಬಹುತೇಕ ಕೊಠಡಿಯಲ್ಲೇ ಉಳಿದುಕೊಳ್ಳುವಂತೆ ನೋಡಿಕೊಂಡೆ. ಇದರಿಂದ ನನ್ನ ಸಮಸ್ಯೆ ಎಷ್ಟೋ ಕಡಿಮೆಯಾಯಿತು.ನನ್ನ ಅತ್ತೆ  ಹೆಚ್ಚೆಂದರೆ ಚಹಾ ಕೇಳುತ್ತಿದ್ದರು. ಅಂಥ ಸಾಧ್ಯತೆ ಕಡಿಮೆಯೇ ಇತ್ತು. ಏಕೆಂದರೆ ನಾನು ದಯಪಾಲಿಸುತ್ತಿದ್ದ ಕೆಮ್ಮಿನ ಔಷಧಿಯಿಂದ ಆಕೆ ಸದಾ ನಿದ್ರೆಯ ಮಂಪರಿನಲ್ಲಿಯೇ ಇರುತ್ತಿದ್ದುದು ಹೆಚ್ಚು. ಅಕಸ್ಮಾತ್ ಚಹಾ ಕೇಳಿದಾಗಲೂ ನಾನೇ ಮಾಡಿಕೊಡುತ್ತೇನೆಂದು ಹೇಳುತ್ತಿದ್ದೆ...ಒಳ್ಳೆಯ ಮಸಾಲೆ ಚಹಾ ಮಾಡುತ್ತೇನೆಂದು ಹೇಳಿದಾಗ ಆಕೆ ಖುಷಿಯಿಂದಲೇ  ಒಪ್ಪಿಕೊಳ್ಳುತ್ತಿದ್ದರು. ಕಾಳು ಮೆಣಸಿನ ಪುಡಿ ಕೆಮ್ಮಿಗೆ ಒಳ್ಳೆಯದೆಂದು ಸೂಚಿಸಿ, ಮಸಾಲಾ ಚಹಾಪುಡಿಗೆ ಬದಲಾಗಿ ಧಾರಾಳವಾಗಿ ಕೆಂಪು ಮೆಣಸಿನ ಪುಡಿಯನ್ನು ಉಪಯೋಗಿಸುತ್ತಿದ್ದೆ. ಆಕೆಯ ಕೋರಿಕೆಯಂತೆ ಖಡಕ್ ಚಹಾ ಮಾಡಿದ್ದೇನೆಂದು ಕೊಚ್ಚಿಕೊಳ್ಳುತ್ತಿದ್ದೆ. ಕಾಳುಮೆಣಸಿನ ಖಡಕ್ ಅಂಶ ಆಕೆ ಅಂದುಕೊಂಡಂತೆ  ಇರಬೇಕಾದ ಅಗತ್ಯವಿಲ್ಲ, ಅಲ್ಲವೇ...ಆಕೆ ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಕೆಮ್ಮುತ್ತಿದ್ದರು. ಇಲ್ಲವೇ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು...ಅಥವಾ ಕೆಮ್ಮುತ್ತಾ  ಹೊರಳಾಡುತ್ತಿದ್ದರು! ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಇರಬೇಕಾದ ಸಮಯವನ್ನೆಲ್ಲಾ ಅತಿಥಿ ಕೊಠಡಿಯಲ್ಲೇ ಕಳೆಯಬೇಕಾದ ಪರಿಸ್ಥಿತಿಯಾಗುತ್ತಿದ್ದಿತು. ಒಂದೆರಡು ಬಾರಿ ಹೀಗಾದಮೇಲೆ ಆಕೆ ನಮ್ಮ ಮನೆಗೆ ಬಂದು ಠಿಕಾಣಿ ಹೂಡುವುದನ್ನೇ ಬಿಟ್ಟರು...ನಾನು ಮನೆ ಕೆಲಸ ಮಾಡುವುದೂ ತಪ್ಪಿತು....". ಸುಮಂತನ ಮಾತು ಮುಗಿದ ಮೇಲೆ ಮತ್ತೊಮ್ಮೆ ನಗೆಯ ಕಡಲು ಅಲ್ಲಿ.

   ಪವನ್ ಹೇಳಿದ್ದೂ ವಿಶೆಷವಾಗಿತ್ತು!..."ನನ್ನ ಹೆಂಡತಿ ILLNESS [Indian Ladies Lunch Neglecting Especially Sincere Spouse] ಎಂಬ ಸ್ನೇಹಿತೆಯರೊಂದಿಗೆ ಮಧ್ಯಾಹ್ನದ ಭೋಜನ ಕೂಟಕ್ಕೆ ಪದೇ ಪದೇ ಹೋಗುತ್ತಿದ್ದಳು. 'ಹನಿ ಡೂ...', ಎನ್ನುತ್ತಾ ಅವಳು ಕಾರ್ ಚಾಲನೆ ಮಾಡಿ, ಭರ್ರನೆ ಹೋಗುತ್ತಿದ್ದರೆ ನಾನು ಪೆಚ್ಚಾಗಿ ನಿಲ್ಲುತ್ತಿದ್ದೆ. ಕೊನೆಗೊಮ್ಮೆ ಒಂದು ಪ್ಲ್ಯಾನ್ ಮಾಡಿದೆ. ಆಕೆ ಮನೆಯಿಂದ ಹೊರಡುವ ಅರ್ಧ ಗಂಟೆ ಮೊದಲು ಕಾರಿನ  ಒಂದು ಚಕ್ರದ ಕೆಳಗೆ ಮೊಳೆಯೊಂದನ್ನು ಇಟ್ಟು ಬಿಡುತ್ತಿದ್ದೆ. ಇನ್ನೇನು ಹೊರಡಬೇಕು ಎನ್ನುವಾಗ ಚಕ್ರಕ್ಕೆ ಉಂಟಾಗಿರುವ ಗತಿ ಆಕೆಯ ಗಮನಕ್ಕೆ ಬರುತ್ತಿತ್ತು. ಮೆಕ್ಯಾನಿಕ್ ಮನೆಗೆ ಬಂದು ಚಕ್ರವನ್ನು ಸರಿಪಡಿಸುವ ಹೊತ್ತಿಗೆ ಭೋಜನ ಕಾರ್ಯಕ್ರಮಕ್ಕೆ ಬಹಳ ತಡ  ಆಗಿಬಿಡುತ್ತಿದ್ದಿತು. ಆಗ ಆಕೆ ಹಿಂತಿರುಗಿ ಬಂದು ಮನೆಯಲ್ಲೇ ಭೋಜನ ತಯಾರಿಸುತ್ತಿದ್ದುದರಿಂದ ನಾನು ಉಳಿದುಹೋದ ಪದಾರ್ಥಗಳನ್ನು   ಸೇವಿಸುವುದು ತಪ್ಪುತ್ತಿತ್ತು. ಇನ್ನೊಮ್ಮೆ ಕಾರಿನ ಕೀ ಅವಳಿಗೆ ಸಿಗದಂತೆ ಇಟ್ಟಿದ್ದೆ. ಅದನ್ನು ಹುಡುಕುವುದರಲ್ಲೇ ಸಮಯ ಆಗಿದ್ದರಿಂದ, ಅಂದೂ ಸಹ ಅವಳು ಹೋಗಲಾಗಲಿಲ್ಲ. ಮತ್ತೊಮ್ಮೆ ಅವಳು ತೊಡಬೇಕೆಂದು ಇಟ್ಟುಕೊಂಡಿದ್ದ ಹೀಲ್ಸ್ ಚಪ್ಪಲಿಯ ಬೆಲ್ಟ್ ಕಿತ್ತುಹಾಕಿದ್ದೆ. ಹೊರಡುವ ಸಮಯದಲ್ಲಿ ನೋಡಿಕೊಂಡದ್ದರಿಂದ, ಬೇರೆ ಮ್ಯಾಚಿಂಗ್ ಚಪ್ಪಲಿಯಿಲ್ಲದೆ ಹೋಗುವುದನ್ನು ಕ್ಯಾನ್ಸಲ್ ಮಾಡಿದಳು. ಹೀಗೇ ಅನೇಕ ಬಾರಿ ಆಗಿದ್ದರಿಂದ, ಆ ಕೂಟದಿಂದ ಅವಳ ಸದಸ್ಯತ್ವವನ್ನು  ತೆಗೆದುಹಾಕಲಾಯ್ತು. ಅಂದಿನಿಂದ ನನ್ನಾಕೆ ILLNESS ಕೂಟಕ್ಕೆ ಹೋಗುವ ಯೋಚನೆಯನ್ನೇ ಬಿಟ್ಟಳು!!...", ಎಲ್ಲರೂ ನಕ್ಕರು ಪವನ್ ತಲೆಗೊಂದು ಮೊಟಕುತ್ತಾ!!

      "ಅಯ್ಯೋ ನನ್ನಾಕೆಯೂ ಹಾಗೇ....ಗಾರ್ಡನ್ ಕೆಲಸಕ್ಕೆ ನೇಮಿಸಿಬಿಡುತ್ತಿದ್ದಳು. ನನಗೋ ಅದರಲ್ಲಿ ಆಸಕ್ತಿಯೇ ಇಲ್ಲ...ವಿಧಿಯಿಲ್ಲದೆ ಮಾಡಬೇಕಾಗುತ್ತಿದ್ದಿತು. ಬೇಕೆಂದೇ ನಮ್ಮ ಮನೆಯಲ್ಲಿದ್ದ ಬೆಲೆಬಾಳುವ ಗಿಡಗಳಿರುವ ಕುಂಡಗಳನ್ನು  ಅವಳಿಗೆ ಕಾಣದ ಹಾಗೆ ತೆಗೆದುಕೊಂಡು ಹೋಗಿ, ಬೇರೆ ಬೀದಿಯಲ್ಲಿ ಇಟ್ಟುಬರುತ್ತಿದ್ದೆ....ಅಮೆರಿಕಾದಲ್ಲಿ ಕರಿಬೇವು ಸಿಗುವುದು ಎಷ್ಟು ಕಷ್ಟ ಮತ್ತು ಎಷ್ಟು ದುಬಾರಿ  ಅಂತಾ ಗೊತ್ತಲ್ಲಾ...ಅದಕ್ಕೆಂದೇ ಅವಳು ಕರಿಬೇವಿನ ಗಿಡವನ್ನು ಬೆಳೆಸಿದ್ದಳು. ಅದು ಮರವಾಗಿ ಸೊಂಪಾಗಿ ಬೆಳೆದಿತ್ತು. ನಾನು ಗಾರ್ಡನ್ ಮಾಡುವಾಗ ಕರಿಬೇವನ್ನು ಕಿತ್ತು, ಕಿತ್ತು ಸುತ್ತಮುತ್ತಲಿದ್ದ ಭಾರತೀಯರ ಮನೆಗಳಿಗೆಲ್ಲಾ ಕೊಡುತ್ತಿದ್ದೆ. ಅದನ್ನು ನೋಡಿ ನನ್ನಾಕೆಗೆ ಸಿಟ್ಟೋ ಸಿಟ್ಟು...ಅಮೆರಿಕಾದಲ್ಲಿ ಅಪರೂಪವಾಗಿರುವ ಕರಿಬೇವನ್ನು ಹಾಗೆ ಸುಮ್ಮನೆ ಕೊಟ್ಟರೆ ಬೆಲೆಯಿರುತ್ತಾ ಎಂದು ಅವಳ ವಾದ. ಅವಳು ಎಷ್ಟು ಹೇಳಿದರೂ ನಾನು ಹಾಗೇ ಮಾಡುತ್ತಿದ್ದರಿಂದ, ಅವಳು ನನ್ನನ್ನು ಗಾರ್ಡನ್ ಕೆಲಸ ಮಾಡುವುದನ್ನು ತಡೆದಳು. ನನಗೂ ಅದೇ ಬೇಕಾಗಿತ್ತು. ಹುಳ್ಳಗೆ ಸುಮ್ಮನಾದೆ...", ವೆಂಕಟಾದ್ರಿ ಹೇಳಿದಾಗ ಅಹುದೆಂದು ತಲೆಹಾಕಿದರು ಗೆಳೆಯರು.

 ರಾಜೀವ ತನ್ನ ಯುಕ್ತಿ ಹೇಳಲು ಪ್ರಾರಂಭಿಸಿದ...," ನಾನು ದಿನಸಿ  ಸಾಮಾನುಗಳನ್ನು ತರಬೇಕೆಂಬುದು ನನ್ನಾಕೆಯ  ಉನ್ನತ ಕನಸು. ಅಂದರೆ ಅವಳ ಜೊತೆ ಭಂಟನಂತೆ ಸೂಪರ್ ಮಾರ್ಕೆಟ್ ಗೆ  ಹೋಗಬೇಕೆಂದು ! ಅವಳು ಸಾಮಾನುಗಳನ್ನೆಲ್ಲಾ ಆರಿಸಿ ಟ್ರಾಲಿಯಲ್ಲಿ ಹಾಕಬೇಕು. ನಾನು ಟ್ರಾಲಿ ತಳ್ಳುತ್ತಾ ಅವಳ ಹಿಂದೆ ಹೋಗಬೇಕು. ಆಮೇಲೆ  ದೊಡ್ಡ ಕ್ಯೂನಲ್ಲಿ ನಿಂತು ಬಿಲ್ಲು ಹಾಕಿಸಬೇಕು. ನಾನು ಕ್ಯೂನಲ್ಲಿ ನಿಂತಿದ್ದಷ್ಟೂ ಹೊತ್ತು ಆಕೆ ಕಾಫಿ ಶಾಪ್ ನಲ್ಲಿ ಕಾಫಿ ಹೀರುತ್ತಾ, ಫೋನ್ ನಲ್ಲಿ ಹರಟೆ ಹೊಡೆಯುತ್ತಾ ಇರುತ್ತಿದ್ದಳು. ಒಂದಷ್ಟು ಬಾರಿ ಇದೇ ಕತೆಯಾದಾಗ, ನಾನು ನನ್ನ ತಂತ್ರ  ಉಪಯೋಗಿಸಲು ಅನುವಾದೆ. ನಾನೂ ಟ್ರಾಲಿಯಲ್ಲಿ ಸುಮ್ಮನೆ ಸಾಮಾನುಗಳನ್ನು ತುಂಬುತ್ತಾ ಹೋದೆ. ಬೆಕ್ಕಿಗೆ ತಿಂಡಿ, ನಾಯಿಗೆ ಕೂಳು, ಆಟಿಕೆ ಸಾಮಾನು ...ಮುಂತಾದ ಕೆಲಸಕ್ಕೆ ಬಾರದ ಸರಕುಗಳನ್ನೆಲ್ಲಾ ಟ್ರಾಲಿಯಲ್ಲಿ ಭರ್ತಿ ಮಾಡುತ್ತಾ ಹೋಗುತ್ತಿದ್ದೆ. ನಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಚಿಕ್ಕ ಮಕ್ಕಳು...ಯಾವುದೂ ಇಲ್ಲದೆ ಹೋದರೂ ತುಂಬುವುದನ್ನು ನೋಡಿ ಇದೆಲ್ಲಾ ಯಾಕೆ ಬೇಕು ಎಂದು ನನ್ನಾಕೆ ಕೇಳಿದಾಗ, ಮುಂದೆ ಉಪಯೋಗಕ್ಕೆ ಬಂದರೂ ಬರಬಹುದು ಎಂದು ರೀಲು ಬಿಡುತ್ತಿದ್ದೆ. ಅಂಥ ಸಾಮಾನುಗಳನ್ನೆಲ್ಲಾ ಇಟ್ಟುಕೊಳ್ಳಲು ಅಪಾರ್ಟ್ ಮೆಂಟ್ ನಲ್ಲಿ ಜಾಗ ಕೂಡ  ಇಲ್ಲ ಎಂದು ಆಕೆ ಗೊಣಗುತ್ತಿದ್ದಳು. ಅದನ್ನೆಲ್ಲಾ ಕೇಳಿಸಿಕೊಂಡೇ ಇಲ್ಲ  ಎನ್ನುವ ಹಾಗೆ ತಳ್ಳುವ ಗಾಡಿಯಲ್ಲಿ ಅನಗತ್ಯ ಸರಕುಗಳನ್ನು ತುಂಬುತ್ತಾ ಹೋಗುತ್ತಿದ್ದೆ. ಆಗೆಲ್ಲಾ ಆಕೆಗೆ ಗಲಿಬಿಲಿಯಾಗುತ್ತಿತ್ತು! ಕೊನೆಗೆ ಹಣ ಪಾವತಿಸುವ ವಿಭಾಗದಲ್ಲಿ ವಿನಾಕಾರಣ ಅಲ್ಲಿರುವ ಹುಡುಗಿಯೊಂದಿಗೆ ಜಗಳ ಶುರು ಮಾಡಿಕೊಳ್ಳುತ್ತಿದ್ದೆ. ಸುಮ್ಮಸುಮ್ಮನೆ ಏರು ದನಿಯಲ್ಲಿ ಜೋರು ಮಾಡಿ, ಸುತ್ತಮುತ್ತಲಿನವರೆಲ್ಲಾ ನಮ್ಮನ್ನೇ ನೋಡುವಂತೆ ಮಾಡುತ್ತಿದ್ದೆ. ಒಂದೆರಡು ಬಾರಿ ಹೀಗಾದಮೇಲೆ ನನ್ನಾಕೆ ,'ಹನಿ, ಇನ್ನು ಮುಂದೆ ನಾನೊಬ್ಬಳೇ ಹೋಗಿ ದಿನಸಿ ಪದಾರ್ಥಗಳನ್ನು ಕೊಂಡು ತರುವೆ...ನೀನು ಜೊತೆಗೆ ಬರುವುದು ಬೇಡ', ಎಂದಳು. ಅಂದಿನಿಂದ ನಾನು ಗಂಟೆಗಟ್ಟಲೆ ಸೂಪರ್ ಮಾರ್ಕೆಟ್ ನಲ್ಲಿ ಕಳೆಯುವ ಕಾಟದಿಂದ ತಪ್ಪಿಸಿಕೊಂಡೆ...". ಮತ್ತೊಮ್ಮೆ ಕೇಕೆ ಅಲ್ಲಿ!!

         ಅದೇ ಸಮಯಕ್ಕೆ ಮನೀಶ್ ನ ನಾದಿನಿ ಸೀಮಾ ಅಲ್ಲಿಗೆ ಬಂದಳು.  ಸೀಮಾ ಮನೀಶ್ ಹೆಂಡತಿ ವಿನುತಾಳ ತಂಗಿ. ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಳು. ರಜೆ ಇದ್ದುದರಿಂದ ಹೊಸದಾಗಿ ಮದುವೆಯಾಗಿ ಅಮೆರಿಕಾಗೆ ಬಂದಿದ್ದ ಅಕ್ಕನ ಜೊತೆ ಒಂದಷ್ಟು ದಿನ ಇದ್ದು ಹೋಗಲು ಬಂದಿದ್ದಳು. ಚೂಟಿ ಹುಡುಗಿಯಾದ ಅವಳು ಪಾರ್ಟಿಯಲ್ಲಿ  ಎಲ್ಲಾ ಕಡೆ ಓಡಾಡಿಕೊಂಡು ಇದ್ದಳು.  "ಬಾವಾ, ನನ್ನ ಮೊಬೈಲ್ ಇಲ್ಲೇ ಇಟ್ಟಿದ್ದೆ...ತೆಗೆದುಕೊಂಡು ಹೋಗುತ್ತೇನೆ...", ಎಂದು ಹೇಳಿ ಮೂಲೆಯ ಟೀಪಾಯ್ ಮೇಲಿದ್ದ ಮೊಬೈಲನ್ನು ತೆಗೆದುಕೊಂಡಳು. "ಅಮೆರಿಕಾ ಹೇಗನ್ನಿಸಿತು ಸೀಮಾ?", ರಾಜೀವ ಕೇಳಿದ. "ಹಾ, ಚೆನ್ನಾಗಿದೆ...ಏನೇ ಆದ್ರೂ ನಮ್ಮ ಬೆಂಗಳೂರಿನ ಮುಂದೆ ಯಾವ ಅಮರಾವತಿಯೂ ಸಾಟಿಯಾಗದು ಬಿಡಿ...", ನಗುತ್ತಾ ಹೇಳಿದಳು ಸೀಮಾ. "ಅಯ್ಯೋ..., ಹಿಂಗಂದುಬಿಟ್ಟರೆ ಹೆಂಗೆ?!...ನಿನಗೂ ಒಂದು ಅಮೆರಿಕಾ ಗಂಡನ್ನು ನೋಡಬೇಕೆಂದಿದ್ದೆ!!", ಮನೀಶ್ ನಾದಿನಿಗೆ ತಮಾಷೆಮಾಡಿದ. "ಅಯ್ಯಯ್ಯೋ....ಬೇಡವೇ ಬೇಡ ಬಾವಾ....'ಹನಿ ಡೂ' ಅಂತೆಲ್ಲಾ ನಯವಾಗಿ     ಹೇಳೋಕೆ  ಬರಲ್ಲಾ ನಂಗೆ!!....ನಾನೇನಿದ್ರೂ ಜೋರು ಮಾಡಿ ಕೆಲಸ ತೆಗೆಯೋಳು...ನನ್ನ ಬಳಿ ಯಾವ ತಂತ್ರವೂ ನಡೆಯೋಲ್ಲ...", ಕಣ್ಣು ಹೊಡೆದು ಹೇಳಿದಳು ಸೀಮಾ. ಅವಳ ಮಾತು ಕೇಳಿ ಎಲ್ಲರೂ ಬೆಚ್ಚಿದರು. ಅವರು ಬೆಚ್ಚಿದ್ದು ನೋಡಿ ಸೀಮಾ ಜೋರಾಗಿ ನಕ್ಕಳು. "ನೀವು ಮಾತು ಪ್ರಾರಂಭಿಸಿದಾಗ ನಾನಿಲ್ಲಿಗೆ ನಿಮಗೇನಾದ್ರೂ ಬೇಕಾ ಅಂತಾ ಕೇಳೋಕೆ ಬಂದೆ...ನೀವು ಮಾತಿನಲ್ಲಿ ಮೈಮರೆತಿದ್ದೀರಿ...ಅದಕ್ಕೇ ಹಾಗೇ ಹೋದೆ...ಡೋಂಟ್ ವರಿ!...ನಿಮ್ಮ ಪೂರ್ತಿ ಸಂವಾದವನ್ನು ನಾನಿನ್ನೂ ಕೇಳಿಲ್ಲ...", ತುಂಟದನದಿಂದಲೇ ಹೇಳುತ್ತಾ ಅಲ್ಲಿಂದ ಹೋದಳು. ಅವಳು ಹೋದ ಮೇಲೆ ಗೆಳೆಯರ ಗುಂಪು ನೆಮ್ಮದಿಯ  ಉಸಿರು ಬಿಟ್ಟಿತು!! ಮತ್ತೇ ಹರಟೆ ಮುಂದುವರೆಯಿತು!!

          ಸ್ವಲ್ಪಹೊತ್ತು ಹರಟಿದ ನಂತರ ವೆಂಕಟಾದ್ರಿ, "ಗಮನಿಸಿದ್ರಾ...ಬರೀ ನಮ್ಮ ಮಾತಿನ ಸದ್ದೇ ತುಂಬಿದೆ. ನಮ್ಮ ಹೆಂಡತಿಯರು ಇರುವ ಕೋಣೆಯಿಂದ ಯಾವ ಸದ್ದೂ ಬರುತ್ತಿಲ್ಲ!...ಅವರ ಒಂದೂ ಮಾತು ಕೇಳುತ್ತಿಲ್ಲ....ಅವರೆಲ್ಲಾ ಒಟ್ಟಿಗೆ ಸೇರಿದಾಗ  ಇಷ್ಟು ನಿಶ್ಯಬ್ಧ  ಇರಲು ಸಾಧ್ಯವೇ....?!...ಅವರೆಲ್ಲಾ ಇಲ್ಲೇ ಇದ್ದಾರಾ ಅಥವ ಹೊರಗೆಲ್ಲಾದರೂ ಹೋಗಿದ್ದಾರಾ...?!", ಆಶ್ಚರ್ಯದಿಂದ ಕೇಳಿದ. "ಹೌದಲ್ಲಾ...ಈಗ ಸ್ವಲ್ಪ ಹೊತ್ತಿನಿಂದ ಶಬ್ಧ  ಇಲ್ಲ...ಎಲ್ಲಿ ಹೋಗಿರಬಹುದು?!!", ಮುರುಳಿ ನೋಡಲು ಎದ್ದ. ಅವನ ಜೊತೆ ಎಲ್ಲರೂ ಎದ್ದು, ಕುತೂಹಲದಿಂದ ಮಹಿಳೆಯರು ಇದ್ದ ಕೋಣೆಗೆ ಹೋದರು. ಅಲ್ಲಿ ಹೋದವರೇ ಬೆಚ್ಚಿ ನಿಂತರು. ಎಲ್ಲಾ ಮಹಿಳೆಯರೂ ಗಂಭೀರವಾಗಿ ಕುಳಿತಿದ್ದರು. ಅಲ್ಲೊಂದು ಗಾಢ ಮೌನ  ಆವರಿಸಿತ್ತು!!!  "ಏನಾಯ್ತು?!....ಏಕೆ ಹೀಗೆ ಮೌನವಾಗಿ ಕುಳಿತಿದ್ದೀರ?!....ಯಾರಿಗೆ ಏನಾಯ್ತು...", ಮನೀಶ್ ನಡುಗುವ ದನಿಯಲ್ಲಿ ಕೇಳಿದ. ಉಳಿದ ಗೆಳೆಯರೂ ಭಯದಿಂದ ನಿಂತಿದ್ದರು. ಆಗ ಸುಮಂತನ ಹೆಂಡತಿ ಕೈಯಿಂದಲೇ ಒಂದು ನಿಮಿಷ  ಇರಿ ಎಂದು ಸನ್ನೆಮಾಡಿ, ಮೊಬೈಲ್ ಆನ್ ಮಾಡಿ,  ಲೌಡ್ ಸ್ಪೀಕರ್  ಹಾಕಿದಳು.  ಅಲ್ಲಿ ಕೇಳಿಸಿದ್ದೇನು!!!...ಈ ತಂತ್ರಶಾಲಿ ಗಂಡಂದಿರು ಮಾತನಾಡಿದ ಅಷ್ಟೂ ಮಾತುಗಳು ಬಿತ್ತರವಾಗುತ್ತಿವೆ!!!....ತಮ್ಮ ಮಾತುಗಳನ್ನು ಕೇಳುತ್ತಲೇ ಗೆಳೆಯರ ಗುಂಪು ಬೆವರತೊಡಗಿತು. ಸೀಮಾ ನಗುತ್ತಾ, "ನನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದೆ", ಕಣ್ಣುಹೊಡೆದು ಹೇಳಿದಳು. ಆದರೆ ಗೆಳೆಯರು ಕಣ್ಣುರೆಪ್ಪೆ ಅಲುಗಾಡಿಸಲೂ ಶಕ್ತಿಯಿಲ್ಲದೆ ಭೀತರಾಗಿ ನಿಂತಿದ್ದರು...ಮುಂದಾಗಬಹುದನ್ನು ಊಹಿಸಿಕೊಂಡು!!!

                                                                               -ಕಿರಣ್ ಪ್ರಸಾದ್ ರಾಜನಹಳ್ಳಿ
                                                                                
# 691/ಸಿ, "ಅತೃ", 22ನೇ ಕ್ರಾಸ್, 19ನೇ ಮೇನ್,
ಹೆಚ್.ಎಸ್.ಆರ್ ಲೇ ಔಟ್, 2ನೇ ಸೆಕ್ಟರ್,
ಬೆಂಗಳೂರು-560102
9449459766
Click here to reply or forward
5.2 GB (34%) of 15 GB used
Manage
Terms - Privacy
Last account activity: 3 minutes ago
Details
ubr
Add to circles
Show details
Get a Gmail custom address (you@yourcompany)
Recommended for business email users
Get started
Posted by ಮನಸ್ಸಿನಿಂದ ಮನಸ್ಸಿಗೆ at 12:01 AM No comments:

Wednesday, November 9, 2016



                                                                         ನಾತಿ ಚರಾಮಿ

      ಲಾಸ್ ಏಂಜಲಿಸ್ ನೆಲದ ಮೇಲೆ ಕಾಲಿಟ್ಟಾಗ  ಯಾಮಿನಿ ಬೆದರಿಹೋಗಿದ್ದಳು. ಲಗೇಜ್  ಇರುವ ಟ್ರಾಲಿ ತಳ್ಳಿಕೊಂಡು ಏರ್ ಪೋರ್ಟ್ ನಿಂದ ಹೊರಗೆ ಬಂದು ದಿಲೀಪ್ ಗಾಗಿ ಸುತ್ತಲೂ ಕಣ್ಣಾಡಿಸಿದಳು. ಅವನು ಕಾಣದಿದ್ದುದರಿಂದ ಮೆಲ್ಲಗೆ ನಡುಕ ಪ್ರಾರಂಭವಾಯ್ತು. ಹುಟ್ಟಿ ಬೆಳೆದ ಕೋಟೆಕೊತ್ತಲುಗಳ ಊರು ಚಿತ್ರದುರ್ಗದಿಂದ ಮೊಟ್ಟ ಮೊದಲ ಬಾರಿಗೆ ವಿದೇಶಕ್ಕೆ ಬಂದವಳು. ಅಮೆರಿಕಾ ಯಾವಾಗಲೂ ಕನಸಿನ ಅಮರಾವತಿ ಆಗಿತ್ತು. ಮುಂದೊಂದು ದಿನ ಅಲ್ಲಿಗೇ ಹೋಗಿ ನೆಲೆಸುತ್ತೇನೆಂಬುದನ್ನೇ ಅವಳು ಊಹಿಸಿಯೂ ಇರಲಿಲ್ಲ. ವಯಸ್ಸು ಮೂವತ್ತು ಆಗುತ್ತಾ ಬಂದರೂ ಕಂಕಣಬಲ ಕೂಡಿಬರದಿದ್ದುದರಿಂದ ಕ್ರಮೇಣ ಮದುವೆಯ ಆಸೆಯೂ ಬತ್ತಲು ಆಗಷ್ಟೇ ಆರಂಭವಾದ ಸಮಯದಲ್ಲೇ ಮಿಂಚಿನ ಸಂಚಾರ ತಂದಿತ್ತು ದಿಲೀಪ್ ನ ಸಂಬಂಧ. ಅಮೆರಿಕಾದ ಹುಡುಗ...ಒಳ್ಳೆಯ ಕೆಲಸ...ಲಕ್ಷಣವಾಗಿದ್ದಾನೆ...ಇನ್ನೇನು ತಾನೇ ಬೇಕು...ಮನೆಯವರೆಲ್ಲಾ ಜಾಕ್ ಪಾಟ್ ಹೊಡೆದಷ್ಟು ಸಂಭ್ರಮಿಸಿದರು. ಯಾಮಿನಿಯ ಮದುವೆಯ ಬಗ್ಗೆ ಅವರಿಗೂ ಭರವಸೆ ಕ್ಷೀಣವಾಗಿತ್ತು. ಅಂತಹ  ಸಂದರ್ಭದಲ್ಲಿ ಇಂತಹ ಹುಡುಗ ಸಲೀಸಾಗಿ ಒಪ್ಪಿಕೊಂಡು ಬಂದರೆ ಸಂತೋಷಕ್ಕೆ ಎಲ್ಲೆಯುಂಟೇ?!! ಸಮಯ ಕಡಿಮೆಯಿದೆ...ಬೇಗನೇ ಮದುವೆ ಮಾಡಿಕೊಡಿ ಎಂದು ಹುಡುಗನ ಕಡೆಯವರು ಹೇಳಿದಾಗ ಮನೆಯಲ್ಲಿ ಮ್ಯಾರಥಾನ್ ಓಟ ಶುರುವಾಯಿತು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡುತ್ತಾ ಕೆಲಸ ಮಾಡಿದರು.. ಎಲ್ಲರ ಅಚ್ಚರಿಯ ಕಂಗಳ ಮುಂದೆಯೇ ಮದುವೆ ಮುಕ್ತಾಯಗೊಂಡಿತು. ಪ್ರಸ್ತದ ಶಾಸ್ತ್ರಕ್ಕೂ ಇರುವುದಕ್ಕಾಗದೇ ದಿಲೀಪ್ ವಾಪಸ್ಸು ಅಮೆರಿಕಾಗೆ ಹೋಗಬೇಕಾಯ್ತು. "ಮದುವೆಯಾಯ್ತಲ್ಲ ಸಧ್ಯ...ಇನ್ನುಳಿದ ಶಾಸ್ತ್ರಗಳು ಅಮೆರಿಕಾದಲ್ಲೇ ನಡೆಯಲಿ ಬಿಡು...", ಎಂದು ಅಪ್ಪ-ಅಮ್ಮ  ನೆಮ್ಮದಿಯ ುಸಿರು ಬಿಟ್ಟರು. ಯಾಮಿನಿಗೂ ಎಲ್ಲವೂ ಅಯೋಮಯವಾದಂತಾಗಿ ಕನಸು ಕಾಣುವುದನ್ನೂ ಮರೆತಿದ್ದಳು...ಅಥವಾ ಯಾವುದೋ ಒಂದು ಕನಸಿನ ಲೋಕದಲ್ಲಿಯೇ ಇದ್ದೇನೆಂದೂ ಅನ್ನಿಸುತ್ತಿದ್ದಿತು. ಎಂದೂ ಬೇರೆ ಊರಿಗೆ ಒಬ್ಬಳೇ ಹೋಗದವಳು ಇಂದು ಸಾಗರದಾಚೆಯ ನಾಡಿಗೆ ಒಬ್ಬಳೇ ಹಾರಿ ಬಂದಿದ್ದಳು. ಸಂದರ್ಭಗಳು ಹೇಗೆ ಎಲ್ಲವನ್ನೂ ಕಲಿಸಿಬಿಡುತ್ತಲ್ಲವೇ ಎಂದು ಆ ಘಳಿಗೆಯಲ್ಲೂ ತರ್ಕಿಸಿದಳು. ವೀಸಾ ಸಿಕ್ಕ ಕೂಡಲೇ ಮಗಳು ಅಮೆರಿಕಾಗೆ ಹೋಗಿ ಗಂಡನನ್ನು ಸೇರಿಕೊಂಡುಬಿಡಲಿ ಎಂದು ಅಪ್ಪ, ಅತ್ತೆ, ಮಾವ ತೀರ್ಮಾನಿಸಿದ್ದರು. ಅದರಂತೆಯೇ ವೀಸಾ ಬಂದಕೂಡಲೇ ಯಾಮಿನಿಯನ್ನು ಕಳಿಸಿಕೊಟ್ಟಿದ್ದರು. ಮದುವೆ ಸಿದ್ದವಾದ ಘಳಿಗೆಯಿಂದಲೂ ಯಾಮಿನಿ ಸೂತ್ರದ ಗೊಂಬೆಯಾಗಿದ್ದಳು. ಯಾರು ಏನು ಹೇಳಿದರೂ ಸುಮ್ಮನೇ ತಲೆಯಾಡಿಸಿ ಕೇಳುತ್ತಿದ್ದಳು. "ತನಗೇನಾದರೂ ಸ್ವಂತ ಯೋಚಿಸುವ ಬುದ್ದಿಯೇ ಹೋಗಿಬಿಟ್ಟಿದೆಯಾ?!", ಎಂದು ಆಗಾಗ ಅಚ್ಚರಿಯನ್ನೂ ಪಟ್ಟುಕೊಳ್ಳುತ್ತಿದ್ದಳು. ಈಗಲೂ ಸಹ "ಇದು ನಾನೇ ಅಲ್ಲವೇ?!...ನಾನು ಅಮೆರಿಕಾಗೆ ಬಂದಿರುವೆನಾ?...", ಎಂದುಕೊಂಡು ತನ್ನ ಕೈಯನ್ನು ಚಿವುಟಿ ನೋಡಿಕೊಂಡಳು. " ದಿಲೀಪ್ ಯಾಕೆ ಇಷ್ಟು ಹೊತ್ತಾದರೂ ಬಂದಿಲ್ಲ. ಅಕಸ್ಮಾತ್ ಅವನು ಬರದಿದ್ದರೆ  ನಾನೇನು ಮಾಡಲಿ?...ಎಲ್ಲಿಗೆ ಹೋಗಲಿ?!...ದೇವರೇ ಕಾಪಾಡು ತಂದೇ...", ಎಂದು ಮನದಲ್ಲೇ ತಲ್ಲಣಿಸತೊಡಗಿದಳು. ಸುತ್ತಲೂ ಶ್ವೇತ ವರ್ಣದ ಗೊಂಬೆಗಳಂತಹ ಜನರು ತಮ್ಮದೇ ಕೆಲಸದಲ್ಲಿ ಮುಳುಗಿ ಚಲಿಸುತ್ತಿದ್ದರು. ಅವರ ಹಂಸಬಿಳಿ ಬಣ್ಣವನ್ನು ನೋಡಿ, ತನ್ನ ಕೈಗಳನ್ನೊಮ್ಮೆ ನೋಡಿಕೊಂಡಳು. ಕರಿ ಶಿಲೆಯಲ್ಲಿ ಕೆತ್ತಿದಂತೆ ಕಂಡವು. "ಅಯ್ಯೋ..., ನಾನೆಷ್ಟು ಕಪ್ಪಗಿದ್ದೇನೆ. ಚಿತ್ರದುರ್ಗದಲ್ಲೇ ನಾನು ಕಪ್ಪು ಹುಡುಗಿ ಅಂತಾ ಹೆಸರಾಗಿದ್ದೆ. ಇನ್ನು ಇಲ್ಲಿ ಕೇಳಬೇಕೆ?!....ಸೀದಾ ಕಾಂಟ್ರಾಸ್ಟ್ ಬಣ್ಣ...ನಾನು ಕಪ್ಪಗಿದ್ದೇನೆ ಎಂದೇ ಅಲ್ಲವೇ ಮದುವೆ ತಡವಾಗಿದ್ದು. ಯಾವ ಗಂಡು ನೋಡಿದರೂ ಕಪ್ಪು ಬಣ್ಣದಿಂದಾಗಿಯೇ ನನ್ನನ್ನು ಜರಿಯುತ್ತಿದ್ದರು. ಈ ದಿಲೀಪ್ ಅದು ಹೇಗೆ ನನ್ನನ್ನು ಒಪ್ಪಿಕೊಂಡನೋ ಗೊತ್ತಿಲ್ಲ !!!....ಆಶ್ಚರ್ಯ ಆಗುತ್ತೆ....", ಯೋಚಿಸುತ್ತದ್ದವಳ ಕಣ್ಣಾಲಿಗಳು ಮೆಲ್ಲಗೆ ತುಂಬತೊಡಗಿದವು. "ಛೆ...., ನಾನು ಒಬ್ಬಳೇ ಬರಬಾರದಿತ್ತು. ಕಾಣದ ದೇಶ...ದೊಡ್ಡ ನಗರಗಳಲ್ಲಿ ಓಡಾಡಿದವಳಲ್ಲ. ಈಗ ದಿಲೀಪ್ ಬರದಿದ್ದರೆ ಏನು ಮಾಡಲಿ. ಲಗೇಜ್ ತೆಗೆದುಕೊಂಡು ಹೊರಬಂದವರೆಲ್ಲಾ ಹೊರಟು ಹೋದರು. ಪ್ರತಿಯೊಬ್ಬರಿಗೂ ಯಾರೋ ಒಬ್ಬರು ಬಂದು ಎದುರುಗೊಂಡರು. ಎಷ್ಟು ಚೆನ್ನಾಗಿ ಕಾಯುತ್ತಾ ನಿಂತಿದ್ದರು. ಓಡಿ ಬಂದು ಅಪ್ಪಿಕೊಂಡು ಸ್ವಾಗತಿಸಿದರು. ನಾನೊಬ್ಬಳೇ ಸುಮ್ಮನೆ ನಿಂತಿದ್ದೇನೆ...ನಮ್ಮ ದೇಶದಲ್ಲಿಯಾಗಿದ್ದರೆ ಹೀಗೆ ಒಬ್ಬಳೇ ನಿಂತಿದ್ದರೆ ಯಾರಾದರೂ ಬಂದು ವಿಚಾರಿಸುತ್ತಿದ್ದರು. ಇಲ್ಲಿ ಹಾಗಲ್ಲ. ಯಾರೂ ನನ್ನ ಕಡೆ ನೋಡುತ್ತಲೂ ಇಲ್ಲ. ಹೇಗೆ ಯಾರನ್ನಾದರೂ ಮಾತನಾಡಿಸಲಿ....?!," ಯಾಮಿನಿಯ ಕಂಗಳಿಂದ  ಒಂದೊಂದಾಗಿ ಹನಿಗಳು ಜಾರತೊಡಗಿದವು. "ಮೊಬೈಲ್ ನಲ್ಲಿ ಫೋನ್ ಮಾಡೋಣವೆಂದರೆ ಯಾಕೋ ಕರೆ ಹೋಗುತ್ತಿಲ್ಲ. ಅದರಲ್ಲಿ ಚಾರ್ಜ್ ಬೇರೆ ಇಲ್ಲ....", ಅಸಹಾಯಕಳಾಗಿ ನಿಂತಳು. ಅದೇ ಸಮಯಕ್ಕೆ ದಿಲೀಪ್ ಪ್ರತ್ಯಕ್ಷನಾದ. " ಬಾ..., ಕಾರ್ ಬಳಿಗೆ ಹೋಗೋಣ", ಎಂದ. ಅವನನ್ನು ನೋಡಿದ ಕೋಡಲೇ ಯಾಮಿನಿಗೆ ಅಮೂಲ್ಯ ನಿಧಿ ಸಿಕ್ಕಂತಾಯಿತು. ಸಂತೋಷ, ನಾಚಿಕೆ, ಸಂಭ್ರಮಗಳಿಂದ ಅವನನ್ನು ನೋಡಿದಳು. ತನ್ನನ್ನು ನೋಡಿದ ಕೂಡಲೇ ಒಡಿ ಬಂದು ಗಾಢವಾಗಿ ಆಲಿಂಗನ ಮಾಡಿಕೊಳ್ಳುತ್ತಾನೆಂದು ಕಲ್ಪಿಸಿಕೊಂಡಿದ್ದಳು. ಆದರೆ ದಿಲೀಪ್ ನಿರ್ಲಿಪ್ತನಾಗಿ ಕಾರಿನೆಡೆಗೆ ಹೆಜ್ಜೆ ಹಾಕತೊಡಗಿದ. ಬಹುಶಃ ಅವನಿಗೂ ಸಂಕೋಚ, ನಾಚಿಕೆ ಆಗಿರಬಹುದು...ಅವನಿಗೂ ನಾನು ಹೊಸಬಳಲ್ವಾ...ಮದುವೆ ನಿಶ್ಚಯವಾದಾಗಿನಿಂದಲೂ ನಾವಿಬ್ಬರೂ ಸರಿಯಾಗಿ ಮಾತನಾಡಲೇ ಆಗಲಿಲ್ಲ...ಅವನೂ ಬಿಜಿ....ನಾನೂ ಬಿಜಿ...ಸಧ್ಯ, ಬಂದನಲ್ಲಾ", ಎಂದುಕೊಳ್ಳುತ್ತಾ ಅವನನ್ನು ಅನುಸರಿಸಿ. ಕಾರ್ ಬಳಿಗೆ ಬಂದಳು. ದಿಲೀಪ್ ಡಿಕ್ಕಿ ತೆಗೆದು ಲಗೇಜ್ ಇಟ್ಟು ಕಾರ್ ನಲ್ಲಿ ಕುಳಿತು, ಯಾಮಿನಿಗೂ ಕುಳಿತುಕೊಳ್ಳಲು ಹೇಳಿದ. ಕಾರ್ ವೇಗವಾಗಿ ಸಾಗತೊಡಗಿತು. ಡ್ರೈವ್ ಮಾಡುತ್ತಿದ್ದ  ದಿಲೀಪ್ ನನ್ನೇ  ವಾರೆಗಣ್ಣಿನಿಂದ ನೋಡಿದಳು ಯಾಮಿನಿ. "ಅಟ್ ಲೀಸ್ಟ್ ಈಗಲಾದರೂ ಕೇಳಬಹುದಿತ್ತು...ಹೇಗಿತ್ತು ಜರ್ನಿ?...ಹೇಗಿದ್ದೀಯ?... ಅಂತಾ!...ಏನೂ ಮಾತಾಡ್ತಿಲ್ಲವಲ್ಲಾ...!...ನಾನೇ ಮಾತಾಡಿಸಲಾ...", ಎಂದುಕೊಳ್ಳುತ್ತಲೇ, ಮೆಲ್ಲನೆ "ಹೇಗಿದ್ದೀರಿ ದಿಲೀಪ್?....ತುಂಬಾ ಗಾಬರಿಯಾಗಿತ್ತು...ಸಧ್ಯ, ನೀವು ಬಂದಿರಿ", ಎಂದಳು. ಅವಳನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ, "ಗಾಬರಿ ಯಾಕೆ?...ನಾನು ಹೇಳಿದ್ನಲ್ಲಾ...ಬರುತ್ತೇನೆ ಅಂತ....", ಎಂದು ಸಹಜವೆನ್ನುವಂತೆ ಹೇಳಿ ಸುಮ್ಮನಾದ. ಅವನ ಮಾತನ್ನು  ಕೇಳಿ ಯಾಮಿನಿಯ ಮುಖ ಸಣ್ಣದಾಯಿತು. "ಏಕೋ ಮೂಡ್ ಸರಿ ಇಲ್ಲ ಅನ್ನಿಸ್ತಿತೆ....ಅಥವ  ಇವನು ತುಂಬ ಕಡಿಮೆ ಮಾತನಾಡುವವನಿರಬೇಕು...ಆಮೇಲೆ ಕೇಳಿದರಾಯ್ತು...", ಎಂದುಕೊಂಡು ಹೊರಗೆ ನೋಡಿದಳು. ಸುತ್ತಲೂ ವಜ್ರಗಳನ್ನು ಚೆಲ್ಲಿದಂತೆ ಝಗಝಗಿಸುವ ದೀಪಗಳು....ಭವ್ಯವಾದ ಕಾರುಗಳು....", ಬೆರಗಾಗಿ ನೋಡತೊಡಗಿದಳು ಯಾಮಿನಿ. "ತನ್ನ ಮನೆ ಹೇಗಿರಬಹುದು?...ಇನ್ನು ತನ್ನ ಜೀವನ  ಆ ಮನೆಯಲ್ಲಿಯೇ...", ಮನೆಯ ಬಗ್ಗೆ ನೆನಪಿಸಿಕೊಂಡು ಪುಳಕಿತಳಾದಳು. 

        ಮನೆ ತಲುಪಿದಾಗ ಹೃದಯ ನಗಾರಿಯಂತೆ ಹೊಡೆದುಕೊಳ್ಳುತ್ತಿದ್ದಿತು. ಅದೊಂದು ಪುಟ್ಟ ಅಪಾರ್ಟ್ ಮೆಂಟ್. ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿದ್ದ ಅದು ಯಾಮಿನಿಗೆ ಅರಮನೆಯಂತೆ ಕಂಡಿತು. ಸಂಭ್ರಮ, ನಾಚಿಕೆಯಿಂದಲೇ ಒಳ ಬಂದಳು. "ನೋಡು, ಕಿಚನ್ ಅಲ್ಲಿದೆ. ನನ್ನದು ಊಟ  ಆಯ್ತು. ನಿನಗೆ  ಹಸಿವಾಗಿದ್ದರೆ ಬ್ರೆಡ್, ಬಾಳೆ ಹಣ್ಣು ಇದೆ. ತಿನ್ನು...", ಎನ್ನುತ್ತಾ  ರೂಮಿನೊಳಗೆ ನಡೆದ. ಯಾಮಿನಿಗೆ ಅಳುವೇ ಬಂದಂತಾಯ್ತು. "ಈಗ ತಾನೇ ಬಂದಿದ್ದೇನೆ. ಇಲ್ಲಿಯದೇನೂ ಗೊತ್ತಿಲ್ಲ...ಹೀಗಾ ಹೇಳೋದು...", ಎಂದು ಕೊಂಡಳು. ಹಸಿವೆಯಂತೂ ಆಗುತ್ತಿದ್ದಿತು. ಒಂದು ಬಾಳೆಹಣ್ಣು ತಿಂದು ರೂಮಿಗೆ ಬಂದಳು. ಆಗಲೇ ದಿಲೀಪ್ ಮಲಗಲು ಅಣಿಯಾಗುತ್ತಿದ್ದ. ಅದನ್ನು ನೋಡಿ ಯಾಮಿನಿ ಮತ್ತೇ ನಾಚಿಕೊಂಡಳು. ಅವಳು ತಲೆತಗ್ಗಿಸಿ ನಿಂತಿರುವುದನ್ನು ನೋಡಿ, "ಯಾಮಿನಿ, ಇವತ್ತು ನನಗೆ ಆಫೀಸಿನಲ್ಲಿ ತುಂಬಾ ಕೆಲಸ ಇತ್ತು....ಸುಸ್ತಾಗಿಬಿಟ್ಟಿದ್ದೇನೆ...ಏನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದೇನೆ....ನಾಳೆ ಎಲ್ಲಾ ಹೇಳ್ತೇನೆ....ನಮ್ಮ ಹೊಸ ಜೀವನ ನಾಳೆಯಿಂದ...ಗುಡ್ ನೈಟ್", ಎಂದು ಹೇಳಿ ಬ್ಲ್ಯಾಂಕೆಟ್ ಹೊದ್ದುಕೊಂಡು ಮಲಗಿಬಿಟ್ಟ. ಯಾಮಿನಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ಹಾಸಿಗೆಯ ಇನ್ನೊಂದು ತುದಿಯಲ್ಲಿ ಮಲಗಿದಳು. ದಿಲೀಪ್ ನ ನಡುವಳಿಕೆ  ಅಚ್ಚರಿ ಮೂಡಿಸಿತ್ತು. "ಯಾಕೆ?...ನಾನು ಅವನಿಗೆ ಇಷ್ಟವಿಲ್ಲವಾ?...ಅವನು ಒಪ್ಪಿದ್ದಾನೆಂದ ಮೇಲೇ ತಾನೂ ಒಪ್ಪಿದ್ದು...ಅಷ್ಟಕ್ಕೂ ನನ್ನ  ಒಪ್ಪಿಗೆ, ನಿರಾಕಾರ ಯಾರಿಗೆ ಬೇಕಿತ್ತು....ಸ್ವತಃ ನನಗೂ ನನ್ನನ್ನು ಕೇಳಬೇಕೆಂದು ಅನ್ನಿಸಿರಲಿಲ್ಲ. ಹುಡುಗ ಒಪ್ಪಿದ ಮೇಲೆ ಅಂತಿಮ...ಛೆ...ನಾನು ಚೆನ್ನಾಗಿ ಓದಬೇಕಿತ್ತು. ಓದಿ ಏನಾದರೂ ಕೆಲಸ ಮಾಡ್ತಿರಬೇಕಿತ್ತು...ಆಗ ನನ್ನ ಮಾತಿಗೂ ಒಂದು ಬೆಲೆ ಇರುತ್ತಿತ್ತು....ಯಾಕೋ ಗೊತ್ತಿಲ್ಲ....ನಾನು ಎಂದೂ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. ಪುಕ್ಕಲು ಸ್ವಭಾವದವಳಾಗಿಯೇ ಬೆಳೆದೆ....ತಂಗಿಯರು, ತಮ್ಮಂದಿರು ಬೆಳ್ಳಗೆ ಇದ್ದುದೇ ಇದಕ್ಕೆ ಕಾರಣ. ನಮ್ಮ ಮನೆಯಲ್ಲಿ ನಾನೊಬ್ಬಳೇ ಕಡುಗಪ್ಪು. ಮನೆಗೆ ದೃಷ್ಟಿಬೊಟ್ಟು ಇದ್ದಹಾಗೆ ಇದ್ದೀನಿ ಅಂತ ಎಲ್ಲರೂ ಛೇಡಿಸುತ್ತಿದ್ದರು. ನೀನೊಬ್ಬಳೇ ಯಾಕಿಷ್ಟು ಕಪ್ಪಗೆ ಹುಟ್ಟಿದ್ದೀಯ? ಎಂದು ನನ್ನನ್ನೇ ಕೇಳುತ್ತಿದ್ದರು. ಬಣ್ಣ, ರೂಪು ಆಯ್ಕೆ ಮಾಡಿಕೊಳ್ಳುವ ಶಕ್ತಿ ಯಾರಿಗಾದರೂ ಇರುತ್ತಾ?...ಅವರ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ಗೊತ್ತಾಗುತ್ತಿರಲಿಲ್ಲ. ಸುಮ್ಮನೇ ಪೆಚ್ಚು ನಗೆ ಬೀರಿ ಅಲ್ಲಿಂದ ಮರೆಯಾಗಿಬಿಡುತ್ತಿದ್ದೆ. ಎಲ್ಲರೂ ನಾನೊಂದು ವಿಚಿತ್ರ ಪ್ರಾಣಿಯಂತೆ ನೋಡುತ್ತಿದ್ದುದರಿಂದ ಕೀಳರಿಮೆ ನನ್ನ ನರನಾಡಿಗಳಲ್ಲೂ ವ್ಯಾಪಿಸಿ, ಸ್ವಂತಿಕೆ ಎಂಬುದನ್ನೇ ಮರೆತಿದ್ದೆ. ನಾನು ಕಪ್ಪಗಿದ್ದೇನೆ ನಿಜ...ಆದರೆ ಲಕ್ಷಣವಾಗಿಯೂ ಇದ್ದೇನೆ. ಹಾಗೆಂದು ಕನ್ನಡಿ ಅನೇಕ ಬಾರಿ ಹೇಳಿದೆ. ಹೆತ್ತಮ್ಮ ಬದುಕಿದ್ದಾಗಲೂ ಆಗಾಗ ಹೇಳುತ್ತಿದ್ದಳು. ಅದೇ ಒಂದು ಭರವಸೆಯಿಂದ ಜೀವಿಸಿದ್ದವಳು ನಾನು. ಇನ್ನು ಮುಂದೆ ಹೇಗೋ ಏನೋ...ಹೋಗಿ ಹೋಗಿ ಈ ಬಿಳಿಯರ ನಾಡಿಗೆ ಬಂದಿದ್ದೇನೆ. ಅವರ ಮುಂದೆ ಇನ್ನೂ ಕಪ್ಪಗೆ ಕಾಣುತ್ತೇನೆ...ದಿಲೀಪ್ ನನ್ನನ್ನು ಹೇಗೆ ಟ್ರೀಟ್ ಮಾಡ್ತಾರೋ ಏನೋ....", ಯೋಚಿಸುತ್ತಲೇ ನಿದ್ದೆಗೆ ಶರಣಾದಳು. 

       ಬೆಳಿಗ್ಗೆ ಎದ್ದಾಗ ದಿಲೀಪ್ ಆಗಲೇ ರೆಡಿಯಾಗಿ ಸ್ಯಾಂಡ್ ವಿಚ್ ತಿನ್ನುತ್ತಾ ಟಿ.ವಿಯಲ್ಲಿ ಹವಾಮಾನದ ವಿವರಣೆ ಕೇಳುತ್ತಿದ್ದ. ಅವನಾಗಲೇ ಎದ್ದಿರುವುದನ್ನು ನೋಡಿ, ಯಾಮಿನಿ ಸಂಕೋಚಪಟ್ಟುಕೊಂಡಳು. "ಸಾರಿ, ನಾನು ಲೇಟಾಗಿ ಎದ್ದೆ....ಯಾಕೋ ಎಚ್ಚರ ಆಗಲೇ ಇಲ್ಲ...ರಾತ್ರಿ ನಿದ್ದೇನೂ ತಡವಾಗಿ ಬಂತು...ನೀವಾದರೂ  ಎಚ್ಚರಗೊಳಿಸಬೇಕಿತ್ತು...", ಎಂದಳು. "ಪರವಾಗಿಲ್ಲ...ಒಂದೆರಡು ದಿನ ಜೆಟ್ ಲ್ಯಾಗ್ ಇರುತ್ತೆ...ಆಮೇಲೆ ಸರಿ ಹೋಗುತ್ತೆ...ನಾನು ಆಫೀಸಿಗೆ ಹೋಗ್ಬೇಕು. ಅದಕ್ಕೆ ಎದ್ದೇ...",  ಟಿವಿ.ಯನ್ನು ವೀಕ್ಷಿಸುತ್ತಲೇ ನುಡಿದ ದಿಲೀಪ್. ಅವನು ಸ್ಯಾಂಡ ವಿಚ್ ತಿನ್ನುತ್ತಿರುವುದನ್ನು ನೋಡಿ ," ಅಮ್ಮ,  ಮಾವಿನ ಕಾಯಿ ತೊಕ್ಕು, ಚಟ್ನಿಪುಡಿಗಳನ್ನು ಕೊಟ್ಟಿದ್ದಾಳೆ...ಕೊಡಲಾ?...ಸ್ಯಾಂಡ್ ವಿಚ್ ಜೊತೆ ಚೆನ್ನಾಗಿರುತ್ತೆ...ನೀವು ಪಾಪ, ಒಬ್ಬರೇ ಇದ್ದಿರಿ...ಏನು ಅಡಿಗೆ ಮಾಡಿಕೊಳ್ತಿದ್ರೋ ಏನೋ...ಇನ್ಮೇಲೆ ನಾನೇ ಎಲ್ಲ ಅಡಿಗೆ ಮಾಡ್ತೇನೆ...ನಿಮಗೇನೇನು ಇಷ್ಟ ಹೇಳಿ...ಇವತ್ತು ಅಡಿಗೆ ಏನು ಮಾಡಲಿ...?", ಯಾಮಿನಿ ಉತ್ಸಾಹದಿಂದ ಕೇಳಿದಳು. ತನ್ನ  ಉತ್ಸಾಹಕ್ಕೆ ತಾನೇ ಅಚ್ಚರಿಗೊಂಡಳು. "ಅರೆ, ನಾನು ಇಷ್ಟು ಆಕ್ಟೀವ್ ಇದ್ದೀನಾ...? ಪರವಾಗಿಲ್ವೇ...", ಎಂದು ತನಗೆ ತಾನೇ ಶಹಭಾಶ್ ಗಿರಿ ಕೊಟ್ಟುಕೊಂಡಳು. ಆದರೆ ದಿಲೀಪ್ ನಿರ್ಭಾವುಕನಾಗಿ, "ಏನೂ ಬೇಡ...ನನಗೆ ಅದೆಲ್ಲಾ ಇಷ್ಟ ಇಲ್ಲ...ನನಗೆ ಆ ಚಟ್ನಿಪುಡಿ, ಉಪ್ಪಿನ ಕಾಯಿಯ ಸ್ಮೆಲ್ ಇಷ್ಟ ಆಗೋಲ್ಲ.... ಅಡಿಗೆ ನಿನಗೆ ಮಾತ್ರ ಮಾಡ್ಕೊ...ನನ್ನ ಬಗ್ಗೆ ಯೋಚಿಸಬೇಡ ", ಎಂದ. "ಹಾಗೆಂದರೆ ಹೇಗೆ?... ನೀವು ನಾನು ಮಾಡಿದ ಅಡಿಗೆ ತಿಂದು ನೋಡಿ...ನಾನು ತುಂಬಾ ಚೆನ್ನಾಗಿ ಅಡಿಗೆ ಮಾಡ್ತೇನೆ", ಯಾಮಿನಿ ತನಗೇ ಅರಿವಿಲ್ಲದಂತೆ ಒತ್ತಾಯದಿಂದ ನುಡಿದಳು. "ನೋಡೋಣ...ಈಗ ನಾನು ಆಫೀಸಿಗೆ ಹೋಗ್ಬೇಕು", ಎಂದು ಎದ್ದ. ಯಾಮಿನಿ ಚಡಪಡಿಸಿದಳು, "ಅದನ್ನು ದಿಲೀಪ್ ಗೆ    ಹೇಳ್ಬೇಕಲ್ಲಾ...ಹೇಗೆ ಹೇಳೋದು?...ಹೋದ ಕೂಡಲೇ ಹೇಳು ಅಂತ ಅತ್ತೆ ಹೇಳಿದ್ದರು...ಶ್ರೀಧರ ಸ್ವಾಮಿಗಳೂ ಹೇಳಿದ್ದರು...ಹೇಗೆ ಹೇಳಲಿ?...ದಿಲೀಪ್ ನೋಡಿದ್ರೆ ಆಗಲೇ ಹೊರಟು ನಿಂತಿದ್ದಾರೆ. ಅವರು ಕೇಳೇ ಕೇಳ್ತಾರೆ , ಆಗ ಹೇಳಬಹುದು ಅಂದುಕೊಂಡಿದ್ದೆ. ಆದರೆ ಅವರು ಕೇಳುವ ಲಕ್ಷಣವೇ ಇಲ್ಲ...ರಾತ್ರಿ ತಡವಾಗಿ ಬಂದರೆ...ಏನು ಮಾಡೋದು...ಹೇಳಲೇ ಬೇಕು...ಹೇಗೆ...ಹೇಗೆ ", ಯಾಮಿನಿ ಅಸಹಾಯಕತೆಯಿಂದ ತಪಿಸಿದಳು. ದಿಲೀಪ್ ಹೊಸ್ತಿಲು ದಾಟುತ್ತಿದ್ದ. ಇನ್ನು ಸುಮ್ಮನಿದ್ದರಾಗದು ಎಂದುಕೊಂಡು , ತನ್ನೊಳಗಿದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು, "ನಿಮಗೊಂದು ಮುಖ್ಯವಾದ ಮಾತು ಹೇಳಬೇಕಿದೆ...ಪುರೋಹಿತರು ಮತ್ತು ಅತ್ತೆ ಇಬ್ಬರೂ ಹೇಳಿ ಕಳಿಸಿದ್ದಾರೆ...", ಎಂದಳು ಮೆಲು ದನಿಯಲ್ಲಿ. "ಏನು...ಬೇಗ ಹೇಳು", ದಿಲೀಪ್ ಒಂದು ಹೆಜ್ಜೆ ಬಾಗಿಲಿನಿಂದ ಹೊರಗಿಟ್ಟೇ ಕೇಳಿದ. "ಅದೂ...ಅದೂ...", ತಡವರಿಸಿದಳು ಯಾಮಿನಿ. "ಬೇಗ ಹೇಳ್ತೀಯ...ಇದು ಇಂಡಿಯಾ ಅಲ್ಲ. ಅಮೆರಿಕಾ ಇದು...ಒಂದೊಂದು ಸೆಕೆಂಡಿಗೂ ಬೆಲೆ ಇದೆ", ದಿಲೀಪ್ ಅವಸರಪಡಿಸಿದ. "ಏನಿಲ್ಲ...ನಮ್ಮಿಬ್ಬರ ಪ್ರಸ್ತಕ್ಕೆ ಇವತ್ತು ರಾತ್ರಿ ಒಂಬತ್ತು ಕಾಲಿಗೆ ಮುಹೂರ್ತ ಕೊಟ್ಟಿದ್ದಾರೆ. ಅದು ತಪ್ಪಿದರೆ ಮತ್ತೇ ಮುಂದಿನ ವಾರವೇ ಸುಮುಹೂರ್ತವಂತೆ...", ಮೈಯೆಲ್ಲಾ ನಾಚಿಕೆಯಾಗಿ ನುಡಿದಳು. ಅವಳ ಕಪ್ಪು ಕೆನ್ನೆಗಳೂ ತುಸು ಕೆಂಪಾಗಿದ್ದವು. "ವಾಟ್ ನಾನ್ಸೆನ್ಸ್...ಈ ಇಂಡಿಯಾ ಮೆಂಟಾಲಿಟಿನೇ ಅರ್ಥ ಆಗೋಲ್ಲ...ಅದಕ್ಕೂ ಒಂದು ಮುಹೂರ್ತಾನಾ?!...ನೋಡು, ನನಗೆ ಅದರಲ್ಲೆಲ್ಲಾ ನಂಬಿಕೆಯಿಲ್ಲ. ಅದಕ್ಕೂ ಮೊದಲು ನಾನು ನಿನಗೊಂದು ವಿಷಯ ಹೇಳಬೇಕು...ಸಾಯಂಕಾಲ ಬೇಗ ಬರುತ್ತೇನೆ. ರೆಡಿಯಾಗಿರು...ಹೊರಗೆ ಹೋಗೋಣ", ದಿಲೀಪ್ ಬಾಗಿಲನ್ನು ಜೊರಾಗಿ ಎಳೆದುಕೊಂಡು ದಡದಡನೆ ಹೋದ. ಯಾಮಿನಿ ಎಷ್ಟೋ ಹೊತ್ತು ಶಿಲೆಯಂತೆ ನಿಂತೇ ಇದ್ದಳು. 

          ಸಂಜೆ ಅಲಂಕರಿಸಿಕೊಂಡು ತನ್ನನ್ನು ತಾನು ಲೆಕ್ಕವಿಲ್ಲದಷ್ಟು ಸಾರಿ ಕನ್ನಡಿಯಲ್ಲಿ ನೋಡಿಕೊಂಡಳು ಯಾಮಿನಿ. "ಅಗ್ನಿಪರೀಕ್ಷೆಯಾದರೂ ಇಷ್ಟು ತಲ್ಲಣ ಕೊಡೋಲ್ವೇನೋ...ಬೆಂಕಿಗೆ ಸುಲಭವಾಗಿ ಹಾರಿಬಿಡಬಹುದು. ಆದರೆ ಈ ಅರ್ಥವಾಗದ ಹೊಸ ಗಂಡನಿಗಾಗಿ ಅಲಂಕರಿಸಿಕೊಳ್ಳುವುದು ತುಂಬ ಕಷ್ಟ ಕಷ್ಟ. ದಿಲೀಪ್ ಗೆ ಯಾವ ಬಣ್ಣ ಇಷ್ಟ, ಯಾವ ರೀತಿಯ ಉಡುಗೆ  ಇಷ್ಟ...ಒಂದೂ ಗೊತ್ತಿಲ್ಲ....ದೇವರೇ, ನನ್ನೀ ಅಲಂಕಾರ ಅವನಿಗೆ ಇಷ್ಟ ಆದರೆ ಸಾಕು...", ಎಂದು ಹಪಹಪಿಸಿದಳು.  ಹೇಳಿದ ಸಮಯಕ್ಕೆ ಸರಿಯಾಗಿ ದಿಲೀಪ್ ಬಂದ. ಅವನು ಏನು ಹೇಳುತ್ತಾನೋ ಎಂದು ಯಾಮಿನಿ ಕೌತುಕದಿಂದ ನಿರೀಕ್ಷಿಸತೊಡಗಿದಳು. ಆದರೆ ದಿಲೀಪ್ ಅವಳ ಕಡೆ ತಿರುಗಿಯೂ ನೋಡದೆ, "ಬಾ...ಹೋಗೋಣ", ಎಂದು ಹೊರನೆಡೆದ. ಯಾಮಿನಿ ಮೌನವಾಗಿ ಅವನ ಜೊತೆ ಹೆಜ್ಜೆ ಹಾಕಿದಳು. ಅದೇ ಸಮಯಕ್ಕೆ ಪಕ್ಕದ ಅಪಾರ್ಟ್ ಮೆಂಟ್ ನಿಂದ ನೀಗ್ರೋ ಯುವಕನೊಬ್ಬ ಹೊರಗೆ ಬಂದ. ಯಾಮಿನಿಯನ್ನು ನೋಡಿದವನೇ ಸ್ತಬ್ಧನಾಗಿ ನಿಂತ. ಅವನು ಯಾಕೆ ಹಾಗೆ ನಿಂತನೆಂದು ಇಬ್ಬರೂ ಅಚ್ಚರಿಯಿಂದ ನೋಡತೊಡಗಿದರು. ಕೆಲಕ್ಷಣಗಳ ನಂತರ ಆ ನೀಗ್ರೊ ಯುವಕ ಸಾವರಿಸಿಕೊಂಡು ,"ಓ ಮೈ ಗಾಡ್, ಯೂ ಆರ್ ವೆರಿ ವೆರಿ ಬ್ಯೂಟಿಫುಲ್...", ಎಂದು ಉದ್ಗರಿಸಿದ. ಯಾಮಿನಿಯ ಕಣ್ಣುಗಳು ಅರಳಿದವು. ಏನು ಹೇಳಬೇಕೆಂದು ತೋಚದೆ ದಿಲೀಪ್ ನನ್ನು ನೋಡಿದಳು. ದಿಲೀಪ್ ಕೋಪದಿಂದ,"ಬರ್ತೀಯಾ ಬೇಗ...", ಎಂದು ಗದರಿಸಿ ಮುನ್ನೆಡೆದ. 

         ಕಾರು ವೇಗವಾಗಿ ಚಲಿಸತೊಡಗಿತು. ಯಾಮಿನಿ ಇನ್ನೂ ಶಾಕ್ ನಲ್ಲಿಯೇ ಇದ್ದಳು. "ಏನೆಂದ ಅವನು?!! ನನಗೆ ಬ್ಯೂಟಿಫುಲ್ ಅಂದನಲ್ಲಾ!!! ಆ ಪದವನ್ನು ನಾನು ಹುಟ್ಟಿದಾಗಿನಿಂದಲೂ ಕೇಳಿರಲಿಲ್ಲ....ನನಗೆ...ನನಗೆ ಬ್ಯೂಟಿಫುಲ್ ಅಂದ ಅವನು! ಓಹ್, ಮೊದಲ ಬಾರಿಗೆ ಇಂಥ ಮಾತು ಕೇಳಿದೆ...ನಾನು ಅಮೆರಿಕಾಗೆ ಬಂದದ್ದಕ್ಕಿಂತಲೂ ಇದು ಹೆಚ್ಚು ಥ್ರಿಲ್ ಕೊಟ್ಟಿತು...", ಯಾಮಿನಿ ಅದನ್ನೇ ಯೋಚಿಸುತ್ತಾ ಕುಳಿತಿದ್ದಳು. ಅವಳ ತುಟಿಗಳ ಮೇಲೆ ಕಿರುನಗೆ. ದಿಲೀಪ್ ಅವಳನ್ನು ನೋಡಿ , "ನೋಡು, ಇಲ್ಲಿ ಹುಷಾರಾಗಿರಬೇಕು...ಅದರಲ್ಲೂ ಈ ನೀಗ್ರೋಗಳ ಬಗ್ಗೆ ಬಹಳ ಎಚ್ಚರದಿಂದಿರಬೇಕು....ಗುರುತು, ಪರಿಚಯ ಇಲ್ಲದವರ ಜೊತೆ ಮಾತನಾಡಬೇಡ...ನನಗೆ ಇಷ್ಟವಾಗೋಲ್ಲ... ಅಲ್ಲದೆ ಅವನು ನೀಗ್ರೋ ತಾನೇ...ಅದಕ್ಕೇ ನೀನು ಇಷ್ಟವಾಗಿರ್ತೀಯ ಅಷ್ಟೇ", ಒಂದು ಸಣ್ಣ ವ್ಯಂಗ್ಯ ತುಂಬಿದ ಗಂಭೀರ ದನಿಯಲ್ಲಿ ಹೇಳಿದ. "ಓ...ಹಾಗಿದ್ದರೆ ಅವನು ಸುಮ್ಮನೇ ನನಗೆ ಹೊಗಳಿದ. ನಾನು ಅದನ್ನು ನಿಜ ಅಂದುಕೊಂಡೆನಲ್ಲಾ..., ಚಿತ್ರದುರ್ಗದಲ್ಲೇ ಯಾರೂ ನನ್ನನ್ನು ಹೊಗಳಲಿಲ್ಲ. ಇನ್ನು ಇಂಥ ದಂತದ ಗೊಂಬೆಗಳ ನಾಡಿನಲ್ಲಿ ಹೊಗಳೋಕೆ ಸಾಧ್ಯಾನಾ...ದಿಲೀಪ್ ಹೇಳೋದು ನಿಜ...ನಾನು ಹುಷಾರಾಗಿ ಇರ್ಬೇಕು...", ಯಾಮಿನಿ ಮನಸ್ಸಿನಲ್ಲಿಯೇ ನಿರ್ಧರಿಸಿದಳು. 

         ಸಿನೆಮಾ ಥೇಟರ್ ಮುಂದೆ ದಿಲೀಪ್ ಕಾರು ನಿಲ್ಲಿಸಿದ. ಯಾಮಿನಿಗೆ ಏನೂ ಗೊತ್ತಾಗಲಿಲ್ಲ. ಆದರೂ ಸುಮ್ಮನೇ ಹಿಂಬಾಲಿಸಿದಳು. ಥೇಟರ್ ಒಳಗೆ ಕುಳಿತುಕೊಂಡು ಬೆರಗಿನಿಂದ ಸುತ್ತಲೂ ನೋಡತೊಡಗಿದಳು. "ಅಬ್ಬಾ, ಹೇಗಿದೆಯಲ್ಲಾ ಇದು!!...ನಮ್ಮೂರಲ್ಲಿ ಯಾವಾಗಲೋ ಒಮ್ಮೆ ಬಸವೇಶ್ವರ ಟಾಕಿಸ್ ನಲ್ಲಿ ಸಿನಿಮಾ ನೋಡುತ್ತಿದ್ದೆ. ಎಲ್ಲರೂ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದರೆ ತಾನು ಮಾತ್ರ ಮನೆಯೊಳಗೇ ಇರಲು ಬಯಸುತ್ತಿದ್ದೆ. ಒಬ್ಬೇ ಒಬ್ಬ ಫ್ರೆಂಡ್ ಇರಲಿಲ್ಲ. ತಂಗಿ, ತಮ್ಮಂದಿರೂ ಅಷ್ಟಾಗಿ ಸೇರುತ್ತಿರಲಿಲ್ಲ. ಯಾವಾಗಲೂ ಮನೆಯೊಳಗೆ ಕೆಲಸ ಮಾಡುತ್ತಾ ದಿನ ಕಳೆಯುತ್ತಿದ್ದೆ...ಈಗ ನೋಡು, ಎಂಥ ಸುಯೋಗ ಬಂದಿದೆ. ನಾನಿಲ್ಲಿ ಕುಳಿತಿರುವುದನ್ನು ನನ್ನ ತಂಗಿಯರು ನೋಡಬೇಕಿತ್ತು...ಈ ಸೀಟುಗಳು ಎಷ್ಟು ಚೆನ್ನಾಗಿವೆ...ವಾವ್", ಯಾಮಿನಿ ಸಂಭ್ರಮದಿಂದ ಕುಳಿತಳು. ಸಿನಿಮಾ ಪ್ರಾರಂಭವಾಯ್ತು. ಯಾವುದೋ ಇಂಗ್ಲೀಷ್ ಚಿತ್ರ. ಅರ್ಥವೇ ಆಗುತ್ತಿರಲಿಲ್ಲ. ಆದರೆ ಗಂಡನ ಪಕ್ಕ ಕುಳಿತ ಹೆಮ್ಮೆಯ ಭಾವ ಸಂತಸವನ್ನು ಮೂಡಿಸಿತ್ತು. ಸಿನಿಮಾದಲ್ಲಿ ಇಬ್ಬರು ಹುಡುಗರು ಪರಸ್ಪರ ಪ್ರೀತಿ ಮಾಡುವ ದೃಷ್ಯ ಬಂದಿತು. ಅದನ್ನು ನೋಡಲಾಗದೆ ಯಾಮಿನಿ ಮುಖ ಮುಚ್ಚಿಕೊಂಡಳು. "ನೋ, ಹಾಗೆಲ್ಲಾ ಮಾಡಬಾರದು...ಮ್ಯಾನರ್ಸ್ ಇಲ್ವಾ ನಿನಗೆ?...", ದಿಲೀಪ್ ಗದರಿದ. ಯಾಮಿನಿ ಪೆಚ್ಚಾಗಿ ಸುಮ್ಮನೆ ಕುಳಿತಳು. ಇಂಟರ್ ವೆಲ್ ನಲ್ಲಿ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಆರ್ಡರ್ ಮಾಡಿದ. ಯಾಮಿನಿಗೆ ಸಂತೋಷವಾಯ್ತು. ಪಾಪ್ ಕಾರ್ನ್ ತುಂಬಾ ಚೆನ್ನಾಗಿತ್ತು. ಇಷ್ಟಪಟ್ಟು ತಿನ್ನತೊಗಿದಳು. ದಿಲೀಪ್ ಅವಳ ಬಳಿಗೆ ಬಾಗಿ, "ಯಾಮಿನಿ, ನಿನಗೊಂದು ಸತ್ಯ ಹೇಳಬೇಕು...", ಮೆಲ್ಲಗೆ ಹೇಳಿದ. ಮೊಟ್ಟಮೊದಲಬಾರಿಗೆ ಅವನ ದನಿ ನಯವಾಗಿತ್ತು. ಯಾಮಿನಿಗೆ ರೋಮಾಂಚನವಾಯ್ತು. "ಏನು ಹೇಳಿ...ನನ್ನ ಬಳಿ ಏಕೆ ಸಂಕೋಚ?", ಎಂದು ಪ್ರೀತಿಯಿಂದ ನುಡಿದಳು. "ಏನಿಲ್ಲ...., ನನ್ನ ಅಪ್ಪ-ಅಮ್ಮನ ಒತ್ತಾಯಕ್ಕೆ  ನಿನ್ನನ್ನು  ಮದುವೆಯಾದೆ. ನಾನು ಅಮೆರಿಕನ್ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳ ಹೆಸರು ಹೆಲ್ಗಾ... ನಾವಿಬ್ಬರು ಮದುವೆಯನ್ನೂ ಆಗಿದ್ದೇವೆ...ನೀನು ಇಲ್ಲಿ ಎಷ್ಟು ದಿನ ಬೇಕಾದರೂ ಇರು...ಜೀವನ ಪೂರ್ತಿ ಇರು...ಆದರೆ ನಾವಿಬ್ಬರು ಗಂಡ-ಹೆಂಡತಿಯ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ...",ಎಂದು ಹೇಳಿ, ಮತ್ತೇ ಚಿತ್ರವನ್ನು ನೋಡುವುದರಲ್ಲಿ ಮಗ್ನನಾದ. "ಏನಿವನು....ಎಷ್ಟು ಸಲೀಸಾಗಿ ಹೇಳಿದನಲ್ಲಾ....ಮದುವೆ ಅರ್ಥ ಗೊತ್ತಾ ಇವನಿಗೆ...ಹಾ...ಗಾ...ದ...ರೆ...ನನ್ನ ಮುಂದಿನ ಗತಿ ಏನು....", ಯಾಮಿನಿ ಕಂಗಾಲಾದಳು. "ವಿದೇಶದಲ್ಲಿರುವ ಹುಡುಗರನ್ನು ಮದುವೆಯಾಗಿ ಈ ರೀತಿ ಮೋಸ ಹೋದವರ ಕತೆಗಳನ್ನು ನಾನೂ ಸಾಕಷ್ಟು ಕೇಳಿದ್ದೇನೆ...ಹಾಗೇ ನನಗೂ ಆಗಿಬಿಟ್ಟಿತಲ್ಲಾ...ನಾನು ಹೆಚ್ಚಿಗೆ ಓದಿಲ್ಲ, ಧೈರ್ಯವಿಲ್ಲ....ಹೇಗೆ ಎದುರಿಸಲಿ...", ಅವಳಿಗೆ ಸಿನಿಮಾ ನೋಡಲಿಕ್ಕೇ ಆಗಲಿಲ್ಲ. ಕೈಯಲ್ಲಿದ್ದ ಪಾಪ್ ಕಾರ್ನ್ ಹಾಗೇ ಇಟ್ಟುಬಿಟ್ಟಳು. 
          ಯಾಮಿನಿ ತೀರಾ ದುಃಖಿತಳಾಗಿದ್ದಳು. ದಿಲೀಪ್ ನ ಮಾತುಗಳನ್ನು ಅರಗಿಸಿಕೊಳ್ಳುವುದಕ್ಕೇ ಆಗಲಿಲ್ಲ. ಥೇಟರ್ ನಿಂದ ಹೊರಬರುವಾಗ ಅವಳ  ಎಲ್ಲಾ ಭಾವನೆಗಳು ನುಚ್ಚುನೂರಾಗಿದ್ದವು. ತಾನೊಂದು ಅಸ್ತಿತ್ಬವೇ ಇಲ್ಲದವಳೆಂದು ಅನ್ನಿಸತೊಡಗಿತು....,ಅಮ್ಮ ಹೋದಮೇಲೆ ಅಪ್ಪ ಇನ್ನೊಂದು ಮದುವೆಯಾದರು. ಚಿಕ್ಕಮ್ಮ ತೀರಾ ಮಲತಾಯಿ ಆಗದಿದ್ದರೂ, ತಾಯಿಯೂ ಆಗಿರಲಿಲ್ಲ. ಆಮೇಲೆ ಹುಟ್ಟಿದ ತಮ್ಮ-ತಂಗಿಯರಿಗೆ ಎಲ್ಲಾ ಆದ್ಯತೆ. ಒಳಗೇ ಕೀಳರಿಮೆ, ಭಯ ತುಂಬಿಕೋಡು ಬೆಳೆದ ತನಗೆ ಮದುವೆ ವಿಷಯದಲ್ಲೂ ಅನ್ಯಾಯವಾಯಿತಲ್ಲ...ನಾನು ಹುಟ್ಟಿದ್ದಾದರೂ ಏಕೆ?!", ಯಾಮಿನಿಯ ಮನಸ್ಸು ವಿಲವಿಲನೆ ಒದ್ದಾಡಿತು. ಸುಮ್ಮನೇ ಭಾರವಾದ ಹೆಜ್ಜೆಗಳನ್ನು ಊರುತ್ತಾ ನಡೆಯತೊಡಗಿದಳು.
ದಿಲೀಪ್ ಅವಳೆಡೆಗೆ ತಿರುಗಿ ನೋಡಿ ಹೆಜ್ಜೆಯಿಡತೊಡಗಿದ. ಆಗ ಅಮೆರಿಕನ್  ಮಹಿಳೆಯೊಬ್ಬಳಿಗೆ ಡಿಕ್ಕಿ ಹೊಡೆಯುವಂತಾಯ್ತು. ಆಕೆಯ ಕೈಯಲ್ಲಿದ್ದ ಕೀ ಕೆಳಗೆ ಬಿದ್ತು. "ಓಹ್, ಸಾರಿ", ಎಂದ ದಿಲೀಪ್. "ಇಟ್ಸ್ ಒಕೆ", ಎಂದು ಆಕೆ ತನ್ನ ಕೀ ತೆಗೆದುಕೊಳ್ಳುತ್ತಾ ಯಾಮಿನಿಯನ್ನು ನೋಡಿದಳು. ಒಂದೆರಡು ಕ್ಷಣ ಹಾಗೇ ದಿಟ್ಟಿಸಿ, ದಿಲೀಪ್ ನೆಡೆಗೆ ನೋಡಿ, "ಯೂ ಆರ್ ವೆರಿ ಲಕ್ಕಿ...ಯು ಹ್ಯಾವ್ ಗಾಟ್ ಎ ಬ್ಯೂಟಿಫುಲ್ ವೈಫ್", ಎಂದು ಅಭಿನಂದಿಸಿದಳು. ಈ ಬಾರಿ ಯಾಮಿನಿ ವಿಷಾದದ ನಗೆ ನಕ್ಕಳು.

          ಆ ರಾತ್ರಿ ಮೌನದಲ್ಲೇ ಕಳೆಯಿತು. ಮಾರನೇ ದಿನ ದಿಲೀಪ್ ಆಫೀಸಿಗೆ ಹೋಗುವವರೆಗೂ ಯಾಮಿನಿ ಹೇಗೋ ಕಷ್ಟಪಟ್ಟು ತನ್ನ ದುಃಖವನ್ನು ನಿಯಂತ್ರಿಸಿಕೊಂಡಿದ್ದಳು. ಅವನು  ಹೋದಕೂಡಲೇ  ಅವಳ ದುಃಖದ ಕಟ್ಟೆ ಒಡೆಯಿತು. ಜೋರಾಗಿ ಬಿಕ್ಕಿ ಬಿಕ್ಕಿ ರೋಧಿಸತೊಡಗಿದಳು. ಅದೆಷ್ಟೋ ಹೊತ್ತು ಹಾಗೆ ಒಂದೇ ಸಮನೆ ಅಳುತ್ತಿದ್ದವಳಿಗೆ ಬಾಗಿಲನ್ನು ಮೆಲ್ಲಗೆ ಬಡಿದ ಶಬ್ಧ ಕೇಳಿಸಿತು. ಕಣ್ಣು ಒರೆಸಿಕೊಂಡು, ಮುಂದೆ ಮಾಡಿದ್ದ ಬಾಗಿಲನ್ನು ಪೂರ್ತಿ ತೆರೆದು ನೋಡಿದಳು. ಪಕ್ಕದ ಮನೆಯ ನೀಗ್ರೋ ಯುವಕ ನಿಂತಿದ್ದ. "ಸಾರಿ...., ಎನಿ ಪ್ರಾಬ್ಲಮ್...ಮೇ ಐ ಹೆಲ್ಪ್ ಯು", ಎಂದು ಕೇಳಿದ. "ಇಲ್ಲ...ಇಲ್ಲ...ಥ್ಯಾಂಕ್ಸ್", ಎಂದು ಹೇಳಿ ಬಾಗಿಲು ಹಾಕಿಕೊಂಡಳು. ಅದೇ ಸಮಯಕ್ಕೆ ಊರಿಂದ ತಂದೆಯ ಫೋನ್ ಬಂದಿತು. ಉಮ್ಮಳಿಸುತ್ತಿದ್ದ ದುಃಖವನ್ನು ನಿಯಂತ್ರಿಸಿಕೊಂಡು, ಫೋನ್ ತೆಗೆದುಕೊಂಡಳು. ಅತ್ತಲಿಂದ ಅವಳ ತಂದೆ, "ಯೆಂಗಿದಿಯವ್ವಾ?....ಯಾಕೋ ಸಂಕ್ಟ ಆಯ್ತಾ ಇತ್ತು. ನಿದ್ದೆ ಬರ್ಲಿಲ್ಲ...ಅಲ್ಲಿ ಯೆಲ್ಲಾ ಚೆಂದಾಗೈತ ಅವ್ವಾ?!!", ವಾತ್ಸಲ್ಯದಿಂದ ಕೇಳಿದರು. "ಹೂನಪ್ಪಾ...ಎಲ್ಲಾ ಚೆನ್ನಾಗಿದೆ...ನೀವೆಲ್ಲಾ ಹೇಗಿದ್ದೀರಿ?", ಎಂದು ಸಾವರಿಸಿಕೊಂಡು ಕೇಳಿದಳು. ಮಗಳ ದನಿ ಕೇಳಿ ನೆಮ್ಮದಿಯ ಉಸಿರು ಬಿಟ್ಟ ತಂದೆ, ನೋವನ್ನು ಬಚ್ಚಿಟ್ಟುಕೊಂಡ ಮಗಳ  ನಡುವೆ ಸ್ವಲ್ಪಹೊತ್ತು ಅದೂಇದೂ ಮಾತುಕತೆ ನಡೆಯಿತು. ಕೊನೆಗೆ ತಂದೆ, "ಯೇನೋ ಕಣವ್ವ.., ನಿಂಗೆ ಕೊನೆಗಾರಾ ವಳ್ಳೇದಾಯ್ತಲ್ಲ...ಅಷ್ಟು ಸಾಕು ನನ್ನವ್ವಾ...ಯಿಲ್ಲಿ ಊರಾಗೆ ಎಲ್ರೂ ಹಂಗೇ ಯೇಳ್ತಾರೆ...ಏನ್  ರಾಮಪ್ಪ, ಯೆಂತಾ ನಸೀಬೋ ನಿಂದು...ಹಿರೇ ಮಗೀನ್ನ ವೊಳ್ಳೇ ತಾವ ಸೇರ್ಸಿದ್ಯಲ್ಲೋ...ಅಮೇರಿಕಾಗೆ ಓಗ್ಬಿಟ್ಲಲ್ಲೋ ನಿನ್ ಮಗ್ಳೂ....ಅಂತ ಅಂತಾರವ್ವಾ... ಆ ಮಾತ್ ಗಳ್ನ ಕೇಳ್ದಾಗ ಯೇಟು ಸಂತೋಸ ಆಯ್ತದೆ ಮಗ್ಳೇ...ಇಂಗೇ ಇರವ್ವಾ...ಚೆಂದಾಕಿರವ್ವಾ", ಎಂದು ಹೃದಯ ತುಂಬಿ ಹೇಳಿದಾಗ, ಯಾಮಿನಿಗೆ ದುಃಖ ತಡೆಯಲೇ ಆಗಲಿಲ್ಲ. "ಆಯ್ತಪ್ಪಾ..., ಇನ್ನು ಏನೂ ಕೆಲಸ ಆಗಿಲ್ಲ...ಆಮೇಲೆ ಫೋನ್ ಮಾಡ್ತೇನೆ...", ಎಂದು ಹೇಳಿ ಫೋನಿಟ್ಟುಬಿಟ್ಟಳು. 

               ಸಂಜೆಯ ಹೊತ್ತಿಗೆ ಮನಸ್ಸು ಒಂದು ಸ್ಥಿಮಿತಕ್ಕೆ ಬಂದಿತು. ಆಘಾತದ ಭಾವ ಹೋಗಿ, ಮುಂದೆ ಏನು ಮಾಡಬೇಕೆಂದು ಯೋಚಿಸತೊಡಗಿದಳು. ಬಾಲ್ಕನಿಯಲ್ಲಿ ನಿಂತು ಯೋಚಿಸತೊಡಗಿದಳು. ಸಮೀಪದಲ್ಲಿಯೇ ಇದ್ದ ಪ್ಲೇ ಗ್ರೌಂಡಿನಲ್ಲಿ ಕೆಲವು ಮಕ್ಕಳು ಆಟವಾಡುತ್ತಿದ್ದರು. ನೀಗ್ರೋ ಯುವಕ ಅಂಗಡಿಗೆ ಹೋಗಿದ್ದನೋ ಏನೋ, ಸಾಮಾನುಗಳಿದ್ದ ಕವರ್ ಗಳನ್ನು ಹಿಡಿದು ಮನೆಯ ಕಡೆ ಬರುತ್ತಿದ್ದ. ಆಗ ಒಂದು ಮಗು ಜೋರಾಗಿ ನೆಲದ ಮೇಲೆ ಬಿದ್ದುಬಿಟ್ಟಿತು. ನೀಗ್ರೋ ಯುವಕ ತನ್ನ ಕೈಯಲ್ಲಿದ್ದ ಕವರ್ ಗಳನ್ನು ಹಾಗೇ ಕೈಬಿಟ್ಟು ಬಿದ್ದ ಮಗುವಿನೆಡೆಗೆ ಧಾವಿಸಿದ. ಆ ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸಿದ. ನಂತರ ಆ ಮಗುವನ್ನು ಅದರ ಮನೆಯ ಮುಂದೆ ಇಳಿಸಿ, ತನ್ನ ಪಾಡಿಗೆ ಕವರ್ ಗಳನ್ನು ತೆಗೆದುಕೊಂಡು ತನ್ನ ಮನೆಗೆ ಹೋದ. ಮೇಲೆ ನಿಂತು ನೋಡುತ್ತಿದ್ದ ಯಾಮಿನಿ ಅವನಿಗೆ ಕಾಣಿಸುತ್ತಿರಲಿಲ್ಲ. ಯಾಮಿನಿಗೆ ಮಾತ್ರ ಅವನು ಮಾಡಿದ್ದೆಲ್ಲಾ ಚೆನ್ನಾಗಿ ಕಂಡಿತು. ಎಷ್ಟು ಒಳ್ಳೆಯ ಹುಡುಗ...ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬೇಕೆಂದರೆ ಯಾರೂ ನೋಡದಿರುವ ಸಂದರ್ಭದಲ್ಲಿ ಆ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಾನೆಂದು ನೋಡಬೇಕಂತೆ...ಒಂದು ಸಣ್ಣ ಕೆಲಸವಾದರೂ ಸರಿ, ಅವನ ಇಡೀ ವ್ಯಕ್ತಿತ್ವವನ್ನು ತೋರಿಸುತ್ತದೆಯಂತೆ..., ಈ ಮಾತನ್ನು ಅಪ್ಪ  ಒಂದೆರಡು ಬಾರಿ  ಚಿಕ್ಕಮ್ಮನಿಗೆ ಕೇಳುವ ಹಾಗೆ ಹೇಳಿದ್ದರು ಎಂದು ಯಾಮಿನಿ ಯೋಚಿಸುತ್ತಿದ್ದಂತೆಯೇ ದಿಲಿಪ್ ನ ಫೋನ್ ಬಂದಿತು. "ಇವತ್ತು ಸಂಜೆ ನನ್ನ ಕೆಲವು ಫ್ರೆಂಡ್ಸ್ ಬರ್ತಿದ್ದಾರೆ...ನಮ್ಮನ್ನು ವಿಶ್ ಮಾಡಲು...ಏನಾದರೂ ಅಡುಗೆ ಮಾಡು", ಎಂದು ಹೇಳಿದ. "ಹೃದಯ ಹೀನರು..., ಎಷ್ಟು ಸಹಜವಾಗಿ ಆರ್ಡರ್ ಮಾಡ್ತಾರೆ...", ಎಂದುಕೊಂಡರೂ ಅವಳಲ್ಲಿದ್ದ ಮಾತೃಹೃದಯ ಏನು ಅಡಿಗೆ ಮಾಡಲಿ ಎಂದು ಯೋಚಿಸಿತು. "ಸಾಮಾನುಗಳು ಯಾವುದೂ ಇಲ್ಲ....", ಯಾಮಿನಿ ವಿಷಾದದಿಂದ ನುಡಿದಳು. "ಓಕೆ, ನಾನು ಬೇಗನೇ ಬರ್ತೇನೆ.  ಆರ್ಗ್ಯಾನಿಕ್ ಮಾಲ್ ನಲ್ಲಿ ಎಲ್ಲಾ ಬಗೆಯ ಇಂಡಿಯನ್ ಸಾಮಾನು ಸಿಗುತ್ತೆ. ಇಬ್ಬರೂ ಹೋಗೋಣ. ಏನು ಬೇಕೋ ಅದನ್ನು ನೀನೇ ತೆಗೆದುಕೋ...", ದಿಲೀಪ್ ಹೇಳಿದವನೇ ಫೋನ್ ಇಟ್ಟ. "ಇವರಿಗೆ ಏನೂ ಅನ್ನಿಸೋಲ್ವ...ತಂದೆ-ತಾಯಿಗೋಸ್ಕರ ನನ್ನನ್ನು ಮದುವೆಯಾದರಂತೆ...ನಾನೇನು ನಿರ್ಜೀವ ಗೊಂಬೆಯೇ...ನನಗೇನು ಭಾವನೆಯೇ ಇರೋಲ್ವೆ...ನೋಡೋಕ್ಕೆ ಚೆನ್ನಾಗಿಲ್ಲ ಎಂದ ಮಾತ್ರಕ್ಕೆ ನನಗೆ ಹೃದಯವೇ ಇರೋಲ್ವ...ಹೆಚ್ಚು ಓದಿಲ್ಲ, ಮಲತಾಯಿ ಬಳಿ ಬೆಳೆದವಳು, ಬಡವರ ಮನೆ ಹುಡುಗಿ....ಏನು ಮಾಡಿದರೂ ನಡೆಯುತ್ತೆ ಅನ್ನೋ ದರ್ಪ...", ಯಾಮಿನಿ ಬೇಸರದಿಂದಲೇ ರೆಡಿಯಾದಳು. 

               ದಿಲೀಪ್ ಜೊತೆ ಆರ್ಗ್ಯಾನಿಕ್ ಮಾಲ್ ತಲುಪಿದಾಗ ಯಾಮಿನಿ ಕ್ಷಣಕಾಲ  ಎಲ್ಲವನ್ನೂ ಮರೆತಳು. ಆ ಬೃಹತ್ ಮಾಲ್ ಒಂದು ಊರಿನ ಹಾಗೆ ಭಾಸವಾಯ್ತು. ದಿಲೀಪ್ ಭಾರತದ ಸಾಮಾನುಗಳು ಸಿಗುವ ಕಡೆ ಕರೆದುಕೊಂಡು ಹೋದ. ಯಾಮಿನಿ ತನ್ನ ಕಣ್ಣುಗಳನ್ನೇ ನಂಬಲಿಲ್ಲ.  ಭಾರತದ  ಎಲ್ಲಾ ಸಾಮಾನುಗಳೂ ಅಲ್ಲಿದ್ದವು. "ಏನು ಅಡಿಗೆ ಮಾಡಲಿ?", ಎಂದು ದಿಲೀಪ್ ನನ್ನು ಕೇಳಿದಳು. "ಏನಾದರೂ ಮಾಡು...ಇಲ್ಲಿಯ ಅಡುಗೆ ತಿಂದೂ ತಿಂದೂ ಎಲ್ಲರಿಗೂ ಬೇಜಾರಾಗಿರುತ್ತೆ...ನಿಮ್ಮ ದೇಸೀ ಅಡುಗೆಯನ್ನೇ ಮಾಡು...ನಿನಗೆ ಯಾವುದು ಚೆನ್ನಾಗಿ ಬರುತ್ತದೋ ಅದನ್ನೇ ಮಾಡು...ಅದಕ್ಕೆ ಬೇಕಾದ ಸಾಮಾನೆಲ್ಲಾ ತೆಗೆದುಕೊ..", ದಿಲೀಪ್ ಹೇಳಿದಾಗ, ಯಾಮಿನಿ ಕ್ಷಣಕಾಲ ಯೋಚಿಸಿ, ಬಿಳಿಹೋಳಿಗೆ -ದಪ್ಪ ಮೆಣಸಿನ ಕಾಯಿ ಪಲ್ಯ, ಬಿರಂಜಿ ಅನ್ನ, ಮೆಣಸಿನ ಸಾರು, ಹಪ್ಪಳ ಸಂಡಿಗೆ....ಎಂದು ಒಂದು ದೊಡ್ಡ ಮೆನುವನ್ನೇ ಸಿದ್ದಪಡಿಸಿಕೊಂಡಳು. ಎಲ್ಲಾ  ಸಾಮಾನನ್ನೂ ತೆಗೆದುಕೊಂಡ ನಂತರ  ಯಾಮಿನಿ, "ಮನೆಯಲ್ಲಿ ಲತ್ತುಡಿ ಇದೆಯೇ...", ಎಂದಳು. ಇಲ್ಲ  ಎಂದ ದಿಲೀಪ್, "ಅದಕ್ಕೆ ರೋಲರ್ ಅಂತಾರಲ್ಲಾ...ಅದನ್ನೂ ಒಂದು ತೆಗೆದುಕೊಂಡರಾಯ್ತು" ಎಂದು ಹೇಳಿ ದೊಡ್ಡದೊಂದು ರೋಲರ್ ತೆಗೆದುಕೊಂಡು ಬಂದ. ಎಲ್ಲಾ ಸಾಮಾನನ್ನೂ ತೆಗೆದುಕೊಂಡಾದ ಮೇಲೆ ಬಿಲ್ಲಿಂಗ್ ಕೌಂಟರ್ ಹತ್ತಿರ ಬಂದು ಕ್ಯೂನಲ್ಲಿ ನಿಂತರು. ಕ್ಯೂನಲ್ಲಿ ನಿಂತ ಓರ್ವ ಅಮೇರಿಕನ್ ಮಹಿಳೆ ಯಾಮಿನಿಯನ್ನು ನೋಡಿ, "ಯೂ ಆರ್ ವೆರಿ ಬ್ಯೂಟಿಫುಲ್", ಎಂದಳು. ಯಾಮಿನಿ ನಕ್ಕು "ಥ್ಯಾಂಕ್ಸ್" ಎಂದು ವಾರೆಗಣ್ಣಿನಲ್ಲಿ ದಿಲೀಪ್ ನನ್ನು ನೋಡಿದಳು. ದಿಲೀಪ್ ಅದನ್ನು ಕೇಳಿಸಿಕೊಳ್ಳದವನಂತೆ ಬೇರೆ ಕಡೆ ಮುಖ ತಿರುಗಿಸಿದ. ಬಿಲ್ಲಿಂಗ್ ಮಾಡಿಸಿದ ನಂತರ ಕೌಂಟರ್ ನಲ್ಲಿದ್ದ ಅಮೆರಿಕನ್ ವ್ಯಕ್ತಿ, "ಹೇ ಬ್ಯೂಟಿಫುಲ್ ಲೇಡಿ, ವಿಸಿಟ್ ಎಗೈನ್", ಎಂದ. ಅಲ್ಲಿ ಬೇರೆ ಭಾರತೀಯರು ಇದ್ದರೂ ಯಾಮಿನಿಗೊಂದೇ ಆ ಮಾತನ್ನು ಹೇಳಿದ. ಹೀಗೆ ಅಲ್ಲಿ ಐದಾರು ಜನರಿಂದ ಯಾಮಿನಿಗೆ ಬ್ಯೂಟಿಫುಲ್ ಎಂಬ ಹೊಗಳಿಕೆ ಸಿಕ್ಕಿತು. 

                     ಮಾಲ್ ನಿಂದ ಹೊರಗೆ ಬಂದಾಗ  ಎದುರಿಗೆ  ಒಂದು ಬಿಲ್ಡಿಂಗ್ ಮೇಲೆ "ಯು ಕೆನ್ ಟ್ಯಾನ್" ಎಂದಿತ್ತು. ಯಾಮಿನಿಗೆ ಅದನ್ನು ನೋಡಿ ಕುತೂಹಲವಾಯ್ತು. "ಅದೇನು, ಯೂ ಕೆನ್ ಟ್ಯಾನ್" ಎಂದಿದೆ. ನಮ್ಮ ದೇಶದಲ್ಲಿ ಟ್ಯಾನ್  ಎಂಬ ಭಯಕ್ಕೇ ಎಲ್ಲರೂ ಹೆದರುತ್ತಾರೆ. ನನ್ನ ತಂಗಿಯರಂತೂ ಟ್ಯಾನ್ ಆಗ್ತೀವಿ ಅಂತ ಬಿಸಿಲಿನಲ್ಲಿ ಹೊರಗೆ ಹೋಗೋದಕ್ಕೂ ಇಷ್ಟಪಡೋಲ್ಲ...", ಎಂದಳು ಸಹಜವಾಗಿ. ಅವಳು ಹಾಗೆ ಕೇಳಿದ್ದಕ್ಕೆ ದಿಲೀಪ್ ಗೆ ಸಿಟ್ಟು ಬಂದಿತು. "ನಿನಗೆಲ್ಲಾ ವಿವರಿಸೋದಕ್ಕೆ ಆಗೋಲ್ಲ...ನಿನ್ನ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊ...", ಎಂದು ತುಸು ಏರಿದ ದನಿಯಲ್ಲಿ ಗದರಿದ. ಸಮೀಪದಲ್ಲಿಯೇ ಕೆಲವು ಮಂದಿ ಅಮೇರಿಕನ್ನರು ನಿಂತಿದ್ದರು. ಅವರಲ್ಲಿ ಓರ್ವ ಮಹಿಳೆ ಯಾಮಿನಿಯನ್ನೇ ನೋಡುತ್ತಿದ್ದಳು. ಯಾಮಿನಿಯ ನೋಟ, ಅವಳ ಹಾವ ಭಾವದಿಂದ ದಿಲೀಪ್ ನನ್ನು ಏನು ಕೇಳಿದಳೆಂದು ಊಹಿಸಿದಳು. ದಿಲೀಪ್ ಗದರುವಿಕೆಯೂ ಅರ್ಥವಾಯ್ತು. ಅವಳೂ ಸಹ ಯಾಮಿನಿಗೆ. "ಯು ಆರ್ ಬ್ಯೂಟಿಫುಲ್...", ಎಂದು  ಹೇಳಿದಳು. ಯಾಮಿನಿ ಮುಗುಳ್ನಕ್ಕಳು. ಆಗ ಆ ಮಹಿಳೆ, "ಇಲ್ಲಿ ನಾವೆಲ್ಲಾ ನಿನ್ನಂತಹ ಬಣ್ಣಕ್ಕೆ ಹಾತೊರೆಯುತ್ತೇವೆ. ಅದಕ್ಕೇ ಇಲ್ಲಿ ಬ್ಯೂಟಿ ಪಾರ್ಲರ್ ಗಳಲ್ಲಿ ಟ್ಯಾನ್ ಮಾಡಿ ಸ್ವಲ್ಪ ವಾದರೂ ಕಪ್ಪು ಬಣ್ಣ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೇ ಅಂತಹ ಪಾರ್ಲರ್ ಗಳ ಮುಂದೆ ಯು ಕೆನ್ ಟ್ಯಾನ್ ಅಂತ ಬೋರ್ಡ್ ಹಾಕಿರುತ್ತಾರೆ. ನೀನು ಅದೃಷ್ಟವಂತೆ...ದೇವರೇ ನಿನಗೆ ಇಂತಹ ಸುಂದರ ಬಣ್ಣ ಕೊಟ್ಟಿದ್ದಾನೆ...", ಎಂದು ಹೇಳಿ, ದಿಲೀಪ್ ಗೆ ,"ಯು ಆರ್ ಬ್ಲೆಸ್ಡ್ ಟು ಹ್ಯಾವ್ ಹರ್", ಎಂದು ಮಾರ್ಮಿಕವಾಗಿ ನೋಡಿದಳು. "ಓ..., ಅದಕ್ಕೇ ದಿಲೀಪ್ ಅದರ ಬಗ್ಗೆ ಹೇಳಲು ಅವಾಯ್ಡ್ ಮಾಡಿರಬೇಕು...", ಎಂದುಕೊಂಡು ಸುಮ್ಮನಾದಳು ಯಾಮಿನಿ.
         ಅಲ್ಲಿಂದ ಹೊರಟು ಮನೆಯಕಡೆ ಹೊರಟರು. ಆ ರಸ್ತೆ ಸ್ವಲ್ಪ ನಿರ್ಜನವಾಗಿತ್ತು. ಮನೆ ಬೇಗ ತಲುಪಬೇಕೆಂದು ದಿಲೀಪ್ ಆ ದಾರಿಯಲ್ಲಿ ಸಾಗತೊಡಗಿದ. ಸ್ವಲ್ಪದೂರ ಹೋದಾಗ ಎದುರಿಗೆ ಒಂದು ದೊಡ್ಡ ಟ್ರಕ್ ಅಡ್ಡ ಬಂದು ನಿಂತಿತು. ದಾರಿ ತುಂಬಾ ಕಿರಿದಾಗಿದ್ದರಿಂದ ಮುಂದೆ ಹೋಗಲಾಗದೆ ದಿಲೀಪ್ ಕಾರ್ ನಿಲ್ಲಿಸಿ, ಟ್ರಕ್ ಡ್ರೈವರ್ ಗೆ ವಾಪಸ್ಸು ಹೋಗಲು ಕೂಗಿ ಹೇಳಿದ. ಅದೇ ಸಮಯಕ್ಕೆ  ಒಬ್ಬ ದೈತ್ಯ ಓಡಿಬಂದು, ದಿಲೀಪ್ ಗೆ ಚಾಕು ತೋರಿಸಿ ಹಣ ಕೊಡಲು ಹೆದರಿಸಿದ. ಯಾಮಿನಿ ಬೆಚ್ಚಿಹೋದಳು. ಅವಳಿಗೆ ಇದು ತೀರಾ ಅನಿರೀಕ್ಷಿತವಾಗಿತ್ತು. ಗಾಬರಿಯಿಂದ ನಡುಗತೊಡಗಿದಳು. ದಿಲೀಪ್ ಹಣ ಕೊಡಲು ನಿರಾಕರಿಸಿದ. ಆಗ ದೈತ್ಯ ಅವನ ಹೊಟ್ಟೆಗೆ ಜೊರಾಗಿ ಹೊಡೆದ. ದಿಲೀಪ್ ನೋವಿನಿಂದ ಕೂಗಿದ. ಅಷ್ಟು ಹೊತ್ತೂ ಗಾಬರಿಯಿಂದ ನೋಡುತ್ತಾ ಕುಳಿತಿದ್ದ ಯಾಮಿನಿಗೆ ಅದೆಲ್ಲಿಂದ ಧೈರ್ಯ ಬಂದಿತೋ ಏನೋ, ಹಿಂದಿನ ಸೀಟಿನಲ್ಲಿದ್ದ ರೋಲರ್ ತೆಗೆದುಕೊಂಡು, ಕಾರಿನಿಂದ ಚಂಗನೆ ಇಳಿದು ಬಂದು ಆ ದೈತ್ಯನ ಹಿಂದಲೆಗೆ ಜೋರಾಗಿ ಬೀಸಿ ಹೊಡೆದಳು. ಆತ ಆ ಒಂದೇ ಏಟಿಗೆ ಜ್ಞಾನ ತಪ್ಪಿ ಕೆಳಗೆ ಬಿದ್ದ. ದಿಲೀಪ್ ತಕ್ಞಣ ಅವನ ಕೈಯಲ್ಲಿದ್ದ ಚಾಕು ತೆಗೆದುಕೊಂಡ. ಟ್ರಕ್ ಡ್ರೈವರ್ ಇಳಿದು ಬರುವ ಮುಂಚೆಯೇ ಯಾಮಿನಿಗೆ ಕಾರ್ ಹತ್ತಲು ಹೇಳಿ, ತಾನೂ ಕಾರ್ ಹತ್ತಿ, ಸ್ವಲ್ಪ ಹಿಂದೆ ತೆಗೆದುಕೊಂಡು, ಅಲ್ಲಿ ಇದ್ದ ಕವಲು ದಾರಿಯಲ್ಲಿ ಸೊಯ್ಯನೆ ಮುಂದೆ ಹೋಗಿಬಿಟ್ಟ.ಇದೆಲ್ಲಾ ಮಿಂಚಿನ ವೇಗದಲ್ಲಿ ಜರುಗಿತು.  ಸ್ವಲ್ಪ ದೂರ ಹೀಗೇ ಸಾಗಿದ ಮೇಲೆ ಮುಖ್ಯ ರಸ್ತೆ ಸಿಕ್ಕಿತು. ಅಲ್ಲಿಂದ ಮನೆಯ ದಾರಿಯನ್ನು ಹಿಡಿದು ಮನೆಗೆ ಬಂದರು. ಮನೆಯೊಳಗೆ ಬಂದು ಸೇರಿಕೊಂಡ ಮೇಲೆಯೇ ಇಬ್ಬರೂ ಸಮಾಧಾನದ  ಉಸಿರು ಬಿಟ್ಟದ್ದು!!!

           ಯಾಮಿನಿ ಅಡುಗೆ ಮಾಡಲು ಅಣಿಯಾದಳು. ಅವಳು ವೇಗವಾಗಿ ಅಡುಗೆ ಮಾಡುವುದನ್ನು ನೋಡಿದ ದಿಲೀಪ್, "ಏನಾದರೂ ಹೆಲ್ಪ್ ಬೇಕಾ?", ಎಂದು ಕೇಳಿದ. "ಪರವಾಗಿಲ್ಲ...ನನಗೆ ಒಬ್ಬಳೇ ಮಾಡಿ ಅಭ್ಯಾಸ ಇದೆ..., ನೀವು ಬೇರೆ ಕೆಲಸ ನೋಡಿಕೊಳ್ಳಿ", ಎಂದಳು.  ಸ್ವಲ್ಪ ಹೊತ್ತಾಗುವಷ್ಟರಲ್ಲೇ ಗೆಳೆಯರು ಒಬ್ಬೊಬ್ಬರಾಗಿ ಬಂದರು. ಆರು ಜನ  ಆಪ್ತ ಗೆಳೆಯರು ಬಂದ ಮೇಲೆ ಪಾರ್ಟಿ ಶುರುವಾಯ್ತು. ಅವರೇ ಬಂದು ಯಾಮಿನಿಯನ್ನು ಮಾತನಾಡಿಸಿ, ಉಡುಗೊರೆ ನೀಡಿದರು. ಅವರಲ್ಲಿ ಶಂಕರ್ ಎನ್ನುವ ಭಾರತೀಯನೂ ಇದ್ದ. ಅವನು ಯಾಮಿನಿಯನ್ನು ಕನ್ನಡದಲ್ಲೇ ಮಾತನಾಡಿಸಿದ್ದರಿಂದ ಯಾಮಿನಿಗೂ ಖುಷಿಯಾಯ್ತು. "ನಾನೂ ಚಿತ್ರದುರ್ಗ ಜಿಲ್ಲೆಯವನೇ...ನೀವೂ ಚಿತ್ರದುರ್ಗದವರೆಂದು ತಿಳಿದು ತುಂಬಾ ಸಂತೋಷವಾಯ್ತು. ನನ್ನ ಹೆಂಡತಿ ತುಮಕೂರಿನವಳು...ಅವಳ ಪರಿಚಯ ಮಾಡಿಸ್ತೇನೆ...ನಿಮಗೆ ಒಳ್ಳೇ ಕಂಪನಿಯಾಗುತ್ತೇ...ನಿಮಗೆ ಏನು ಸಹಾಯ ಬೇಕಿದ್ದರೂ ಕೇಳಿ... ,ನಾನೂ ದಿಲೀಪ್ ತುಂಬಾ ಫ್ರೆಂಡ್ಸ್. ಒಟ್ಟಿಗೇ ಅಮೆರಿಕಾಗೆ ಬಂದಿದ್ದು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದೇವೆ..", ಎಂದೂ ಹೇಳಿದಾಗ ಯಾಮಿನಿಗೆ ಏನೋ ಒಂದು ರೀತಿಯ ಆಸರೆ ಸಿಕ್ಕಂತಾಗಿ ಆತ್ಮೀಯತೆಯಿಂದ ನೋಡಿದಳು. ಹತಾಶೆಯಿಂದ ಕಂಗಾಲಾಗಿದ್ದ ಯಾಮಿನಿಗೆ ಶಂಕರ ತೋರಿದ ಆತ್ಮೀಯತೆ ಅಪಾರ ಧೈರ್ಯವನ್ನು ನೀಡಿತು. ಒಳ್ಳೆಯ ಮನಸ್ಸಿನ ಶಂಕರ ಒಳ್ಳೆಯ ಮಾತುಗಾರ ಕೂಡ.  ಅವನ ಜೊತೆ ಯಾರು ಮಾತನಾಡಿದರೂ ಸಾಕು ನಂಬಿಕೆ, ವಿಶ್ವಾಸದ ಭಾವನೆಗಳನ್ನು ಹೊಂದಿಬಿಡುತ್ತಿದ್ದರು. ಗೆಳೆಯರೆಲ್ಲರ ತಮಾಷೆ, "ನೀನು ಆಪ್ತಸಮಾಲೋಚಕ ಆದರೆ ಚೆನ್ನಾಗಿರುತ್ತೆ. ನಿನ್ನ ಮಾತೊಂದೇ ಸಾಕು ಆತ್ಮವಿಶ್ವಾಸ ತುಂಬಲು" ಎಂಬುದಾಗಿತ್ತು. ಅಂತಹುದರಲ್ಲಿ ಒಂಟಿಯಾಗಿ ಪರದೇಶದಲ್ಲಿ ವಿಲವಿಲನೆ ತಳಮಳಿಸುತ್ತಿದ್ದ ಯಾಮಿನಿ ಶಂಕರನಲ್ಲಿ ಸಾಕ್ಷಾತ್ ದೇವರನ್ನೇ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಅವನಿಗೆ "ಅಣ್ಣಾ" ಎಂದೇ ಕರೆಯಲಾರಂಭಿಸಿದಳು. 

              ಬ್ರಹ್ಮಾಂಡ ರುಚಿಯ ಊಟವನ್ನು ಎಲ್ಲರೂ ಸವಿದರು. ದಿಲೀಪ್ ಸಹ ಅಷ್ಟು ರುಚಿಯ ಊಟವನ್ನು ಎಂದೂ ಮಾಡೇ ಇಲ್ಲ ಎಂದುಕೊಂಡ. ಗೆಳೆಯರೆಲ್ಲಾ ಯಾಮಿನಿಯ ಕೈರುಚಿಯನ್ನು ಕೊಂಡಾಡಿದರೂ ಅವನು ಮಾತ್ರ ಮೇಲೆ ತೋರ್ಪಡಿಸಿಕೊಳ್ಳಲಿಲ್ಲ. ಶಂಕರನ ಸೂಕ್ಷ್ಮ ಕಣ್ಣುಗಳು ಅದನ್ನು ಗಮನಿಸಿದವು. ಊಟದ ನಂತರ ಮತ್ತೇ ಹರಟುತ್ತಾ ಕುಳಿತರು. ಶಂಕರ, "ಅಲ್ಲಮ್ಮಾ ಯಾಮಿನಿ, ಎಲ್ಲಾ ಸರಿ....ಅಪ್ಪಟ ದೇಸೀ ಅಡುಗೆಯನ್ನೇ ಮಾಡಿರುವೆ. ಆದರೆ ದುರ್ಗದ ಸ್ಪೆಷಲ್ ಮೆಣಸಿನಕಾಯಿ ಬೋಂಡಾ ಮಾಡಿಲ್ಲವಲ್ಲಾ...?", ಎಂದ. "ಅದೂ ನನಗೆ ಚೆನ್ನಾಗಿ ಬರುತ್ತೆ...ಆದರೆ , ನಿಮಗೆಲ್ಲಾ ಖಾರ ಅನ್ನಿಸುತ್ತೆ ಅಂತ ಮಾಡಲಿಲ್ಲ". ಯಾಮಿನಿ ಹೇಳಿದಾಗ, "ನೋ...ನೋ...ನಮಗೆಲ್ಲಾ ಇಷ್ಟವಾಗುತ್ತೆ...ಈಗಲೂ ಸಮಯ ಮಿಂಚಿಲ್ಲ...ಇನ್ನೈದು ನಿಮಿಷಕ್ಕೆ ಕಾಫಿ ಬೇಕು ನಮಗೆ...ಅದರ ಜೊತೆ ತಿನ್ನಲು ಚೆನ್ನಾಗಿರುತ್ತೆ...ನಾನೂ ನಿನಗೆ ಹೆಲ್ಪ್ ಮಾಡ್ತೇನೆ...ಇಬ್ಬರೂ ಸೇರಿ ಮಾಡೋಣ ಬಾ...ಇವರೆಲ್ಲಾ ಮಾತಾಡ್ತಾ ಇರ್ಲಿ", ಎನ್ನುತ್ತಾ ಅಡುಗೆ ಮನೆಗೆ ಹೋದ. ಬೋಂಡ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಶಂಕರ, "ನೀನು ನನ್ನನ್ನು ಅಣ್ಣಾ ಅಂತ ಕರೆದಿದ್ದೀಯ...ಆ ಸಲಿಗೆಯಿಂದ ಕೇಳ್ತಿದ್ದೀನಿ...ವೈಯಕ್ತಿಕ ವಿಷಯ ಕೇಳ್ತಿದ್ದೀನಿ ಅಂತ ತಪ್ಪು ತಿಳೀಬೇಡ...ಮೊನ್ನೆ ನೀನೇನೋ ತುಂಬಾ ಹೊತ್ತು ಅಳ್ತಾ ಇದ್ದೆಯಂತೆ...ನಿಮ್ಮ ಪಕ್ಕದ ಮನೆಯ ನೀಗ್ರೋ ಯುವಕ ನನಗೆ ಫೋನ್ ಮಾಡಿ ಹೇಳಿದ. ಅವನಿಗೆ ತುಂಬಾ ಗಾಬರಿಯಾಗಿದ್ದರಿಂದ ನನಗೆ ತಿಳಿಸಿದ. ನಾನೂ, ದಿಲೀಪ್ ತುಂಬಾ ಕ್ಲೋಸ್ ಫ್ರೆಂಡ್ಸ್ ಅಂತಾ ಅವನಿಗೆ ಗೊತ್ತು. ತುಂಬಾ ಒಳ್ಳೇ ಹುಡುಗ ಆತ. ಯಾವಾಗಲೋ ಒಮ್ಮ ನನ್ನ ಫೋನ್ ನಂಬರ್ ಅವನಿಗೆ ಕೊಟ್ಟಿದ್ದೆ....ಅದಿರಲಿ, ಮನೆಯವರನ್ನು ಮಿಸ್ ಮಾಡಿಕೊಳ್ಳೋದು ಸಹಜ...ಅದಕ್ಕೇ ಅತ್ತಿದ್ದರೆ ಓಕೆ...ದಿಲೀಪ್ ಏನಾದರೂ ಅಂದನಾ....ಸ್ವಲ್ಪ ಮುಂಗೋಪಿ ಆತ...ಅವನೇನಾದರೂ ಬೈದಿದ್ದರೆ ಹೇಳು...ಸರಿಯಾಗಿ ಬುದ್ದಿ ಹೇಳಿ ಸರಿ ಮಾಡ್ತೇನೆ...ಅವನು ನನಗೊಬ್ಬನಿಗೇ ಬಗ್ಗೋದು...ನಿನ್ನ ಬಳಿ ಮಾತಾಡಬೇಕು ಅಂತಾನೇ ಈ ಪಾರ್ಟಿಯ ಪ್ಲ್ಯಾನ್ ಮಾಡಿದೆ", ಅನುನಯದ ಮಾತಿನಲ್ಲಿ ನುಡಿದ. ಯಾಮಿನಿಗೆ ಇನ್ನು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಯಾರ ಬಳಿಯೂ ಹೇಳಿಕೊಳ್ಳಲಾಗದೆ , ಒಳಗೆ ಧಗದಹಿಸುತ್ತಿದ್ದ ಜ್ವಾಲಾಮುಖಿಯ ಶಾಖವನ್ನು ತಡೆಯಲಾಗದೆ ಏಕಾಂಗಿಯಾಗಿ ತಪಿಸುತ್ತಿದ್ದ ಯಾಮಿನಿ, "ಅಣ್ಣಾ..., ನನ್ನ ನೋವನ್ನು ಹೇಗೆ ತಾನೇ ತಡೆದುಕೊಳ್ಳಲಿ....ನೀವೇ ಹೇಳಿ...?...ನಿಮ್ಮ ಆಪ್ತ ಗೆಳೆಯನ ವಿಷಯ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ...ಅವರು ಹೆಲ್ಗಾನ್ನ ಮದುವೆಯಾಗಿದ್ದಾರಲ್ವಾ....ಆ ವಿಷಯ ನನಗೆ ಹೇಳಿದರು. ಇನ್ನು ನಾನು ಇಲ್ಲಿ ಹೇಗಿರಲಿ?....ಎಲ್ಲಿಗೆ ಹೋಗಲಿ?...ಅಪ್ಪನಿಗೆ ಏನೆಂದು ಹೇಳಲಿ?...ಅವರು ಮದುವೆ ಮಾಡಿದ ಸಂತಸದಲ್ಲಿದ್ದಾರೆ...ಈ ವಿಷಯ ಅವರಿಗೆ ಗೊತ್ತಾದರೆ  ಹೇಗೆ ತಡೆದುಕೊಂಡಾರು....ನನಗೆ ತುಂಬಾ ಸಂಕಟ, ದುಃಖ  ಆಗ್ತಾ  ಇದೆ....ದಾರೀನೇ ಕಾಣಿಸ್ತಿಲ್ಲ...ಹಾಗಂತ, ದಿಲೀಪ್ ಹೆಲ್ಗಾನ್ನ ಬಿಟ್ಟು ನನ್ನನ್ನು ಹೆಂಡತಿ ಅಂತ ಸ್ವೀಕರಿಸಿದರೂ ನಾನು ಅವರನ್ನು ಪತಿ ಅಂತ ಒಪ್ಪಲಾರೆ...ನಾನು ಕಪ್ಪಗಿರಬಹುದು...ಆದರೆ ನನಗೂ ಆತ್ಮಾಭಿಮಾನ ಇರುತ್ತಲ್ವಾ...ಏನು ನಿರ್ಧಾರ ತೆಗೆದುಕೊಳ್ಳಲಿ ಅಂತಾನೇ ಗೊತ್ತಾಗುತ್ತಿಲ್ಲ...", ಬಿಕ್ಕಿ ಬಿಕ್ಕಿ ಅತ್ತಳು. "ದಿಲೀಪ್ ಹೆಲ್ಗಾನ್ನ ಮದುವೆಯಾಗಿದ್ದಾನಾ?...ನನಗೇ ಗೊತ್ತಿಲ್ವಲ್ಲಾ?!!!....ಸಾಧ್ಯವೇ ಇಲ್ಲ...ಇಲ್ಲಾ ಯಾಮಿನಿ, ಇದರಲ್ಲೇನೋ ಮೋಸವಿದೆ....ನನಗೆ ಎರಡು ದಿನ ಟೈಮ್ ಕೊಡು. ಸತ್ಯ ಏನು ಅಂತ ತಿಳಿದುಕೊಳ್ತೇನೆ...ಅಲ್ಲೀ ತನಕ ನೀನು ದಿಲೀಪನನ್ನು ಏನೂ ಕೇಳಬೇಡ...ಈ ಅಣ್ಣನ ಮೇಲೆ ಭರವಸೆ ಇಡು", ಶಂಕರ ಗೊಂದಲಗೊಂಡರೂ ಸಮಾಧಾನ ಪಡಿಸಿದ. ಅವನ ಮಾತಿನ ದೃಢತೆಗೆ ಯಾಮಿನಿಯ ಹೃದಯ ಸಮ್ಮತಿಸಿತು. ಅದು ಬಿಟ್ಟು ಅವಳಿಗೆ ಬೇರೆ ಆಯ್ಕೆಯೂ ಇರಲಿಲ್ಲ....

          ಎರಡು ದಿನಗಳ ನಂತರ , "ದಿಲೀಪ್,  ಆಫೀಸ್  ಆದಮೇಲೆ ನಾವಿಬ್ಬರೂ ಹೊರಗೆ ಡಿನ್ನರ್ ಗೆ ಹೋಗೋಣ. ನಿನ್ನ ಕೆಲಸ ಉಳಿದಿದ್ದರೆ ಹೆಲ್ಗಾಗೆ ಮಾಡಲು ಹೇಳಿಬಿಡು. ಬೇಗ ಬಾ... ಸ್ವಲ್ಪ ಡಿಸ್ಕಸ್ ಮಾಡಬೇಕು...", ಶಂಕರ ಹೇಳಿದಾಗ ದಿಲೀಪ್ ಒಪ್ಪಿಗೆಯಿಂದ ತಲೆಯಾಡಿಸಿದ. ಈ ರೀತಿ ಅವರಿಬ್ಬರು ಡಿನ್ನರ್ ಗೆ ಹೋಗೋದು ಹೊಸತೇನಲ್ಲಾ. ವಾರದಲ್ಲಿ ಒಂದು ಬಾರಿಯಾದರೂ ಹೀಗೆ ಹೋಗುವುದು ವಾಡಿಕೆ. 

          ಡಿನ್ನರ್ ಮುಗಿಸಿ, ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಇಬ್ಬರೂ ಕಾರಿನ ಬ್ಯಾನೆಟ್ ಮೇಲೆ ಸುಖಾಸೀನರಾಗಿ ಕುಳಿತರು. ಹೀಗೆ ಆಗಸವನ್ನು ದಿಟ್ಟಿಸುತ್ತಾ ಕುಳಿತರೆಂದರೆ ಅದು ಅವರ ಆತ್ಮಾವಲೋಕನದ ಸಮಯವೆಂದು ಅರ್ಥ. ಒಬ್ಬರು ಪ್ರಶ್ನೆ ಕೇಳಿದರೆಂದರೆ ಇನ್ನೊಬ್ಬರು ಸತ್ಯವನ್ನೇ ಹೇಳಬೇಕು. ಇದು ಅವರಿಬ್ಬರ ನಡುವೆಯಾದ ಅಲಿಖಿತ  ಒಪ್ಪಂದ. ಅವರ ಅಂತರಂಗಗಳೇ ಬರೆದ  ಈ ಶಾಸನವನ್ನು ಅವರೆಂದೂ ಮುರಿದಿಲ್ಲ. ಆ ವಿಶ್ವಾಸದಿಂದಲೇ ಶಂಕರ , "ದಿಲೀಪ್, ಪೀಠಿಕೆಯೇನೂ ಬೇಡ...ನೇರವಾಗಿ ಕೇಳ್ತಿದ್ದೇನೆ..., ಹೆಲ್ಗಾ ನಿನ್ನ ಅಸಿಸ್ಟೆಂಟ್  ನಿಜ. ಆದರೆ ನಿನಗಿಂತ ಹದಿನೈದು ವರ್ಷ ದೊಡ್ಡವಳು. ಮದುವೆಯಾಗಿ ನಾಲ್ಕು ಮಕ್ಕಳಿರುವ ಆ ಹಿರಿಯ  ಮಹಿಳೆಯನ್ನು ನೀನು ಯಾವಾಗ ಮದುವೆಯಾದೆ?...ಅಥವ ನನಗೆ ತಿಳಿಯದ ಬೇರೆ ಹೆಲ್ಗಾ ನಿನ್ನ ಜೀವನದಲ್ಲಿ ಇದ್ದಾಳ?", ಗಂಭೀರವಾಗಿ ಕೇಳಿದ. ದಿಲೀಪ್ ಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಶಂಕರನಿಂದ  ಈ ಪ್ರಶ್ನೆ ಬರುತ್ತದೆಂದು ಲವಲೇಶದಷ್ಟೂ ಊಹಿಸಿರಲಿಲ್ಲ.  ಮೌನದಿಂದ ಕುಳಿತ. ಶಂಕರ್ ಸಹ ಸುಮ್ಮನಿದ್ದ. ಸ್ವಲ್ಪ ಹೊತ್ತಿನ ಮೌನದ ನಂತರ , ದಿಲೀಪ್ ಶಂಕರ್ ನ ಭುಜದ ಮೇಲೆ ತಲೆಯಿಟ್ಟು ಅಳತೊಡಗಿದ. ಶಂಕರ್ ಏನೂ ಮಾತನಾಡಲಿಲ್ಲ. ಸ್ವಲ್ಪಹೊತ್ತು ಅತ್ತ ನಂತರ ದಿಲೀಪ್ ಕಣ್ಣೊರೆಸಿಕೊಂಡು ನಿಧಾನವಾಗಿ ಹೇಳಲಾರಂಭಿಸಿದ. "ಶಂಕರ್, ಹುಡುಗಿ ನೋಡಿದ್ದೇವೆಂದು ಅಮ್ಮ ಫೋನ್ ಮಾಡಿ ಹೇಳಿದಾಗ, ಹುಡುಗಿಯ ಬಗ್ಗೆ ಕಲ್ಪನಾ ಲೋಕವನ್ನು ಕಟ್ಟಿಕೊಂಡೇ ಇಂಡಿಯಾಕ್ಕೆ ಹೋದೆ. ಅಲ್ಲಿಗೆ ಹೋಗಿ ಯಾಮಿನಿಯನ್ನು ನೋಡಿದಾಗ ಹತಾಷನಾದೆ. ನಾನು ಅವಳನ್ನು ಮದುವೆಯಾಗುವುದು ಸಾಧ್ಯವೇ ಇಲ್ಲ ಅಂತ ಅಪ್ಪ-ಅಮ್ಮನಿಗೆ ಹೇಳಿದರೆ ಅವರು ಒಪ್ಪಲೇ ಇಲ್ಲ.  ಇಷ್ಟು ಹೊಂದುವ ಜಾತಕ ಇನ್ನೆಲ್ಲೂ ಸಿಗುವುದಿಲ್ಲ. ಮೇಲಾಗಿ ತುಂಬಾ ಒಳ್ಳೆಯ ಗುಣದ ಹುಡುಗಿ. ನೀನು ಅವಳನ್ನು ಮದುವೆಯಾಗದಿದ್ದರೆ ನಾವು ನಿನ್ನ ಪಾಲಿಗೆ ಇಲ್ಲ ಎಂದೇ ಭಾವಿಸು ಎಂದು ಉಗ್ರ ಹಠ ಹಿಡಿದರು. ಎಷ್ಟು ಪರಿಪರಿಯಾಗಿ ಕೇಳಿಕೊಂಡರೂ ತಮ್ಮ ಹಠ ಬಿಡಲಿಲ್ಲ. ಅನ್ಯ ಮಾರ್ಗವಿಲ್ಲದೆ ನಾನು ಮದುವೆಗೆ ಒಪ್ಪಿದೆ. ಆದಕೂಡಲೇ ಕೆಲಸದ ನೆಪ ಹೂಡಿ ವಾಪಸ್ ಬಂದೆ. ಮತ್ತೇ ಹಠ ಮಾಡಿ ಯಾಮಿನಿಯನ್ನು ಇಲ್ಲಿಗೆ ಕಳಿಸಿದರು. ಅವಳದೇನೂ ತಪ್ಪಿಲ್ಲ. ಆದರೆ ಅವಳನ್ನು ಸ್ವೀಕರಿಸಲು ಮನಸ್ಸು ಒಪ್ಪಲಿಲ್ಲ. ಅವಳೂ ನನ್ನ ಆಸೆ ಬಿಡಲಿ ಎಂದು ಮದುವೆಯಾಗಿದೆ ಎಂದು ಸುಳ್ಳು ಹೇಳಿದೆ. ತಕ್ಷಣಕ್ಕೆ ಹೆಲ್ಗಾ ಹೆಸರು ನೆನಪಿಗೆ ಬಂದು, ಅದೇ ಹೆಸರನ್ನು ಹೇಳಿದೆ...,ಅಷ್ಟೇ ಕಣೋ..."!!!ದಿಲೀಪ್ ಹೇಳಿದಾಗ, " ಅಯ್ಯೋ ಗೂಬೆ...ಅಷ್ಟೇನಾ ಕಾರಣ...ಯಾಮಿನಿ ಕಪ್ಪು ಎಂಬುವುದು ಬಿಟ್ಟರೆ ಏನೋ ಕಡಿಮೆಯಾಗಿದೆ?! ಎಂಥ ಒಳ್ಳೇ ಹುಡುಗಿ ಕಣೋ ಅವಳು...ನಿನ್ನ ಹಳೇ ಕತೆ ಮರೆತುಬಿಟ್ಯಾ...ಯಾಕೆ...ಎರಡು ವರ್ಷದ ಹಿಂದೆ ಮಾರ್ಥ ಎಂಬ ಅಮೆರಿಕದ ಅಚ್ಚ ಬಿಳಿ ಸುಂದರಿ ನಿನ್ನ ದುಡಿಮೆಯನ್ನೆಲ್ಲಾ ಸ್ವಾಹಾ ಮಾಡಿ, ನಿನಗೆ ಕೈಕೊಟ್ಟು ನ್ಯೂಯಾರ್ಕ್ ಗೆ ಹೋದಳಲ್ಲಾ...ಅದು ಮರೆತು ಹೋಯ್ತಾ...ಬಣ್ಣದಲ್ಲಿ ಏನಿದೆಯೋ...ಹಾಗೆಂದು ಕಪ್ಪಗಿರುವವರೆಲ್ಲಾ ಒಳ್ಳೆಯವರೆಂದು ಅರ್ಥವಲ್ಲ...ಕಪ್ಪಗಿರಲಿ, ಬೆಳ್ಳಗಿರಲಿ...ನೋಡಬೇಕಾದ್ದು ಹೃದಯದ ಬಣ್ಣ. ನಿನ್ನ ಅದೃಷ್ಟ...ಯಾಮಿನಿಯದು ಹಾಲಿನಂಥ ಮನಸು...", ಶಂಕರ್ ವೇದನೆಯಿಂದ ನುಡಿದ. ಮತ್ತೇ ಇಬ್ಬರ ನಡುವೆ ಮೌನ. "ಶಂಕರ್..., ನಾನು ಇಷ್ಟು ಹೊತ್ತು ಒಂದು ಭಾಗವನ್ನು ಮಾತ್ರ ಹೇಳಿದೆ....ಇನ್ನೊಂದು ಭಾಗವನ್ನು ಹೇಳಲು ನಾಚಿಕೆಯಾಗ್ತಾ ಇದೆ...ಅದೇನೆಂದರೆ...ಯಾಮಿನಿ ಎಂದರೆ ಸ್ವಲ್ಪವೂ ಇಷ್ಟ ಆಗದೆ ಇದ್ದುದರಿಂದ ಅವಳಿಗೆ ಹಾಗೆ ಹೇಳಿದೆ. ಎಂಥ ಆಘಾತದ ಸುದ್ದಿ ಅವಳಿಗೆ... ಹಾಗೆ ಹೇಳಿದ್ದಕ್ಕೆ ನನಗೂ ಒಳಗೇ ನೋವಾಯ್ತು. ಆದರೂ ಮೇಲೆ ತೋರಿಸಿಕೊಳ್ಳಲಿಲ್ಲ. ನಾನು ಮೆದುವಾದರೆ ಅವಳೆಲ್ಲಿ ಆಸೆ ಇಟ್ಟುಕೊಳ್ಳುತ್ತಾಳೋ ಅಂಥ. ಅವಳು ಕಪ್ಪು , ಹೆಚ್ಚು ಓದಿಲ್ಲ, ಸೋಶಿಯಲ್ ಬಿಹೇವಿಯರ್ ಗೊತ್ತಿಲ್ಲ...ಎಂಬ ಕಾರಣಕ್ಕೆ ಅಸಹ್ಯಿಸಿಕೊಂಡೆ. ಆದರೆ ಹೋದಲ್ಲೆಲ್ಲಾ ಅವಳನ್ನು ಇಲ್ಲಿಯ ಜನ ಬ್ಯೂಟಿಫುಲ್, ಬ್ಯೂಟಿಫುಲ್  ಎಂದು ಹೊಗಳಿದಾಗ ರೂಪದ ಪರಿಕಲ್ಪನೆ ಮೆಲ್ಲನೆ ಬದಲಾಗತೊಡಗಿತು. ನಾನು ಮದುವೆಯಾಗಿದೆ ಎಂದು ಹೇಳಿ, ಕಟುವಾಗಿ ನಡೆದುಕೊಂಡರೂ ಅವಳು ನನ್ನನ್ನು ಗೌರವದಿಂದಲೇ ಕಂಡಳು. ಸಹನೆಯಿಂದಲೇ ನಡೆದುಕೊಂಡಳು. ಅತ್ತು ಕಿರುಚಾಡಿ, ರಂಪ ಮಾಡದೆ ಸಂಯಮದಿಂದ ಇದ್ದಳು. ಆಗ ಅವಳ ಸಂಸ್ಕೃತಿ, ಸಂಸ್ಕಾರ  ಇಷ್ಟವಾಯಿತು. ತನ್ನ ಜೀವನವೇ ಅಲ್ಲೋಲ ಕಲ್ಲೋಲವಾಗಿದ್ದರೂ, ಒಳಗೇ ಯಾತನೆಯನ್ನು ಅನುಭವಿಸುತ್ತಿದ್ದರೂ,  ಮನೆಗೆ ಅತಿಥಿಗಳು ಬರುತ್ತಾರೆ ಎಂದಕೂಡಲೇ ಎಲ್ಲವನ್ನೂ ಮರೆತು ರುಚಿಯಾದ ಅಡುಗೆ ಮಾಡಿ ಅನ್ನಪೂರ್ಣೆಯಂತೆ ಬಡಿಸಿದಳಲ್ಲಾ...ಆಗ ಅವಳ ಹಿರಿಯ ಗುಣ  ಇಷ್ಟವಾಯ್ತು....ಇನ್ನೂ ಒಂದು ವಿಶೇಷವೆಂದರೆ ಮಾಲ್ ನಿಂದ ಬರುವಾಗ  ಒಂದು ಸಿನಿಮೀಯ ಘಟನೆ ನಡೆಯಿತು. ದೈತ್ಯನೊಬ್ಬ ನನ್ನ ಮೇಲೆ ಅಟ್ಯಾಕ್ ಮಾಡಿದ. ಆಗ ಅವಳು ತೋರಿದ ದೈರ್ಯ, ಸಮಯಪ್ರಜ್ಞೆ ಬೆರಗು ಹುಟ್ಟಿಸಿತು. ಚೂಡಿದಾರದ ದುಪ್ಪಟ್ಟಾವನ್ನು ಸೊಂಟಕ್ಕೆ ಬಿಗಿದು ಕಟ್ಟಿ, ರೋಲರ್ ಹಿಡಿದು ಅವನ ತಲೆಗೆ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ್ದನ್ನು ನೋಡಿದಾಗ ಸಾಕ್ಷಾತ್ ದುರ್ಗದ ಒನಕೆ ಓಬವ್ವನೇ ನೆನಪಾದಳು. ನಾನು ಅವಳಿಗೆ ಕೊಟ್ಟ ನೋವಿಗೆ ನನ್ನನ್ನು ದ್ವೇಷಿಸಬೇಕಿತ್ತು. ಆದರೆ ಅವಳು ಎಷ್ಟು ನಿಷ್ಕಲ್ಮಶವಾಗಿ ಮನೆಯ ಕೆಲಸ ಮಾಡುತ್ತಿದ್ದಾಳೆಂದರೆ ಆಶ್ಚರ್ಯ ಆಗುತ್ತೆ. ಆ ದುಃಖದಲ್ಲೂ ಅವಳು ಮನೆಯನ್ನು ಕನ್ನಡಿಯ ಹಾಗೆ ಶುಭ್ರವಾಗಿ ಇಟ್ಟುಕೊಂಡಿದ್ದಾಳೆ. ಅವಳು ಬಂದಮೇಲೆ ಮನೆಯ ರೂಪವೇ ಬದಲಾಯಿತು.... ಅವಳ ಗೃಹಿಣಿಯ ರೂಪ ಅತಿ ಸುಂದರ ಅನ್ನಿಸುತ್ತಿದೆ... ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎಂದು ಮದುವೆಯಲ್ಲಿ  ಹೇಳಿದ್ದು ನಾನು....ಆದರೆ ಯಾಮಿನಿಯೇ ಅದನ್ನು ಜೀವನ ಪರ್ಯಂತ ಪಾಲಿಸುತ್ತಾಳೇನೋ ಎಂದೆನಿಸುತ್ತಿದೆ...", ದಿಲೀಪ್ ತನ್ನನ್ನೇ ಮರೆತು ಮನಸ್ಸಿನಲ್ಲಿ ಅನ್ನಿಸಿದ್ದನ್ನು ಹೇಳುತ್ತಾ ಹೋದ. ಶಂಕರ್ ಹಿಗ್ಗಿನಿಂದ ನೋಡಿ,  ದಿಲೀಪ್ ನ  ಮಾತನ್ನು ಅಲ್ಲಿಗೇ ತಡೆದು, "ಅಯ್ಯಾ ಮಹಾನುಭಾವ....,ಈಗ ನೀನು ಸರಿಯಾಗಿ ಮಾತಾಡ್ತಿದ್ದೀಯಾ...ಕೊನೆಗೂ ಜ್ಞಾನೋದಯ ಆಯ್ತಲ್ಲಾ...ಬೇಗ ಮನೆಗೆ ಹೋಗಿ ಯಾಮಿನಿಗೆ ಎಲ್ಲ ಸತ್ಯವನ್ನೂ ಹೇಳು...", ಎಂದು ಅವಸರಪಡಿಸಿದ. "ಅದೇ ಸಮಸ್ಯೆಯಾಗಿರೋದು ಕಣೋ...ಅವಳಿಗೆ ಹೇಗೆ ಹೇಳಲಿ...ಅವಳು ನನ್ನ ಕ್ಷಮಿಸ್ತಾಳಾ...", ದಿಲೀಪ್ ಪೆಚ್ಚುಮೊಗದಲ್ಲಿ ಹೇಳಿದ. "ಖಂಡಿತಾ ಕ್ಷಮಿಸ್ತಾಳೆ...ನಾನಿಲ್ವಾ...ನಾನೀಗಲೇ ಅವಳಿಗೆ ಫೋನ್ ಮಾಡಿ ಹೇಳ್ತೇನೆ ಬಿಡು...ನೀನು ಹೋಗಿ ಸಾರಿ ಕೇಳು ಅಷ್ಟೇ...ನೀನು ಹೋಗೋದು ಲೇಟ್ ಮಾಡಿದರೆ ಆ ನೀಗ್ರೋ ಯುವಕ ಹಾರಿಸಿಕೊಂಡು ಹೋಗ್ತಾನೆ ನೋಡು...", ಶಂಕರ್ ತಮಾಷೆ ಮಾಡಿದ. ದಿಲೀಪ್ ಸಹ ನಗುತ್ತಾ ಮನೆಗೆ ಹೊರಟ. ಶಂಕರ್ ಯಾಮಿನಿಯ ಜೊತೆ ಮಾತನಾಡಲು ಫೋನ್ ಕೈಗೆತ್ತಿಕೊಂಡ...
                   ದಿಲೀಪ್ ಮನೆ ತಲುಪಿದಾಗ ಮನೆಯೆಲ್ಲಾ ಮೊಂಬತ್ತಿ ದೀಪಗಳಿಂದ ಅಲಂಕೃತಗೊಂಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು!!!

        

         


             
          

Posted by ಮನಸ್ಸಿನಿಂದ ಮನಸ್ಸಿಗೆ at 11:36 PM No comments:
Older Posts Home
Subscribe to: Posts (Atom)

About Me

ಮನಸ್ಸಿನಿಂದ ಮನಸ್ಸಿಗೆ
View my complete profile

Followers

Blog Archive

  • ▼  2019 (3)
    • ▼  October (1)
      •                                       ...
    • ►  June (2)
  • ►  2017 (1)
    • ►  February (1)
  • ►  2016 (1)
    • ►  November (1)
  • ►  2010 (4)
    • ►  May (2)
    • ►  March (2)
  • ►  2009 (6)
    • ►  December (2)
    • ►  September (1)
    • ►  March (2)
    • ►  January (1)
  • ►  2008 (5)
    • ►  December (4)
    • ►  November (1)

ಈ ಜಾಲತಾಣವನ್ನು ಸಿದ್ಧಪಡಿಸಿದವರು

ಈ ಜಾಲತಾಣವನ್ನು ಸಿದ್ಧಪಡಿಸಿದವರು
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ