Wednesday, November 9, 2016



                                                                         ನಾತಿ ಚರಾಮಿ

      ಲಾಸ್ ಏಂಜಲಿಸ್ ನೆಲದ ಮೇಲೆ ಕಾಲಿಟ್ಟಾಗ  ಯಾಮಿನಿ ಬೆದರಿಹೋಗಿದ್ದಳು. ಲಗೇಜ್  ಇರುವ ಟ್ರಾಲಿ ತಳ್ಳಿಕೊಂಡು ಏರ್ ಪೋರ್ಟ್ ನಿಂದ ಹೊರಗೆ ಬಂದು ದಿಲೀಪ್ ಗಾಗಿ ಸುತ್ತಲೂ ಕಣ್ಣಾಡಿಸಿದಳು. ಅವನು ಕಾಣದಿದ್ದುದರಿಂದ ಮೆಲ್ಲಗೆ ನಡುಕ ಪ್ರಾರಂಭವಾಯ್ತು. ಹುಟ್ಟಿ ಬೆಳೆದ ಕೋಟೆಕೊತ್ತಲುಗಳ ಊರು ಚಿತ್ರದುರ್ಗದಿಂದ ಮೊಟ್ಟ ಮೊದಲ ಬಾರಿಗೆ ವಿದೇಶಕ್ಕೆ ಬಂದವಳು. ಅಮೆರಿಕಾ ಯಾವಾಗಲೂ ಕನಸಿನ ಅಮರಾವತಿ ಆಗಿತ್ತು. ಮುಂದೊಂದು ದಿನ ಅಲ್ಲಿಗೇ ಹೋಗಿ ನೆಲೆಸುತ್ತೇನೆಂಬುದನ್ನೇ ಅವಳು ಊಹಿಸಿಯೂ ಇರಲಿಲ್ಲ. ವಯಸ್ಸು ಮೂವತ್ತು ಆಗುತ್ತಾ ಬಂದರೂ ಕಂಕಣಬಲ ಕೂಡಿಬರದಿದ್ದುದರಿಂದ ಕ್ರಮೇಣ ಮದುವೆಯ ಆಸೆಯೂ ಬತ್ತಲು ಆಗಷ್ಟೇ ಆರಂಭವಾದ ಸಮಯದಲ್ಲೇ ಮಿಂಚಿನ ಸಂಚಾರ ತಂದಿತ್ತು ದಿಲೀಪ್ ನ ಸಂಬಂಧ. ಅಮೆರಿಕಾದ ಹುಡುಗ...ಒಳ್ಳೆಯ ಕೆಲಸ...ಲಕ್ಷಣವಾಗಿದ್ದಾನೆ...ಇನ್ನೇನು ತಾನೇ ಬೇಕು...ಮನೆಯವರೆಲ್ಲಾ ಜಾಕ್ ಪಾಟ್ ಹೊಡೆದಷ್ಟು ಸಂಭ್ರಮಿಸಿದರು. ಯಾಮಿನಿಯ ಮದುವೆಯ ಬಗ್ಗೆ ಅವರಿಗೂ ಭರವಸೆ ಕ್ಷೀಣವಾಗಿತ್ತು. ಅಂತಹ  ಸಂದರ್ಭದಲ್ಲಿ ಇಂತಹ ಹುಡುಗ ಸಲೀಸಾಗಿ ಒಪ್ಪಿಕೊಂಡು ಬಂದರೆ ಸಂತೋಷಕ್ಕೆ ಎಲ್ಲೆಯುಂಟೇ?!! ಸಮಯ ಕಡಿಮೆಯಿದೆ...ಬೇಗನೇ ಮದುವೆ ಮಾಡಿಕೊಡಿ ಎಂದು ಹುಡುಗನ ಕಡೆಯವರು ಹೇಳಿದಾಗ ಮನೆಯಲ್ಲಿ ಮ್ಯಾರಥಾನ್ ಓಟ ಶುರುವಾಯಿತು. ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಓಡುತ್ತಾ ಕೆಲಸ ಮಾಡಿದರು.. ಎಲ್ಲರ ಅಚ್ಚರಿಯ ಕಂಗಳ ಮುಂದೆಯೇ ಮದುವೆ ಮುಕ್ತಾಯಗೊಂಡಿತು. ಪ್ರಸ್ತದ ಶಾಸ್ತ್ರಕ್ಕೂ ಇರುವುದಕ್ಕಾಗದೇ ದಿಲೀಪ್ ವಾಪಸ್ಸು ಅಮೆರಿಕಾಗೆ ಹೋಗಬೇಕಾಯ್ತು. "ಮದುವೆಯಾಯ್ತಲ್ಲ ಸಧ್ಯ...ಇನ್ನುಳಿದ ಶಾಸ್ತ್ರಗಳು ಅಮೆರಿಕಾದಲ್ಲೇ ನಡೆಯಲಿ ಬಿಡು...", ಎಂದು ಅಪ್ಪ-ಅಮ್ಮ  ನೆಮ್ಮದಿಯ ುಸಿರು ಬಿಟ್ಟರು. ಯಾಮಿನಿಗೂ ಎಲ್ಲವೂ ಅಯೋಮಯವಾದಂತಾಗಿ ಕನಸು ಕಾಣುವುದನ್ನೂ ಮರೆತಿದ್ದಳು...ಅಥವಾ ಯಾವುದೋ ಒಂದು ಕನಸಿನ ಲೋಕದಲ್ಲಿಯೇ ಇದ್ದೇನೆಂದೂ ಅನ್ನಿಸುತ್ತಿದ್ದಿತು. ಎಂದೂ ಬೇರೆ ಊರಿಗೆ ಒಬ್ಬಳೇ ಹೋಗದವಳು ಇಂದು ಸಾಗರದಾಚೆಯ ನಾಡಿಗೆ ಒಬ್ಬಳೇ ಹಾರಿ ಬಂದಿದ್ದಳು. ಸಂದರ್ಭಗಳು ಹೇಗೆ ಎಲ್ಲವನ್ನೂ ಕಲಿಸಿಬಿಡುತ್ತಲ್ಲವೇ ಎಂದು ಆ ಘಳಿಗೆಯಲ್ಲೂ ತರ್ಕಿಸಿದಳು. ವೀಸಾ ಸಿಕ್ಕ ಕೂಡಲೇ ಮಗಳು ಅಮೆರಿಕಾಗೆ ಹೋಗಿ ಗಂಡನನ್ನು ಸೇರಿಕೊಂಡುಬಿಡಲಿ ಎಂದು ಅಪ್ಪ, ಅತ್ತೆ, ಮಾವ ತೀರ್ಮಾನಿಸಿದ್ದರು. ಅದರಂತೆಯೇ ವೀಸಾ ಬಂದಕೂಡಲೇ ಯಾಮಿನಿಯನ್ನು ಕಳಿಸಿಕೊಟ್ಟಿದ್ದರು. ಮದುವೆ ಸಿದ್ದವಾದ ಘಳಿಗೆಯಿಂದಲೂ ಯಾಮಿನಿ ಸೂತ್ರದ ಗೊಂಬೆಯಾಗಿದ್ದಳು. ಯಾರು ಏನು ಹೇಳಿದರೂ ಸುಮ್ಮನೇ ತಲೆಯಾಡಿಸಿ ಕೇಳುತ್ತಿದ್ದಳು. "ತನಗೇನಾದರೂ ಸ್ವಂತ ಯೋಚಿಸುವ ಬುದ್ದಿಯೇ ಹೋಗಿಬಿಟ್ಟಿದೆಯಾ?!", ಎಂದು ಆಗಾಗ ಅಚ್ಚರಿಯನ್ನೂ ಪಟ್ಟುಕೊಳ್ಳುತ್ತಿದ್ದಳು. ಈಗಲೂ ಸಹ "ಇದು ನಾನೇ ಅಲ್ಲವೇ?!...ನಾನು ಅಮೆರಿಕಾಗೆ ಬಂದಿರುವೆನಾ?...", ಎಂದುಕೊಂಡು ತನ್ನ ಕೈಯನ್ನು ಚಿವುಟಿ ನೋಡಿಕೊಂಡಳು. " ದಿಲೀಪ್ ಯಾಕೆ ಇಷ್ಟು ಹೊತ್ತಾದರೂ ಬಂದಿಲ್ಲ. ಅಕಸ್ಮಾತ್ ಅವನು ಬರದಿದ್ದರೆ  ನಾನೇನು ಮಾಡಲಿ?...ಎಲ್ಲಿಗೆ ಹೋಗಲಿ?!...ದೇವರೇ ಕಾಪಾಡು ತಂದೇ...", ಎಂದು ಮನದಲ್ಲೇ ತಲ್ಲಣಿಸತೊಡಗಿದಳು. ಸುತ್ತಲೂ ಶ್ವೇತ ವರ್ಣದ ಗೊಂಬೆಗಳಂತಹ ಜನರು ತಮ್ಮದೇ ಕೆಲಸದಲ್ಲಿ ಮುಳುಗಿ ಚಲಿಸುತ್ತಿದ್ದರು. ಅವರ ಹಂಸಬಿಳಿ ಬಣ್ಣವನ್ನು ನೋಡಿ, ತನ್ನ ಕೈಗಳನ್ನೊಮ್ಮೆ ನೋಡಿಕೊಂಡಳು. ಕರಿ ಶಿಲೆಯಲ್ಲಿ ಕೆತ್ತಿದಂತೆ ಕಂಡವು. "ಅಯ್ಯೋ..., ನಾನೆಷ್ಟು ಕಪ್ಪಗಿದ್ದೇನೆ. ಚಿತ್ರದುರ್ಗದಲ್ಲೇ ನಾನು ಕಪ್ಪು ಹುಡುಗಿ ಅಂತಾ ಹೆಸರಾಗಿದ್ದೆ. ಇನ್ನು ಇಲ್ಲಿ ಕೇಳಬೇಕೆ?!....ಸೀದಾ ಕಾಂಟ್ರಾಸ್ಟ್ ಬಣ್ಣ...ನಾನು ಕಪ್ಪಗಿದ್ದೇನೆ ಎಂದೇ ಅಲ್ಲವೇ ಮದುವೆ ತಡವಾಗಿದ್ದು. ಯಾವ ಗಂಡು ನೋಡಿದರೂ ಕಪ್ಪು ಬಣ್ಣದಿಂದಾಗಿಯೇ ನನ್ನನ್ನು ಜರಿಯುತ್ತಿದ್ದರು. ಈ ದಿಲೀಪ್ ಅದು ಹೇಗೆ ನನ್ನನ್ನು ಒಪ್ಪಿಕೊಂಡನೋ ಗೊತ್ತಿಲ್ಲ !!!....ಆಶ್ಚರ್ಯ ಆಗುತ್ತೆ....", ಯೋಚಿಸುತ್ತದ್ದವಳ ಕಣ್ಣಾಲಿಗಳು ಮೆಲ್ಲಗೆ ತುಂಬತೊಡಗಿದವು. "ಛೆ...., ನಾನು ಒಬ್ಬಳೇ ಬರಬಾರದಿತ್ತು. ಕಾಣದ ದೇಶ...ದೊಡ್ಡ ನಗರಗಳಲ್ಲಿ ಓಡಾಡಿದವಳಲ್ಲ. ಈಗ ದಿಲೀಪ್ ಬರದಿದ್ದರೆ ಏನು ಮಾಡಲಿ. ಲಗೇಜ್ ತೆಗೆದುಕೊಂಡು ಹೊರಬಂದವರೆಲ್ಲಾ ಹೊರಟು ಹೋದರು. ಪ್ರತಿಯೊಬ್ಬರಿಗೂ ಯಾರೋ ಒಬ್ಬರು ಬಂದು ಎದುರುಗೊಂಡರು. ಎಷ್ಟು ಚೆನ್ನಾಗಿ ಕಾಯುತ್ತಾ ನಿಂತಿದ್ದರು. ಓಡಿ ಬಂದು ಅಪ್ಪಿಕೊಂಡು ಸ್ವಾಗತಿಸಿದರು. ನಾನೊಬ್ಬಳೇ ಸುಮ್ಮನೆ ನಿಂತಿದ್ದೇನೆ...ನಮ್ಮ ದೇಶದಲ್ಲಿಯಾಗಿದ್ದರೆ ಹೀಗೆ ಒಬ್ಬಳೇ ನಿಂತಿದ್ದರೆ ಯಾರಾದರೂ ಬಂದು ವಿಚಾರಿಸುತ್ತಿದ್ದರು. ಇಲ್ಲಿ ಹಾಗಲ್ಲ. ಯಾರೂ ನನ್ನ ಕಡೆ ನೋಡುತ್ತಲೂ ಇಲ್ಲ. ಹೇಗೆ ಯಾರನ್ನಾದರೂ ಮಾತನಾಡಿಸಲಿ....?!," ಯಾಮಿನಿಯ ಕಂಗಳಿಂದ  ಒಂದೊಂದಾಗಿ ಹನಿಗಳು ಜಾರತೊಡಗಿದವು. "ಮೊಬೈಲ್ ನಲ್ಲಿ ಫೋನ್ ಮಾಡೋಣವೆಂದರೆ ಯಾಕೋ ಕರೆ ಹೋಗುತ್ತಿಲ್ಲ. ಅದರಲ್ಲಿ ಚಾರ್ಜ್ ಬೇರೆ ಇಲ್ಲ....", ಅಸಹಾಯಕಳಾಗಿ ನಿಂತಳು. ಅದೇ ಸಮಯಕ್ಕೆ ದಿಲೀಪ್ ಪ್ರತ್ಯಕ್ಷನಾದ. " ಬಾ..., ಕಾರ್ ಬಳಿಗೆ ಹೋಗೋಣ", ಎಂದ. ಅವನನ್ನು ನೋಡಿದ ಕೋಡಲೇ ಯಾಮಿನಿಗೆ ಅಮೂಲ್ಯ ನಿಧಿ ಸಿಕ್ಕಂತಾಯಿತು. ಸಂತೋಷ, ನಾಚಿಕೆ, ಸಂಭ್ರಮಗಳಿಂದ ಅವನನ್ನು ನೋಡಿದಳು. ತನ್ನನ್ನು ನೋಡಿದ ಕೂಡಲೇ ಒಡಿ ಬಂದು ಗಾಢವಾಗಿ ಆಲಿಂಗನ ಮಾಡಿಕೊಳ್ಳುತ್ತಾನೆಂದು ಕಲ್ಪಿಸಿಕೊಂಡಿದ್ದಳು. ಆದರೆ ದಿಲೀಪ್ ನಿರ್ಲಿಪ್ತನಾಗಿ ಕಾರಿನೆಡೆಗೆ ಹೆಜ್ಜೆ ಹಾಕತೊಡಗಿದ. ಬಹುಶಃ ಅವನಿಗೂ ಸಂಕೋಚ, ನಾಚಿಕೆ ಆಗಿರಬಹುದು...ಅವನಿಗೂ ನಾನು ಹೊಸಬಳಲ್ವಾ...ಮದುವೆ ನಿಶ್ಚಯವಾದಾಗಿನಿಂದಲೂ ನಾವಿಬ್ಬರೂ ಸರಿಯಾಗಿ ಮಾತನಾಡಲೇ ಆಗಲಿಲ್ಲ...ಅವನೂ ಬಿಜಿ....ನಾನೂ ಬಿಜಿ...ಸಧ್ಯ, ಬಂದನಲ್ಲಾ", ಎಂದುಕೊಳ್ಳುತ್ತಾ ಅವನನ್ನು ಅನುಸರಿಸಿ. ಕಾರ್ ಬಳಿಗೆ ಬಂದಳು. ದಿಲೀಪ್ ಡಿಕ್ಕಿ ತೆಗೆದು ಲಗೇಜ್ ಇಟ್ಟು ಕಾರ್ ನಲ್ಲಿ ಕುಳಿತು, ಯಾಮಿನಿಗೂ ಕುಳಿತುಕೊಳ್ಳಲು ಹೇಳಿದ. ಕಾರ್ ವೇಗವಾಗಿ ಸಾಗತೊಡಗಿತು. ಡ್ರೈವ್ ಮಾಡುತ್ತಿದ್ದ  ದಿಲೀಪ್ ನನ್ನೇ  ವಾರೆಗಣ್ಣಿನಿಂದ ನೋಡಿದಳು ಯಾಮಿನಿ. "ಅಟ್ ಲೀಸ್ಟ್ ಈಗಲಾದರೂ ಕೇಳಬಹುದಿತ್ತು...ಹೇಗಿತ್ತು ಜರ್ನಿ?...ಹೇಗಿದ್ದೀಯ?... ಅಂತಾ!...ಏನೂ ಮಾತಾಡ್ತಿಲ್ಲವಲ್ಲಾ...!...ನಾನೇ ಮಾತಾಡಿಸಲಾ...", ಎಂದುಕೊಳ್ಳುತ್ತಲೇ, ಮೆಲ್ಲನೆ "ಹೇಗಿದ್ದೀರಿ ದಿಲೀಪ್?....ತುಂಬಾ ಗಾಬರಿಯಾಗಿತ್ತು...ಸಧ್ಯ, ನೀವು ಬಂದಿರಿ", ಎಂದಳು. ಅವಳನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ, "ಗಾಬರಿ ಯಾಕೆ?...ನಾನು ಹೇಳಿದ್ನಲ್ಲಾ...ಬರುತ್ತೇನೆ ಅಂತ....", ಎಂದು ಸಹಜವೆನ್ನುವಂತೆ ಹೇಳಿ ಸುಮ್ಮನಾದ. ಅವನ ಮಾತನ್ನು  ಕೇಳಿ ಯಾಮಿನಿಯ ಮುಖ ಸಣ್ಣದಾಯಿತು. "ಏಕೋ ಮೂಡ್ ಸರಿ ಇಲ್ಲ ಅನ್ನಿಸ್ತಿತೆ....ಅಥವ  ಇವನು ತುಂಬ ಕಡಿಮೆ ಮಾತನಾಡುವವನಿರಬೇಕು...ಆಮೇಲೆ ಕೇಳಿದರಾಯ್ತು...", ಎಂದುಕೊಂಡು ಹೊರಗೆ ನೋಡಿದಳು. ಸುತ್ತಲೂ ವಜ್ರಗಳನ್ನು ಚೆಲ್ಲಿದಂತೆ ಝಗಝಗಿಸುವ ದೀಪಗಳು....ಭವ್ಯವಾದ ಕಾರುಗಳು....", ಬೆರಗಾಗಿ ನೋಡತೊಡಗಿದಳು ಯಾಮಿನಿ. "ತನ್ನ ಮನೆ ಹೇಗಿರಬಹುದು?...ಇನ್ನು ತನ್ನ ಜೀವನ  ಆ ಮನೆಯಲ್ಲಿಯೇ...", ಮನೆಯ ಬಗ್ಗೆ ನೆನಪಿಸಿಕೊಂಡು ಪುಳಕಿತಳಾದಳು. 

        ಮನೆ ತಲುಪಿದಾಗ ಹೃದಯ ನಗಾರಿಯಂತೆ ಹೊಡೆದುಕೊಳ್ಳುತ್ತಿದ್ದಿತು. ಅದೊಂದು ಪುಟ್ಟ ಅಪಾರ್ಟ್ ಮೆಂಟ್. ಅತ್ಯಂತ ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿದ್ದ ಅದು ಯಾಮಿನಿಗೆ ಅರಮನೆಯಂತೆ ಕಂಡಿತು. ಸಂಭ್ರಮ, ನಾಚಿಕೆಯಿಂದಲೇ ಒಳ ಬಂದಳು. "ನೋಡು, ಕಿಚನ್ ಅಲ್ಲಿದೆ. ನನ್ನದು ಊಟ  ಆಯ್ತು. ನಿನಗೆ  ಹಸಿವಾಗಿದ್ದರೆ ಬ್ರೆಡ್, ಬಾಳೆ ಹಣ್ಣು ಇದೆ. ತಿನ್ನು...", ಎನ್ನುತ್ತಾ  ರೂಮಿನೊಳಗೆ ನಡೆದ. ಯಾಮಿನಿಗೆ ಅಳುವೇ ಬಂದಂತಾಯ್ತು. "ಈಗ ತಾನೇ ಬಂದಿದ್ದೇನೆ. ಇಲ್ಲಿಯದೇನೂ ಗೊತ್ತಿಲ್ಲ...ಹೀಗಾ ಹೇಳೋದು...", ಎಂದು ಕೊಂಡಳು. ಹಸಿವೆಯಂತೂ ಆಗುತ್ತಿದ್ದಿತು. ಒಂದು ಬಾಳೆಹಣ್ಣು ತಿಂದು ರೂಮಿಗೆ ಬಂದಳು. ಆಗಲೇ ದಿಲೀಪ್ ಮಲಗಲು ಅಣಿಯಾಗುತ್ತಿದ್ದ. ಅದನ್ನು ನೋಡಿ ಯಾಮಿನಿ ಮತ್ತೇ ನಾಚಿಕೊಂಡಳು. ಅವಳು ತಲೆತಗ್ಗಿಸಿ ನಿಂತಿರುವುದನ್ನು ನೋಡಿ, "ಯಾಮಿನಿ, ಇವತ್ತು ನನಗೆ ಆಫೀಸಿನಲ್ಲಿ ತುಂಬಾ ಕೆಲಸ ಇತ್ತು....ಸುಸ್ತಾಗಿಬಿಟ್ಟಿದ್ದೇನೆ...ಏನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದೇನೆ....ನಾಳೆ ಎಲ್ಲಾ ಹೇಳ್ತೇನೆ....ನಮ್ಮ ಹೊಸ ಜೀವನ ನಾಳೆಯಿಂದ...ಗುಡ್ ನೈಟ್", ಎಂದು ಹೇಳಿ ಬ್ಲ್ಯಾಂಕೆಟ್ ಹೊದ್ದುಕೊಂಡು ಮಲಗಿಬಿಟ್ಟ. ಯಾಮಿನಿಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ಹಾಸಿಗೆಯ ಇನ್ನೊಂದು ತುದಿಯಲ್ಲಿ ಮಲಗಿದಳು. ದಿಲೀಪ್ ನ ನಡುವಳಿಕೆ  ಅಚ್ಚರಿ ಮೂಡಿಸಿತ್ತು. "ಯಾಕೆ?...ನಾನು ಅವನಿಗೆ ಇಷ್ಟವಿಲ್ಲವಾ?...ಅವನು ಒಪ್ಪಿದ್ದಾನೆಂದ ಮೇಲೇ ತಾನೂ ಒಪ್ಪಿದ್ದು...ಅಷ್ಟಕ್ಕೂ ನನ್ನ  ಒಪ್ಪಿಗೆ, ನಿರಾಕಾರ ಯಾರಿಗೆ ಬೇಕಿತ್ತು....ಸ್ವತಃ ನನಗೂ ನನ್ನನ್ನು ಕೇಳಬೇಕೆಂದು ಅನ್ನಿಸಿರಲಿಲ್ಲ. ಹುಡುಗ ಒಪ್ಪಿದ ಮೇಲೆ ಅಂತಿಮ...ಛೆ...ನಾನು ಚೆನ್ನಾಗಿ ಓದಬೇಕಿತ್ತು. ಓದಿ ಏನಾದರೂ ಕೆಲಸ ಮಾಡ್ತಿರಬೇಕಿತ್ತು...ಆಗ ನನ್ನ ಮಾತಿಗೂ ಒಂದು ಬೆಲೆ ಇರುತ್ತಿತ್ತು....ಯಾಕೋ ಗೊತ್ತಿಲ್ಲ....ನಾನು ಎಂದೂ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುತ್ತಲೇ ಇರಲಿಲ್ಲ. ಪುಕ್ಕಲು ಸ್ವಭಾವದವಳಾಗಿಯೇ ಬೆಳೆದೆ....ತಂಗಿಯರು, ತಮ್ಮಂದಿರು ಬೆಳ್ಳಗೆ ಇದ್ದುದೇ ಇದಕ್ಕೆ ಕಾರಣ. ನಮ್ಮ ಮನೆಯಲ್ಲಿ ನಾನೊಬ್ಬಳೇ ಕಡುಗಪ್ಪು. ಮನೆಗೆ ದೃಷ್ಟಿಬೊಟ್ಟು ಇದ್ದಹಾಗೆ ಇದ್ದೀನಿ ಅಂತ ಎಲ್ಲರೂ ಛೇಡಿಸುತ್ತಿದ್ದರು. ನೀನೊಬ್ಬಳೇ ಯಾಕಿಷ್ಟು ಕಪ್ಪಗೆ ಹುಟ್ಟಿದ್ದೀಯ? ಎಂದು ನನ್ನನ್ನೇ ಕೇಳುತ್ತಿದ್ದರು. ಬಣ್ಣ, ರೂಪು ಆಯ್ಕೆ ಮಾಡಿಕೊಳ್ಳುವ ಶಕ್ತಿ ಯಾರಿಗಾದರೂ ಇರುತ್ತಾ?...ಅವರ ಪ್ರಶ್ನೆಗೆ ಏನು ಉತ್ತರಿಸಬೇಕೆಂದು ಗೊತ್ತಾಗುತ್ತಿರಲಿಲ್ಲ. ಸುಮ್ಮನೇ ಪೆಚ್ಚು ನಗೆ ಬೀರಿ ಅಲ್ಲಿಂದ ಮರೆಯಾಗಿಬಿಡುತ್ತಿದ್ದೆ. ಎಲ್ಲರೂ ನಾನೊಂದು ವಿಚಿತ್ರ ಪ್ರಾಣಿಯಂತೆ ನೋಡುತ್ತಿದ್ದುದರಿಂದ ಕೀಳರಿಮೆ ನನ್ನ ನರನಾಡಿಗಳಲ್ಲೂ ವ್ಯಾಪಿಸಿ, ಸ್ವಂತಿಕೆ ಎಂಬುದನ್ನೇ ಮರೆತಿದ್ದೆ. ನಾನು ಕಪ್ಪಗಿದ್ದೇನೆ ನಿಜ...ಆದರೆ ಲಕ್ಷಣವಾಗಿಯೂ ಇದ್ದೇನೆ. ಹಾಗೆಂದು ಕನ್ನಡಿ ಅನೇಕ ಬಾರಿ ಹೇಳಿದೆ. ಹೆತ್ತಮ್ಮ ಬದುಕಿದ್ದಾಗಲೂ ಆಗಾಗ ಹೇಳುತ್ತಿದ್ದಳು. ಅದೇ ಒಂದು ಭರವಸೆಯಿಂದ ಜೀವಿಸಿದ್ದವಳು ನಾನು. ಇನ್ನು ಮುಂದೆ ಹೇಗೋ ಏನೋ...ಹೋಗಿ ಹೋಗಿ ಈ ಬಿಳಿಯರ ನಾಡಿಗೆ ಬಂದಿದ್ದೇನೆ. ಅವರ ಮುಂದೆ ಇನ್ನೂ ಕಪ್ಪಗೆ ಕಾಣುತ್ತೇನೆ...ದಿಲೀಪ್ ನನ್ನನ್ನು ಹೇಗೆ ಟ್ರೀಟ್ ಮಾಡ್ತಾರೋ ಏನೋ....", ಯೋಚಿಸುತ್ತಲೇ ನಿದ್ದೆಗೆ ಶರಣಾದಳು. 

       ಬೆಳಿಗ್ಗೆ ಎದ್ದಾಗ ದಿಲೀಪ್ ಆಗಲೇ ರೆಡಿಯಾಗಿ ಸ್ಯಾಂಡ್ ವಿಚ್ ತಿನ್ನುತ್ತಾ ಟಿ.ವಿಯಲ್ಲಿ ಹವಾಮಾನದ ವಿವರಣೆ ಕೇಳುತ್ತಿದ್ದ. ಅವನಾಗಲೇ ಎದ್ದಿರುವುದನ್ನು ನೋಡಿ, ಯಾಮಿನಿ ಸಂಕೋಚಪಟ್ಟುಕೊಂಡಳು. "ಸಾರಿ, ನಾನು ಲೇಟಾಗಿ ಎದ್ದೆ....ಯಾಕೋ ಎಚ್ಚರ ಆಗಲೇ ಇಲ್ಲ...ರಾತ್ರಿ ನಿದ್ದೇನೂ ತಡವಾಗಿ ಬಂತು...ನೀವಾದರೂ  ಎಚ್ಚರಗೊಳಿಸಬೇಕಿತ್ತು...", ಎಂದಳು. "ಪರವಾಗಿಲ್ಲ...ಒಂದೆರಡು ದಿನ ಜೆಟ್ ಲ್ಯಾಗ್ ಇರುತ್ತೆ...ಆಮೇಲೆ ಸರಿ ಹೋಗುತ್ತೆ...ನಾನು ಆಫೀಸಿಗೆ ಹೋಗ್ಬೇಕು. ಅದಕ್ಕೆ ಎದ್ದೇ...",  ಟಿವಿ.ಯನ್ನು ವೀಕ್ಷಿಸುತ್ತಲೇ ನುಡಿದ ದಿಲೀಪ್. ಅವನು ಸ್ಯಾಂಡ ವಿಚ್ ತಿನ್ನುತ್ತಿರುವುದನ್ನು ನೋಡಿ ," ಅಮ್ಮ,  ಮಾವಿನ ಕಾಯಿ ತೊಕ್ಕು, ಚಟ್ನಿಪುಡಿಗಳನ್ನು ಕೊಟ್ಟಿದ್ದಾಳೆ...ಕೊಡಲಾ?...ಸ್ಯಾಂಡ್ ವಿಚ್ ಜೊತೆ ಚೆನ್ನಾಗಿರುತ್ತೆ...ನೀವು ಪಾಪ, ಒಬ್ಬರೇ ಇದ್ದಿರಿ...ಏನು ಅಡಿಗೆ ಮಾಡಿಕೊಳ್ತಿದ್ರೋ ಏನೋ...ಇನ್ಮೇಲೆ ನಾನೇ ಎಲ್ಲ ಅಡಿಗೆ ಮಾಡ್ತೇನೆ...ನಿಮಗೇನೇನು ಇಷ್ಟ ಹೇಳಿ...ಇವತ್ತು ಅಡಿಗೆ ಏನು ಮಾಡಲಿ...?", ಯಾಮಿನಿ ಉತ್ಸಾಹದಿಂದ ಕೇಳಿದಳು. ತನ್ನ  ಉತ್ಸಾಹಕ್ಕೆ ತಾನೇ ಅಚ್ಚರಿಗೊಂಡಳು. "ಅರೆ, ನಾನು ಇಷ್ಟು ಆಕ್ಟೀವ್ ಇದ್ದೀನಾ...? ಪರವಾಗಿಲ್ವೇ...", ಎಂದು ತನಗೆ ತಾನೇ ಶಹಭಾಶ್ ಗಿರಿ ಕೊಟ್ಟುಕೊಂಡಳು. ಆದರೆ ದಿಲೀಪ್ ನಿರ್ಭಾವುಕನಾಗಿ, "ಏನೂ ಬೇಡ...ನನಗೆ ಅದೆಲ್ಲಾ ಇಷ್ಟ ಇಲ್ಲ...ನನಗೆ ಆ ಚಟ್ನಿಪುಡಿ, ಉಪ್ಪಿನ ಕಾಯಿಯ ಸ್ಮೆಲ್ ಇಷ್ಟ ಆಗೋಲ್ಲ.... ಅಡಿಗೆ ನಿನಗೆ ಮಾತ್ರ ಮಾಡ್ಕೊ...ನನ್ನ ಬಗ್ಗೆ ಯೋಚಿಸಬೇಡ ", ಎಂದ. "ಹಾಗೆಂದರೆ ಹೇಗೆ?... ನೀವು ನಾನು ಮಾಡಿದ ಅಡಿಗೆ ತಿಂದು ನೋಡಿ...ನಾನು ತುಂಬಾ ಚೆನ್ನಾಗಿ ಅಡಿಗೆ ಮಾಡ್ತೇನೆ", ಯಾಮಿನಿ ತನಗೇ ಅರಿವಿಲ್ಲದಂತೆ ಒತ್ತಾಯದಿಂದ ನುಡಿದಳು. "ನೋಡೋಣ...ಈಗ ನಾನು ಆಫೀಸಿಗೆ ಹೋಗ್ಬೇಕು", ಎಂದು ಎದ್ದ. ಯಾಮಿನಿ ಚಡಪಡಿಸಿದಳು, "ಅದನ್ನು ದಿಲೀಪ್ ಗೆ    ಹೇಳ್ಬೇಕಲ್ಲಾ...ಹೇಗೆ ಹೇಳೋದು?...ಹೋದ ಕೂಡಲೇ ಹೇಳು ಅಂತ ಅತ್ತೆ ಹೇಳಿದ್ದರು...ಶ್ರೀಧರ ಸ್ವಾಮಿಗಳೂ ಹೇಳಿದ್ದರು...ಹೇಗೆ ಹೇಳಲಿ?...ದಿಲೀಪ್ ನೋಡಿದ್ರೆ ಆಗಲೇ ಹೊರಟು ನಿಂತಿದ್ದಾರೆ. ಅವರು ಕೇಳೇ ಕೇಳ್ತಾರೆ , ಆಗ ಹೇಳಬಹುದು ಅಂದುಕೊಂಡಿದ್ದೆ. ಆದರೆ ಅವರು ಕೇಳುವ ಲಕ್ಷಣವೇ ಇಲ್ಲ...ರಾತ್ರಿ ತಡವಾಗಿ ಬಂದರೆ...ಏನು ಮಾಡೋದು...ಹೇಳಲೇ ಬೇಕು...ಹೇಗೆ...ಹೇಗೆ ", ಯಾಮಿನಿ ಅಸಹಾಯಕತೆಯಿಂದ ತಪಿಸಿದಳು. ದಿಲೀಪ್ ಹೊಸ್ತಿಲು ದಾಟುತ್ತಿದ್ದ. ಇನ್ನು ಸುಮ್ಮನಿದ್ದರಾಗದು ಎಂದುಕೊಂಡು , ತನ್ನೊಳಗಿದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು, "ನಿಮಗೊಂದು ಮುಖ್ಯವಾದ ಮಾತು ಹೇಳಬೇಕಿದೆ...ಪುರೋಹಿತರು ಮತ್ತು ಅತ್ತೆ ಇಬ್ಬರೂ ಹೇಳಿ ಕಳಿಸಿದ್ದಾರೆ...", ಎಂದಳು ಮೆಲು ದನಿಯಲ್ಲಿ. "ಏನು...ಬೇಗ ಹೇಳು", ದಿಲೀಪ್ ಒಂದು ಹೆಜ್ಜೆ ಬಾಗಿಲಿನಿಂದ ಹೊರಗಿಟ್ಟೇ ಕೇಳಿದ. "ಅದೂ...ಅದೂ...", ತಡವರಿಸಿದಳು ಯಾಮಿನಿ. "ಬೇಗ ಹೇಳ್ತೀಯ...ಇದು ಇಂಡಿಯಾ ಅಲ್ಲ. ಅಮೆರಿಕಾ ಇದು...ಒಂದೊಂದು ಸೆಕೆಂಡಿಗೂ ಬೆಲೆ ಇದೆ", ದಿಲೀಪ್ ಅವಸರಪಡಿಸಿದ. "ಏನಿಲ್ಲ...ನಮ್ಮಿಬ್ಬರ ಪ್ರಸ್ತಕ್ಕೆ ಇವತ್ತು ರಾತ್ರಿ ಒಂಬತ್ತು ಕಾಲಿಗೆ ಮುಹೂರ್ತ ಕೊಟ್ಟಿದ್ದಾರೆ. ಅದು ತಪ್ಪಿದರೆ ಮತ್ತೇ ಮುಂದಿನ ವಾರವೇ ಸುಮುಹೂರ್ತವಂತೆ...", ಮೈಯೆಲ್ಲಾ ನಾಚಿಕೆಯಾಗಿ ನುಡಿದಳು. ಅವಳ ಕಪ್ಪು ಕೆನ್ನೆಗಳೂ ತುಸು ಕೆಂಪಾಗಿದ್ದವು. "ವಾಟ್ ನಾನ್ಸೆನ್ಸ್...ಈ ಇಂಡಿಯಾ ಮೆಂಟಾಲಿಟಿನೇ ಅರ್ಥ ಆಗೋಲ್ಲ...ಅದಕ್ಕೂ ಒಂದು ಮುಹೂರ್ತಾನಾ?!...ನೋಡು, ನನಗೆ ಅದರಲ್ಲೆಲ್ಲಾ ನಂಬಿಕೆಯಿಲ್ಲ. ಅದಕ್ಕೂ ಮೊದಲು ನಾನು ನಿನಗೊಂದು ವಿಷಯ ಹೇಳಬೇಕು...ಸಾಯಂಕಾಲ ಬೇಗ ಬರುತ್ತೇನೆ. ರೆಡಿಯಾಗಿರು...ಹೊರಗೆ ಹೋಗೋಣ", ದಿಲೀಪ್ ಬಾಗಿಲನ್ನು ಜೊರಾಗಿ ಎಳೆದುಕೊಂಡು ದಡದಡನೆ ಹೋದ. ಯಾಮಿನಿ ಎಷ್ಟೋ ಹೊತ್ತು ಶಿಲೆಯಂತೆ ನಿಂತೇ ಇದ್ದಳು. 

          ಸಂಜೆ ಅಲಂಕರಿಸಿಕೊಂಡು ತನ್ನನ್ನು ತಾನು ಲೆಕ್ಕವಿಲ್ಲದಷ್ಟು ಸಾರಿ ಕನ್ನಡಿಯಲ್ಲಿ ನೋಡಿಕೊಂಡಳು ಯಾಮಿನಿ. "ಅಗ್ನಿಪರೀಕ್ಷೆಯಾದರೂ ಇಷ್ಟು ತಲ್ಲಣ ಕೊಡೋಲ್ವೇನೋ...ಬೆಂಕಿಗೆ ಸುಲಭವಾಗಿ ಹಾರಿಬಿಡಬಹುದು. ಆದರೆ ಈ ಅರ್ಥವಾಗದ ಹೊಸ ಗಂಡನಿಗಾಗಿ ಅಲಂಕರಿಸಿಕೊಳ್ಳುವುದು ತುಂಬ ಕಷ್ಟ ಕಷ್ಟ. ದಿಲೀಪ್ ಗೆ ಯಾವ ಬಣ್ಣ ಇಷ್ಟ, ಯಾವ ರೀತಿಯ ಉಡುಗೆ  ಇಷ್ಟ...ಒಂದೂ ಗೊತ್ತಿಲ್ಲ....ದೇವರೇ, ನನ್ನೀ ಅಲಂಕಾರ ಅವನಿಗೆ ಇಷ್ಟ ಆದರೆ ಸಾಕು...", ಎಂದು ಹಪಹಪಿಸಿದಳು.  ಹೇಳಿದ ಸಮಯಕ್ಕೆ ಸರಿಯಾಗಿ ದಿಲೀಪ್ ಬಂದ. ಅವನು ಏನು ಹೇಳುತ್ತಾನೋ ಎಂದು ಯಾಮಿನಿ ಕೌತುಕದಿಂದ ನಿರೀಕ್ಷಿಸತೊಡಗಿದಳು. ಆದರೆ ದಿಲೀಪ್ ಅವಳ ಕಡೆ ತಿರುಗಿಯೂ ನೋಡದೆ, "ಬಾ...ಹೋಗೋಣ", ಎಂದು ಹೊರನೆಡೆದ. ಯಾಮಿನಿ ಮೌನವಾಗಿ ಅವನ ಜೊತೆ ಹೆಜ್ಜೆ ಹಾಕಿದಳು. ಅದೇ ಸಮಯಕ್ಕೆ ಪಕ್ಕದ ಅಪಾರ್ಟ್ ಮೆಂಟ್ ನಿಂದ ನೀಗ್ರೋ ಯುವಕನೊಬ್ಬ ಹೊರಗೆ ಬಂದ. ಯಾಮಿನಿಯನ್ನು ನೋಡಿದವನೇ ಸ್ತಬ್ಧನಾಗಿ ನಿಂತ. ಅವನು ಯಾಕೆ ಹಾಗೆ ನಿಂತನೆಂದು ಇಬ್ಬರೂ ಅಚ್ಚರಿಯಿಂದ ನೋಡತೊಡಗಿದರು. ಕೆಲಕ್ಷಣಗಳ ನಂತರ ಆ ನೀಗ್ರೊ ಯುವಕ ಸಾವರಿಸಿಕೊಂಡು ,"ಓ ಮೈ ಗಾಡ್, ಯೂ ಆರ್ ವೆರಿ ವೆರಿ ಬ್ಯೂಟಿಫುಲ್...", ಎಂದು ಉದ್ಗರಿಸಿದ. ಯಾಮಿನಿಯ ಕಣ್ಣುಗಳು ಅರಳಿದವು. ಏನು ಹೇಳಬೇಕೆಂದು ತೋಚದೆ ದಿಲೀಪ್ ನನ್ನು ನೋಡಿದಳು. ದಿಲೀಪ್ ಕೋಪದಿಂದ,"ಬರ್ತೀಯಾ ಬೇಗ...", ಎಂದು ಗದರಿಸಿ ಮುನ್ನೆಡೆದ. 

         ಕಾರು ವೇಗವಾಗಿ ಚಲಿಸತೊಡಗಿತು. ಯಾಮಿನಿ ಇನ್ನೂ ಶಾಕ್ ನಲ್ಲಿಯೇ ಇದ್ದಳು. "ಏನೆಂದ ಅವನು?!! ನನಗೆ ಬ್ಯೂಟಿಫುಲ್ ಅಂದನಲ್ಲಾ!!! ಆ ಪದವನ್ನು ನಾನು ಹುಟ್ಟಿದಾಗಿನಿಂದಲೂ ಕೇಳಿರಲಿಲ್ಲ....ನನಗೆ...ನನಗೆ ಬ್ಯೂಟಿಫುಲ್ ಅಂದ ಅವನು! ಓಹ್, ಮೊದಲ ಬಾರಿಗೆ ಇಂಥ ಮಾತು ಕೇಳಿದೆ...ನಾನು ಅಮೆರಿಕಾಗೆ ಬಂದದ್ದಕ್ಕಿಂತಲೂ ಇದು ಹೆಚ್ಚು ಥ್ರಿಲ್ ಕೊಟ್ಟಿತು...", ಯಾಮಿನಿ ಅದನ್ನೇ ಯೋಚಿಸುತ್ತಾ ಕುಳಿತಿದ್ದಳು. ಅವಳ ತುಟಿಗಳ ಮೇಲೆ ಕಿರುನಗೆ. ದಿಲೀಪ್ ಅವಳನ್ನು ನೋಡಿ , "ನೋಡು, ಇಲ್ಲಿ ಹುಷಾರಾಗಿರಬೇಕು...ಅದರಲ್ಲೂ ಈ ನೀಗ್ರೋಗಳ ಬಗ್ಗೆ ಬಹಳ ಎಚ್ಚರದಿಂದಿರಬೇಕು....ಗುರುತು, ಪರಿಚಯ ಇಲ್ಲದವರ ಜೊತೆ ಮಾತನಾಡಬೇಡ...ನನಗೆ ಇಷ್ಟವಾಗೋಲ್ಲ... ಅಲ್ಲದೆ ಅವನು ನೀಗ್ರೋ ತಾನೇ...ಅದಕ್ಕೇ ನೀನು ಇಷ್ಟವಾಗಿರ್ತೀಯ ಅಷ್ಟೇ", ಒಂದು ಸಣ್ಣ ವ್ಯಂಗ್ಯ ತುಂಬಿದ ಗಂಭೀರ ದನಿಯಲ್ಲಿ ಹೇಳಿದ. "ಓ...ಹಾಗಿದ್ದರೆ ಅವನು ಸುಮ್ಮನೇ ನನಗೆ ಹೊಗಳಿದ. ನಾನು ಅದನ್ನು ನಿಜ ಅಂದುಕೊಂಡೆನಲ್ಲಾ..., ಚಿತ್ರದುರ್ಗದಲ್ಲೇ ಯಾರೂ ನನ್ನನ್ನು ಹೊಗಳಲಿಲ್ಲ. ಇನ್ನು ಇಂಥ ದಂತದ ಗೊಂಬೆಗಳ ನಾಡಿನಲ್ಲಿ ಹೊಗಳೋಕೆ ಸಾಧ್ಯಾನಾ...ದಿಲೀಪ್ ಹೇಳೋದು ನಿಜ...ನಾನು ಹುಷಾರಾಗಿ ಇರ್ಬೇಕು...", ಯಾಮಿನಿ ಮನಸ್ಸಿನಲ್ಲಿಯೇ ನಿರ್ಧರಿಸಿದಳು. 

         ಸಿನೆಮಾ ಥೇಟರ್ ಮುಂದೆ ದಿಲೀಪ್ ಕಾರು ನಿಲ್ಲಿಸಿದ. ಯಾಮಿನಿಗೆ ಏನೂ ಗೊತ್ತಾಗಲಿಲ್ಲ. ಆದರೂ ಸುಮ್ಮನೇ ಹಿಂಬಾಲಿಸಿದಳು. ಥೇಟರ್ ಒಳಗೆ ಕುಳಿತುಕೊಂಡು ಬೆರಗಿನಿಂದ ಸುತ್ತಲೂ ನೋಡತೊಡಗಿದಳು. "ಅಬ್ಬಾ, ಹೇಗಿದೆಯಲ್ಲಾ ಇದು!!...ನಮ್ಮೂರಲ್ಲಿ ಯಾವಾಗಲೋ ಒಮ್ಮೆ ಬಸವೇಶ್ವರ ಟಾಕಿಸ್ ನಲ್ಲಿ ಸಿನಿಮಾ ನೋಡುತ್ತಿದ್ದೆ. ಎಲ್ಲರೂ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದರೆ ತಾನು ಮಾತ್ರ ಮನೆಯೊಳಗೇ ಇರಲು ಬಯಸುತ್ತಿದ್ದೆ. ಒಬ್ಬೇ ಒಬ್ಬ ಫ್ರೆಂಡ್ ಇರಲಿಲ್ಲ. ತಂಗಿ, ತಮ್ಮಂದಿರೂ ಅಷ್ಟಾಗಿ ಸೇರುತ್ತಿರಲಿಲ್ಲ. ಯಾವಾಗಲೂ ಮನೆಯೊಳಗೆ ಕೆಲಸ ಮಾಡುತ್ತಾ ದಿನ ಕಳೆಯುತ್ತಿದ್ದೆ...ಈಗ ನೋಡು, ಎಂಥ ಸುಯೋಗ ಬಂದಿದೆ. ನಾನಿಲ್ಲಿ ಕುಳಿತಿರುವುದನ್ನು ನನ್ನ ತಂಗಿಯರು ನೋಡಬೇಕಿತ್ತು...ಈ ಸೀಟುಗಳು ಎಷ್ಟು ಚೆನ್ನಾಗಿವೆ...ವಾವ್", ಯಾಮಿನಿ ಸಂಭ್ರಮದಿಂದ ಕುಳಿತಳು. ಸಿನಿಮಾ ಪ್ರಾರಂಭವಾಯ್ತು. ಯಾವುದೋ ಇಂಗ್ಲೀಷ್ ಚಿತ್ರ. ಅರ್ಥವೇ ಆಗುತ್ತಿರಲಿಲ್ಲ. ಆದರೆ ಗಂಡನ ಪಕ್ಕ ಕುಳಿತ ಹೆಮ್ಮೆಯ ಭಾವ ಸಂತಸವನ್ನು ಮೂಡಿಸಿತ್ತು. ಸಿನಿಮಾದಲ್ಲಿ ಇಬ್ಬರು ಹುಡುಗರು ಪರಸ್ಪರ ಪ್ರೀತಿ ಮಾಡುವ ದೃಷ್ಯ ಬಂದಿತು. ಅದನ್ನು ನೋಡಲಾಗದೆ ಯಾಮಿನಿ ಮುಖ ಮುಚ್ಚಿಕೊಂಡಳು. "ನೋ, ಹಾಗೆಲ್ಲಾ ಮಾಡಬಾರದು...ಮ್ಯಾನರ್ಸ್ ಇಲ್ವಾ ನಿನಗೆ?...", ದಿಲೀಪ್ ಗದರಿದ. ಯಾಮಿನಿ ಪೆಚ್ಚಾಗಿ ಸುಮ್ಮನೆ ಕುಳಿತಳು. ಇಂಟರ್ ವೆಲ್ ನಲ್ಲಿ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಆರ್ಡರ್ ಮಾಡಿದ. ಯಾಮಿನಿಗೆ ಸಂತೋಷವಾಯ್ತು. ಪಾಪ್ ಕಾರ್ನ್ ತುಂಬಾ ಚೆನ್ನಾಗಿತ್ತು. ಇಷ್ಟಪಟ್ಟು ತಿನ್ನತೊಗಿದಳು. ದಿಲೀಪ್ ಅವಳ ಬಳಿಗೆ ಬಾಗಿ, "ಯಾಮಿನಿ, ನಿನಗೊಂದು ಸತ್ಯ ಹೇಳಬೇಕು...", ಮೆಲ್ಲಗೆ ಹೇಳಿದ. ಮೊಟ್ಟಮೊದಲಬಾರಿಗೆ ಅವನ ದನಿ ನಯವಾಗಿತ್ತು. ಯಾಮಿನಿಗೆ ರೋಮಾಂಚನವಾಯ್ತು. "ಏನು ಹೇಳಿ...ನನ್ನ ಬಳಿ ಏಕೆ ಸಂಕೋಚ?", ಎಂದು ಪ್ರೀತಿಯಿಂದ ನುಡಿದಳು. "ಏನಿಲ್ಲ...., ನನ್ನ ಅಪ್ಪ-ಅಮ್ಮನ ಒತ್ತಾಯಕ್ಕೆ  ನಿನ್ನನ್ನು  ಮದುವೆಯಾದೆ. ನಾನು ಅಮೆರಿಕನ್ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳ ಹೆಸರು ಹೆಲ್ಗಾ... ನಾವಿಬ್ಬರು ಮದುವೆಯನ್ನೂ ಆಗಿದ್ದೇವೆ...ನೀನು ಇಲ್ಲಿ ಎಷ್ಟು ದಿನ ಬೇಕಾದರೂ ಇರು...ಜೀವನ ಪೂರ್ತಿ ಇರು...ಆದರೆ ನಾವಿಬ್ಬರು ಗಂಡ-ಹೆಂಡತಿಯ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ...",ಎಂದು ಹೇಳಿ, ಮತ್ತೇ ಚಿತ್ರವನ್ನು ನೋಡುವುದರಲ್ಲಿ ಮಗ್ನನಾದ. "ಏನಿವನು....ಎಷ್ಟು ಸಲೀಸಾಗಿ ಹೇಳಿದನಲ್ಲಾ....ಮದುವೆ ಅರ್ಥ ಗೊತ್ತಾ ಇವನಿಗೆ...ಹಾ...ಗಾ...ದ...ರೆ...ನನ್ನ ಮುಂದಿನ ಗತಿ ಏನು....", ಯಾಮಿನಿ ಕಂಗಾಲಾದಳು. "ವಿದೇಶದಲ್ಲಿರುವ ಹುಡುಗರನ್ನು ಮದುವೆಯಾಗಿ ಈ ರೀತಿ ಮೋಸ ಹೋದವರ ಕತೆಗಳನ್ನು ನಾನೂ ಸಾಕಷ್ಟು ಕೇಳಿದ್ದೇನೆ...ಹಾಗೇ ನನಗೂ ಆಗಿಬಿಟ್ಟಿತಲ್ಲಾ...ನಾನು ಹೆಚ್ಚಿಗೆ ಓದಿಲ್ಲ, ಧೈರ್ಯವಿಲ್ಲ....ಹೇಗೆ ಎದುರಿಸಲಿ...", ಅವಳಿಗೆ ಸಿನಿಮಾ ನೋಡಲಿಕ್ಕೇ ಆಗಲಿಲ್ಲ. ಕೈಯಲ್ಲಿದ್ದ ಪಾಪ್ ಕಾರ್ನ್ ಹಾಗೇ ಇಟ್ಟುಬಿಟ್ಟಳು. 
          ಯಾಮಿನಿ ತೀರಾ ದುಃಖಿತಳಾಗಿದ್ದಳು. ದಿಲೀಪ್ ನ ಮಾತುಗಳನ್ನು ಅರಗಿಸಿಕೊಳ್ಳುವುದಕ್ಕೇ ಆಗಲಿಲ್ಲ. ಥೇಟರ್ ನಿಂದ ಹೊರಬರುವಾಗ ಅವಳ  ಎಲ್ಲಾ ಭಾವನೆಗಳು ನುಚ್ಚುನೂರಾಗಿದ್ದವು. ತಾನೊಂದು ಅಸ್ತಿತ್ಬವೇ ಇಲ್ಲದವಳೆಂದು ಅನ್ನಿಸತೊಡಗಿತು....,ಅಮ್ಮ ಹೋದಮೇಲೆ ಅಪ್ಪ ಇನ್ನೊಂದು ಮದುವೆಯಾದರು. ಚಿಕ್ಕಮ್ಮ ತೀರಾ ಮಲತಾಯಿ ಆಗದಿದ್ದರೂ, ತಾಯಿಯೂ ಆಗಿರಲಿಲ್ಲ. ಆಮೇಲೆ ಹುಟ್ಟಿದ ತಮ್ಮ-ತಂಗಿಯರಿಗೆ ಎಲ್ಲಾ ಆದ್ಯತೆ. ಒಳಗೇ ಕೀಳರಿಮೆ, ಭಯ ತುಂಬಿಕೋಡು ಬೆಳೆದ ತನಗೆ ಮದುವೆ ವಿಷಯದಲ್ಲೂ ಅನ್ಯಾಯವಾಯಿತಲ್ಲ...ನಾನು ಹುಟ್ಟಿದ್ದಾದರೂ ಏಕೆ?!", ಯಾಮಿನಿಯ ಮನಸ್ಸು ವಿಲವಿಲನೆ ಒದ್ದಾಡಿತು. ಸುಮ್ಮನೇ ಭಾರವಾದ ಹೆಜ್ಜೆಗಳನ್ನು ಊರುತ್ತಾ ನಡೆಯತೊಡಗಿದಳು.
ದಿಲೀಪ್ ಅವಳೆಡೆಗೆ ತಿರುಗಿ ನೋಡಿ ಹೆಜ್ಜೆಯಿಡತೊಡಗಿದ. ಆಗ ಅಮೆರಿಕನ್  ಮಹಿಳೆಯೊಬ್ಬಳಿಗೆ ಡಿಕ್ಕಿ ಹೊಡೆಯುವಂತಾಯ್ತು. ಆಕೆಯ ಕೈಯಲ್ಲಿದ್ದ ಕೀ ಕೆಳಗೆ ಬಿದ್ತು. "ಓಹ್, ಸಾರಿ", ಎಂದ ದಿಲೀಪ್. "ಇಟ್ಸ್ ಒಕೆ", ಎಂದು ಆಕೆ ತನ್ನ ಕೀ ತೆಗೆದುಕೊಳ್ಳುತ್ತಾ ಯಾಮಿನಿಯನ್ನು ನೋಡಿದಳು. ಒಂದೆರಡು ಕ್ಷಣ ಹಾಗೇ ದಿಟ್ಟಿಸಿ, ದಿಲೀಪ್ ನೆಡೆಗೆ ನೋಡಿ, "ಯೂ ಆರ್ ವೆರಿ ಲಕ್ಕಿ...ಯು ಹ್ಯಾವ್ ಗಾಟ್ ಎ ಬ್ಯೂಟಿಫುಲ್ ವೈಫ್", ಎಂದು ಅಭಿನಂದಿಸಿದಳು. ಈ ಬಾರಿ ಯಾಮಿನಿ ವಿಷಾದದ ನಗೆ ನಕ್ಕಳು.

          ಆ ರಾತ್ರಿ ಮೌನದಲ್ಲೇ ಕಳೆಯಿತು. ಮಾರನೇ ದಿನ ದಿಲೀಪ್ ಆಫೀಸಿಗೆ ಹೋಗುವವರೆಗೂ ಯಾಮಿನಿ ಹೇಗೋ ಕಷ್ಟಪಟ್ಟು ತನ್ನ ದುಃಖವನ್ನು ನಿಯಂತ್ರಿಸಿಕೊಂಡಿದ್ದಳು. ಅವನು  ಹೋದಕೂಡಲೇ  ಅವಳ ದುಃಖದ ಕಟ್ಟೆ ಒಡೆಯಿತು. ಜೋರಾಗಿ ಬಿಕ್ಕಿ ಬಿಕ್ಕಿ ರೋಧಿಸತೊಡಗಿದಳು. ಅದೆಷ್ಟೋ ಹೊತ್ತು ಹಾಗೆ ಒಂದೇ ಸಮನೆ ಅಳುತ್ತಿದ್ದವಳಿಗೆ ಬಾಗಿಲನ್ನು ಮೆಲ್ಲಗೆ ಬಡಿದ ಶಬ್ಧ ಕೇಳಿಸಿತು. ಕಣ್ಣು ಒರೆಸಿಕೊಂಡು, ಮುಂದೆ ಮಾಡಿದ್ದ ಬಾಗಿಲನ್ನು ಪೂರ್ತಿ ತೆರೆದು ನೋಡಿದಳು. ಪಕ್ಕದ ಮನೆಯ ನೀಗ್ರೋ ಯುವಕ ನಿಂತಿದ್ದ. "ಸಾರಿ...., ಎನಿ ಪ್ರಾಬ್ಲಮ್...ಮೇ ಐ ಹೆಲ್ಪ್ ಯು", ಎಂದು ಕೇಳಿದ. "ಇಲ್ಲ...ಇಲ್ಲ...ಥ್ಯಾಂಕ್ಸ್", ಎಂದು ಹೇಳಿ ಬಾಗಿಲು ಹಾಕಿಕೊಂಡಳು. ಅದೇ ಸಮಯಕ್ಕೆ ಊರಿಂದ ತಂದೆಯ ಫೋನ್ ಬಂದಿತು. ಉಮ್ಮಳಿಸುತ್ತಿದ್ದ ದುಃಖವನ್ನು ನಿಯಂತ್ರಿಸಿಕೊಂಡು, ಫೋನ್ ತೆಗೆದುಕೊಂಡಳು. ಅತ್ತಲಿಂದ ಅವಳ ತಂದೆ, "ಯೆಂಗಿದಿಯವ್ವಾ?....ಯಾಕೋ ಸಂಕ್ಟ ಆಯ್ತಾ ಇತ್ತು. ನಿದ್ದೆ ಬರ್ಲಿಲ್ಲ...ಅಲ್ಲಿ ಯೆಲ್ಲಾ ಚೆಂದಾಗೈತ ಅವ್ವಾ?!!", ವಾತ್ಸಲ್ಯದಿಂದ ಕೇಳಿದರು. "ಹೂನಪ್ಪಾ...ಎಲ್ಲಾ ಚೆನ್ನಾಗಿದೆ...ನೀವೆಲ್ಲಾ ಹೇಗಿದ್ದೀರಿ?", ಎಂದು ಸಾವರಿಸಿಕೊಂಡು ಕೇಳಿದಳು. ಮಗಳ ದನಿ ಕೇಳಿ ನೆಮ್ಮದಿಯ ಉಸಿರು ಬಿಟ್ಟ ತಂದೆ, ನೋವನ್ನು ಬಚ್ಚಿಟ್ಟುಕೊಂಡ ಮಗಳ  ನಡುವೆ ಸ್ವಲ್ಪಹೊತ್ತು ಅದೂಇದೂ ಮಾತುಕತೆ ನಡೆಯಿತು. ಕೊನೆಗೆ ತಂದೆ, "ಯೇನೋ ಕಣವ್ವ.., ನಿಂಗೆ ಕೊನೆಗಾರಾ ವಳ್ಳೇದಾಯ್ತಲ್ಲ...ಅಷ್ಟು ಸಾಕು ನನ್ನವ್ವಾ...ಯಿಲ್ಲಿ ಊರಾಗೆ ಎಲ್ರೂ ಹಂಗೇ ಯೇಳ್ತಾರೆ...ಏನ್  ರಾಮಪ್ಪ, ಯೆಂತಾ ನಸೀಬೋ ನಿಂದು...ಹಿರೇ ಮಗೀನ್ನ ವೊಳ್ಳೇ ತಾವ ಸೇರ್ಸಿದ್ಯಲ್ಲೋ...ಅಮೇರಿಕಾಗೆ ಓಗ್ಬಿಟ್ಲಲ್ಲೋ ನಿನ್ ಮಗ್ಳೂ....ಅಂತ ಅಂತಾರವ್ವಾ... ಆ ಮಾತ್ ಗಳ್ನ ಕೇಳ್ದಾಗ ಯೇಟು ಸಂತೋಸ ಆಯ್ತದೆ ಮಗ್ಳೇ...ಇಂಗೇ ಇರವ್ವಾ...ಚೆಂದಾಕಿರವ್ವಾ", ಎಂದು ಹೃದಯ ತುಂಬಿ ಹೇಳಿದಾಗ, ಯಾಮಿನಿಗೆ ದುಃಖ ತಡೆಯಲೇ ಆಗಲಿಲ್ಲ. "ಆಯ್ತಪ್ಪಾ..., ಇನ್ನು ಏನೂ ಕೆಲಸ ಆಗಿಲ್ಲ...ಆಮೇಲೆ ಫೋನ್ ಮಾಡ್ತೇನೆ...", ಎಂದು ಹೇಳಿ ಫೋನಿಟ್ಟುಬಿಟ್ಟಳು. 

               ಸಂಜೆಯ ಹೊತ್ತಿಗೆ ಮನಸ್ಸು ಒಂದು ಸ್ಥಿಮಿತಕ್ಕೆ ಬಂದಿತು. ಆಘಾತದ ಭಾವ ಹೋಗಿ, ಮುಂದೆ ಏನು ಮಾಡಬೇಕೆಂದು ಯೋಚಿಸತೊಡಗಿದಳು. ಬಾಲ್ಕನಿಯಲ್ಲಿ ನಿಂತು ಯೋಚಿಸತೊಡಗಿದಳು. ಸಮೀಪದಲ್ಲಿಯೇ ಇದ್ದ ಪ್ಲೇ ಗ್ರೌಂಡಿನಲ್ಲಿ ಕೆಲವು ಮಕ್ಕಳು ಆಟವಾಡುತ್ತಿದ್ದರು. ನೀಗ್ರೋ ಯುವಕ ಅಂಗಡಿಗೆ ಹೋಗಿದ್ದನೋ ಏನೋ, ಸಾಮಾನುಗಳಿದ್ದ ಕವರ್ ಗಳನ್ನು ಹಿಡಿದು ಮನೆಯ ಕಡೆ ಬರುತ್ತಿದ್ದ. ಆಗ ಒಂದು ಮಗು ಜೋರಾಗಿ ನೆಲದ ಮೇಲೆ ಬಿದ್ದುಬಿಟ್ಟಿತು. ನೀಗ್ರೋ ಯುವಕ ತನ್ನ ಕೈಯಲ್ಲಿದ್ದ ಕವರ್ ಗಳನ್ನು ಹಾಗೇ ಕೈಬಿಟ್ಟು ಬಿದ್ದ ಮಗುವಿನೆಡೆಗೆ ಧಾವಿಸಿದ. ಆ ಮಗುವನ್ನು ಎತ್ತಿಕೊಂಡು ಸಮಾಧಾನ ಪಡಿಸಿದ. ನಂತರ ಆ ಮಗುವನ್ನು ಅದರ ಮನೆಯ ಮುಂದೆ ಇಳಿಸಿ, ತನ್ನ ಪಾಡಿಗೆ ಕವರ್ ಗಳನ್ನು ತೆಗೆದುಕೊಂಡು ತನ್ನ ಮನೆಗೆ ಹೋದ. ಮೇಲೆ ನಿಂತು ನೋಡುತ್ತಿದ್ದ ಯಾಮಿನಿ ಅವನಿಗೆ ಕಾಣಿಸುತ್ತಿರಲಿಲ್ಲ. ಯಾಮಿನಿಗೆ ಮಾತ್ರ ಅವನು ಮಾಡಿದ್ದೆಲ್ಲಾ ಚೆನ್ನಾಗಿ ಕಂಡಿತು. ಎಷ್ಟು ಒಳ್ಳೆಯ ಹುಡುಗ...ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬೇಕೆಂದರೆ ಯಾರೂ ನೋಡದಿರುವ ಸಂದರ್ಭದಲ್ಲಿ ಆ ವ್ಯಕ್ತಿ ಹೇಗೆ ನಡೆದುಕೊಳ್ಳುತ್ತಾನೆಂದು ನೋಡಬೇಕಂತೆ...ಒಂದು ಸಣ್ಣ ಕೆಲಸವಾದರೂ ಸರಿ, ಅವನ ಇಡೀ ವ್ಯಕ್ತಿತ್ವವನ್ನು ತೋರಿಸುತ್ತದೆಯಂತೆ..., ಈ ಮಾತನ್ನು ಅಪ್ಪ  ಒಂದೆರಡು ಬಾರಿ  ಚಿಕ್ಕಮ್ಮನಿಗೆ ಕೇಳುವ ಹಾಗೆ ಹೇಳಿದ್ದರು ಎಂದು ಯಾಮಿನಿ ಯೋಚಿಸುತ್ತಿದ್ದಂತೆಯೇ ದಿಲಿಪ್ ನ ಫೋನ್ ಬಂದಿತು. "ಇವತ್ತು ಸಂಜೆ ನನ್ನ ಕೆಲವು ಫ್ರೆಂಡ್ಸ್ ಬರ್ತಿದ್ದಾರೆ...ನಮ್ಮನ್ನು ವಿಶ್ ಮಾಡಲು...ಏನಾದರೂ ಅಡುಗೆ ಮಾಡು", ಎಂದು ಹೇಳಿದ. "ಹೃದಯ ಹೀನರು..., ಎಷ್ಟು ಸಹಜವಾಗಿ ಆರ್ಡರ್ ಮಾಡ್ತಾರೆ...", ಎಂದುಕೊಂಡರೂ ಅವಳಲ್ಲಿದ್ದ ಮಾತೃಹೃದಯ ಏನು ಅಡಿಗೆ ಮಾಡಲಿ ಎಂದು ಯೋಚಿಸಿತು. "ಸಾಮಾನುಗಳು ಯಾವುದೂ ಇಲ್ಲ....", ಯಾಮಿನಿ ವಿಷಾದದಿಂದ ನುಡಿದಳು. "ಓಕೆ, ನಾನು ಬೇಗನೇ ಬರ್ತೇನೆ.  ಆರ್ಗ್ಯಾನಿಕ್ ಮಾಲ್ ನಲ್ಲಿ ಎಲ್ಲಾ ಬಗೆಯ ಇಂಡಿಯನ್ ಸಾಮಾನು ಸಿಗುತ್ತೆ. ಇಬ್ಬರೂ ಹೋಗೋಣ. ಏನು ಬೇಕೋ ಅದನ್ನು ನೀನೇ ತೆಗೆದುಕೋ...", ದಿಲೀಪ್ ಹೇಳಿದವನೇ ಫೋನ್ ಇಟ್ಟ. "ಇವರಿಗೆ ಏನೂ ಅನ್ನಿಸೋಲ್ವ...ತಂದೆ-ತಾಯಿಗೋಸ್ಕರ ನನ್ನನ್ನು ಮದುವೆಯಾದರಂತೆ...ನಾನೇನು ನಿರ್ಜೀವ ಗೊಂಬೆಯೇ...ನನಗೇನು ಭಾವನೆಯೇ ಇರೋಲ್ವೆ...ನೋಡೋಕ್ಕೆ ಚೆನ್ನಾಗಿಲ್ಲ ಎಂದ ಮಾತ್ರಕ್ಕೆ ನನಗೆ ಹೃದಯವೇ ಇರೋಲ್ವ...ಹೆಚ್ಚು ಓದಿಲ್ಲ, ಮಲತಾಯಿ ಬಳಿ ಬೆಳೆದವಳು, ಬಡವರ ಮನೆ ಹುಡುಗಿ....ಏನು ಮಾಡಿದರೂ ನಡೆಯುತ್ತೆ ಅನ್ನೋ ದರ್ಪ...", ಯಾಮಿನಿ ಬೇಸರದಿಂದಲೇ ರೆಡಿಯಾದಳು. 

               ದಿಲೀಪ್ ಜೊತೆ ಆರ್ಗ್ಯಾನಿಕ್ ಮಾಲ್ ತಲುಪಿದಾಗ ಯಾಮಿನಿ ಕ್ಷಣಕಾಲ  ಎಲ್ಲವನ್ನೂ ಮರೆತಳು. ಆ ಬೃಹತ್ ಮಾಲ್ ಒಂದು ಊರಿನ ಹಾಗೆ ಭಾಸವಾಯ್ತು. ದಿಲೀಪ್ ಭಾರತದ ಸಾಮಾನುಗಳು ಸಿಗುವ ಕಡೆ ಕರೆದುಕೊಂಡು ಹೋದ. ಯಾಮಿನಿ ತನ್ನ ಕಣ್ಣುಗಳನ್ನೇ ನಂಬಲಿಲ್ಲ.  ಭಾರತದ  ಎಲ್ಲಾ ಸಾಮಾನುಗಳೂ ಅಲ್ಲಿದ್ದವು. "ಏನು ಅಡಿಗೆ ಮಾಡಲಿ?", ಎಂದು ದಿಲೀಪ್ ನನ್ನು ಕೇಳಿದಳು. "ಏನಾದರೂ ಮಾಡು...ಇಲ್ಲಿಯ ಅಡುಗೆ ತಿಂದೂ ತಿಂದೂ ಎಲ್ಲರಿಗೂ ಬೇಜಾರಾಗಿರುತ್ತೆ...ನಿಮ್ಮ ದೇಸೀ ಅಡುಗೆಯನ್ನೇ ಮಾಡು...ನಿನಗೆ ಯಾವುದು ಚೆನ್ನಾಗಿ ಬರುತ್ತದೋ ಅದನ್ನೇ ಮಾಡು...ಅದಕ್ಕೆ ಬೇಕಾದ ಸಾಮಾನೆಲ್ಲಾ ತೆಗೆದುಕೊ..", ದಿಲೀಪ್ ಹೇಳಿದಾಗ, ಯಾಮಿನಿ ಕ್ಷಣಕಾಲ ಯೋಚಿಸಿ, ಬಿಳಿಹೋಳಿಗೆ -ದಪ್ಪ ಮೆಣಸಿನ ಕಾಯಿ ಪಲ್ಯ, ಬಿರಂಜಿ ಅನ್ನ, ಮೆಣಸಿನ ಸಾರು, ಹಪ್ಪಳ ಸಂಡಿಗೆ....ಎಂದು ಒಂದು ದೊಡ್ಡ ಮೆನುವನ್ನೇ ಸಿದ್ದಪಡಿಸಿಕೊಂಡಳು. ಎಲ್ಲಾ  ಸಾಮಾನನ್ನೂ ತೆಗೆದುಕೊಂಡ ನಂತರ  ಯಾಮಿನಿ, "ಮನೆಯಲ್ಲಿ ಲತ್ತುಡಿ ಇದೆಯೇ...", ಎಂದಳು. ಇಲ್ಲ  ಎಂದ ದಿಲೀಪ್, "ಅದಕ್ಕೆ ರೋಲರ್ ಅಂತಾರಲ್ಲಾ...ಅದನ್ನೂ ಒಂದು ತೆಗೆದುಕೊಂಡರಾಯ್ತು" ಎಂದು ಹೇಳಿ ದೊಡ್ಡದೊಂದು ರೋಲರ್ ತೆಗೆದುಕೊಂಡು ಬಂದ. ಎಲ್ಲಾ ಸಾಮಾನನ್ನೂ ತೆಗೆದುಕೊಂಡಾದ ಮೇಲೆ ಬಿಲ್ಲಿಂಗ್ ಕೌಂಟರ್ ಹತ್ತಿರ ಬಂದು ಕ್ಯೂನಲ್ಲಿ ನಿಂತರು. ಕ್ಯೂನಲ್ಲಿ ನಿಂತ ಓರ್ವ ಅಮೇರಿಕನ್ ಮಹಿಳೆ ಯಾಮಿನಿಯನ್ನು ನೋಡಿ, "ಯೂ ಆರ್ ವೆರಿ ಬ್ಯೂಟಿಫುಲ್", ಎಂದಳು. ಯಾಮಿನಿ ನಕ್ಕು "ಥ್ಯಾಂಕ್ಸ್" ಎಂದು ವಾರೆಗಣ್ಣಿನಲ್ಲಿ ದಿಲೀಪ್ ನನ್ನು ನೋಡಿದಳು. ದಿಲೀಪ್ ಅದನ್ನು ಕೇಳಿಸಿಕೊಳ್ಳದವನಂತೆ ಬೇರೆ ಕಡೆ ಮುಖ ತಿರುಗಿಸಿದ. ಬಿಲ್ಲಿಂಗ್ ಮಾಡಿಸಿದ ನಂತರ ಕೌಂಟರ್ ನಲ್ಲಿದ್ದ ಅಮೆರಿಕನ್ ವ್ಯಕ್ತಿ, "ಹೇ ಬ್ಯೂಟಿಫುಲ್ ಲೇಡಿ, ವಿಸಿಟ್ ಎಗೈನ್", ಎಂದ. ಅಲ್ಲಿ ಬೇರೆ ಭಾರತೀಯರು ಇದ್ದರೂ ಯಾಮಿನಿಗೊಂದೇ ಆ ಮಾತನ್ನು ಹೇಳಿದ. ಹೀಗೆ ಅಲ್ಲಿ ಐದಾರು ಜನರಿಂದ ಯಾಮಿನಿಗೆ ಬ್ಯೂಟಿಫುಲ್ ಎಂಬ ಹೊಗಳಿಕೆ ಸಿಕ್ಕಿತು. 

                     ಮಾಲ್ ನಿಂದ ಹೊರಗೆ ಬಂದಾಗ  ಎದುರಿಗೆ  ಒಂದು ಬಿಲ್ಡಿಂಗ್ ಮೇಲೆ "ಯು ಕೆನ್ ಟ್ಯಾನ್" ಎಂದಿತ್ತು. ಯಾಮಿನಿಗೆ ಅದನ್ನು ನೋಡಿ ಕುತೂಹಲವಾಯ್ತು. "ಅದೇನು, ಯೂ ಕೆನ್ ಟ್ಯಾನ್" ಎಂದಿದೆ. ನಮ್ಮ ದೇಶದಲ್ಲಿ ಟ್ಯಾನ್  ಎಂಬ ಭಯಕ್ಕೇ ಎಲ್ಲರೂ ಹೆದರುತ್ತಾರೆ. ನನ್ನ ತಂಗಿಯರಂತೂ ಟ್ಯಾನ್ ಆಗ್ತೀವಿ ಅಂತ ಬಿಸಿಲಿನಲ್ಲಿ ಹೊರಗೆ ಹೋಗೋದಕ್ಕೂ ಇಷ್ಟಪಡೋಲ್ಲ...", ಎಂದಳು ಸಹಜವಾಗಿ. ಅವಳು ಹಾಗೆ ಕೇಳಿದ್ದಕ್ಕೆ ದಿಲೀಪ್ ಗೆ ಸಿಟ್ಟು ಬಂದಿತು. "ನಿನಗೆಲ್ಲಾ ವಿವರಿಸೋದಕ್ಕೆ ಆಗೋಲ್ಲ...ನಿನ್ನ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊ...", ಎಂದು ತುಸು ಏರಿದ ದನಿಯಲ್ಲಿ ಗದರಿದ. ಸಮೀಪದಲ್ಲಿಯೇ ಕೆಲವು ಮಂದಿ ಅಮೇರಿಕನ್ನರು ನಿಂತಿದ್ದರು. ಅವರಲ್ಲಿ ಓರ್ವ ಮಹಿಳೆ ಯಾಮಿನಿಯನ್ನೇ ನೋಡುತ್ತಿದ್ದಳು. ಯಾಮಿನಿಯ ನೋಟ, ಅವಳ ಹಾವ ಭಾವದಿಂದ ದಿಲೀಪ್ ನನ್ನು ಏನು ಕೇಳಿದಳೆಂದು ಊಹಿಸಿದಳು. ದಿಲೀಪ್ ಗದರುವಿಕೆಯೂ ಅರ್ಥವಾಯ್ತು. ಅವಳೂ ಸಹ ಯಾಮಿನಿಗೆ. "ಯು ಆರ್ ಬ್ಯೂಟಿಫುಲ್...", ಎಂದು  ಹೇಳಿದಳು. ಯಾಮಿನಿ ಮುಗುಳ್ನಕ್ಕಳು. ಆಗ ಆ ಮಹಿಳೆ, "ಇಲ್ಲಿ ನಾವೆಲ್ಲಾ ನಿನ್ನಂತಹ ಬಣ್ಣಕ್ಕೆ ಹಾತೊರೆಯುತ್ತೇವೆ. ಅದಕ್ಕೇ ಇಲ್ಲಿ ಬ್ಯೂಟಿ ಪಾರ್ಲರ್ ಗಳಲ್ಲಿ ಟ್ಯಾನ್ ಮಾಡಿ ಸ್ವಲ್ಪ ವಾದರೂ ಕಪ್ಪು ಬಣ್ಣ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೇ ಅಂತಹ ಪಾರ್ಲರ್ ಗಳ ಮುಂದೆ ಯು ಕೆನ್ ಟ್ಯಾನ್ ಅಂತ ಬೋರ್ಡ್ ಹಾಕಿರುತ್ತಾರೆ. ನೀನು ಅದೃಷ್ಟವಂತೆ...ದೇವರೇ ನಿನಗೆ ಇಂತಹ ಸುಂದರ ಬಣ್ಣ ಕೊಟ್ಟಿದ್ದಾನೆ...", ಎಂದು ಹೇಳಿ, ದಿಲೀಪ್ ಗೆ ,"ಯು ಆರ್ ಬ್ಲೆಸ್ಡ್ ಟು ಹ್ಯಾವ್ ಹರ್", ಎಂದು ಮಾರ್ಮಿಕವಾಗಿ ನೋಡಿದಳು. "ಓ..., ಅದಕ್ಕೇ ದಿಲೀಪ್ ಅದರ ಬಗ್ಗೆ ಹೇಳಲು ಅವಾಯ್ಡ್ ಮಾಡಿರಬೇಕು...", ಎಂದುಕೊಂಡು ಸುಮ್ಮನಾದಳು ಯಾಮಿನಿ.
         ಅಲ್ಲಿಂದ ಹೊರಟು ಮನೆಯಕಡೆ ಹೊರಟರು. ಆ ರಸ್ತೆ ಸ್ವಲ್ಪ ನಿರ್ಜನವಾಗಿತ್ತು. ಮನೆ ಬೇಗ ತಲುಪಬೇಕೆಂದು ದಿಲೀಪ್ ಆ ದಾರಿಯಲ್ಲಿ ಸಾಗತೊಡಗಿದ. ಸ್ವಲ್ಪದೂರ ಹೋದಾಗ ಎದುರಿಗೆ ಒಂದು ದೊಡ್ಡ ಟ್ರಕ್ ಅಡ್ಡ ಬಂದು ನಿಂತಿತು. ದಾರಿ ತುಂಬಾ ಕಿರಿದಾಗಿದ್ದರಿಂದ ಮುಂದೆ ಹೋಗಲಾಗದೆ ದಿಲೀಪ್ ಕಾರ್ ನಿಲ್ಲಿಸಿ, ಟ್ರಕ್ ಡ್ರೈವರ್ ಗೆ ವಾಪಸ್ಸು ಹೋಗಲು ಕೂಗಿ ಹೇಳಿದ. ಅದೇ ಸಮಯಕ್ಕೆ  ಒಬ್ಬ ದೈತ್ಯ ಓಡಿಬಂದು, ದಿಲೀಪ್ ಗೆ ಚಾಕು ತೋರಿಸಿ ಹಣ ಕೊಡಲು ಹೆದರಿಸಿದ. ಯಾಮಿನಿ ಬೆಚ್ಚಿಹೋದಳು. ಅವಳಿಗೆ ಇದು ತೀರಾ ಅನಿರೀಕ್ಷಿತವಾಗಿತ್ತು. ಗಾಬರಿಯಿಂದ ನಡುಗತೊಡಗಿದಳು. ದಿಲೀಪ್ ಹಣ ಕೊಡಲು ನಿರಾಕರಿಸಿದ. ಆಗ ದೈತ್ಯ ಅವನ ಹೊಟ್ಟೆಗೆ ಜೊರಾಗಿ ಹೊಡೆದ. ದಿಲೀಪ್ ನೋವಿನಿಂದ ಕೂಗಿದ. ಅಷ್ಟು ಹೊತ್ತೂ ಗಾಬರಿಯಿಂದ ನೋಡುತ್ತಾ ಕುಳಿತಿದ್ದ ಯಾಮಿನಿಗೆ ಅದೆಲ್ಲಿಂದ ಧೈರ್ಯ ಬಂದಿತೋ ಏನೋ, ಹಿಂದಿನ ಸೀಟಿನಲ್ಲಿದ್ದ ರೋಲರ್ ತೆಗೆದುಕೊಂಡು, ಕಾರಿನಿಂದ ಚಂಗನೆ ಇಳಿದು ಬಂದು ಆ ದೈತ್ಯನ ಹಿಂದಲೆಗೆ ಜೋರಾಗಿ ಬೀಸಿ ಹೊಡೆದಳು. ಆತ ಆ ಒಂದೇ ಏಟಿಗೆ ಜ್ಞಾನ ತಪ್ಪಿ ಕೆಳಗೆ ಬಿದ್ದ. ದಿಲೀಪ್ ತಕ್ಞಣ ಅವನ ಕೈಯಲ್ಲಿದ್ದ ಚಾಕು ತೆಗೆದುಕೊಂಡ. ಟ್ರಕ್ ಡ್ರೈವರ್ ಇಳಿದು ಬರುವ ಮುಂಚೆಯೇ ಯಾಮಿನಿಗೆ ಕಾರ್ ಹತ್ತಲು ಹೇಳಿ, ತಾನೂ ಕಾರ್ ಹತ್ತಿ, ಸ್ವಲ್ಪ ಹಿಂದೆ ತೆಗೆದುಕೊಂಡು, ಅಲ್ಲಿ ಇದ್ದ ಕವಲು ದಾರಿಯಲ್ಲಿ ಸೊಯ್ಯನೆ ಮುಂದೆ ಹೋಗಿಬಿಟ್ಟ.ಇದೆಲ್ಲಾ ಮಿಂಚಿನ ವೇಗದಲ್ಲಿ ಜರುಗಿತು.  ಸ್ವಲ್ಪ ದೂರ ಹೀಗೇ ಸಾಗಿದ ಮೇಲೆ ಮುಖ್ಯ ರಸ್ತೆ ಸಿಕ್ಕಿತು. ಅಲ್ಲಿಂದ ಮನೆಯ ದಾರಿಯನ್ನು ಹಿಡಿದು ಮನೆಗೆ ಬಂದರು. ಮನೆಯೊಳಗೆ ಬಂದು ಸೇರಿಕೊಂಡ ಮೇಲೆಯೇ ಇಬ್ಬರೂ ಸಮಾಧಾನದ  ಉಸಿರು ಬಿಟ್ಟದ್ದು!!!

           ಯಾಮಿನಿ ಅಡುಗೆ ಮಾಡಲು ಅಣಿಯಾದಳು. ಅವಳು ವೇಗವಾಗಿ ಅಡುಗೆ ಮಾಡುವುದನ್ನು ನೋಡಿದ ದಿಲೀಪ್, "ಏನಾದರೂ ಹೆಲ್ಪ್ ಬೇಕಾ?", ಎಂದು ಕೇಳಿದ. "ಪರವಾಗಿಲ್ಲ...ನನಗೆ ಒಬ್ಬಳೇ ಮಾಡಿ ಅಭ್ಯಾಸ ಇದೆ..., ನೀವು ಬೇರೆ ಕೆಲಸ ನೋಡಿಕೊಳ್ಳಿ", ಎಂದಳು.  ಸ್ವಲ್ಪ ಹೊತ್ತಾಗುವಷ್ಟರಲ್ಲೇ ಗೆಳೆಯರು ಒಬ್ಬೊಬ್ಬರಾಗಿ ಬಂದರು. ಆರು ಜನ  ಆಪ್ತ ಗೆಳೆಯರು ಬಂದ ಮೇಲೆ ಪಾರ್ಟಿ ಶುರುವಾಯ್ತು. ಅವರೇ ಬಂದು ಯಾಮಿನಿಯನ್ನು ಮಾತನಾಡಿಸಿ, ಉಡುಗೊರೆ ನೀಡಿದರು. ಅವರಲ್ಲಿ ಶಂಕರ್ ಎನ್ನುವ ಭಾರತೀಯನೂ ಇದ್ದ. ಅವನು ಯಾಮಿನಿಯನ್ನು ಕನ್ನಡದಲ್ಲೇ ಮಾತನಾಡಿಸಿದ್ದರಿಂದ ಯಾಮಿನಿಗೂ ಖುಷಿಯಾಯ್ತು. "ನಾನೂ ಚಿತ್ರದುರ್ಗ ಜಿಲ್ಲೆಯವನೇ...ನೀವೂ ಚಿತ್ರದುರ್ಗದವರೆಂದು ತಿಳಿದು ತುಂಬಾ ಸಂತೋಷವಾಯ್ತು. ನನ್ನ ಹೆಂಡತಿ ತುಮಕೂರಿನವಳು...ಅವಳ ಪರಿಚಯ ಮಾಡಿಸ್ತೇನೆ...ನಿಮಗೆ ಒಳ್ಳೇ ಕಂಪನಿಯಾಗುತ್ತೇ...ನಿಮಗೆ ಏನು ಸಹಾಯ ಬೇಕಿದ್ದರೂ ಕೇಳಿ... ,ನಾನೂ ದಿಲೀಪ್ ತುಂಬಾ ಫ್ರೆಂಡ್ಸ್. ಒಟ್ಟಿಗೇ ಅಮೆರಿಕಾಗೆ ಬಂದಿದ್ದು. ಒಂದೇ ಕಂಪೆನಿಯಲ್ಲಿ ಕೆಲಸ ಮಾಡ್ತಿದ್ದೇವೆ..", ಎಂದೂ ಹೇಳಿದಾಗ ಯಾಮಿನಿಗೆ ಏನೋ ಒಂದು ರೀತಿಯ ಆಸರೆ ಸಿಕ್ಕಂತಾಗಿ ಆತ್ಮೀಯತೆಯಿಂದ ನೋಡಿದಳು. ಹತಾಶೆಯಿಂದ ಕಂಗಾಲಾಗಿದ್ದ ಯಾಮಿನಿಗೆ ಶಂಕರ ತೋರಿದ ಆತ್ಮೀಯತೆ ಅಪಾರ ಧೈರ್ಯವನ್ನು ನೀಡಿತು. ಒಳ್ಳೆಯ ಮನಸ್ಸಿನ ಶಂಕರ ಒಳ್ಳೆಯ ಮಾತುಗಾರ ಕೂಡ.  ಅವನ ಜೊತೆ ಯಾರು ಮಾತನಾಡಿದರೂ ಸಾಕು ನಂಬಿಕೆ, ವಿಶ್ವಾಸದ ಭಾವನೆಗಳನ್ನು ಹೊಂದಿಬಿಡುತ್ತಿದ್ದರು. ಗೆಳೆಯರೆಲ್ಲರ ತಮಾಷೆ, "ನೀನು ಆಪ್ತಸಮಾಲೋಚಕ ಆದರೆ ಚೆನ್ನಾಗಿರುತ್ತೆ. ನಿನ್ನ ಮಾತೊಂದೇ ಸಾಕು ಆತ್ಮವಿಶ್ವಾಸ ತುಂಬಲು" ಎಂಬುದಾಗಿತ್ತು. ಅಂತಹುದರಲ್ಲಿ ಒಂಟಿಯಾಗಿ ಪರದೇಶದಲ್ಲಿ ವಿಲವಿಲನೆ ತಳಮಳಿಸುತ್ತಿದ್ದ ಯಾಮಿನಿ ಶಂಕರನಲ್ಲಿ ಸಾಕ್ಷಾತ್ ದೇವರನ್ನೇ ಕಂಡಿದ್ದರಲ್ಲಿ ಅಚ್ಚರಿಯಿಲ್ಲ. ಅವನಿಗೆ "ಅಣ್ಣಾ" ಎಂದೇ ಕರೆಯಲಾರಂಭಿಸಿದಳು. 

              ಬ್ರಹ್ಮಾಂಡ ರುಚಿಯ ಊಟವನ್ನು ಎಲ್ಲರೂ ಸವಿದರು. ದಿಲೀಪ್ ಸಹ ಅಷ್ಟು ರುಚಿಯ ಊಟವನ್ನು ಎಂದೂ ಮಾಡೇ ಇಲ್ಲ ಎಂದುಕೊಂಡ. ಗೆಳೆಯರೆಲ್ಲಾ ಯಾಮಿನಿಯ ಕೈರುಚಿಯನ್ನು ಕೊಂಡಾಡಿದರೂ ಅವನು ಮಾತ್ರ ಮೇಲೆ ತೋರ್ಪಡಿಸಿಕೊಳ್ಳಲಿಲ್ಲ. ಶಂಕರನ ಸೂಕ್ಷ್ಮ ಕಣ್ಣುಗಳು ಅದನ್ನು ಗಮನಿಸಿದವು. ಊಟದ ನಂತರ ಮತ್ತೇ ಹರಟುತ್ತಾ ಕುಳಿತರು. ಶಂಕರ, "ಅಲ್ಲಮ್ಮಾ ಯಾಮಿನಿ, ಎಲ್ಲಾ ಸರಿ....ಅಪ್ಪಟ ದೇಸೀ ಅಡುಗೆಯನ್ನೇ ಮಾಡಿರುವೆ. ಆದರೆ ದುರ್ಗದ ಸ್ಪೆಷಲ್ ಮೆಣಸಿನಕಾಯಿ ಬೋಂಡಾ ಮಾಡಿಲ್ಲವಲ್ಲಾ...?", ಎಂದ. "ಅದೂ ನನಗೆ ಚೆನ್ನಾಗಿ ಬರುತ್ತೆ...ಆದರೆ , ನಿಮಗೆಲ್ಲಾ ಖಾರ ಅನ್ನಿಸುತ್ತೆ ಅಂತ ಮಾಡಲಿಲ್ಲ". ಯಾಮಿನಿ ಹೇಳಿದಾಗ, "ನೋ...ನೋ...ನಮಗೆಲ್ಲಾ ಇಷ್ಟವಾಗುತ್ತೆ...ಈಗಲೂ ಸಮಯ ಮಿಂಚಿಲ್ಲ...ಇನ್ನೈದು ನಿಮಿಷಕ್ಕೆ ಕಾಫಿ ಬೇಕು ನಮಗೆ...ಅದರ ಜೊತೆ ತಿನ್ನಲು ಚೆನ್ನಾಗಿರುತ್ತೆ...ನಾನೂ ನಿನಗೆ ಹೆಲ್ಪ್ ಮಾಡ್ತೇನೆ...ಇಬ್ಬರೂ ಸೇರಿ ಮಾಡೋಣ ಬಾ...ಇವರೆಲ್ಲಾ ಮಾತಾಡ್ತಾ ಇರ್ಲಿ", ಎನ್ನುತ್ತಾ ಅಡುಗೆ ಮನೆಗೆ ಹೋದ. ಬೋಂಡ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿರುವಾಗ ಶಂಕರ, "ನೀನು ನನ್ನನ್ನು ಅಣ್ಣಾ ಅಂತ ಕರೆದಿದ್ದೀಯ...ಆ ಸಲಿಗೆಯಿಂದ ಕೇಳ್ತಿದ್ದೀನಿ...ವೈಯಕ್ತಿಕ ವಿಷಯ ಕೇಳ್ತಿದ್ದೀನಿ ಅಂತ ತಪ್ಪು ತಿಳೀಬೇಡ...ಮೊನ್ನೆ ನೀನೇನೋ ತುಂಬಾ ಹೊತ್ತು ಅಳ್ತಾ ಇದ್ದೆಯಂತೆ...ನಿಮ್ಮ ಪಕ್ಕದ ಮನೆಯ ನೀಗ್ರೋ ಯುವಕ ನನಗೆ ಫೋನ್ ಮಾಡಿ ಹೇಳಿದ. ಅವನಿಗೆ ತುಂಬಾ ಗಾಬರಿಯಾಗಿದ್ದರಿಂದ ನನಗೆ ತಿಳಿಸಿದ. ನಾನೂ, ದಿಲೀಪ್ ತುಂಬಾ ಕ್ಲೋಸ್ ಫ್ರೆಂಡ್ಸ್ ಅಂತಾ ಅವನಿಗೆ ಗೊತ್ತು. ತುಂಬಾ ಒಳ್ಳೇ ಹುಡುಗ ಆತ. ಯಾವಾಗಲೋ ಒಮ್ಮ ನನ್ನ ಫೋನ್ ನಂಬರ್ ಅವನಿಗೆ ಕೊಟ್ಟಿದ್ದೆ....ಅದಿರಲಿ, ಮನೆಯವರನ್ನು ಮಿಸ್ ಮಾಡಿಕೊಳ್ಳೋದು ಸಹಜ...ಅದಕ್ಕೇ ಅತ್ತಿದ್ದರೆ ಓಕೆ...ದಿಲೀಪ್ ಏನಾದರೂ ಅಂದನಾ....ಸ್ವಲ್ಪ ಮುಂಗೋಪಿ ಆತ...ಅವನೇನಾದರೂ ಬೈದಿದ್ದರೆ ಹೇಳು...ಸರಿಯಾಗಿ ಬುದ್ದಿ ಹೇಳಿ ಸರಿ ಮಾಡ್ತೇನೆ...ಅವನು ನನಗೊಬ್ಬನಿಗೇ ಬಗ್ಗೋದು...ನಿನ್ನ ಬಳಿ ಮಾತಾಡಬೇಕು ಅಂತಾನೇ ಈ ಪಾರ್ಟಿಯ ಪ್ಲ್ಯಾನ್ ಮಾಡಿದೆ", ಅನುನಯದ ಮಾತಿನಲ್ಲಿ ನುಡಿದ. ಯಾಮಿನಿಗೆ ಇನ್ನು ತಡೆದುಕೊಳ್ಳುವುದಕ್ಕೇ ಆಗಲಿಲ್ಲ. ಯಾರ ಬಳಿಯೂ ಹೇಳಿಕೊಳ್ಳಲಾಗದೆ , ಒಳಗೆ ಧಗದಹಿಸುತ್ತಿದ್ದ ಜ್ವಾಲಾಮುಖಿಯ ಶಾಖವನ್ನು ತಡೆಯಲಾಗದೆ ಏಕಾಂಗಿಯಾಗಿ ತಪಿಸುತ್ತಿದ್ದ ಯಾಮಿನಿ, "ಅಣ್ಣಾ..., ನನ್ನ ನೋವನ್ನು ಹೇಗೆ ತಾನೇ ತಡೆದುಕೊಳ್ಳಲಿ....ನೀವೇ ಹೇಳಿ...?...ನಿಮ್ಮ ಆಪ್ತ ಗೆಳೆಯನ ವಿಷಯ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ...ಅವರು ಹೆಲ್ಗಾನ್ನ ಮದುವೆಯಾಗಿದ್ದಾರಲ್ವಾ....ಆ ವಿಷಯ ನನಗೆ ಹೇಳಿದರು. ಇನ್ನು ನಾನು ಇಲ್ಲಿ ಹೇಗಿರಲಿ?....ಎಲ್ಲಿಗೆ ಹೋಗಲಿ?...ಅಪ್ಪನಿಗೆ ಏನೆಂದು ಹೇಳಲಿ?...ಅವರು ಮದುವೆ ಮಾಡಿದ ಸಂತಸದಲ್ಲಿದ್ದಾರೆ...ಈ ವಿಷಯ ಅವರಿಗೆ ಗೊತ್ತಾದರೆ  ಹೇಗೆ ತಡೆದುಕೊಂಡಾರು....ನನಗೆ ತುಂಬಾ ಸಂಕಟ, ದುಃಖ  ಆಗ್ತಾ  ಇದೆ....ದಾರೀನೇ ಕಾಣಿಸ್ತಿಲ್ಲ...ಹಾಗಂತ, ದಿಲೀಪ್ ಹೆಲ್ಗಾನ್ನ ಬಿಟ್ಟು ನನ್ನನ್ನು ಹೆಂಡತಿ ಅಂತ ಸ್ವೀಕರಿಸಿದರೂ ನಾನು ಅವರನ್ನು ಪತಿ ಅಂತ ಒಪ್ಪಲಾರೆ...ನಾನು ಕಪ್ಪಗಿರಬಹುದು...ಆದರೆ ನನಗೂ ಆತ್ಮಾಭಿಮಾನ ಇರುತ್ತಲ್ವಾ...ಏನು ನಿರ್ಧಾರ ತೆಗೆದುಕೊಳ್ಳಲಿ ಅಂತಾನೇ ಗೊತ್ತಾಗುತ್ತಿಲ್ಲ...", ಬಿಕ್ಕಿ ಬಿಕ್ಕಿ ಅತ್ತಳು. "ದಿಲೀಪ್ ಹೆಲ್ಗಾನ್ನ ಮದುವೆಯಾಗಿದ್ದಾನಾ?...ನನಗೇ ಗೊತ್ತಿಲ್ವಲ್ಲಾ?!!!....ಸಾಧ್ಯವೇ ಇಲ್ಲ...ಇಲ್ಲಾ ಯಾಮಿನಿ, ಇದರಲ್ಲೇನೋ ಮೋಸವಿದೆ....ನನಗೆ ಎರಡು ದಿನ ಟೈಮ್ ಕೊಡು. ಸತ್ಯ ಏನು ಅಂತ ತಿಳಿದುಕೊಳ್ತೇನೆ...ಅಲ್ಲೀ ತನಕ ನೀನು ದಿಲೀಪನನ್ನು ಏನೂ ಕೇಳಬೇಡ...ಈ ಅಣ್ಣನ ಮೇಲೆ ಭರವಸೆ ಇಡು", ಶಂಕರ ಗೊಂದಲಗೊಂಡರೂ ಸಮಾಧಾನ ಪಡಿಸಿದ. ಅವನ ಮಾತಿನ ದೃಢತೆಗೆ ಯಾಮಿನಿಯ ಹೃದಯ ಸಮ್ಮತಿಸಿತು. ಅದು ಬಿಟ್ಟು ಅವಳಿಗೆ ಬೇರೆ ಆಯ್ಕೆಯೂ ಇರಲಿಲ್ಲ....

          ಎರಡು ದಿನಗಳ ನಂತರ , "ದಿಲೀಪ್,  ಆಫೀಸ್  ಆದಮೇಲೆ ನಾವಿಬ್ಬರೂ ಹೊರಗೆ ಡಿನ್ನರ್ ಗೆ ಹೋಗೋಣ. ನಿನ್ನ ಕೆಲಸ ಉಳಿದಿದ್ದರೆ ಹೆಲ್ಗಾಗೆ ಮಾಡಲು ಹೇಳಿಬಿಡು. ಬೇಗ ಬಾ... ಸ್ವಲ್ಪ ಡಿಸ್ಕಸ್ ಮಾಡಬೇಕು...", ಶಂಕರ ಹೇಳಿದಾಗ ದಿಲೀಪ್ ಒಪ್ಪಿಗೆಯಿಂದ ತಲೆಯಾಡಿಸಿದ. ಈ ರೀತಿ ಅವರಿಬ್ಬರು ಡಿನ್ನರ್ ಗೆ ಹೋಗೋದು ಹೊಸತೇನಲ್ಲಾ. ವಾರದಲ್ಲಿ ಒಂದು ಬಾರಿಯಾದರೂ ಹೀಗೆ ಹೋಗುವುದು ವಾಡಿಕೆ. 

          ಡಿನ್ನರ್ ಮುಗಿಸಿ, ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಇಬ್ಬರೂ ಕಾರಿನ ಬ್ಯಾನೆಟ್ ಮೇಲೆ ಸುಖಾಸೀನರಾಗಿ ಕುಳಿತರು. ಹೀಗೆ ಆಗಸವನ್ನು ದಿಟ್ಟಿಸುತ್ತಾ ಕುಳಿತರೆಂದರೆ ಅದು ಅವರ ಆತ್ಮಾವಲೋಕನದ ಸಮಯವೆಂದು ಅರ್ಥ. ಒಬ್ಬರು ಪ್ರಶ್ನೆ ಕೇಳಿದರೆಂದರೆ ಇನ್ನೊಬ್ಬರು ಸತ್ಯವನ್ನೇ ಹೇಳಬೇಕು. ಇದು ಅವರಿಬ್ಬರ ನಡುವೆಯಾದ ಅಲಿಖಿತ  ಒಪ್ಪಂದ. ಅವರ ಅಂತರಂಗಗಳೇ ಬರೆದ  ಈ ಶಾಸನವನ್ನು ಅವರೆಂದೂ ಮುರಿದಿಲ್ಲ. ಆ ವಿಶ್ವಾಸದಿಂದಲೇ ಶಂಕರ , "ದಿಲೀಪ್, ಪೀಠಿಕೆಯೇನೂ ಬೇಡ...ನೇರವಾಗಿ ಕೇಳ್ತಿದ್ದೇನೆ..., ಹೆಲ್ಗಾ ನಿನ್ನ ಅಸಿಸ್ಟೆಂಟ್  ನಿಜ. ಆದರೆ ನಿನಗಿಂತ ಹದಿನೈದು ವರ್ಷ ದೊಡ್ಡವಳು. ಮದುವೆಯಾಗಿ ನಾಲ್ಕು ಮಕ್ಕಳಿರುವ ಆ ಹಿರಿಯ  ಮಹಿಳೆಯನ್ನು ನೀನು ಯಾವಾಗ ಮದುವೆಯಾದೆ?...ಅಥವ ನನಗೆ ತಿಳಿಯದ ಬೇರೆ ಹೆಲ್ಗಾ ನಿನ್ನ ಜೀವನದಲ್ಲಿ ಇದ್ದಾಳ?", ಗಂಭೀರವಾಗಿ ಕೇಳಿದ. ದಿಲೀಪ್ ಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಶಂಕರನಿಂದ  ಈ ಪ್ರಶ್ನೆ ಬರುತ್ತದೆಂದು ಲವಲೇಶದಷ್ಟೂ ಊಹಿಸಿರಲಿಲ್ಲ.  ಮೌನದಿಂದ ಕುಳಿತ. ಶಂಕರ್ ಸಹ ಸುಮ್ಮನಿದ್ದ. ಸ್ವಲ್ಪ ಹೊತ್ತಿನ ಮೌನದ ನಂತರ , ದಿಲೀಪ್ ಶಂಕರ್ ನ ಭುಜದ ಮೇಲೆ ತಲೆಯಿಟ್ಟು ಅಳತೊಡಗಿದ. ಶಂಕರ್ ಏನೂ ಮಾತನಾಡಲಿಲ್ಲ. ಸ್ವಲ್ಪಹೊತ್ತು ಅತ್ತ ನಂತರ ದಿಲೀಪ್ ಕಣ್ಣೊರೆಸಿಕೊಂಡು ನಿಧಾನವಾಗಿ ಹೇಳಲಾರಂಭಿಸಿದ. "ಶಂಕರ್, ಹುಡುಗಿ ನೋಡಿದ್ದೇವೆಂದು ಅಮ್ಮ ಫೋನ್ ಮಾಡಿ ಹೇಳಿದಾಗ, ಹುಡುಗಿಯ ಬಗ್ಗೆ ಕಲ್ಪನಾ ಲೋಕವನ್ನು ಕಟ್ಟಿಕೊಂಡೇ ಇಂಡಿಯಾಕ್ಕೆ ಹೋದೆ. ಅಲ್ಲಿಗೆ ಹೋಗಿ ಯಾಮಿನಿಯನ್ನು ನೋಡಿದಾಗ ಹತಾಷನಾದೆ. ನಾನು ಅವಳನ್ನು ಮದುವೆಯಾಗುವುದು ಸಾಧ್ಯವೇ ಇಲ್ಲ ಅಂತ ಅಪ್ಪ-ಅಮ್ಮನಿಗೆ ಹೇಳಿದರೆ ಅವರು ಒಪ್ಪಲೇ ಇಲ್ಲ.  ಇಷ್ಟು ಹೊಂದುವ ಜಾತಕ ಇನ್ನೆಲ್ಲೂ ಸಿಗುವುದಿಲ್ಲ. ಮೇಲಾಗಿ ತುಂಬಾ ಒಳ್ಳೆಯ ಗುಣದ ಹುಡುಗಿ. ನೀನು ಅವಳನ್ನು ಮದುವೆಯಾಗದಿದ್ದರೆ ನಾವು ನಿನ್ನ ಪಾಲಿಗೆ ಇಲ್ಲ ಎಂದೇ ಭಾವಿಸು ಎಂದು ಉಗ್ರ ಹಠ ಹಿಡಿದರು. ಎಷ್ಟು ಪರಿಪರಿಯಾಗಿ ಕೇಳಿಕೊಂಡರೂ ತಮ್ಮ ಹಠ ಬಿಡಲಿಲ್ಲ. ಅನ್ಯ ಮಾರ್ಗವಿಲ್ಲದೆ ನಾನು ಮದುವೆಗೆ ಒಪ್ಪಿದೆ. ಆದಕೂಡಲೇ ಕೆಲಸದ ನೆಪ ಹೂಡಿ ವಾಪಸ್ ಬಂದೆ. ಮತ್ತೇ ಹಠ ಮಾಡಿ ಯಾಮಿನಿಯನ್ನು ಇಲ್ಲಿಗೆ ಕಳಿಸಿದರು. ಅವಳದೇನೂ ತಪ್ಪಿಲ್ಲ. ಆದರೆ ಅವಳನ್ನು ಸ್ವೀಕರಿಸಲು ಮನಸ್ಸು ಒಪ್ಪಲಿಲ್ಲ. ಅವಳೂ ನನ್ನ ಆಸೆ ಬಿಡಲಿ ಎಂದು ಮದುವೆಯಾಗಿದೆ ಎಂದು ಸುಳ್ಳು ಹೇಳಿದೆ. ತಕ್ಷಣಕ್ಕೆ ಹೆಲ್ಗಾ ಹೆಸರು ನೆನಪಿಗೆ ಬಂದು, ಅದೇ ಹೆಸರನ್ನು ಹೇಳಿದೆ...,ಅಷ್ಟೇ ಕಣೋ..."!!!ದಿಲೀಪ್ ಹೇಳಿದಾಗ, " ಅಯ್ಯೋ ಗೂಬೆ...ಅಷ್ಟೇನಾ ಕಾರಣ...ಯಾಮಿನಿ ಕಪ್ಪು ಎಂಬುವುದು ಬಿಟ್ಟರೆ ಏನೋ ಕಡಿಮೆಯಾಗಿದೆ?! ಎಂಥ ಒಳ್ಳೇ ಹುಡುಗಿ ಕಣೋ ಅವಳು...ನಿನ್ನ ಹಳೇ ಕತೆ ಮರೆತುಬಿಟ್ಯಾ...ಯಾಕೆ...ಎರಡು ವರ್ಷದ ಹಿಂದೆ ಮಾರ್ಥ ಎಂಬ ಅಮೆರಿಕದ ಅಚ್ಚ ಬಿಳಿ ಸುಂದರಿ ನಿನ್ನ ದುಡಿಮೆಯನ್ನೆಲ್ಲಾ ಸ್ವಾಹಾ ಮಾಡಿ, ನಿನಗೆ ಕೈಕೊಟ್ಟು ನ್ಯೂಯಾರ್ಕ್ ಗೆ ಹೋದಳಲ್ಲಾ...ಅದು ಮರೆತು ಹೋಯ್ತಾ...ಬಣ್ಣದಲ್ಲಿ ಏನಿದೆಯೋ...ಹಾಗೆಂದು ಕಪ್ಪಗಿರುವವರೆಲ್ಲಾ ಒಳ್ಳೆಯವರೆಂದು ಅರ್ಥವಲ್ಲ...ಕಪ್ಪಗಿರಲಿ, ಬೆಳ್ಳಗಿರಲಿ...ನೋಡಬೇಕಾದ್ದು ಹೃದಯದ ಬಣ್ಣ. ನಿನ್ನ ಅದೃಷ್ಟ...ಯಾಮಿನಿಯದು ಹಾಲಿನಂಥ ಮನಸು...", ಶಂಕರ್ ವೇದನೆಯಿಂದ ನುಡಿದ. ಮತ್ತೇ ಇಬ್ಬರ ನಡುವೆ ಮೌನ. "ಶಂಕರ್..., ನಾನು ಇಷ್ಟು ಹೊತ್ತು ಒಂದು ಭಾಗವನ್ನು ಮಾತ್ರ ಹೇಳಿದೆ....ಇನ್ನೊಂದು ಭಾಗವನ್ನು ಹೇಳಲು ನಾಚಿಕೆಯಾಗ್ತಾ ಇದೆ...ಅದೇನೆಂದರೆ...ಯಾಮಿನಿ ಎಂದರೆ ಸ್ವಲ್ಪವೂ ಇಷ್ಟ ಆಗದೆ ಇದ್ದುದರಿಂದ ಅವಳಿಗೆ ಹಾಗೆ ಹೇಳಿದೆ. ಎಂಥ ಆಘಾತದ ಸುದ್ದಿ ಅವಳಿಗೆ... ಹಾಗೆ ಹೇಳಿದ್ದಕ್ಕೆ ನನಗೂ ಒಳಗೇ ನೋವಾಯ್ತು. ಆದರೂ ಮೇಲೆ ತೋರಿಸಿಕೊಳ್ಳಲಿಲ್ಲ. ನಾನು ಮೆದುವಾದರೆ ಅವಳೆಲ್ಲಿ ಆಸೆ ಇಟ್ಟುಕೊಳ್ಳುತ್ತಾಳೋ ಅಂಥ. ಅವಳು ಕಪ್ಪು , ಹೆಚ್ಚು ಓದಿಲ್ಲ, ಸೋಶಿಯಲ್ ಬಿಹೇವಿಯರ್ ಗೊತ್ತಿಲ್ಲ...ಎಂಬ ಕಾರಣಕ್ಕೆ ಅಸಹ್ಯಿಸಿಕೊಂಡೆ. ಆದರೆ ಹೋದಲ್ಲೆಲ್ಲಾ ಅವಳನ್ನು ಇಲ್ಲಿಯ ಜನ ಬ್ಯೂಟಿಫುಲ್, ಬ್ಯೂಟಿಫುಲ್  ಎಂದು ಹೊಗಳಿದಾಗ ರೂಪದ ಪರಿಕಲ್ಪನೆ ಮೆಲ್ಲನೆ ಬದಲಾಗತೊಡಗಿತು. ನಾನು ಮದುವೆಯಾಗಿದೆ ಎಂದು ಹೇಳಿ, ಕಟುವಾಗಿ ನಡೆದುಕೊಂಡರೂ ಅವಳು ನನ್ನನ್ನು ಗೌರವದಿಂದಲೇ ಕಂಡಳು. ಸಹನೆಯಿಂದಲೇ ನಡೆದುಕೊಂಡಳು. ಅತ್ತು ಕಿರುಚಾಡಿ, ರಂಪ ಮಾಡದೆ ಸಂಯಮದಿಂದ ಇದ್ದಳು. ಆಗ ಅವಳ ಸಂಸ್ಕೃತಿ, ಸಂಸ್ಕಾರ  ಇಷ್ಟವಾಯಿತು. ತನ್ನ ಜೀವನವೇ ಅಲ್ಲೋಲ ಕಲ್ಲೋಲವಾಗಿದ್ದರೂ, ಒಳಗೇ ಯಾತನೆಯನ್ನು ಅನುಭವಿಸುತ್ತಿದ್ದರೂ,  ಮನೆಗೆ ಅತಿಥಿಗಳು ಬರುತ್ತಾರೆ ಎಂದಕೂಡಲೇ ಎಲ್ಲವನ್ನೂ ಮರೆತು ರುಚಿಯಾದ ಅಡುಗೆ ಮಾಡಿ ಅನ್ನಪೂರ್ಣೆಯಂತೆ ಬಡಿಸಿದಳಲ್ಲಾ...ಆಗ ಅವಳ ಹಿರಿಯ ಗುಣ  ಇಷ್ಟವಾಯ್ತು....ಇನ್ನೂ ಒಂದು ವಿಶೇಷವೆಂದರೆ ಮಾಲ್ ನಿಂದ ಬರುವಾಗ  ಒಂದು ಸಿನಿಮೀಯ ಘಟನೆ ನಡೆಯಿತು. ದೈತ್ಯನೊಬ್ಬ ನನ್ನ ಮೇಲೆ ಅಟ್ಯಾಕ್ ಮಾಡಿದ. ಆಗ ಅವಳು ತೋರಿದ ದೈರ್ಯ, ಸಮಯಪ್ರಜ್ಞೆ ಬೆರಗು ಹುಟ್ಟಿಸಿತು. ಚೂಡಿದಾರದ ದುಪ್ಪಟ್ಟಾವನ್ನು ಸೊಂಟಕ್ಕೆ ಬಿಗಿದು ಕಟ್ಟಿ, ರೋಲರ್ ಹಿಡಿದು ಅವನ ತಲೆಗೆ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ್ದನ್ನು ನೋಡಿದಾಗ ಸಾಕ್ಷಾತ್ ದುರ್ಗದ ಒನಕೆ ಓಬವ್ವನೇ ನೆನಪಾದಳು. ನಾನು ಅವಳಿಗೆ ಕೊಟ್ಟ ನೋವಿಗೆ ನನ್ನನ್ನು ದ್ವೇಷಿಸಬೇಕಿತ್ತು. ಆದರೆ ಅವಳು ಎಷ್ಟು ನಿಷ್ಕಲ್ಮಶವಾಗಿ ಮನೆಯ ಕೆಲಸ ಮಾಡುತ್ತಿದ್ದಾಳೆಂದರೆ ಆಶ್ಚರ್ಯ ಆಗುತ್ತೆ. ಆ ದುಃಖದಲ್ಲೂ ಅವಳು ಮನೆಯನ್ನು ಕನ್ನಡಿಯ ಹಾಗೆ ಶುಭ್ರವಾಗಿ ಇಟ್ಟುಕೊಂಡಿದ್ದಾಳೆ. ಅವಳು ಬಂದಮೇಲೆ ಮನೆಯ ರೂಪವೇ ಬದಲಾಯಿತು.... ಅವಳ ಗೃಹಿಣಿಯ ರೂಪ ಅತಿ ಸುಂದರ ಅನ್ನಿಸುತ್ತಿದೆ... ಧರ್ಮೇಚ, ಅರ್ಥೇಚ, ಕಾಮೇಚ ನಾತಿ ಚರಾಮಿ ಎಂದು ಮದುವೆಯಲ್ಲಿ  ಹೇಳಿದ್ದು ನಾನು....ಆದರೆ ಯಾಮಿನಿಯೇ ಅದನ್ನು ಜೀವನ ಪರ್ಯಂತ ಪಾಲಿಸುತ್ತಾಳೇನೋ ಎಂದೆನಿಸುತ್ತಿದೆ...", ದಿಲೀಪ್ ತನ್ನನ್ನೇ ಮರೆತು ಮನಸ್ಸಿನಲ್ಲಿ ಅನ್ನಿಸಿದ್ದನ್ನು ಹೇಳುತ್ತಾ ಹೋದ. ಶಂಕರ್ ಹಿಗ್ಗಿನಿಂದ ನೋಡಿ,  ದಿಲೀಪ್ ನ  ಮಾತನ್ನು ಅಲ್ಲಿಗೇ ತಡೆದು, "ಅಯ್ಯಾ ಮಹಾನುಭಾವ....,ಈಗ ನೀನು ಸರಿಯಾಗಿ ಮಾತಾಡ್ತಿದ್ದೀಯಾ...ಕೊನೆಗೂ ಜ್ಞಾನೋದಯ ಆಯ್ತಲ್ಲಾ...ಬೇಗ ಮನೆಗೆ ಹೋಗಿ ಯಾಮಿನಿಗೆ ಎಲ್ಲ ಸತ್ಯವನ್ನೂ ಹೇಳು...", ಎಂದು ಅವಸರಪಡಿಸಿದ. "ಅದೇ ಸಮಸ್ಯೆಯಾಗಿರೋದು ಕಣೋ...ಅವಳಿಗೆ ಹೇಗೆ ಹೇಳಲಿ...ಅವಳು ನನ್ನ ಕ್ಷಮಿಸ್ತಾಳಾ...", ದಿಲೀಪ್ ಪೆಚ್ಚುಮೊಗದಲ್ಲಿ ಹೇಳಿದ. "ಖಂಡಿತಾ ಕ್ಷಮಿಸ್ತಾಳೆ...ನಾನಿಲ್ವಾ...ನಾನೀಗಲೇ ಅವಳಿಗೆ ಫೋನ್ ಮಾಡಿ ಹೇಳ್ತೇನೆ ಬಿಡು...ನೀನು ಹೋಗಿ ಸಾರಿ ಕೇಳು ಅಷ್ಟೇ...ನೀನು ಹೋಗೋದು ಲೇಟ್ ಮಾಡಿದರೆ ಆ ನೀಗ್ರೋ ಯುವಕ ಹಾರಿಸಿಕೊಂಡು ಹೋಗ್ತಾನೆ ನೋಡು...", ಶಂಕರ್ ತಮಾಷೆ ಮಾಡಿದ. ದಿಲೀಪ್ ಸಹ ನಗುತ್ತಾ ಮನೆಗೆ ಹೊರಟ. ಶಂಕರ್ ಯಾಮಿನಿಯ ಜೊತೆ ಮಾತನಾಡಲು ಫೋನ್ ಕೈಗೆತ್ತಿಕೊಂಡ...
                   ದಿಲೀಪ್ ಮನೆ ತಲುಪಿದಾಗ ಮನೆಯೆಲ್ಲಾ ಮೊಂಬತ್ತಿ ದೀಪಗಳಿಂದ ಅಲಂಕೃತಗೊಂಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು!!!

        

         


             
          

No comments: