ಮನಸ್ಸಿನಿಂದ ಮನಸ್ಸಿಗೆ

ಕಿರಣ ಪ್ರಪಂಚ

Friday, February 3, 2017

 "ಹನಿ ಡೂ"
ಹೊರಗೆ  ಥರಗುಟ್ಟುವ  ಚಳಿ...ವಾಶಿಂಗ್ ಟನ್  ನಗರ ಮಂಜಿನಿಂದ ಆವೃತವಾಗಿದೆ. ಮನೀಶ್ ಮನೆಯಲ್ಲಿ ಜೋರಾಗಿ ಪಾರ್ಟಿ ನಡೆಯುತ್ತಿದೆ. ಹೆಂಗಸೆರೆಲ್ಲಾ ಒಂದು ಕಡೆ ಸೇರಿ ಗಹನ ಚರ್ಚೆ ನಡೆಸುತ್ತಿದ್ದರೆ, ಗಂಡಸರೆಲ್ಲಾ ಒಂದು ಕೋಣೆಯಲ್ಲಿ ಸೇರಿ ಭರ್ತಿ ಮಾಡಿದ ಗ್ಲಾಸು ಹಿಡಿದುಕೊಂಡು ಭರ್ಜರಿ ಹರಟೆ ಹೊಡೆಯುತ್ತಿದ್ದರು.  ಹಾಗೆಂದು ಹೆಂಗಸರ ಕೈಯಲ್ಲಿ ಗ್ಲಾಸು ಇರಲಿಲ್ಲವೆಂದಲ್ಲ! ಅವರ ಕೈಯಲ್ಲೂ ತುಂಬಿದ ಗ್ಲಾಸುಗಳೇ ಇದ್ದವು...ಮಾತುಗಳಲ್ಲಿ ಗಾಸಿಪ್ಪೂ ಇತ್ತು!! ಅಲ್ಲಿ ನೆರೆದಿದ್ದವರ ಪೈಕಿ ಮನೀಶ್ ಒಬ್ಬನೇ ಇತ್ತೀಚೆಗೆ ಮದುವೆಯಾದವನು...ಅವನ ಮದುವೆಯಾಗಿ ಆರು ತಿಂಗಳಾಗಿತ್ತು. ಉಳಿದವರೆಲ್ಲಾ ಅವನಿಗಿಂತ ಹೆಚ್ಚಿನ ಅನುಭವಿಗಳಾಗಿದ್ದರು, ಸಂಸಾರದಲ್ಲಿ!  ಚರ್ಚೆ ತಾರಕಕ್ಕೇರಿದಾಗ ಮನೀಶ್ ಹೆಂಡತಿ ವಿನುತಾ ಬಂದು , "ಮನೀಶ್, ಅಡುಗೆ ಮನೆಯಲ್ಲಿ ಸ್ನ್ಯಾಕ್ಸ್ ಇದೆ. ಸ್ವಲ್ಪ ತಂದು ಟೇಬಲ್ ಮೇಲೆ ಇಡಿ...ಅವು ಗಾಜಿನ ಪ್ಲೇಟ್ ಆದ್ದರಿಂದ ನನಗೆ ಭಾರ ಆಗುತ್ತೆ...ಬಿದ್ದರೆ ಒಡೆದು ಹೋಗುತ್ತಲ್ವಾ...ಆದ್ದರಿಂದ ನೀವೇ ತಂದು ಟೇಬಲ್ ಮೇಲಿಡಿ...ಪ್ಲೀಸ್ ಹನಿ ಡೂ...", ಎಂದು ಹೇಳಿ ಹೋದಳು. ಕುತೂಹಲಕರವಾದ ಚರ್ಚೆ ಬಿಟ್ಟು ಹೋಗಲು ಮನೀಶ್ ಗೆ ಮನಸ್ಸಿರಲಿಲ್ಲ. ಆದರೂ ಬೇರೆ ವಿಧಿಯಿಲ್ಲದೆ ಎದ್ದುಹೋಗಿ ತಿಂಡಿ ತಟ್ಟೆಗಳನ್ನು ತಂದು ಟೇಬಲ್ ಗಳ ಮೇಲಿಟ್ಟ. ಹೆಂಡತಿ ಹೇಳಿದ ಕೆಲಸವನ್ನು ಮಾಡಿ ಮುಗಿಸಿ ಬಂದು, ಮತ್ತೇ ಗ್ಲಾಸ್ ಹಿಡಿದು ಕೂತ.  "ಅಲ್ಲಾ...ಅಮೆರಿಕಾಗೆ ಬಂದ ತಕ್ಷಣ  ಈ ಮಡದಿಯರೆಲ್ಲಾ ಹೇಗೆ ಬದಲಾಗಿಬಿಡ್ತಾರಲ್ಲಾ...", ಮನೀಶ್ ಹೇಳಿದಾಗ ಗೆಳೆಯರು ಹೌದೆಂದು ತಲೆಹಾಕಿದರು. "ಹನಿ ಡೂ ಎಂಬುದು ಅಮೆರಿಕದ ಸಾಂಕ್ರಾಮಿಕ ರೋಗ! ಗಂಡಂದಿರು ಐ ಡೂ ಎನ್ನುವುದೇ ತಡ, ಹೆಂಡತಿಯರು ಆ ಪದವನ್ನು ಪಟ್ಟಾಗಿ ಹಿಡಿದುಕೊಳ್ತಾರೆ.  ತಕ್ಷಣ  ಮನೆಯ  ಎಲ್ಲಾ ಉಸಾಬರಿಯನ್ನು ಗಂಡಂದಿರ ಹೆಗಲಿಗೆ ಏರಿಸಿಬಿಡುತ್ತಾರೆ...ಇಲ್ಲಿ ಚಿಕ್ಕಪುಟ್ಟ ಕೆಲಸಗಳಿಗೆ ವಿಪರೀತ ದುಡ್ಡು ತೆರಬೇಕಾಗಿರುವುದರಿಂದ ಗಂಡಂದಿರ ಕೈಯಲ್ಲೇ ಎಲ್ಲಾ ಕೆಲಸ ಮಾಡಿಸಿಬಿಡುತ್ತಾರೆ...ಹಾಗಾಗಿ ನಾವು ನಮ್ಮ ವೃತ್ತಿಯ ಜೊತೆಗೆ ಪ್ಲಂಬಿಂಗ್, ಎಲೆಕ್ಟ್ರಕಲ್, ಗಾರ್ಡೆನಿಂಗ್...ಎಲ್ಲಾ ಕೆಲಸಗಳನ್ನೂ ಕಲೆತುಕೊಂಡಿರಬೇಕು...ಮನೆಯಲ್ಲಿ ಏನೆಲ್ಲಾ ಕೆಲಸಗಳು ಆಗಬೇಕೋ, ಅವುಗಳಿಗೆಲ್ಲ ಮಡದಿಯ  ಏಕಮೇವ  ಪರಿಹಾರ ಸೂತ್ರ ಎಂದರೆ 'ಹನಿ ಡೂ' ಎಂಬುದು! ಗಂಡನ ವಿರಾಮದ ವೇಳೆ ಹಾಳಾಗಿ ಹೋಗಲು ಹಾಗೂ ಆಗಬೇಕಿರುವ ಕೆಲಸಗಳ ಬಗ್ಗೆ ಸದಾ ನಿಗಾ ಇಡುವ, ನೆನಪಿಸುತ್ತಲೇ ಸುಲಭೋಪಾಯ ಕೂಡ  ಇದೇ 'ಹನಿ ಡೂ' ಎಂಬ ಮಂತ್ರ. ಈ ಅಗಬೇಕಿರುವ ಕೆಲಸಗಳನ್ನೆಲ್ಲ  ಒಂದು ರೀತಿಯಲ್ಲಿ ಕೊನೆ ಮೊದಲು ಇಲ್ಲ ಎಂಬಂತೆ ಬೆಳೆಯುವ ನಿರಂತರ ಪಟ್ಟಿ ಎಂದು ಗೊತ್ತಿರುವ ಕಾರಣಕ್ಕೋ ಏನೋ ಗಂಡ  ಎಂಬ ಸಂತನಿಗೆ ಅಂಥ ಕೆಲಸಗಳನ್ನು ಮಾಡಲು ಇರುವ  ಆಸಕ್ತಿ ಅಷ್ಟಕ್ಕಷ್ಟೇ ಎನ್ನಬಹುದು. ಹಾಗೆ ನೋಡಿದಲ್ಲಿ ಟಿಪಿಕಲ್ ಅಮೆರಿಕನ್ ಹೆಂಡತಿಯರ ಕನಸು ಮನಸ್ಸಿನಲ್ಲೂ ಯೋಚಿಸದಂಥ ವಿಷಯಗಳು ಭಾರತ ಸಂಜಾತ ಪತ್ನಿಯರ 'ಹನಿ ಡೂ' ಯಾದಿಯಲ್ಲಿ ಇರುತ್ತವೆ. ಈ ವೈವಾಹಿಕ ಕಿರುಕುಳವನ್ನು ತಪ್ಪಿಸಿಕೊಳ್ಳುವುದಾದರೂ ಹೇಗೆ ಗೆಳೆಯಾ...", ಮನೀಶ್ ತತ್ವಜ್ಞಾನಿಯಂತೆ ಕೇಳಿದ. ಅಷ್ಟೊತ್ತಿಗೆ ಅವನ ಕೈಯಲ್ಲಿದ್ದ ಗ್ಲಾಸು ಬರಿದಾಗಿತ್ತು. 
 
  ಅವನ ಮಾತು ಕೇಳಿದ ನಂತರ ಅಲ್ಲಿ ಒಂದೆರಡು ನಿಮಿಷಗಳ ಮೌನ ಆವರಿಸಿತು. ನಂತರ ಅರುಣ್ ಮೆಲ್ಲನೆ ಪ್ರಾರಂಭಿಸಿದ...."ಮನೀಶ್, ನೀನಿನ್ನು ಬಚ್ಚಾ...ಸಂಸಾರದ ವಿಷಯದಲ್ಲಿ. ಈ 'ಹನಿ ಡೂ' ಪದ ನಮ್ಮ  ಮೇಲೂ   ಸಹ  ಆಳ್ವಿಕೆ ನಡೆಸಿತ್ತು. ಅದರ ಮುಷ್ಟಿಯಿಂದ ತಪ್ಪಿಸಿಕೊಳ್ಳಲು ನಾವೆಲ್ಲಾ ನಮ್ಮದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಂಡೆವು. ಅದು ಫಲಿಸಿದ್ದೂ ನಿಜ. ಆ ಟೆಕ್ನಿಕ್ ಗಳನ್ನು ನಿನಗೆ ಹೇಳಿಕೊಡ್ತೇವೆ....ನೀನು ಅದರಂತೆಯೇ ಮಾಡು...ಆಗ 'ಹನಿ ಡೂ' ಕಾಟದಿಂದ ತಪ್ಪಿಸಿಕೊಳ್ಳಬಹುದು...', ಅರುಣ್ ಮಾತು ಕೇಳಿ ಮನೀಶ್ ಚುರುಕಾದ. "ಹೌದೇ,....ಆ ರೀತಿ ತಂತ್ರಗಳಿವೆಯೇ...ದಯವಿಟ್ಟೂ ನನಗೂ ಹೇಳಿ...", ಕಣ್ಣರಳಿಸಿ ಕೇಳಿದ. ರಾಘವ್ ಹೇಳಲು ಪ್ರಾರಂಭಿಸಿದ....,"ಏನಿಲ್ಲ....ನನ್ನ ಹೆಂಡತಿಗೆ ಅಡುಗೆಯ ಖಯಾಲಿ.....ಅದೂ ನಾನೇ ಮಾಡಬೇಕೆನ್ನುವ  ಹೆಬ್ಬಯಕೆ...ನನಗೆ ಅಡುಗೆ ಅಷ್ಟಾಗಿ ಬರೋಲ್ಲ  ಎಂದೆ. ಸರಿ, ಸಹಾಯ ಮಾಡು ಬಾ ಅಂದಳು. ನಾನು ಅವಳ ಅಸಿಸ್ಟೆಂಟ್ ಥರ ಅವಳು ಹೇಳಿದ ಕೆಲಸವನ್ನೆಲ್ಲಾ ಮಾಡಬೇಕಿತ್ತು. ನಾನಾಗ ಒಂದು ಉಪಾಯ ಮಾಡಿದೆ. ಅವಳಿಗೆ ಯೋಚಿಸುವುದಕ್ಕೂ ಬಿಡದೆ ಸುಮ್ಮನೇ ಅದೂ ಇದೂ ಸಲಹೆ ಕೊಡತೊಡಗಿದೆ. ನನ್ನ  ಉಚಿತ ಸಲಹೆಗಳ ಸರಮಾಲೆ ಹೀಗಿರುತ್ತಿದ್ದಿತು... ಜಾನು, ಎಲೆಕ್ಟ್ರಿಕ್  ಸ್ಟೌ ಗಿಂತ  ಇದ್ದಿಲು ಒಲೆ ಒಳ್ಳೆಯದು...ಇದ್ದಿಲು ಒಲೆಯಲ್ಲಿ ಅಡುಗೆ ಮಾಡಿ ತಿಂದರೆ ವೃದ್ಧಾಪ್ಯದಲ್ಲಿ ಕೀಲು ನೋವುಗಳ ಸಮಸ್ಯೆಯಿಂದ ಪಾರಾಗಬಹುದು...ಆದರೆ ಕಣ್ಣುರೆಪ್ಪೆಗಳಿಗೆ ಇದ್ದಿಲು ಒಲೆ ಒಳ್ಳೆಯದಲ್ಲ ಬಿಡು...ಈರುಳ್ಳಿ ಹೆಚ್ಚುವಾಗ ಕಣ್ಣಲ್ಲಿ ನೀರು ಬರುತ್ತಲ್ವಾ...ಅದರಿಂದ ತಪ್ಪಿಸಿಕೊಳ್ಳಲು ಶವರ್ ಬಿಟ್ಟುಕೊಂಡು ಈರುಳ್ಳಿ ಹೆಚ್ಚಬೇಕು!...ಕುಕ್ಕರ್ ನಲ್ಲಿ ಅನ್ನವನ್ನು ಅರ್ಧಬರ್ಧ ಬೇಯಿಸಬೇಕು.ಅರ್ಧಬರ್ಧ ಬೆಂದ ಬೇಳೆಯನ್ನು ಹಾಗೇ ತಿನ್ನಬೇಕು...ಗಜ್ಜರಿಯನ್ನು ಚಾಕುವಿನ ಬದಲಾಗಿ ಸುತ್ತಿಗೆಯಿಂದ ಬಡಿದು ಹೋಳು ಮಾಡಬೇಕು....ಐಸ್ ಕ್ರೀಂಗೆ ಒಂದಂಗುಲ ಟೂತ್ ಪೇಸ್ಟ್ ಸವರುವುದರಿಂದ ದಂತ ಪಂಕ್ತಿಯ ನಡುವಣ ಕಿಂಡಿಗಳನ್ನು ನಿವಾರಿಸಬಹುದು...ಹೀಗೆ ಬಾಯಿಗೆ ಬಂದದ್ದನ್ನೆಲ್ಲಾ ಅರಹುತ್ತಿದ್ದೆ. ನಾನು ಈ ಸಂಗತಿಗಳನ್ನೆಲ್ಲಾ ಆನ್ ಲೈನ್ ನಲ್ಲಿ ಆಫ್ರಿಕದ ಬಾಣಸಿಗನೊಬ್ಬನಿಂದ ಕಲಿತಿರುವುದಾಗಿ ಕೊಚ್ಚಿಕೊಳ್ಳುತ್ತಿದ್ದೆ...ನನ್ನ ಇಂತಹ ವಿಚಿತ್ರ ಸಲಹೆಗಳನ್ನು ಕೇಳಿಸಿಕೊಳ್ಳಲಾಗದೇ ಅವಳೇ ಒಂದು ತೀರ್ಮಾನಕ್ಕೆ ಬಂದಳು. 'ಹನಿ, ದಯವಿಟ್ಟೂ ಹೋಗಿ ಟಿ.ವಿ.ಯಲ್ಲಿ ಕ್ರಿಕೆಟ್ ನೋಡಿ...ನಾನು ಅಡುಗೆ ಮಾಡುವುದೆಲ್ಲಾ ಮುಗಿದ ಮೇಲೆ ಊಟಕ್ಕೆ ಕರೆಯುತ್ತೇನೆ...', ಎಂದಳು. ಅಂದಿನಿಂದ ನಾನು ಅಡುಗೆ ಕೆಲಸ ತಪ್ಪಿಸಿಕೊಂಡೆ...", ರಾಘವ್ ಹೇಳಿದಾಗ  ಎಲ್ಲರೂ ನಕ್ಕರು.  

    ಮುರಳಿ ತನ್ನ ತಂತ್ರ ಹೇಳಲಾರಂಭಿಸಿದ..."ನನ್ನ ಹೆಂಡತಿಗೆ ನನ್ನಿಂದ ಬಟ್ಟೆ ಒಗೆಸುವ ಉಗ್ರ  ಆಸೆ...ಮೊದಲ ಬಾರಿ ಅವಳು ಹೇಳಿದಾಗ ನಾನು ವಿದೇಯತೆಯಿಂದ ಒಪ್ಪಿಕೊಂಡೆ. ಅವಳು ಫುಲ್ ಖುಷಿಯಾಗಿ ಟಿ.ವಿ ನೋಡುತ್ತಾ ಕುಳಿತಳು. ನಾನು ಸಾಬೂನು ಪುಡಿಯನ್ನು ಅಗತ್ಯ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿ ಹಾಕಿ, ಉಷ್ಣಾಂಶವನ್ನು ಏರುಮುಖ ಮಾಡಿದೆ. ಆಕೆಯ ಕಡು ವರ್ಣದ ಜೀನ್ಸ್ ಸ್ಕರ್ಟ್ ಅನ್ನು, ಆಕೆಯ ಲಘು ವರ್ಣದ ಬಟ್ಟೆಗಳೊಂದಿಗೆ ಹಾಗೂ ಅಗತ್ಯವಿಲ್ಲದ ಗಲಿಜುಮಯ ವಸ್ತ್ರಗಳೊಂದಿಗೆ ಸಾಕು ಸಾಕೆನುಸುವಷ್ಟು ಭರ್ತಿ ಮಾಡಿದೆ. ನಂತರ ವಾಶಿಂಗ್ ಮೆಶಿನ್ ಗೆ  ಚಾಲನೆ ನೀಡಿ, ಏನೂ ಅರಿಯದವನಂತೆ ಗಾಲ್ಫ್ ಆಡಲೆಂದು ಜಾಗ ಖಾಲಿ ಮಾಡಿದೆ. ಮನೆಗೆ ಹಿಂತಿರುಗಿದಾಗಲೇ ನನಗೆ ಗೊತ್ತಾಗಿದ್ದು...ಎಲ್ಲೆಡೆ ಸಾಬೂನು ನೊರೆಯ ಪ್ರವಾಹ ವ್ಯಾಪಿಸಿದೆ ಎಂದು. ನನ್ನ ಹೆಂಡತಿಗೆ ಕೆಂಡಾಮಂಡಲ ಕೋಪ ಬಂದಿತ್ತು. ಅಲ್ಲದೆ ನಾನು ಯಾವ ರೀತಿಯ ಮನೆಯ ಕೆಲಸಕ್ಕೂ ನಾಲಾಯಕ್ಕು ಎಂಬುದು ಆಕೆಗೆ ಖಚಿತವೂ ಆಗಿತ್ತು! ಆದರೂ ಆಕೆಗೊಂದು ಅಚ್ಚರಿಯೂ ಇತ್ತು!! ಇಷ್ಟೆಲ್ಲಾ ಅದ್ವಾನಗಳ ಸರಮಾಲೆಯನ್ನು ಹೊಂದಿದ್ದರೂ ಸಹ, ಅದು ಹೇಗೆ ನಾನು ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿದ್ದೇನೆಂದು!!! ಇದೇ ಅವಳ ಅನುಮಾನ...ಆದಾಗ್ಯೂ ಆಕೆ ಅನಗತ್ಯ ಗೊಂದಲಗಳಿಗೆ ಇಂಬು ಕೊಡದೆ, ಬಾಯಿ ಬಿಟ್ಟು ಹೇಳಿಯೇ ಬಿಟ್ಟಳು, 'ಹನಿ, ಇನ್ನುಮುಂದೆ ನಾನೇ ಬಟ್ಟೆಗಳನ್ನು ಒಗಿಯುತ್ತೇನೆ..., ನೀನು ಅದರ ಬಗ್ಗೆ ಯೋಚಿಸುವುದು ಬೇಡ', ಎಂದು!! ಇಷ್ಟು ಹೇಳಿಸಿಕೊಂಡ ಮೇಲೆ ಮುಗಿಯಿತು...ಜೀವಮಾನವೆಲ್ಲಾ ನನಗೆ ದೋಬಿ ಕೆಲಸದಿಂದ ಮುಕ್ತಿ ಸಿಕ್ಕಂತಾಯಿತು....ಅದಷ್ಟೇ ಅಲ್ಲ, ಪಾತ್ರೆಯನ್ನು ತೊಳೆಯಲು ಹೇಳಿದಾಗ ಅವಳಿಗಿಷ್ಟದ ಗಾಜಿನ ಪಾತ್ರೆಗಳನ್ನು ಒಡೆದು ಹಾಕಿದೆ. ಡಿಶ್ ವಾಷರ್ ನಲ್ಲಿ ಹಾಕುವಾಗ ತಪ್ಪು ತಪ್ಪಾಗಿ ಇಡತೊಡಗಿದೆ. ಅವಳಿಗೆ ರೇಗಿ ಹೋಗಿ, ಆ ಕೆಲಸದಿಂದಲೂ ವಿನಾಯಿತಿ ನೀಡಿದಳು. ಎಷ್ಟು ವಿನಾಯಿತಿ ಎಂದರೆ, ಮನೆಯಲ್ಲಿ ಭೋಜನ ಕೂಟಗಳು ನಡೆದಾಗಲೂ, ಅವಳಿಗೆಷ್ಟೇ ಸುಸ್ತಾಗಿದ್ದರೂ ಪಾತ್ರೆಗಳನ್ನು ತೊಳೆಯಲು ನನ್ನನ್ನು ಕರೆಯುತ್ತಿರಲಿಲ್ಲ. 'ಹನಿ, ನೀನು ಪಾತ್ರೆ ತೊಳೆಯುವ ಯೋಚನೆ ಬಿಡು....', ಎಂದೇ ಈಗಲೂ ಹೇಳುವಳು. ಕೊನೆಯ ಪಕ್ಷ ಹರಡಿಕೊಂಡಿರುವ ಕಸವನ್ನಾದರೂ ಸ್ವಚ್ಛ ಮಾಡುವುದಾಗಿ ನಾನು ಹೇಳಿದರೆ, ಅದಕ್ಕೂ ಕೂಡ  ಆಕೆ ಸಮ್ಮತಿಸುವುದಿಲ್ಲ...ಹೀಗೆ ಆ ಎಲ್ಲಾ ಕೆಲಸಗಳಿಂದ ಮುಕ್ತನಾಗಿದ್ದೇನೆ", ಮುರಳಿಯ ಮಾತಿಗೆ ಅಲ್ಲಿ ಮತ್ತೇ ನಗು ಚೆಲ್ಲಾಡಿತು.

     ಈರುಳ್ಳಿ ಪಕೋಡ ಬಾಯಿಗಿಡುತ್ತಾ ಸುಮಂತ ಹೇಳತೊಗಿದ...," ನನ್ನ ಹೆಂಡತಿಯ ತಾಯಿಯ ಮನೆ ಅರ್ಲಿಂಗ್ ಟನ್ ನಲ್ಲಿದೆ. ಪದೇ ಪದೇ ತನ್ನ ತಾಯಿಯನ್ನು ಕರೆಸಿಕೊಳ್ಳುವುದು ಅವಳ ಭಯಂಕರ ಬಯಕೆ. ತಾಯಿ ಮನೆಗೆ ಬಂದರೆ ಸಾಕು...ಮನೆ ಕೆಲಸ  ಎಲ್ಲವನ್ನೂ ಮರೆತು ಮಾಲ್ ಗಳಲ್ಲಿ ಶಾಪಿಂಗ್ ಮಾಡಲು ಹೋಗಿಬಿಡುತ್ತಿದ್ದಳು. 'ಪ್ಲೀಸ್ ಹನಿ ಡೂ...', ಎಂದು ಹೇಳಿ ತಾಯಿ ಜೊತೆ ಹೋಗಿಬಿಡುತ್ತಿದ್ದಳು. ಮನೆಯ ಕೆಲಸವನ್ನೆಲ್ಲಾ ನಾನೇ ಮಾಡಬೇಕಾಗಿತ್ತು...! ನಾನೂ ಒಂದೆರಡು ಬಾರಿ ನೋಡಿದೆ...ಕೊನೆಗೊಂದು ದಿನ ಏನು ಮಾಡಿದೆನೆಂದರೆ ಒಮ್ಮೆ ಅತ್ತೆ ಮನೆಗೆ ಬಂದಾಗ ಅವರ ಕೊಠಡಿಯ ಹವಾ ನಿಯಂತ್ರಣ ವ್ಯವಸ್ಥೆಯನ್ನು ಗರಿಷ್ಟ ಪ್ರಮಾಣಕ್ಕೆ ಹೆಚ್ಚಿಸಿದೆ. ವಿದ್ಯುತ್ ಬಿಲ್ ಹೆಚ್ಚಾದರೂ ಪರವಾಗಿಲ್ಲ ಎಂದುಕೊಂಡೇ ಹಾಗೆ ಮಾಡಿದೆ...ಅದರಿಂದ ಅತ್ತೆಗೆ ನೆಗಡಿ, ಕೆಮ್ಮು ಬಂದಿತು. ಸಾಮಾನ್ಯವಾಗಿ ಶೇಕಡ 20ರಷ್ಟು ಬ್ರ್ಯಾಂಡಿ, ಜಿನ್ ಅಥವಾ ವೋಡ್ಕಾ ಹೊಂದಿರುವ ಕೆಮ್ಮಿನ ಔಷಧಿಯನ್ನು ತಂದು ಕೊಟ್ಟೆ. ಪ್ರತಿ ಎರಡು ಗಂಟೆಗೊಮ್ಮೆ 50 ಎಂ.ಎಲ್ ನಂತೆ ಹಗಲು ರಾತ್ರಿ ತೆಗೆದುಕೊಳ್ಳುವಂತೆ ತಿಳಿಸಿ, ಅವರು ಬಹುತೇಕ ಕೊಠಡಿಯಲ್ಲೇ ಉಳಿದುಕೊಳ್ಳುವಂತೆ ನೋಡಿಕೊಂಡೆ. ಇದರಿಂದ ನನ್ನ ಸಮಸ್ಯೆ ಎಷ್ಟೋ ಕಡಿಮೆಯಾಯಿತು.ನನ್ನ ಅತ್ತೆ  ಹೆಚ್ಚೆಂದರೆ ಚಹಾ ಕೇಳುತ್ತಿದ್ದರು. ಅಂಥ ಸಾಧ್ಯತೆ ಕಡಿಮೆಯೇ ಇತ್ತು. ಏಕೆಂದರೆ ನಾನು ದಯಪಾಲಿಸುತ್ತಿದ್ದ ಕೆಮ್ಮಿನ ಔಷಧಿಯಿಂದ ಆಕೆ ಸದಾ ನಿದ್ರೆಯ ಮಂಪರಿನಲ್ಲಿಯೇ ಇರುತ್ತಿದ್ದುದು ಹೆಚ್ಚು. ಅಕಸ್ಮಾತ್ ಚಹಾ ಕೇಳಿದಾಗಲೂ ನಾನೇ ಮಾಡಿಕೊಡುತ್ತೇನೆಂದು ಹೇಳುತ್ತಿದ್ದೆ...ಒಳ್ಳೆಯ ಮಸಾಲೆ ಚಹಾ ಮಾಡುತ್ತೇನೆಂದು ಹೇಳಿದಾಗ ಆಕೆ ಖುಷಿಯಿಂದಲೇ  ಒಪ್ಪಿಕೊಳ್ಳುತ್ತಿದ್ದರು. ಕಾಳು ಮೆಣಸಿನ ಪುಡಿ ಕೆಮ್ಮಿಗೆ ಒಳ್ಳೆಯದೆಂದು ಸೂಚಿಸಿ, ಮಸಾಲಾ ಚಹಾಪುಡಿಗೆ ಬದಲಾಗಿ ಧಾರಾಳವಾಗಿ ಕೆಂಪು ಮೆಣಸಿನ ಪುಡಿಯನ್ನು ಉಪಯೋಗಿಸುತ್ತಿದ್ದೆ. ಆಕೆಯ ಕೋರಿಕೆಯಂತೆ ಖಡಕ್ ಚಹಾ ಮಾಡಿದ್ದೇನೆಂದು ಕೊಚ್ಚಿಕೊಳ್ಳುತ್ತಿದ್ದೆ. ಕಾಳುಮೆಣಸಿನ ಖಡಕ್ ಅಂಶ ಆಕೆ ಅಂದುಕೊಂಡಂತೆ  ಇರಬೇಕಾದ ಅಗತ್ಯವಿಲ್ಲ, ಅಲ್ಲವೇ...ಆಕೆ ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಕೆಮ್ಮುತ್ತಿದ್ದರು. ಇಲ್ಲವೇ ಹಾಸಿಗೆಯಲ್ಲಿ ಹೊರಳಾಡುತ್ತಿದ್ದರು...ಅಥವಾ ಕೆಮ್ಮುತ್ತಾ  ಹೊರಳಾಡುತ್ತಿದ್ದರು! ಒಟ್ಟಿನಲ್ಲಿ ನಮ್ಮ ಮನೆಯಲ್ಲಿ ಇರಬೇಕಾದ ಸಮಯವನ್ನೆಲ್ಲಾ ಅತಿಥಿ ಕೊಠಡಿಯಲ್ಲೇ ಕಳೆಯಬೇಕಾದ ಪರಿಸ್ಥಿತಿಯಾಗುತ್ತಿದ್ದಿತು. ಒಂದೆರಡು ಬಾರಿ ಹೀಗಾದಮೇಲೆ ಆಕೆ ನಮ್ಮ ಮನೆಗೆ ಬಂದು ಠಿಕಾಣಿ ಹೂಡುವುದನ್ನೇ ಬಿಟ್ಟರು...ನಾನು ಮನೆ ಕೆಲಸ ಮಾಡುವುದೂ ತಪ್ಪಿತು....". ಸುಮಂತನ ಮಾತು ಮುಗಿದ ಮೇಲೆ ಮತ್ತೊಮ್ಮೆ ನಗೆಯ ಕಡಲು ಅಲ್ಲಿ.

   ಪವನ್ ಹೇಳಿದ್ದೂ ವಿಶೆಷವಾಗಿತ್ತು!..."ನನ್ನ ಹೆಂಡತಿ ILLNESS [Indian Ladies Lunch Neglecting Especially Sincere Spouse] ಎಂಬ ಸ್ನೇಹಿತೆಯರೊಂದಿಗೆ ಮಧ್ಯಾಹ್ನದ ಭೋಜನ ಕೂಟಕ್ಕೆ ಪದೇ ಪದೇ ಹೋಗುತ್ತಿದ್ದಳು. 'ಹನಿ ಡೂ...', ಎನ್ನುತ್ತಾ ಅವಳು ಕಾರ್ ಚಾಲನೆ ಮಾಡಿ, ಭರ್ರನೆ ಹೋಗುತ್ತಿದ್ದರೆ ನಾನು ಪೆಚ್ಚಾಗಿ ನಿಲ್ಲುತ್ತಿದ್ದೆ. ಕೊನೆಗೊಮ್ಮೆ ಒಂದು ಪ್ಲ್ಯಾನ್ ಮಾಡಿದೆ. ಆಕೆ ಮನೆಯಿಂದ ಹೊರಡುವ ಅರ್ಧ ಗಂಟೆ ಮೊದಲು ಕಾರಿನ  ಒಂದು ಚಕ್ರದ ಕೆಳಗೆ ಮೊಳೆಯೊಂದನ್ನು ಇಟ್ಟು ಬಿಡುತ್ತಿದ್ದೆ. ಇನ್ನೇನು ಹೊರಡಬೇಕು ಎನ್ನುವಾಗ ಚಕ್ರಕ್ಕೆ ಉಂಟಾಗಿರುವ ಗತಿ ಆಕೆಯ ಗಮನಕ್ಕೆ ಬರುತ್ತಿತ್ತು. ಮೆಕ್ಯಾನಿಕ್ ಮನೆಗೆ ಬಂದು ಚಕ್ರವನ್ನು ಸರಿಪಡಿಸುವ ಹೊತ್ತಿಗೆ ಭೋಜನ ಕಾರ್ಯಕ್ರಮಕ್ಕೆ ಬಹಳ ತಡ  ಆಗಿಬಿಡುತ್ತಿದ್ದಿತು. ಆಗ ಆಕೆ ಹಿಂತಿರುಗಿ ಬಂದು ಮನೆಯಲ್ಲೇ ಭೋಜನ ತಯಾರಿಸುತ್ತಿದ್ದುದರಿಂದ ನಾನು ಉಳಿದುಹೋದ ಪದಾರ್ಥಗಳನ್ನು   ಸೇವಿಸುವುದು ತಪ್ಪುತ್ತಿತ್ತು. ಇನ್ನೊಮ್ಮೆ ಕಾರಿನ ಕೀ ಅವಳಿಗೆ ಸಿಗದಂತೆ ಇಟ್ಟಿದ್ದೆ. ಅದನ್ನು ಹುಡುಕುವುದರಲ್ಲೇ ಸಮಯ ಆಗಿದ್ದರಿಂದ, ಅಂದೂ ಸಹ ಅವಳು ಹೋಗಲಾಗಲಿಲ್ಲ. ಮತ್ತೊಮ್ಮೆ ಅವಳು ತೊಡಬೇಕೆಂದು ಇಟ್ಟುಕೊಂಡಿದ್ದ ಹೀಲ್ಸ್ ಚಪ್ಪಲಿಯ ಬೆಲ್ಟ್ ಕಿತ್ತುಹಾಕಿದ್ದೆ. ಹೊರಡುವ ಸಮಯದಲ್ಲಿ ನೋಡಿಕೊಂಡದ್ದರಿಂದ, ಬೇರೆ ಮ್ಯಾಚಿಂಗ್ ಚಪ್ಪಲಿಯಿಲ್ಲದೆ ಹೋಗುವುದನ್ನು ಕ್ಯಾನ್ಸಲ್ ಮಾಡಿದಳು. ಹೀಗೇ ಅನೇಕ ಬಾರಿ ಆಗಿದ್ದರಿಂದ, ಆ ಕೂಟದಿಂದ ಅವಳ ಸದಸ್ಯತ್ವವನ್ನು  ತೆಗೆದುಹಾಕಲಾಯ್ತು. ಅಂದಿನಿಂದ ನನ್ನಾಕೆ ILLNESS ಕೂಟಕ್ಕೆ ಹೋಗುವ ಯೋಚನೆಯನ್ನೇ ಬಿಟ್ಟಳು!!...", ಎಲ್ಲರೂ ನಕ್ಕರು ಪವನ್ ತಲೆಗೊಂದು ಮೊಟಕುತ್ತಾ!!

      "ಅಯ್ಯೋ ನನ್ನಾಕೆಯೂ ಹಾಗೇ....ಗಾರ್ಡನ್ ಕೆಲಸಕ್ಕೆ ನೇಮಿಸಿಬಿಡುತ್ತಿದ್ದಳು. ನನಗೋ ಅದರಲ್ಲಿ ಆಸಕ್ತಿಯೇ ಇಲ್ಲ...ವಿಧಿಯಿಲ್ಲದೆ ಮಾಡಬೇಕಾಗುತ್ತಿದ್ದಿತು. ಬೇಕೆಂದೇ ನಮ್ಮ ಮನೆಯಲ್ಲಿದ್ದ ಬೆಲೆಬಾಳುವ ಗಿಡಗಳಿರುವ ಕುಂಡಗಳನ್ನು  ಅವಳಿಗೆ ಕಾಣದ ಹಾಗೆ ತೆಗೆದುಕೊಂಡು ಹೋಗಿ, ಬೇರೆ ಬೀದಿಯಲ್ಲಿ ಇಟ್ಟುಬರುತ್ತಿದ್ದೆ....ಅಮೆರಿಕಾದಲ್ಲಿ ಕರಿಬೇವು ಸಿಗುವುದು ಎಷ್ಟು ಕಷ್ಟ ಮತ್ತು ಎಷ್ಟು ದುಬಾರಿ  ಅಂತಾ ಗೊತ್ತಲ್ಲಾ...ಅದಕ್ಕೆಂದೇ ಅವಳು ಕರಿಬೇವಿನ ಗಿಡವನ್ನು ಬೆಳೆಸಿದ್ದಳು. ಅದು ಮರವಾಗಿ ಸೊಂಪಾಗಿ ಬೆಳೆದಿತ್ತು. ನಾನು ಗಾರ್ಡನ್ ಮಾಡುವಾಗ ಕರಿಬೇವನ್ನು ಕಿತ್ತು, ಕಿತ್ತು ಸುತ್ತಮುತ್ತಲಿದ್ದ ಭಾರತೀಯರ ಮನೆಗಳಿಗೆಲ್ಲಾ ಕೊಡುತ್ತಿದ್ದೆ. ಅದನ್ನು ನೋಡಿ ನನ್ನಾಕೆಗೆ ಸಿಟ್ಟೋ ಸಿಟ್ಟು...ಅಮೆರಿಕಾದಲ್ಲಿ ಅಪರೂಪವಾಗಿರುವ ಕರಿಬೇವನ್ನು ಹಾಗೆ ಸುಮ್ಮನೆ ಕೊಟ್ಟರೆ ಬೆಲೆಯಿರುತ್ತಾ ಎಂದು ಅವಳ ವಾದ. ಅವಳು ಎಷ್ಟು ಹೇಳಿದರೂ ನಾನು ಹಾಗೇ ಮಾಡುತ್ತಿದ್ದರಿಂದ, ಅವಳು ನನ್ನನ್ನು ಗಾರ್ಡನ್ ಕೆಲಸ ಮಾಡುವುದನ್ನು ತಡೆದಳು. ನನಗೂ ಅದೇ ಬೇಕಾಗಿತ್ತು. ಹುಳ್ಳಗೆ ಸುಮ್ಮನಾದೆ...", ವೆಂಕಟಾದ್ರಿ ಹೇಳಿದಾಗ ಅಹುದೆಂದು ತಲೆಹಾಕಿದರು ಗೆಳೆಯರು.

 ರಾಜೀವ ತನ್ನ ಯುಕ್ತಿ ಹೇಳಲು ಪ್ರಾರಂಭಿಸಿದ...," ನಾನು ದಿನಸಿ  ಸಾಮಾನುಗಳನ್ನು ತರಬೇಕೆಂಬುದು ನನ್ನಾಕೆಯ  ಉನ್ನತ ಕನಸು. ಅಂದರೆ ಅವಳ ಜೊತೆ ಭಂಟನಂತೆ ಸೂಪರ್ ಮಾರ್ಕೆಟ್ ಗೆ  ಹೋಗಬೇಕೆಂದು ! ಅವಳು ಸಾಮಾನುಗಳನ್ನೆಲ್ಲಾ ಆರಿಸಿ ಟ್ರಾಲಿಯಲ್ಲಿ ಹಾಕಬೇಕು. ನಾನು ಟ್ರಾಲಿ ತಳ್ಳುತ್ತಾ ಅವಳ ಹಿಂದೆ ಹೋಗಬೇಕು. ಆಮೇಲೆ  ದೊಡ್ಡ ಕ್ಯೂನಲ್ಲಿ ನಿಂತು ಬಿಲ್ಲು ಹಾಕಿಸಬೇಕು. ನಾನು ಕ್ಯೂನಲ್ಲಿ ನಿಂತಿದ್ದಷ್ಟೂ ಹೊತ್ತು ಆಕೆ ಕಾಫಿ ಶಾಪ್ ನಲ್ಲಿ ಕಾಫಿ ಹೀರುತ್ತಾ, ಫೋನ್ ನಲ್ಲಿ ಹರಟೆ ಹೊಡೆಯುತ್ತಾ ಇರುತ್ತಿದ್ದಳು. ಒಂದಷ್ಟು ಬಾರಿ ಇದೇ ಕತೆಯಾದಾಗ, ನಾನು ನನ್ನ ತಂತ್ರ  ಉಪಯೋಗಿಸಲು ಅನುವಾದೆ. ನಾನೂ ಟ್ರಾಲಿಯಲ್ಲಿ ಸುಮ್ಮನೆ ಸಾಮಾನುಗಳನ್ನು ತುಂಬುತ್ತಾ ಹೋದೆ. ಬೆಕ್ಕಿಗೆ ತಿಂಡಿ, ನಾಯಿಗೆ ಕೂಳು, ಆಟಿಕೆ ಸಾಮಾನು ...ಮುಂತಾದ ಕೆಲಸಕ್ಕೆ ಬಾರದ ಸರಕುಗಳನ್ನೆಲ್ಲಾ ಟ್ರಾಲಿಯಲ್ಲಿ ಭರ್ತಿ ಮಾಡುತ್ತಾ ಹೋಗುತ್ತಿದ್ದೆ. ನಮ್ಮ ಮನೆಯಲ್ಲಿ ನಾಯಿ, ಬೆಕ್ಕು, ಚಿಕ್ಕ ಮಕ್ಕಳು...ಯಾವುದೂ ಇಲ್ಲದೆ ಹೋದರೂ ತುಂಬುವುದನ್ನು ನೋಡಿ ಇದೆಲ್ಲಾ ಯಾಕೆ ಬೇಕು ಎಂದು ನನ್ನಾಕೆ ಕೇಳಿದಾಗ, ಮುಂದೆ ಉಪಯೋಗಕ್ಕೆ ಬಂದರೂ ಬರಬಹುದು ಎಂದು ರೀಲು ಬಿಡುತ್ತಿದ್ದೆ. ಅಂಥ ಸಾಮಾನುಗಳನ್ನೆಲ್ಲಾ ಇಟ್ಟುಕೊಳ್ಳಲು ಅಪಾರ್ಟ್ ಮೆಂಟ್ ನಲ್ಲಿ ಜಾಗ ಕೂಡ  ಇಲ್ಲ ಎಂದು ಆಕೆ ಗೊಣಗುತ್ತಿದ್ದಳು. ಅದನ್ನೆಲ್ಲಾ ಕೇಳಿಸಿಕೊಂಡೇ ಇಲ್ಲ  ಎನ್ನುವ ಹಾಗೆ ತಳ್ಳುವ ಗಾಡಿಯಲ್ಲಿ ಅನಗತ್ಯ ಸರಕುಗಳನ್ನು ತುಂಬುತ್ತಾ ಹೋಗುತ್ತಿದ್ದೆ. ಆಗೆಲ್ಲಾ ಆಕೆಗೆ ಗಲಿಬಿಲಿಯಾಗುತ್ತಿತ್ತು! ಕೊನೆಗೆ ಹಣ ಪಾವತಿಸುವ ವಿಭಾಗದಲ್ಲಿ ವಿನಾಕಾರಣ ಅಲ್ಲಿರುವ ಹುಡುಗಿಯೊಂದಿಗೆ ಜಗಳ ಶುರು ಮಾಡಿಕೊಳ್ಳುತ್ತಿದ್ದೆ. ಸುಮ್ಮಸುಮ್ಮನೆ ಏರು ದನಿಯಲ್ಲಿ ಜೋರು ಮಾಡಿ, ಸುತ್ತಮುತ್ತಲಿನವರೆಲ್ಲಾ ನಮ್ಮನ್ನೇ ನೋಡುವಂತೆ ಮಾಡುತ್ತಿದ್ದೆ. ಒಂದೆರಡು ಬಾರಿ ಹೀಗಾದಮೇಲೆ ನನ್ನಾಕೆ ,'ಹನಿ, ಇನ್ನು ಮುಂದೆ ನಾನೊಬ್ಬಳೇ ಹೋಗಿ ದಿನಸಿ ಪದಾರ್ಥಗಳನ್ನು ಕೊಂಡು ತರುವೆ...ನೀನು ಜೊತೆಗೆ ಬರುವುದು ಬೇಡ', ಎಂದಳು. ಅಂದಿನಿಂದ ನಾನು ಗಂಟೆಗಟ್ಟಲೆ ಸೂಪರ್ ಮಾರ್ಕೆಟ್ ನಲ್ಲಿ ಕಳೆಯುವ ಕಾಟದಿಂದ ತಪ್ಪಿಸಿಕೊಂಡೆ...". ಮತ್ತೊಮ್ಮೆ ಕೇಕೆ ಅಲ್ಲಿ!!

         ಅದೇ ಸಮಯಕ್ಕೆ ಮನೀಶ್ ನ ನಾದಿನಿ ಸೀಮಾ ಅಲ್ಲಿಗೆ ಬಂದಳು.  ಸೀಮಾ ಮನೀಶ್ ಹೆಂಡತಿ ವಿನುತಾಳ ತಂಗಿ. ಬೆಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಳು. ರಜೆ ಇದ್ದುದರಿಂದ ಹೊಸದಾಗಿ ಮದುವೆಯಾಗಿ ಅಮೆರಿಕಾಗೆ ಬಂದಿದ್ದ ಅಕ್ಕನ ಜೊತೆ ಒಂದಷ್ಟು ದಿನ ಇದ್ದು ಹೋಗಲು ಬಂದಿದ್ದಳು. ಚೂಟಿ ಹುಡುಗಿಯಾದ ಅವಳು ಪಾರ್ಟಿಯಲ್ಲಿ  ಎಲ್ಲಾ ಕಡೆ ಓಡಾಡಿಕೊಂಡು ಇದ್ದಳು.  "ಬಾವಾ, ನನ್ನ ಮೊಬೈಲ್ ಇಲ್ಲೇ ಇಟ್ಟಿದ್ದೆ...ತೆಗೆದುಕೊಂಡು ಹೋಗುತ್ತೇನೆ...", ಎಂದು ಹೇಳಿ ಮೂಲೆಯ ಟೀಪಾಯ್ ಮೇಲಿದ್ದ ಮೊಬೈಲನ್ನು ತೆಗೆದುಕೊಂಡಳು. "ಅಮೆರಿಕಾ ಹೇಗನ್ನಿಸಿತು ಸೀಮಾ?", ರಾಜೀವ ಕೇಳಿದ. "ಹಾ, ಚೆನ್ನಾಗಿದೆ...ಏನೇ ಆದ್ರೂ ನಮ್ಮ ಬೆಂಗಳೂರಿನ ಮುಂದೆ ಯಾವ ಅಮರಾವತಿಯೂ ಸಾಟಿಯಾಗದು ಬಿಡಿ...", ನಗುತ್ತಾ ಹೇಳಿದಳು ಸೀಮಾ. "ಅಯ್ಯೋ..., ಹಿಂಗಂದುಬಿಟ್ಟರೆ ಹೆಂಗೆ?!...ನಿನಗೂ ಒಂದು ಅಮೆರಿಕಾ ಗಂಡನ್ನು ನೋಡಬೇಕೆಂದಿದ್ದೆ!!", ಮನೀಶ್ ನಾದಿನಿಗೆ ತಮಾಷೆಮಾಡಿದ. "ಅಯ್ಯಯ್ಯೋ....ಬೇಡವೇ ಬೇಡ ಬಾವಾ....'ಹನಿ ಡೂ' ಅಂತೆಲ್ಲಾ ನಯವಾಗಿ     ಹೇಳೋಕೆ  ಬರಲ್ಲಾ ನಂಗೆ!!....ನಾನೇನಿದ್ರೂ ಜೋರು ಮಾಡಿ ಕೆಲಸ ತೆಗೆಯೋಳು...ನನ್ನ ಬಳಿ ಯಾವ ತಂತ್ರವೂ ನಡೆಯೋಲ್ಲ...", ಕಣ್ಣು ಹೊಡೆದು ಹೇಳಿದಳು ಸೀಮಾ. ಅವಳ ಮಾತು ಕೇಳಿ ಎಲ್ಲರೂ ಬೆಚ್ಚಿದರು. ಅವರು ಬೆಚ್ಚಿದ್ದು ನೋಡಿ ಸೀಮಾ ಜೋರಾಗಿ ನಕ್ಕಳು. "ನೀವು ಮಾತು ಪ್ರಾರಂಭಿಸಿದಾಗ ನಾನಿಲ್ಲಿಗೆ ನಿಮಗೇನಾದ್ರೂ ಬೇಕಾ ಅಂತಾ ಕೇಳೋಕೆ ಬಂದೆ...ನೀವು ಮಾತಿನಲ್ಲಿ ಮೈಮರೆತಿದ್ದೀರಿ...ಅದಕ್ಕೇ ಹಾಗೇ ಹೋದೆ...ಡೋಂಟ್ ವರಿ!...ನಿಮ್ಮ ಪೂರ್ತಿ ಸಂವಾದವನ್ನು ನಾನಿನ್ನೂ ಕೇಳಿಲ್ಲ...", ತುಂಟದನದಿಂದಲೇ ಹೇಳುತ್ತಾ ಅಲ್ಲಿಂದ ಹೋದಳು. ಅವಳು ಹೋದ ಮೇಲೆ ಗೆಳೆಯರ ಗುಂಪು ನೆಮ್ಮದಿಯ  ಉಸಿರು ಬಿಟ್ಟಿತು!! ಮತ್ತೇ ಹರಟೆ ಮುಂದುವರೆಯಿತು!!

          ಸ್ವಲ್ಪಹೊತ್ತು ಹರಟಿದ ನಂತರ ವೆಂಕಟಾದ್ರಿ, "ಗಮನಿಸಿದ್ರಾ...ಬರೀ ನಮ್ಮ ಮಾತಿನ ಸದ್ದೇ ತುಂಬಿದೆ. ನಮ್ಮ ಹೆಂಡತಿಯರು ಇರುವ ಕೋಣೆಯಿಂದ ಯಾವ ಸದ್ದೂ ಬರುತ್ತಿಲ್ಲ!...ಅವರ ಒಂದೂ ಮಾತು ಕೇಳುತ್ತಿಲ್ಲ....ಅವರೆಲ್ಲಾ ಒಟ್ಟಿಗೆ ಸೇರಿದಾಗ  ಇಷ್ಟು ನಿಶ್ಯಬ್ಧ  ಇರಲು ಸಾಧ್ಯವೇ....?!...ಅವರೆಲ್ಲಾ ಇಲ್ಲೇ ಇದ್ದಾರಾ ಅಥವ ಹೊರಗೆಲ್ಲಾದರೂ ಹೋಗಿದ್ದಾರಾ...?!", ಆಶ್ಚರ್ಯದಿಂದ ಕೇಳಿದ. "ಹೌದಲ್ಲಾ...ಈಗ ಸ್ವಲ್ಪ ಹೊತ್ತಿನಿಂದ ಶಬ್ಧ  ಇಲ್ಲ...ಎಲ್ಲಿ ಹೋಗಿರಬಹುದು?!!", ಮುರುಳಿ ನೋಡಲು ಎದ್ದ. ಅವನ ಜೊತೆ ಎಲ್ಲರೂ ಎದ್ದು, ಕುತೂಹಲದಿಂದ ಮಹಿಳೆಯರು ಇದ್ದ ಕೋಣೆಗೆ ಹೋದರು. ಅಲ್ಲಿ ಹೋದವರೇ ಬೆಚ್ಚಿ ನಿಂತರು. ಎಲ್ಲಾ ಮಹಿಳೆಯರೂ ಗಂಭೀರವಾಗಿ ಕುಳಿತಿದ್ದರು. ಅಲ್ಲೊಂದು ಗಾಢ ಮೌನ  ಆವರಿಸಿತ್ತು!!!  "ಏನಾಯ್ತು?!....ಏಕೆ ಹೀಗೆ ಮೌನವಾಗಿ ಕುಳಿತಿದ್ದೀರ?!....ಯಾರಿಗೆ ಏನಾಯ್ತು...", ಮನೀಶ್ ನಡುಗುವ ದನಿಯಲ್ಲಿ ಕೇಳಿದ. ಉಳಿದ ಗೆಳೆಯರೂ ಭಯದಿಂದ ನಿಂತಿದ್ದರು. ಆಗ ಸುಮಂತನ ಹೆಂಡತಿ ಕೈಯಿಂದಲೇ ಒಂದು ನಿಮಿಷ  ಇರಿ ಎಂದು ಸನ್ನೆಮಾಡಿ, ಮೊಬೈಲ್ ಆನ್ ಮಾಡಿ,  ಲೌಡ್ ಸ್ಪೀಕರ್  ಹಾಕಿದಳು.  ಅಲ್ಲಿ ಕೇಳಿಸಿದ್ದೇನು!!!...ಈ ತಂತ್ರಶಾಲಿ ಗಂಡಂದಿರು ಮಾತನಾಡಿದ ಅಷ್ಟೂ ಮಾತುಗಳು ಬಿತ್ತರವಾಗುತ್ತಿವೆ!!!....ತಮ್ಮ ಮಾತುಗಳನ್ನು ಕೇಳುತ್ತಲೇ ಗೆಳೆಯರ ಗುಂಪು ಬೆವರತೊಡಗಿತು. ಸೀಮಾ ನಗುತ್ತಾ, "ನನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದೆ", ಕಣ್ಣುಹೊಡೆದು ಹೇಳಿದಳು. ಆದರೆ ಗೆಳೆಯರು ಕಣ್ಣುರೆಪ್ಪೆ ಅಲುಗಾಡಿಸಲೂ ಶಕ್ತಿಯಿಲ್ಲದೆ ಭೀತರಾಗಿ ನಿಂತಿದ್ದರು...ಮುಂದಾಗಬಹುದನ್ನು ಊಹಿಸಿಕೊಂಡು!!!

                                                                               -ಕಿರಣ್ ಪ್ರಸಾದ್ ರಾಜನಹಳ್ಳಿ
                                                                                
# 691/ಸಿ, "ಅತೃ", 22ನೇ ಕ್ರಾಸ್, 19ನೇ ಮೇನ್,
ಹೆಚ್.ಎಸ್.ಆರ್ ಲೇ ಔಟ್, 2ನೇ ಸೆಕ್ಟರ್,
ಬೆಂಗಳೂರು-560102
9449459766
Click here to reply or forward
5.2 GB (34%) of 15 GB used
Manage
Terms - Privacy
Last account activity: 3 minutes ago
Details
ubr
Add to circles
Show details
Get a Gmail custom address (you@yourcompany)
Recommended for business email users
Get started
Posted by ಮನಸ್ಸಿನಿಂದ ಮನಸ್ಸಿಗೆ at 12:01 AM

No comments:

Post a Comment

Newer Post Older Post Home
Subscribe to: Post Comments (Atom)

About Me

ಮನಸ್ಸಿನಿಂದ ಮನಸ್ಸಿಗೆ
View my complete profile

Followers

Blog Archive

  • ►  2019 (3)
    • ►  October (1)
    • ►  June (2)
  • ▼  2017 (1)
    • ▼  February (1)
  • ►  2016 (1)
    • ►  November (1)
  • ►  2010 (4)
    • ►  May (2)
    • ►  March (2)
  • ►  2009 (6)
    • ►  December (2)
    • ►  September (1)
    • ►  March (2)
    • ►  January (1)
  • ►  2008 (5)
    • ►  December (4)
    • ►  November (1)

ಈ ಜಾಲತಾಣವನ್ನು ಸಿದ್ಧಪಡಿಸಿದವರು

ಈ ಜಾಲತಾಣವನ್ನು ಸಿದ್ಧಪಡಿಸಿದವರು
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಚಿತ್ರದುರ್ಗ