Friday, June 21, 2019




         "ಯೋಧ"
"ಖಾಲಾ...,  ನಿಮ್ ಕೈಲಿ ಆಗ್ದಿದ್ರೆ ಇಲ್ಲೇ ಇಟ್ಬಿಡಿ...ನಾನೇ ಮನೆಗೆ ತರ್ತೇನೆ...", ಅಬೀದಾ ಚಿಕ್ಕಮ್ಮ ಹಫೀಜಾಳಿಗೆ ಹೇಳಿದಳು. "ಹೌದು, ತುಂಬಾ ಸುಸ್ತಾಗ್ತಿದೆ...ಇಲ್ಲೇ ಇಡ್ತೀನಿ...ನಾನಿಲ್ಲೇ ಸ್ವಲ್ಪ ಹೊತ್ತು ಮರದ ಕೆಳಗೆ ಕೂತಿರ್ತೇನೆ...ನೀನು ಮನೆಗೆ ಹೋಗಿ ನಿನ್ನ ಹೊರೆಯನ್ನು ಇಳಿಸಿ ಬಾ...ಹಾಗೆ ಬರ್ತಾ ಬಿಸಿ ಬಿಸಿ ಖಾಹ್ವಾ ತಕ್ಕೊಂಡು ಬಾ...ಗಂಟಲು ಕಟ್ಟಿದೆ...", ಹಫೀಜಾ ಅಲ್ಲೇ ಇದ್ದ ಮರದ ಬುಡಕ್ಕೆ ಒರಗಿ ಕುಳಿತು "ಅಲ್ಲಾ...", ಎಂದು ನಿಟ್ಟುಸಿರು ಬಿಟ್ಟಳು.
  ಪಹೆಲ್ಗಾಮ್ ...ನಿಸರ್ಗದ ಚೆಲುವನ್ನೆಲ್ಲಾ ಬಾಚಿ ಹೊದ್ದುಕೊಂಡು ಕಾಶ್ಮೀರದಲ್ಲಿ ಮೈಚೆಲ್ಲಿರುವ ಪ್ರದೇಶ. ಎಲ್ಲಿ ನೋಡಿದರೂ ಹಚ್ಚ ಹಸಿರು. ಜೂನ್ ತಿಂಗಳ  ಆ ಪರಿಸರದಲ್ಲಿ ಸ್ವರ್ಗದ ತುಣುಕು ಅಲ್ಲೇ ಬಿದ್ದಿದೆ ಎಂಬಂಥ ಪ್ರಕೃತಿ. ಕಣ್ಣ ದೃಷ್ಟಿ ಹಾಯುವವರೆಗೂ ಹಸಿರು ಹೊದಿಕೆಯನ್ನು ಹೊದ್ದ ನೆಲ...ದಾರಿಯುದ್ದಕ್ಕೂ ವೃಕ್ಷಸಿರಿ...ಹಕ್ಕಿಗಳ ನಿನಾದ...ಬೆಳಗಿನ ಚುಮುಚುಮು ಚಳಿಯಲ್ಲಿ ಅಬೀದಾ ತನ್ನ ಚಿಕ್ಕಮ್ಮ ಹಫೀಜಾಳ ಜೊತೆ ಕಟ್ಟಿಗೆ ತುಂಡುಗಳನ್ನು ತರಲು ಹೋಗಿದ್ದಳು. ಆಗಲೇ ಹಫೀಜಾಗೆ ಸುಸ್ತಾಗಿದ್ದು!
   ಭೂಲೋಕದ ಸ್ವರ್ಗವಾದ ಕಾಶ್ಮೀರಕ್ಕೆ ಅಸಂಖ್ಯ ಪ್ರವಾಸಿಗರು ಬಂದು ಹೋಗುತ್ತಲೇ ಇರುತ್ತಾರೆ. ನಿಸರ್ಗಮಾತೆಯ ತುಂಬು ಯೌವನದ ಚೆಲುವನ್ನು ಕಣ್ತುಂಬಾ ತುಂಬಿಕೊಂಡು, ಜೀವನ ಪೂರ್ತಿ ಮರೆಯಲಾಗದ ಸ್ವರ್ಗ ನೋಟವನ್ನು ಹೃದಯದಲ್ಲಿಟ್ಟುಕೊಂಡು ವಾಪಸ್ಸು ತಮ್ಮ ಊರಿಗೆ ಹಿಂದಿರುಗುತ್ತಾರೆ. ಕಾಶ್ಮೀರದಲ್ಲೇ ವಾಸಿಸುವವರನ್ನು ಅದೃಷ್ಟವಂತರೆಂದು ಭಾವಿಸುತ್ತಾರೆ. ಅದು ನಿಜವೂ ಕೂಡ...ಕಾಶ್ಮೀರಿ ಜನರನ್ನು ನೋಡಿದಾಗ ಹಾಗೆಯೇ ಅನ್ನಿಸುತ್ತದೆ. ಅವರ ಕಾಯ, ಹಾಲಿನ ಮೈಬಣ್ಣ, ತಿದ್ದಿತೀಡಿದ ಅಂಗಾಂಗಗಳನ್ನು ನೋಡಿದಾಗ "ದೇವರು, ಇಲ್ಲಿ ಪ್ರಕೃತಿ ಸಿರಿಯನ್ನಷ್ಟೇ ಕೊಟ್ಟಿಲ್ಲ...ಇಲ್ಲಿರುವ ಜನರಿಗೂ ರಮ್ಯ ರೂಪ ಕೊಟ್ಟಿದ್ದಾನಲ್ಲಾ ", ಎಂಬ ಅಸೂಯೆಯೂ ಆಗುತ್ತದೆ. ಆದರೆ ಆ ಕಾಶ್ಮೀರಿ ಜನರ ನಿತ್ಯ ಜೀವನವನ್ನು ಕೇಳಿದಾಗ ಬೇರೆ ಪ್ರದೇಶಗಳಲ್ಲಿರುವವರ ಮನಸ್ಸು ಕರಗುವುದು ಖಂಡಿತ. ಚೆಂದುಳ್ಳಿ ಚೆಲುವೆಯರಾದ ಕಾಶ್ಮೀರಿ ಮಹಿಳೆಯರು ದಿನಾ ಬೆಳಿಗ್ಗೆ ಎದ್ದು ಕಾಡಿಗೆ ಹೋಗಿ ಕಟ್ಟಿಗೆ ತುಂಡುಗಳನ್ನು ಆರಿಸಿ, ಹೊರೆ ಕಟ್ಟಿಕೊಂಡು, ತಲೆಯ ಮೇಲಿಟ್ಟುಕೊಂಡು ಮನೆಗೆ ಬರಬೇಕು. ಮನೆಯ ಮುಂದಿನ ಪಡಸಾಲೆಯಲ್ಲಿ ಕಟ್ಟಿಗೆ ಇಡುವುದಕ್ಕೆಂದೇ ಒಂದು ಜಾಗ ಮಾಡಿರುತ್ತಾರೆ. ಅಲ್ಲಿ ಸಂಗ್ರಹ ಮಾಡುತ್ತಾ ಹೋಗಬೇಕು. ಅದು ಅಲ್ಲಿನ ಮಹಿಳೆಯರು ಚಾಚೂ ತಪ್ಪದೆ ಮಾಡುವಂತಹ ನಿತ್ಯ ಕಾಯಕ. ಏಕೆಂದರೆ ವರ್ಷದಲ್ಲಿ ಕೇವಲ ಆರೇಳು ತಿಂಗಳಷ್ಟೇ ಅವರು ಹೊರಗೆ ಓಡಾಡಬಹುದು. ಆಮೇಲೆ ಇನ್ನಾರು ತಿಂಗಳು ಮಂಜುಮುಸುಕಿ, ಇಡೀ ಪ್ರದೇಶ ಹಿಮದಿಂದ ಮುಚ್ಚಿಕೊಂಡುಬಿಡುತ್ತದೆ. ಆಗ ಯಾರೂ ಮನೆಯಿಂದ ಹೊರಗೆ ಹೆಜ್ಜೆಯಿಡುವುದಕ್ಕೂ ಸಾಧ್ಯವಿಲ್ಲ. ಆರು ತಿಂಗಳಿಗಾಗುವಷ್ಟು ಸಂಗ್ರಹಿಸಿದ್ದ ದವಸ-ಧಾನ್ಯಗಳಲ್ಲೇ ಜೀವನ ನಡೆಸಬೇಕು. ಕಾಡಿಗೆ ಹೋಗಿ ತಂದು ಶೇಖರಿಸಿದ್ದ ಕಟ್ಟಿಗೆಯನ್ನು ಉರಿಸಿ ಅಡುಗೆ ಮಾಡಿಕೊಳ್ಳಬೇಕು. ಹಾಗಾಗಿ ಅಲ್ಲಿನ ಮಹಿಳೆಯರು ದಿನವೂ ಕಟ್ಟಿಗೆ ತರಲು ಹೋಗಲೇಬೇಕು. ಗಂಡಸರು ಟ್ಯಾಕ್ಸಿ ಓಡಿಸುತ್ತಲೋ, ವ್ಯಾಪಾರ ಮಾಡುತ್ತಲೋ ಹಣ ಸಂಗ್ರಹ ಮಾಡುತ್ತಾರೆ. ಹಿಮ ಮುಸುಕಿದಾಗ ಅವರೂ ಸಹ ಮನೆಯೊಳಗೆ ಬಂಧಿಗಳಾಗಬೇಕು....ಅಷ್ಟೇ ಅವರ ಜೀವನ...ಅಲ್ಲಿ ಇನ್ನಾವುದೇ ರೋಚಕತೆಯಿಲ್ಲ, ಮನರಂಜನೆಯಿಲ್ಲ...ಅರ್ಧ ವರ್ಷ ಬಂಧನದ ಜೀವನ...ಇನ್ನರ್ಧ ವರ್ಷ ದುಡಿಮೆ...ಇದುವೇ ಆ ಸ್ವರ್ಗವಾಸಿಗಳ ಜೀವನ ರಾಗ.
 ಅಬೀದಾ ಸುಂದರಿಯರಲ್ಲಿ ಸುಂದರಿ. ಹಾಲ್ಬಿಳಿಪಿನ ಮೈಬಣ್ಣಕ್ಕೆ ನೀಳ ಮೂಗು, ಬೊಗಸೆ ಕಂಗಳು, ಕೆನ್ನೆ ಮೇಲಿನ ಗುಳಿ...ಇನ್ನಷ್ಟು ಮೆರುಗು ನೀಡಿದ್ದವು. ತುಂಬುಗೆನ್ನೆಗಳು ಯಾವಾಗಲೂ ಸೇಬಿನಂತೆ ರಾಗರಂಜಿತವಾಗಿರುತ್ತಿದ್ದವು. ತುಂಬು ಹರೆಯ  ಇನ್ನಷ್ಟು ಚೆಲುವನ್ನು ತುಂಬಿತ್ತು. ಮನೆಯಲ್ಲಿ ಆಗಲೇ ಮದುವೆಯನ್ನೂ ಮಾಡುವ ಆಲೋಚನೆಯೂ ಅಂಕುರಿಸಿತ್ತು. ಪಹೆಲ್ಗಾಮ್ ಮುಖ್ಯರಸ್ತೆಯೊಂದಕ್ಕೆ ಅಂಟಿಕೊಂಡ ಒಂದು ಸಣ್ಣ ಓಣಿಯಲ್ಲಿ ಅಬೀದಾಳ ಪುಟ್ಟ ಮನೆಯಿತ್ತು. ಅಬೀದಾ ಮನೆಗೆ ಹೋಗಬೇಕೆಂದರೆ ಮುಖ್ಯರಸ್ತೆಯ ಮೂಲಕವೇ ಹೋಗಬೇಕಾಗಿತ್ತು. ಅಲ್ಲಿ ದೊಡ್ಡ ದೊಡ್ಡ ಅಂಗಡಿಗಳಿದ್ದವು. ಹಾಗಾಗಿ ಜನರ ಓಡಾಟದ ಜಾಗವಾಗಿತ್ತು. ತುಂಬಾ ಜನರು ಓಡಾಡುತ್ತಾರೆಂದು ಅಲ್ಲಿರುವ ಅಂಗಡಿಗಳ ಮುಂದೆ ಸದಾಕಾಲವೂ ಭಾರತೀಯ ಸೈನಿಕರು ಕಾವಲು ಕಾಯುತ್ತಿದ್ದರು. ಒಂದೊಂದು ಅಂಗಡಿಯ ಮುಂದೆ ಒಬ್ಬರು ಅಥವ ಮೂವರು ಆಯುಧದಾರಿಗಳಾಗಿ, ಸಜ್ಜಾಗಿ ವಿಗ್ರಹಗಳಂತೆ ನಿಂತೇ ಇರುತ್ತಿದ್ದರು. ಅವರ ಪಾಳಿ ಮುಗಿದಮೇಲೆ ಬೇರೆ ಸೈನಿಕರು ಬಂದು ಕಾವಲು ಮುಂದುವರೆಸುತ್ತಿದ್ದರು. ಅಬೀದಾ ಮನೆಯ ಬಳಿ ಇರುವ ರಸ್ತೆಯಲ್ಲಿ ಬೆಳಗಿನ ಹೊತ್ತು ನಿಲ್ಲುವ ಕಾಯಕ ವೀರಶೇಖರನದಾಗಿತ್ತು. ವೀರಶೇಖರ ಕರ್ನಾಟಕದ ಬೀದರ್ ಜಿಲ್ಲೆಯ ಭಾಲ್ಕಿ ಎಂಬ ಪುಟ್ಟ ಗ್ರಾಮದವನು. ತಂದೆ ತಾಯಿ ಇಬ್ಬರೂ ಅಂಗೈಯಗಲದ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದರು. ವೀರಶೇಖರ ಮೂರನೆಯಮಗ. ಇಬ್ಬರು ಅಕ್ಕಂದಿರಿಗೆ ಮದುವೆಯಾಗಿತ್ತು. ಇನ್ನೂ ಇಬ್ಬರು ತಮ್ಮಂದಿರು, ಒಬ್ಬ ತಂಗಿ ಇದ್ದ ಕಡುಬಡತನದ ಕುಟುಂಬ ಅವನದು. ಚಿಕ್ಕಂದಿನಿಂದ ದೇಶಪ್ರೇಮ ನರನಾಡಿಗಳಲ್ಲಿ ವ್ಯಾಪಿಸಿದ್ದರಿಂದ ದೊಡ್ಡವನಾದ ಮೇಲೆ ಸೈನ್ಯಕ್ಕೆ ಸೇರಿದ. ಬಡತನದಲ್ಲೇ ಬೆಳೆದಿದ್ದರೂ ವೀರಶೇಖರ ಕಟ್ಟುಮಸ್ತಾದ ಆಳಾಗಿಯೇ ಇದ್ದ. ಎತ್ತರದ ನಿಲುವು, ಆಕರ್ಷಕ ಮೈಕಟ್ಟು, ತೇಜೋವಂತ ಮೊಗವನ್ನು ಹೊಂದಿದ್ದ ವೀರಶೇಖರ ಯೋಧನ ಉಡುಪಿನಲ್ಲಿ ಚೆಲುವನಾಗಿ ಕಾಣಿಸುತ್ತಿದ್ದ. ಎದೆ ಸೆಟೆಸಿ ವಿಗ್ರಹದಂತೆ ನಿಂತಿರುವ ಅವನನ್ನು ನೋಡಿದರೆ ಹೆಮ್ಮೆಯ ಭಾವ ಮೂಡುವಂತಿತ್ತು. 
       ದಿನವೂ ಅಬೀದಾ ಕಟ್ಟಿಗೆಯನ್ನು ಹೊತ್ತು ಮನೆಗೆ ಬರುವ ಸಮಯದಲ್ಲೇ ವೀರಶೇಖರ ಅಂಗಡಿಯ ಮುಂದೆ ಪಹರೆಗೆ ನಿಲ್ಲುತ್ತಿದ್ದ. ವಿಗ್ರಹದಂತೆ ಅಲುಗಾಡದೆ ನಿಲ್ಲುತ್ತಿದ್ದ ಅವನ ಕಣ್ಣ ಗುಡ್ಡೆಗಳು ಮಾತ್ರ ಕಂಡೂ ಕಾಣದಂತೆ ಅಲುಗಾಡುತ್ತಾ ಸುತ್ತಲೂ ವೀಕ್ಷಿಸುತ್ತಿದ್ದವೇ ಹೊರತು, ಅವನು ಮಾತ್ರ ಒಂದು ಹೆಜ್ಜೆಯೂ ಕದಲದೆ ನಿಲ್ಲುತ್ತಿದ್ದ. ಒಂದು ದಿನ ಅಬೀದಾ ಅವನ ಮುಂದೆ ಹಾದು ಹೋಗುವಾಗ ಅವಳು ಕಿವಿಗೆ ಧರಿಸಿದ್ದ ಕುಂದಲಾ ಕಳಚಿ ಬಿದ್ದಿತು. ಎರಡೂ ಕೈಗಳಿಂದಲೂ ತಲೆಯ ಮೇಲೆ ಕಟ್ಟಿಗೆ ಹೊರೆ ಹೊತ್ತಿದ್ದರಿಂದ ಅವಳಿಗೆ ಬಗ್ಗಿ ಅದನ್ನು ತೆಗೆದುಕೊಳ್ಳಲಾಗಲಿಲ್ಲ. ಅಸಹಾಯಕಳಾಗಿ ಅವಳು ನಿಂತಿದ್ದರೂ ವೀರಶೇಖರ ಗಂಭೀರವಾಗಿ ನಿಂತೇ ಇದ್ದ. ಅವಳು ಕಟ್ಟಿಗೆ ಹೊರೆಯನ್ನು   ಕೆಳಗೆ ಇಳಿಸಿ, ವೀರಶೇಖರನ ಕಾಲಬುಡದಲ್ಲೇ ಬಿದ್ದ ಕುಂದಲಾ ತೆಗೆದುಕೊಂಡು, ತಲೆ ಎತ್ತಿದ ಆ ಒಂದು ಕ್ಷಣದಲ್ಲಿ ಇಬ್ಬರ ಕಣ್ಣುಗಳೂ ಸಂಧಿಸಿದವು. ಅದೇಕೋ ಇಬ್ಬರ ಮೈಯಲ್ಲೂ ಮಿಂಚಿನ ಸಂಚಾರವಾದಂತಾಯಿತು. ಒಂದೇ ಕ್ಷಣ...ಅವನು ಸ್ಥಬ್ಧನಾಗಿ ನಿಂತೇ ಇದ್ದ. ಅವಳು ಕಟ್ಟಿಗೆ ಹೊರೆ ಹೊತ್ತುಕೊಂಡು ಮನೆಯ ಕಡೆ ಹೆಜ್ಜೆ ಹಾಕಿದಳು. ಅಂದಿನಿಂದ ದಿನವೂ ಅಬೀದಾ ಕಟ್ಟಿಗೆ ತರಲು ಹೋಗುವಾಗ, ಬರುವಾಗ ಎಲ್ಲೋ ಒಂದು ಕ್ಷಣ ಅವರ ನೋಟ ಸಂಧಿಸಿದಂತಾಗುತ್ತಿದ್ದಿತು. ಆದರೆ ಅದಕ್ಕೆ ಮೀರಿ ಮತ್ತೇನೂ ನಡೆಯಲೇ ಇಲ್ಲ. ಹೀಗೇ ಸುಮಾರು ದಿನಗಳಾದವು. ಬರುಬರುತ್ತಾ ಆ ಒಂದು ಕ್ಷಣಕ್ಕಾಗಿಯೇ ಕಾಯುತ್ತಿದ್ದೆವೇನೋ ಎಂಬ ಒಂದು ಸಣ್ಣ ಭಾವ ಇಬ್ಬರ ಮನದಲ್ಲೂ ಹರಿದಾಡತೊಡಗಿತು. 
            ಅಂದೂ ಸಹ ಹಾಗೇ ಆಯಿತು. ಕಡುಗೆಂಪು ಬಣ್ನದ ಫಿರನ್ ಮತ್ತು ಫೂಟ್ ತೊಟ್ಟ ಅಬೀದಾ ಎಂದಿಗಿಂತಲೂ  ಮೋಹಕವಾಗಿ ಕಾಣುತ್ತಿದ್ದಳು. ವೀರಶೇಖರನ ಕಣ್ಣುಗಳು ಕಂಡೂ ಕಾಣದಷ್ಟು ಮಿಸುಕಾಡಿದವು.  ಅಬೀದಾ ಅವನ ಮುಂದೆ ಬಂದಾಗ ಅವನೆಷ್ಟು ನಿಯಂತ್ರಿಸಿಕೊಂಡರೂ ಸಣ್ಣದಾಗಿ ಸೀನುವಂತಾಯ್ತು. ಅಬೀದಾ ಸುಮ್ಮನೆ ನಡೆದು ಮನೆಗೆ ಹೋದಳು. ಕಟ್ಟಿಗೆ ಹೊರೆಯನ್ನು ಮೂಲೆಯಲ್ಲಿ ಹಾಕಿ, ಚಿಕ್ಕಮ್ಮನಿಗಾಗಿ ಖಾಹ್ವಾ ಮಾಡಲು ಒಲೆಯ ಮೇಲೆ ನೀರಿಟ್ಟಳು. ಕುದಿಯುವ ನೀರನ್ನೇ ನೋಡುತ್ತಾ ನಿಂತಳು. ನೀರಿಗೆ ಕೇಸರಿ ದಳ, ಸಕ್ಕರೆ ಹಾಕಿದಳು. ಅದು ಕುದಿಯುತ್ತಿರುವಾಗ "ಏಕೋ ಅವನಿಗೂ ಶೀತ ಆದಂತಿದೆ.  ಸ್ವಲ್ಪ ಖಾಹ್ವಾ ಕೊಡಲೇ...", ಎಂದುಕೊಂಡಳು. ನಂತರ, "ನನಗೂ ಅವನಿಗೂ ಏನು ಸಂಬಂಧ...ಅಷ್ಟಕ್ಕೂ ಸೈನಿಕರಿಗೆ ನಾವೇನೂ ಕೊಡುವಂತಿಲ್ಲ. ಕೊಟ್ಟರೆ ಅನುಮಾನ ಬರುತ್ತದೆ...ದೊಡ್ಡ ಕದನವೇ ಆಗಬಹುದು!!  ಅವರೂ ಸಹ ಹಾಗೆಲ್ಲಾ ಏನೂ ತೆಗೆದುಕೊಳ್ಳುವುದಿಲ್ಲ...ಈ ಯೋಚನೆ ನನಗೇಕೆ ಬಂದಿತು...ಅಬ್ಬುಗೆ ಗೊತ್ತಾದರೆ ಏನಿಲ್ಲ", ಎಂದುಕೊಳ್ಳುತ್ತಾ ಚಕ್ಕೆ-ಏಲಕ್ಕಿಯ ಪುಡಿಯನ್ನು ಹಾಕಿ ಇನ್ನಷ್ಟು ಕುದಿಸಿದಳು. ಹೊಂಬಣ್ಣದ  ಖಾಹ್ವಾ ಸಿದ್ಧವಾದ ಮೇಲೆ ಪಿಂಗಾಣಿ ಕುಡಿಕೆಗೆ ಹಾಕಿಕೊಂಡು, ಚಿಕ್ಕಮ್ಮ ಹಫೀಜಾಗೆ ಕೊಡಲು ಹೋದಳು. ಅವಳು ಖಾಹ್ವಾ ಹಿಡಿದುಕೊಂಡು ಹೋಗುವಾಗ ಅದರ ಪರಿಮಳ ವೀರಶೇಖರನ ಮೂಗಿಗೆ ಬಡಿಯಿತು. "ನಾನೇಕೆ ಇವಳನ್ನು ಗಮನಿಸುತ್ತಿದ್ದೇನೆ....ಇದು ತಪ್ಪು...ನಾನು ಸೈನಿಕ...ಯಾರೋಡನೆಯೂ ಬೆರೆಯಬಾರದು...ಅದರಲ್ಲೂ ಅವಳು ಕಾಶ್ಮೀರಿ ಕನ್ಯೆ. ಎಷ್ಟೋ ಕಾಶ್ಮೀರಿಯರಿಗೆ ನಾವು ಸೈನಿಕರೆಂದರೆ ಆಗುವುದೇ ಇಲ್ಲ. ಅವಳನ್ನು ಮಾತನಾಡಿಸಿದರೂ ಸಾಕು...ದೊಡ್ಡ ಹಗರಣವಾಗುತ್ತದೆ...ಕ್ಯಾಪ್ಟನ್ ಏನಿಲ್ಲ...ಮಂಗಳಾರತಿ ಮಾಡಿಬಿಡುತ್ತಾರೆ...", ವೀರಸೇಖರ ಯೋಚನೆಗಳನ್ನು ಕೊಡವಿ ರಸ್ತೆಯೆಡೆಗೆ ದೃಷ್ಟಿ ನೆಟ್ಟ.
        ಮಾರನೆ ದಿನ ಅಬೀದಾ ಕಟ್ಟಿಗೆ ಹೊರೆ ಹೊತ್ತು ಬರುತ್ತಿರುವಾಗ ಅವಳ ಕಿವಿಯ ಕುಂದಲಾ ಮತ್ತೆ ಕೊಂಡಿ ಕಳಚಿ ಬಿದ್ದಿತು. ಈ ಬಾರಿ ವೀರಶೇಖರ ನಿಂತಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಬಿದ್ದಿತು. ವೀರಶೇಖರ ಸುಮ್ಮನೇ ನಿಂತಿದ್ದ. ಅಬೀದಾಳಿಗೆ ಏನನ್ನಿಸಿತೋ ಏನೋ ಒಂದರೆ ಕ್ಷಣ ನಿಂತವಳು, ಕಟ್ಟಿಗೆ ಹೊರೆಯನ್ನು ಕೆಳಗಿಳಿಸದೆ ಹಾಗೇ ಮುಂದೆ ಸಾಗಿ, ಮನೆಗೆ ಹೋದಳು. ಆಗಲೂ ವೀರಶೇಖರ ಸ್ಥಬ್ಧನಾಗಿ ನಿಂತೇ ಇದ್ದ. ಕುಂದಲಾ ಕಲ್ಲುಗಳ ಸಂಧಿಯಲ್ಲಿ ಬಿದ್ದಿದ್ದರಿಂದ ಅಲ್ಲಿ ನಡೆದಾಡುವ ಯಾರಿಗೂ ಕಾಣಲಿಲ್ಲ. ಮಧ್ಯಾಹ್ನವಾದಾಗ  ವೀರಶೇಖರನ ಪಾಳಿ ಮುಗಿಯಿತು. ಅವನ ಬದಲಿಗೆ ನಿಲ್ಲಲು ಬಲಬೀರ ಸಿಂಗ್ ಬಂದ. ಪರಸ್ಪರ ಸೆಲ್ಯೂಟ್ ಮಾಡಿದ ಮೇಲೆ, ವೀರಶೇಖರ ಆ ಜಾಗದಿಂದ ಕದಲಿದ. ಜೀಪ್ ಹತ್ತಲು ಹೋಗುವಾಗ , ಶೂ  ಸರಿ ಮಾಡಿಕೊಳ್ಳುವವನಂತೆ  ನಟಿಸಿ ಬಗ್ಗಿದ. ಮಿಂಚಿನಂತೆ ಆಕಡೆ ಈಕಡೆ ನೋಡಿ, ಅಬೀದಾಳ ಕಿವಿಯ ಕುಂದಲಾ ತೆಗೆದುಕೊಂಡು ಜೇಬಿಗಿಳಿಸಿದ. ಸಧ್ಯ ಯಾರೂ ಗಮನಿಸಲಿಲ್ಲ ಎಂದುಕೊಂಡು ಜೀಪ್ ಹತ್ತಿದ. ಆದರೆ ಅದನ್ನು ಇನ್ನೆರಡು ಕಂಗಳು ದಿಟ್ಟಿಸಿದವೆಂದು ಅವನಿಗೆ ಗೊತ್ತಾಗಲೇ ಇಲ್ಲ!! ಅಬೀದಾ ಮನೆಗೆ ಬಂದವಳೇ ಕಟ್ಟಿಗೆ ಹೊರೆಯನ್ನು ಮೂಲೆಗೆ ಹಾಕಿ,ಮನೆಯ ಹಿಂಬದಿಯ ಕಿಟಕಿಯಲ್ಲಿ ಕುಳಿತುಬಿಟ್ಟಿದ್ದಳು. ಆ ಕಿಟಕಿಯ ಮೂಲಕ ನೋಡಿದರೆ ವೀರಶೇಖರ ನಿಂತಿರುವುದು ಕಾಣಿಸುತ್ತಿದ್ದಿತು. ಅವಳಿಗೆಂತಹುದೋ ಕುತೂಹಲ. ಅಬ್ಬು ಬೇರೆ ಮನೆಯಲ್ಲಿ ಇರಲಿಲ್ಲ. ಅಮ್ಮಿ ತೀರಿ ಹೋಗಿ ನಾಲ್ಕು ವರಷಗಳಾಗಿದ್ದವು. ಹಫೀಜಾ ಚಿಕ್ಕಮ್ಮ ಅಮ್ಮಿಯ ತಂಗಿ. ಆಕೆಯನ್ನೇ ಅಬ್ಬು ಮರು ಮದುವೆಯಾಗಬಹುದಿತ್ತು. ಆದರೆ ಹಫೀಜಾ "ಅರ್ಧ ವಿಧವೆ". ಒಮ್ಮೆ ಅಬೀದಾಳೇ ತನ್ನ ಅಬ್ಬುನನ್ನು ಕೇಳಿದ್ದಳು. "ಅಬ್ಬು, ನೀನೇಕೆ ಖಾಲಾನ್ನ[ಚಿಕ್ಕಮ್ಮ] ಮದುವೆಯಾಗಬಾರದು?", ಎಂದು.  "ಅಯ್ಯೋ ಭೇಟಿ, ಹಫೀಜಾ ಅರ್ಧ ವಿಧವೆ. ಮದುವೆಯಾಗಲು ಬರುವುದಿಲ್ಲ" ಎಂದ ಅಬ್ಬು. ಮುಗ್ಧಳಾದ ಅಬೀದಾ ಏಕೆಂದು ಕೇಳಿದಾಗ, " ಗಂಡ ಸತ್ತಿರುವುದು ಖಚಿತವಾಗಿ ಗೊತ್ತಿದ್ದರೆ ಆಕೆ ವಿಧವೆ ಆಗ್ತಾಳೆ. ಆಗ ಅವಳನ್ನು  ಯಾರು ಬೇಕಾದರೂ ಮದುವೆಯಾಗಬಹುದು. ಆದರೆ ಹಫೀಜಾ ಗಂಡ ಭಯೋತ್ಪಾದನೆಯ ಚಟುವಟಿಕೆಯಲ್ಲಿ ಸಿಲುಕಿದ್ದ. ಅವನನ್ನು ಪೋಲೀಸರು ಬಂಧಿಸಿದ್ದರು ಅಂತ ಕೆಲವರು ಹೇಳ್ತಾರೆ. ಇನ್ನೂ ಕೆಲವರು ಭಯೋತ್ಪಾದಕರು ಕರೆದುಕೊಂಡು ಹೋದರು ಅಂತಾ ಹೇಳ್ತಾರೆ. ಇನ್ನೂ ಕೆಲವರು ಪೋಲೀಸರ ಗುಂಡಿಗೆ ಬಲಿಯಾದ ಅಂತಾನೂ ಹೇಳ್ತಾರೆ...ಹೀಗೆ ಗಂಡ ಸತ್ತಿರುವುದು ಅನುಮಾನವಿದ್ದಾಗ, ಆತನ ಹೆಂಡತಿಯನ್ನು ಅರ್ಧ ವಿಧವೆ ಎಂದು ಹೇಳ್ತಾರೆ. ಅವಳನ್ನು ಮದುವೆಯಾಗಲು ನಮ್ಮ ಧರ್ಮದಲ್ಲಿ ಸಮ್ಮತಿಯಿಲ್ಲ...", ಅಬ್ಬು ಹೇಳಿದಾಗ ಅಬೀದಾ ಸುಮ್ಮನಾಗಿದ್ದಳು. ಆಗಿನಿಂದ ಮದುವೆಯ ಬಗ್ಗೆ, ಗಂಡನ ಬಗ್ಗೆ ಅವಳಿಗೆ ಭಯ ಆವರಿಸಿತ್ತು. ಆ ಭಯವನ್ನೂ ಮೀರಿ ವೀರಶೇಖರನನ್ನು ನೋಡುವಾಗ ಒಂದು ತೆಳುವಾದ ಲಹರಿ ಹರಿದಾಡುತ್ತಿದ್ದಿತು. ಅವಳ ತಂದೆಗೋ ಇದ್ದೊಬ್ಬ ಮಗಳ ಮದುವೆ ಮಾಡುವ ಚಿಂತೆಯಷ್ಟೇ ಇದ್ದಿತು. ಆ ದಿನವೂ ಯಾವುದೋ ಗಂಡು ನೋಡಲು ಹೋಗಿದ್ದ. ಕೆಲಸವೇನೂ ಇರದಿದ್ದರಿಂದ ಅಬೀದಾ ಕಿಟಕಿಯ ಬಳಿಯೇ ಕುಳಿತಳು. ವೀರಶೇಖರ ಹೋಗುವಾಗ ತನ್ನ ಕುಂದಲಾ ತೆಗೆದುಕೊಂಡದ್ದು ಸ್ಪಷ್ಟವಾಗಿ ಕಂಡಿತು. ಅವಳ ಕಂಗಳು ಅರಳಿದವು. ಅವಳ ಹೃದಯ ನಗಾರಿಯಂತೆ ಹೊಡೆದುಕೊಂಡಿತು. 
       ಬೆಳಿಗ್ಗೆ ಅಬೀದಾ ಕಟ್ಟಿಗೆ ತರಲು ಹೊರಟಾಗ ಅವಳ ಅಬ್ಬು ," ಬೇಟಿ, ಬೇಗ ಬಂದು ಬಿಡು...ಇವತ್ತು ನಿನ್ನ ಮದುವೆ ನಿಶ್ಚಯ ಮಾಡ್ತೀವಿ, ಹಿಮ ಬೀಳೋದ್ರೊಳಗೆ ಮದುವೆ ಮಾಡ್ಬೇಕು", ಎಂದ. ಅಬೀದಾಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಸುಮ್ಮನೆ ತಲೆಯಾಡಿಸಿ ಕಟ್ಟಿಗೆ ತರಲು ಹೋದಳು. ಅಂಗಡಿಯ ಮುಂದೆ ಬಂದಾಗ, ಹೇಗೋ ಧೈರ್ಯ ಮಾಡಿ ಕಣ್ಣೆತ್ತಿ ನೋಡಿದಳು. ಆದರೆ ಅಲ್ಲಿ ವೀರಶೇಖರ  ಇರಲಿಲ್ಲ!! ಆ ಜಾಗದಲ್ಲಿ ಬೇರೆ ಸೈನಿಕ ನಿಂತಿದ್ದ. ಒಳಗೇ ವೇದನೆಯ ಎಳೆಯೊಂದು ಹರಿದಾಡಿದಂತಾಯ್ತು. "ಅವನೇಕೆ ಇಂದು ಬಂದಿಲ್ಲ...ಬೇರೆ ಏರಿಯಾದಲ್ಲಿ ಪಹರೆಗೆ ಹೋಗಿರಬಹುದೇ...ಏಕೆ...ಏಕೆ...ಇನ್ನು ಅವನು ನಂಗೆ ಸಿಗುವುದಿಲ್ಲ...ನಾನಿನ್ನು ಅವನ ಬಗ್ಗೆ ಯೋಚಿಸಬಾರದು...ಅಬ್ಬುಗೆ ಗೊತ್ತಾದರೆ ಏನಿಲ್ಲ. ಅಬ್ಬುಗೆ ಮೊದ್ಲೇ ಪೊಲೀಸರು, ಸೈನಿಕರು, ಭಯೋತ್ಪಾದಕರು...ಅಂದ್ರೇ ಆಗೋಲ್ಲ..ಎಲ್ಲಿ ನಾನೂ ಮುಂದೆ ಅರ್ಧ ವಿಧವೆ ಆಗಿಬಿಡ್ತಿನೋ ಅಂತಾ ಭಯ...ಅದಕ್ಕೇ ನನ್ನ ಯಾರಾದರೂ ವ್ಯಾಪಾರಿಗೊ, ಟ್ಯಾಕ್ಸಿ ಡ್ರೈವರ್ ಗೋ ಕೊಟ್ಟು ಮದುವೆ ಮಾಡಬೇಕಂತ ಇರೋದು...", ಯೋಚಿಸುತ್ತಲೇ ಕಟ್ಟಿಗೆ ಹೊರೆಯನ್ನು ಹೊತ್ತು ತಂದಳು. ಕೆಲವು ದಿನಗಳಾದವು. ಅವನು ಕಾಣಲೇ ಇಲ್ಲ. ಅವಳ ಮದುವೆಯೂ ಸರಳವಾಗಿ ನಡೆಯಿತು. ನೆಲಹಾಸು ಮಾರುವ ಇಮ್ರಾನ್ ಅವಳನ್ನು ವರಿಸಿ, ತನ್ನ ಮನೆಗೆ ಕರೆದುಕೊಂಡು ಹೋದ. ಗಂಡನ ಮನೆಗೆ ಹೋಗುವಾಗಲೂ ತಿರುತಿರುಗಿ ನೋಡಿದಳು. ಅಲ್ಲಿ ವೀರಶೇಖರ ಕಾಣಿಸಲಿಲ್ಲ!!
                                                            *                    *                      *                    *                   *
      ಅಂದು ಬೇತಾಬ್ ವ್ಯಾಲಿಯ ಪ್ರದೇಶದಲ್ಲಿ ಕೆಲಸ ಮುಗಿಸಿ, ಕ್ಯಾಂಪ್ ಗೆ ವಾಪಸ್ಸು ಬಂದ ವೀರಶೇಖರನಿಗೆ ತುಂಬಾ ಸುಸ್ತಾಗಿತ್ತು. ಹದವಾದ ಬಿಸಿನೀರಿನಲ್ಲಿ ತುಂಬಾ ಹೊತ್ತು ಸ್ನಾನ ಮಾಡಿ ಬಂದಮೇಲೆ ಮನಸ್ಸಿಗೆ ಸ್ವಲ್ಪ ಹಾಯೆನಿಸಿತು. ಊಟದ ಹಾಲಿಗೆ ಹೋಗಲು ಸಿದ್ಧನಾಗತೊಡಗಿದ. ವಾರ್ಡ್ ರೋಬ್ ತೆಗೆದು, ಅಡಿಯಲ್ಲಿದ್ದ ಟೀ ಶರ್ಟ್ ಎಳೆದು ತೆಗೆದುಕೊಂಡ. ಏನೋ ಕೆಳಗೆ ಬಿದ್ದಂತಾಯಿತು. ಜೊತೆಗೆ ಗೆಜ್ಜೆಯ ಸದ್ದೂ ಬಂದಿತು. ಕುತೂಹಲದಿಂದ ಬಗ್ಗಿ  ತೆಗೆದುಕೊಂಡು ನೋಡಿದರೆ ಅದು,  ಅಬೀದಾಳ ಕಿವಿಯ ಕುಂದಲಾ!! ಅದನ್ನು ಕೈಯಲ್ಲಿ ಹಿಡಿದು, "ಓ...ಇದಾ, ಆ ಹುಡುಗಿಯ ಕಿವಿಯ ಆಭರಣ...ಎಂಥ ಸುಂದರಿ ಆಕೆ...ಅವಳ ಮೇಲೆ ನನಗೇಕೆ ಮೋಹವಾಯ್ತೋ ಗೊತ್ತಿಲ್ಲ! ಅವಳಿಗೂ ನನ್ನ ಮೇಲೆ ಇಷ್ಟವಾಗಿತ್ತು...ಅವಳ ಕಣ್ಣುಗಳೇ ಹೇಳುತ್ತಿದ್ದವು...ಈ ಕುಂದಲಾನ್ನ ನಾನು ತೆಗೆದುಕೊಳ್ಳಲಿ ಅಂತಾನೇ ಅವಳು  ಆ ದಿನ  ಹಾಗೆ ಬಿಟ್ಟು ಹೋಗಿದ್ದು!! ಅವಳ  ಹೃದಯದ ಭಾಷೆ ನನಗೆ ಚೆನ್ನಾಗಿ ಅರ್ಥವಾಗಿತ್ತು...ಆದರೆ, ನಾವಿಬ್ಬರೂ ಒಂದಾಗೋದು ಈ ಜನ್ಮದಲ್ಲಿ ಸಾಧ್ಯವೇ?!!  ಎಂದಿಗೂ ಸಾಧ್ಯವಿಲ್ಲ...ಅವಳಿಗೆ  ಕಾಶ್ಮಿರ ಬಿಟ್ಟು ಬೇರೆ ಪ್ರದೇಶ ಗೊತ್ತಿಲ್ಲ....ನಾನು ನೋಡಿದ್ರೆ ಅಪ್ಪಟ ಬಯಲುಸೀಮೆಯವನು.  ಬೀದರ್ ನ ಆ ಉಗ್ರ ಬಿಸಿಲ ಝಳವನ್ನು ಈ ಹಾಲಿನ ಗೊಂಬೆ ತಡೆದುಕೊಂಡೀತೆ?! ...ಅವಳು ತಡೆದುಕೊಂಡರೂ...ಅವ್ವ ಅವಳನ್ನು  ಸೊಸೆಯೆಂದು ಸ್ವೀಕರಿಸಿಯಾಳೇ...ಈ ಕಾಶ್ಮೀರಿ ಹುಡುಗಿಯನ್ನು ನಾನೇನಾದರೂ ಮದುವೆಯಾದರೆ ಅವ್ವ ಎದೆ ಹೊಡೆದುಕೊಂಡಾಳು....ಇನ್ನೂ ನನಗೆ ತಮ್ಮ-ತಂಗಿಯರ ಜವಾಬ್ದಾರಿ ಇದೆ...ನಾನೀಗಲೇ ಮದುವೆಯಾಗುವ ಹಾಗಿಲ್ಲ...ಈ ಹುಡುಗಿಯನ್ನು ಮದುವೆಯಾಗಿ ನಾನು ಇಲ್ಲೇ  ನೆಲೆಸುವಂತೆಯೂ ಇಲ್ಲ!!  ಹಾಗೇನಾದರೂ ನಾನು ಆಲೋಚನೆ ಮಾಡೋದು ಗೊತ್ತಾದರೂ ಸಾಕು, ನನ್ನ ಕೆಲಸಾನೇ ಹೋಗುತ್ತೆ!...ಇದು ಸಾಧ್ಯವೇ ಇಲ್ಲದಿರುವಾಗ ಈ ರೀತಿ ಆಲೋಚನೆ ಮಾಡುವುದು ತರವೇ...?!   ಬೇಡವೇ ಬೇಡ...ನಾನು ಹೀಗೆ ಚಿಂತಿಸಲೇಬಾರದು...ಆ ಹುಡುಗಿ ನನ್ನ ಜೀವನದಲ್ಲಿ  ಒಂದು ಝಲಕ್ ಮಾತ್ರ!! ಅವಳೆಂದೂ ನನ್ನವಳಾಗಲು ಸಾಧ್ಯವೇ ಇಲ್ಲ...ಆ ಏರಿಯಾಕ್ಕೆ ನಾನು ಹೋಗೋದು ಮತ್ತೆ ಯಾವಾಗಲೋ ಏನೋ...ಮತ್ತೇ ಆ ಹುಡುಗಿಯನ್ನು ನಾನು ನೋಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ! ಅವಳೇನಿದ್ದರೂ  ಒಮ್ಮೆ  ನವಿರಾಗಿ  ಸೋಕಿದ ಒಂದು ಮೌನ ಲಹರಿಯಷ್ಟೇ....ಎಷ್ಟಾದರೂ ಯೋಧನಲ್ಲವೇ ನಾನು...ಎಲ್ಲದರ ವಿರುದ್ಧವೂ ಹೋರಾಡಬೇಕು...ಭಾವನೆಗಳ ವಿರುದ್ಧವೂ!! ನನ್ನ ಹಾಗೆ ಅವಳೂ ಸಹ ಯೋಧಳೇ!!... ಎಲ್ಲೇ ಇರಲಿ ಆ ಚೆಲುವೆ...ಸುಖವಾಗಿರಲಿ...", ಮುಗುಳ್ನಗುತ್ತಾ  ಕುಂದಲಾವನ್ನು  ಒಮ್ಮೆ ಪ್ರೀತಿಯಿಂದ ಸವರಿ,  ತನ್ನ ಸೂಟ್ ಕೇಸಿನ ತಳದಲ್ಲಿ  ಭದ್ರವಾಗಿ  ಮುಚ್ಚಿಟ್ಟ.
                                                               -ಕಿರಣ್ ಪ್ರಸಾದ್ ರಾಜನಹಳ್ಳಿ
# 691/ಸಿ, "ಅತೃ", 22ನೇ ಕ್ರಾಸ್,
19ನೇ ಮೇನ್, ಹೆಚ್.ಎಸ್.ಆರ್ 2ನೇ ಸೆಕ್ಟರ್,
ಬೆಂಗಳೂರು-560102
ಫೋನ್: 9449459766
Show quoted text
--
KIRAN PRASAD R

                               

                                                
                        

"ಬಾಲ್ಕನಿಯಲ್ಲೊಂದು ಗೋರಂಟಿ ಗಿಡ"

          "ಒಂದು ದಿನ ಕಳೆದೇ ಬಿಟ್ಟಿತು..., ಅವನಿಲ್ಲವಾಗಿ!...ಇದೇ ಬಾಲ್ಕನಿಯಿಂದ, ನೆನ್ನೆ ಇದೇ ಹೊತ್ತಿಗೆ ಸರಿಯಾಗಿ ಗೇಟಿನ ಬಳಿ ಬಂದ ಅವನ ಜಡವಾದ ದೇಹವನ್ನು ನೋಡಿದ್ದು!!.... ಶಾಶ್ವತವಾಗಿ ನಿಶ್ಚಲನಾಗಿದ್ದ ಅವನನ್ನು  ಅಂಬುಲೆನ್ಸ್ ನಿಂದ  ಕೆಳಗಿಳಿಸಿದಾಗ, ನಾನು ಒಂದೇ ಉಸಿರಿನಲ್ಲಿ ಕೆಳಗೆ ಓಡಿಬಂದಿದ್ದು...ಎಲ್ಲಾ ಸಂಬಂಧಗಳನ್ನೂ ಕಳೆದುಕೊಂಡಿದ್ದೆ ಎಂದು ಭಾವಿಸಿದ್ದವಳು ಹಾಗೇಕೆ ಓಡಿಬಂದೆ...ಸಾವು  ಕ್ಷಣಮಾತ್ರದಲ್ಲಿ ಎಲ್ಲವನ್ನೂ ಮರೆಸಿಬಿಡುತ್ತಾ?...ಆದರೆ ನಾನೇಕೆ ದುಃಖಿಸಲಿಲ್ಲ?....ಒಂದು ಹನಿ ಕಣ್ಣೀರೂ ಕೆನ್ನೆ ಸೋಕಲಿಲ್ಲ!!...ಆಘಾತ  ಆಗಿದ್ದು ದಿಟ...ಕೆಲವೇ  ಕ್ಷಣಗಳಲ್ಲೇ ಚೇತರಿಸಿಕೊಂಡೆ...ಇವನ ಸಾವಿಗೆ ನಾನೇಕೆ ಸ್ಪಂಧಿಸಲಿ?....ಸೆಟೆದು ನಿಲ್ಲಬೇಕೆಂದುಕೊಳ್ಳುವಷ್ಟರಲ್ಲಿ ಸಾವಿರಾರು ಜನರು ನೆರೆದಿದ್ದರು...ಮೀಡಿಯಾದವರ ದೊಡ್ಡ ಗುಂಪು ಇನ್ನಷ್ಟು ಜನರು ಸೇರಲು ಕಾರಣವಾಯ್ತು...ಲೋಕದ ಕಣ್ಣಿಗೆ ನಾನು ಅವನ ಧರ್ಮಪತ್ನಿ....ಯಾರೋ ಸಾಂತ್ವನಿಸಿದರು...ಯಾರೋ ತಲೆ ಸವರಿದರು...ಮತ್ತಾರೋ ಅವನ ಜಡದೇಹದ ಪಕ್ಕವೇ ಕುರ್ಚಿ ಹಾಕಿ ನನ್ನನ್ನು ಕೂಡಿಸಿದರು...ಇನ್ನಾರೋ ಬಂದು ಅಪ್ಪಿಕೊಂಡು ಕಣ್ಣೀರು ಸುರಿಸಿದರು....ಅಲ್ಲಿಂದ ಹೇಗೆ ಕದಲಲಿ?...ಸಾವಿರ ಸಾವಿರ ಕಣ್ಣುಗಳು ಭೂತಕನ್ನಡಿಯಾಗಿದ್ದವು, ಜೊತೆಗೆ ಕ್ಯಾಮೆರಾಗಳ ಭೂತಕನ್ನಡಿಗಳು ನನ್ನ ಮೊಗದ ಮೇಲೇ ನೆಟ್ಟಿದ್ದವು...ಬೆಳಕಿನಲ್ಲಿ ಬಂಧಿಯಾಗಿದ್ದ ನಾನು ತಪ್ಪಿಸಿಕೊಳ್ಳುವುದೆಂತು?...ಸೆರಗನ್ನು  ಕುತ್ತಿಗೆಯ  ಪೂರಾ ಹೊದ್ದು, ಗಾಂಬಿರ್ಯದಿಂದ ಕುಳಿತು ಅವನನ್ನೇ ದಿಟ್ಟಿಸತೊಡಗಿದ್ದೆ....ಏಕೆಂದರೆ ಬೇರೆಲ್ಲೂ ನೋಡುವಂತಿರಲಿಲ್ಲ. ಅವನೊಬ್ಬನನ್ನು ಬಿಟ್ಟು ಉಳಿದೆಲ್ಲರೂ ನನ್ನನ್ನೇ ದಿಟ್ಟಿಸುತ್ತಿದ್ದರಲ್ಲ!!...ನನಗೆ ಎಲ್ಲ ಕೊಟ್ಟವನು...ಎಲ್ಲವನ್ನೂ ಕಸಿದುಕೊಂಡವನು....ಶಾಂತವಾಗಿ ಮಲಗಿದ್ದಾನೆ...ಎಷ್ಟೆಲ್ಲಾ ಬಣ್ಣಗಳನ್ನು ಎರಚಿದವನು...ಇಂದು ನಿತ್ರಾಣ!... ಅವನ ಮಾನಸ ಪುತ್ರ ಮೂರ್ತಿ ಸೋತು ಅವನ  ಪಕ್ಕದಲ್ಲೇ ನಿಂತಿದ್ದಾನೆ. ಆದರೂ  ಎಲ್ಲರನ್ನೂ...ಎಲ್ಲರನ್ನೂ ಸಂಭಾಳಿಸುತ್ತಿದ್ದಾನೆ. ಒಮ್ಮೆ ಮನಸಾರೆ ಅತ್ತುಬಿಡಮ್ಮಾ ಎಂದು ಉಲಿದ ದನಿಗಳು ಎಷ್ಟೋ...ಸುಮ್ಮನೆ ಕಣ್ಣೀರು ಬಂದೀತಾದರೂ ಹೇಗೆ?...ಬರುವುದಾದರೂ ಯಾಕೆ?...ಮೌನಕ್ಕೆ ಶರಣಾದೆ...ದುಃಖ ಹೆಪ್ಪುಗಟ್ಟಿದೆ ಎಂಬ ಗಾಬರಿ ಎಲ್ಲರಿಗೂ...ನನ್ನನ್ನು ಮಾತಬಾಡಿಸಲೂ ಹೆದರಿಕೆ ಜನರಿಗೆ...ಅದೇ ಸಮಯದಲ್ಲಿ ಯಾರೋ ಒಬ್ಬ ಬಂದು ಮೂರ್ತಿಯ ಕಿವಿಯಲ್ಲಿ ಏನೋ ಉಸಿರಿದ. ಎಷ್ಟೆಂದರೂ ಮೂರ್ತಿ ಅವನ ಬಲಗೈ ಬಂಟನಾಗಿದ್ದನಲ್ಲವೇ....ಅವನಿಗೆ ಗೊತ್ತಿಲ್ಲದ್ದು ಏನಿದೆ?...ಮೂರ್ತಿಯ ಮೊಗ ಮತ್ತಷ್ಟು ಗಾಬರಿಯಾಗಿದ್ದು ನನಗೆ ಗೋಚರಿಸಿತು...'ಏನಾಯ್ತು?' ಮೆಲ್ಲ ಪಿಸುಗುಟ್ಟಿದೆ...' ಆಕೆ ಮೂರ್ಚೆ ಹೋಗಿ ಬಿದ್ದುಬಿಟ್ಟಿದ್ದಾರಂತೆ...ಅಯ್ಯನವರ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದರಂತೆ' ಮೂರ್ತಿ ಅಳುಕುತ್ತಲೇ ಉಸುರಿದ. ನಾನು ಮತ್ತಷ್ಟು ಗಂಭೀರಳಾದೆ...ಈ ದಿನದ ನನ್ನ ಅಳುನುಂಗಿದ ಕಾರಣಗಳು ಒಂದೊಂದಾಗಿ ನೆನಪಾದವು....

"ಸುನೂ..., ನಿನ್ನ  ಉದ್ಯಮಕ್ಕೆ ಸಿಕ್ಕಾಪಟ್ಟೆ ಒಳ್ಳೇ ರೆಸ್ಪಾನ್ಸ್ ಬರ್ತಿದೆ. ಈಗ ಎಲ್ಲರಿಗೂ ಕಿರುಧಾನ್ಯಗಳ ಮಹತ್ವದ ಬಗ್ಗೆ ಅರಿವಾಗುತ್ತಿದೆ. ನಿನ್ನ ಫ್ಯಾಕ್ಟರಿಯಲ್ಲಿ ತಯಾರಾಗುವ ಕಿರುಧಾನ್ಯಗಳ ತಿನಿಸುಗಳು, ಪೇಯಗಳು ಮಾರುಕಟ್ಟೆಯಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಟ್ಟಿವೆ. ಅವುಗಳ ರುಚಿಗೆ,  ಶುದ್ಧ ಮೇಕಿಂಗ್ ಗೆ ಜನ ಮಾರುಹೋಗುತ್ತಿದ್ದಾರಂತೆ....ಬೇಡಿಕೆ ಅಪಾರವಾಗಿದೆ...ನೀನು ಇದನ್ನೇ ಮುಂದುವರಿಸು...ಈ ಉದ್ಯಮವನ್ನು ಇನ್ನಷ್ಟು ವಿಸ್ತರಿಸು...ಎಷ್ಟು ಸಾಧ್ಯವೋ ಅಷ್ಟು ಸಪೋರ್ಟ್ ನಾನು ಕೊಡ್ತೇನೆ...ನನ್ನ ರಾಜಕಾರಣದ ಕೆಲಸದಲ್ಲಿ ಬಿಡುವಾಗೋದು ಕಷ್ಟ...ಆದರೂ ಕೈಲಾದಷ್ಟು ಸಹಾಯ ಮಾಡುವೆ...", ಪತಿಯ ಪ್ರೀತಿಯ ಬೆಂಬಲಕ್ಕೆ ಕರಗಿಹೋದೆ. ಕಣಕಣದಲ್ಲೂ ಉತ್ಸಾಹದ ಹರಿದಾಟ. ಹುರುಪಿನಿಂದ ಮುನ್ನುಗ್ಗಿದೆ....ಒಂದೊಂದು ಮೆಟ್ಟಿಲೂ ಜಯದ ಪತಾಕೆ ಹಾರಿಸತೊಡಗಿತು...ನನ್ನದೇ ಐಡೆಂಟಿಟಿಯ ಪ್ರಖರ ಬೆಳಕಿನ ಕೆಳಗೆ ಮಬ್ಬುಗತ್ತಲು ಮೂಡತೊಡಗಿತು. ಸಮಯ ಎಂಬ ಸರದಾರ ಕ್ಷಣಮಾತ್ರವೂ ವಿರಮಿಸಲು ಬಿಡಲಿಲ್ಲ. ಮನೆಯ ಬಗ್ಗೆ ಚಿಂತಿಸಲೂ ಅವಕಾಶ ನೀಡಲಿಲ್ಲ. ಇಷ್ಟಾದರೂ  ಪತಿಯ ಮುಖದ ಮೇಲಿನ ಪ್ರೀತಿಯ ಮುಗುಳ್ನಗೆ ಮಾಸಲಿಲ್ಲ...ಜೊತೆಗೆ ಹೆಮ್ಮೆಯ ಭಾವವೂ ಸೇರಿದ್ದು ನೋಡಿ ಮಮತೆ, ಕರುಣೆ ಉಕ್ಕಿಬಂದಿತ್ತು. ಒಂದೆರಡು ಬಾರಿ ಆತ  ಊಟ ಮಾಡದೇ ಮಲಗಿದ್ದು ನೋಡಿ ನನ್ನೊಳಗಿನ ಅಮ್ಮ ಮಿಸುಕಾಡಿದಳು. ಮನೆಯ  ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳಲು ತಾಯಿಯಂತಹ ಹೆಂಗರಳು ಬೇಕೆಂಬ  ಆಲೋಚನೆ ಬಂದಾಗಲೇ ಆಕೆ ನೆನಪಾಗಿದ್ದು. ಗಂಡನನ್ನು ಕಳೆದುಕೊಂಡು ಮಾನಸಿಕ ಅಸ್ವಸ್ಥ ತಮ್ಮನನ್ನು ಸಾಕುತ್ತಾ  ಕುಗ್ರಾಮದಲ್ಲಿ ಬವಣೆ ಪಡುತ್ತಿದ್ದ ಆಕೆಯನ್ನು ಕರೆದುಕೊಂಡು ಬಂದು, ಮನೆಯ ಜವಾಬ್ದಾರಿ ಕೊಟ್ಟೆ. ಕೆಲವೇ ದಿನಗಳಲ್ಲಿ ಮನೆ ನಂದಗೋಕುಲದಂತೆ ಕಂಗೊಳಿಸತೊಡಗಿತು. ಎಲ್ಲಾ ಕಡೆ ಅಚ್ಚುಕಟ್ಟು...ಎಲ್ಲಾ ಕೆಲಸಗಳೂ ವ್ಯವಸ್ಥಿತವಾಗಿ ನಡೆಯತೊಡಗಿದಾಗ ನಿರಮ್ಮಳೆ ನಾನು...ಆದರೇನು ವಯಸ್ಸಿಗೂ, ದೇಹಕ್ಕೂ ಇರುವ  ಮತ್ಸರ ಮಾತ್ರ ನಿಲ್ಲಲಿಲ್ಲ. ಅದರ ಫಲವಾಗಿ ಕಪ್ಪು ಕೇಶರಾಶಿಯೊಳಗೆ ಬೆಳ್ಳಿ ರೇಖೆಯೊಂದು ಮಿನುಗಿತು. ಆಕೆಯೇ ಅದನ್ನು ಮೊದಲು ಗುರುತಿಸಿದ್ದು. "ಅಯ್ಯೋ, ಬಿಡು...ಬುದ್ದಿವಂತಿಕೆಯ ಲಕ್ಷಣ...ಬೇಸರವೇಕೆ...?", ಉಡಾಫೆ ನನ್ನದು. ಆಕೆ ಸುಮ್ಮನಿರಲಿಲ್ಲ. ಮನೆಯ ಹತ್ತಿರದ ನರ್ಸರಿಗೆ ಹೋಗಿ ಗೋರಂಟಿ ಸಸಿ ತಂದಳು. ಬಾಲ್ಕನಿಯಲ್ಲಿ ದೊಡ್ಡ ಕುಂಡದಲ್ಲಿ ಹಾಕಿ ಪೋಷಿಸತೊಡಗಿದಳು. ಅದು ತಮಾಷೆಯಾಗಿ ಕಂಡಾಗ, "ಅಲ್ವೇ...ಒಳ್ಳೊಳ್ಳೆ ಹೇರ್ ಡೈಗಳು ಸಿಗುತ್ತವೆ...ಸಿದ್ದಪಡಿಸಿದ ಮೆಹೆಂದಿ ಪುಡಿಯೇ ಸಿಗುತ್ತಲ್ಲಾ...ಇಷ್ಟು ಕಷ್ಟ ಪಡಬೇಕೆ?", ಎಂದಾಗಲೆಲ್ಲಾ ಆಕೆ ತಲೆಯಾಡಿಸುತ್ತಿದ್ದಳು. "ಅಕ್ಕಾ, ಅವೆಲ್ಲಾ ಒಳ್ಳೆಯದಲ್ಲಾ...ಕೂದಲು ಹಾಳಾಗುತ್ತದೆ...", ಹಠ ಅವಳದು. ಅವಳ ಆರೈಕೆಯಲ್ಲಿ ಗೋರಂಟಿ ಗಿಡ ಸೊಂಪಾಗಿ ಬೆಳೆಯಲೇ ಬೇಕಾಯ್ತು. ವಾರಕ್ಕೊಮ್ಮೆ ಅವಳ ಮಾತು ನಾನು ಕೇಳಲೇಬೇಕಾಯ್ತು. ಗೋರಂಟಿ ಗಿಡದಲ್ಲಿ ಬಲಿತ  ಎಲೆಗಳನ್ನು ಆರಿಸಿ, ಆರಿಸಿ ಕಿತ್ತು, ನೀರಿನಲ್ಲಿ ತೊಳೆದು ಕಲ್ಲಿನ ಮೇಲೆ ಅರೆಯಲು ಕುಳಿತಳೆಂದರೆ ಅವಳನ್ನು ಯಾರೂ ಕರೆಯುವಂತೆಯೇ ಇರಲಿಲ್ಲ. ನುಣ್ಣಗೆ ಅರಿದ ಮೇಲೆ, ಅದನ್ನೆಲ್ಲಾ ಪಿಂಗಾಣಿ ಬಟ್ಟಲಿಗೆ ಬಳಿದು, ಬಳಿದು ತುಂಬಿ, ಅದಕ್ಕೊಂದಿಷ್ಟು ತಾಜಾ  ಗಟ್ಟಿ ಮೊಸರು, ಒಂದೆರಡು ಹನಿ ನೀಲಗಿರಿ ಎಣ್ಣೆ,  ಒಂದು ಚಮಚ  ಬೆಟ್ಟದ ನಲ್ಲಿಕಾಯಿ ಪುಡಿ, ಅರ್ಧ ಹೋಳು ನಿಂಬೆರಸ  ಎಲ್ಲಾ ಹಾಕಿ, ಹದವಾಗಿ ಕಲಸಿ ಮುಚ್ಚಿಡುತ್ತಿದ್ದಳು. ಅದು ಚೆನ್ನಾಗಿ ಬಣ್ಣ ಬಿಟ್ಟುಕೊಂಡ ಮೇಲೆ ನನ್ನನ್ನು ಎಳೆದುಕೊಂಡು ಹೋಗಿ ಹಿತ್ತಲಲ್ಲಿ ಕುರ್ಚಿ ಹಾಕಿ ಕುಳ್ಳರಿಸುತ್ತಿದ್ದಳು. ನಾನು ರಗಳೆ ಮಾಡಬಾರದೆಂದು ನನ್ನಿಷ್ಟದ ಪುಸ್ತಕವೊಂದನ್ನು  ಕೈಯಲ್ಲಿಡುತ್ತಿದ್ದಳು. ನನ್ನ ಕೂದಲಿನ  ಎಳೆ ಎಳೆಯನ್ನೂ ಬಗೆದು ಗೋರಂಟಿಯನ್ನು  ಲೇಪಿಸುತ್ತಿದ್ದಳು. ಅವಳ ಲೇಪನದ ಹಿತಕ್ಕೆ ಕಣ್ಣುಗಳು ಮತ್ತಿನಲ್ಲಿ ಮೀಯುತ್ತಿದ್ದವು. ಕೈಯಲ್ಲಿದ್ದ ಪುಸ್ತಕವನ್ನು ಮುಚ್ಚಿಟ್ಟು , ಕಂಗಳನ್ನು ಅರೆಮುಚ್ಚಿ ಅವಳ ಕೈಯ ಮಾಲೀಶನ್ನು ಆಸ್ವಾದಿಸುತ್ತಿದ್ದೆ. ಮೆಹೆಂದಿ ಹಚ್ಚಿದ ಮೇಲೆ , ತಲೆಗೊಂದು ಶವರ್ ಕ್ಯಾಪ್ ಹಾಕಿ, "ಅಕ್ಕಾ, ಹಾಗೇ ಈ ಈಸೀ ಕುರ್ಚಿಯ ಮೇಲೆ ವಿರಮಿಸಿ. ಆಮೇಲೆ ನಾನೇ  ನಿಮ್ಮ ತಲೆ ತೊಳೆಯುತ್ತೇನೆ..," ಈ ವಿಷಯದಲ್ಲಿ ಅವಳದೇ ಆಜ್ಞೆ. ಅದರಲ್ಲಿ ಖಂಡುಗದಷ್ಟು ಹಿತವಿದ್ದುದರಿಂದ ನಾನೂ ಸುಮ್ಮನೆ ಕೇಳುತ್ತಿದ್ದೆ. ಅವಳು ಎಚ್ಚರಿಸಿದಾಗಲೇ ಸ್ನಾನದ ಮನೆಗೆ ಪ್ರವೇಶ. ಅಲ್ಲಿ ಹಂಡೆಯಲ್ಲಿ ಹದವಾಗಿ ಕಾದ ಬಿಸಿನೀರು. ಆ ಬಿಸಿನೀರಿನಲ್ಲಿ ಅವಳೇ ನನ್ನ ತಲೆಗೂದಲನ್ನು ನಾಜೂಕಾಗಿ ತಿಕ್ಕಿ ತೊಳೆದು, ಸ್ವಚ್ಚಮಾಡುತ್ತಿದ್ದಳು.  ತಲೆ ಸ್ನಾನ ಆದ ಮೇಲೆ, ಮತ್ತೆ ಹಿತ್ತಲಿನಲ್ಲಿ ಈಸೀ ಕುರ್ಚಿಯ ಮೇಲೆ ಕುಳ್ಳಿರಿಸಿ, ದೊಡ್ಡ ಟವೆಲ್ ತೆಗೆದುಕೊಂಡು, ಕೂದಲನ್ನು ನವಿರಾಗಿ ಉಜ್ಜಿ ಒರೆಸುತ್ತಿದ್ದಳು. ನನ್ನ ಕಣ್ಣುಗಳು ಮತ್ತೇ ಮತ್ತೇರಿಸಿಕೊಳ್ಳುತ್ತಿದ್ದವು. ಕೂದಲನ್ನು ಒರೆಸಿದ ನಂತರ ಅವಳು ಮಾಡುತ್ತಿದ್ದ ಮುಂದಿನ ಕೆಲಸ ಸುಖದ  ಇನ್ನೊಂದು ಮೆಟ್ಟಿಲನ್ನು ಏರಿಸುತ್ತಿತ್ತು! ಹಿಡಿಕೆಯಿರುವ ಪುಟ್ಟ ಕಬ್ಬಿಣದ ಬಾಣಲೆಯಲ್ಲಿ ಉರಿಯುತ್ತಿದ್ದ ಕೆಂಡವನ್ನು ಅದಾವ ಮಾಯೆಯಲ್ಲಿ ಸಿದ್ದಪಡಿಸುತ್ತಿದ್ದಳೋ ಗೊತ್ತಿಲ್ಲ. ಆ ಕೆಂಡದ ಮೇಲೆ ಸಾಂಭ್ರಾಣಿ ಪುಡಿಯನ್ನು ಹಾಕಿ, ನನ್ನ ಮಾರುದ್ದದ  ಕೂದಲನ್ನು ಒಂದು ಕೈಯಿಂದ  ಎತ್ತಿ  ಹಿಡಿದು, ಇನ್ನೊಂದು ಕೈಯಲ್ಲಿ ಸಾಂಭ್ರಾಣಿಯ ಹೊಗೆ ಲಾಸ್ಯವಾಡುತ್ತಿದ್ದ ಬಾಣಲೆಯನ್ನು ಕೂದಲ ಕೆಳಗೆ ಅತ್ತಿತ್ತ  ಆಡಿಸುತ್ತಾ ಶಾಖ ಕೊಡುತ್ತಿದ್ದರೆ....ಆಹಾ!...ಶಾಖವೂ ಇಷ್ಟು ತಂಪಾಗಿರುತ್ತದಾ ಎಂಬ ಅಚ್ಚರಿ ಎನಗೆ!!...ಸುಖಕ್ಕೆ ಬೇರೆ ವ್ಯಾಖ್ಯಾನವೇ ಇರಲಿಲ್ಲ...ಅದಾದ ನಂತರ  ಸುಖದ ಮತ್ತೊಂದು ಮಜಲಿನ ಪರಿಚಯ ಮಾಡಿಸುತ್ತಿದ್ದವಳೂ ಅವಳೇನೇ!!...ಸಾಂಬ್ರಾಣಿಯ ಹಿತವಾದ ಶಾಖಕ್ಕೆ ದೇಹ ಸಣ್ಣಗೆ ಬೆವರೊಡೆದಾಗ, ನಾಲಿಗೆ ಒಣಗಿದಂತೆನಿಸುತ್ತಿತ್ತು. ಇನ್ನೂ ಆ ಭಾವ ಸ್ಪಷ್ಟವಾಗುವ ಹೊತ್ತಿಗೆ ನನ್ನ ತುಟಿಯ ಬಳಿ ಘಮ್ಮೆನ್ನುವ ಫಿಲ್ಟರ್ ಕಾಫಿಯ ಲೋಟ ಪ್ರತ್ಯಕ್ಷವಾಗಿರುತ್ತಿತ್ತು! ಕಾಫಿಯ ಪರಿಮಳವನ್ನು ಆಘ್ರಾಣಿಸುತ್ತಾ, ಒಂದೊಂದೇ ಗುಟುಕನ್ನು ನಿಧಾನವಾಗಿ ಹೀರುತ್ತಿದ್ದರೆ ಸ್ವರ್ಗದ ವಿಳಾಸ ಸಿಕ್ಕಿಬಿಟ್ಟಿತೆಂದು ಗೊತ್ತಾಗಿಬಿಡುತ್ತಿತ್ತು. ಈ ಅಮಲು ನನ್ನನ್ನು  ಸಂಪೂರ್ಣವಾಗಿ ವಶಪಡಿಸಿಕೊಂಡಾದ ಮೇಲೆ, ಪ್ರತಿವಾರವೂ ಇದು ಪುರಾವರ್ತನೆಯಾಗತೊಡಗಿತು...ಗೋರಂಟಿ ಗಿಡವೂ ನಗುತ್ತಿತ್ತು!!

   ಮನೆಯಲ್ಲಿ ನಲಿದಾಡುತ್ತಿದ್ದ ಸಂತೃಪ್ತಿಯನ್ನು ನೋಡಿ ಸಾಧನೆಯ ಸುಧೆ ಇನ್ನಷ್ಟು ಗಾಢವಾಗಿ ವ್ಯಾಪಿಸತೊಡಗಿತು. ಮನೆಯ ಮೇಲ್ವಿಚಾರಣೆಯ  ಚಿಂತೆ ಇಲ್ಲ..., ಪತಿಯ ಯೋಗಕ್ಷೇಮದ ಬಗ್ಗೆ ನೆಮ್ಮಧಿಯ ಭಾವ...ಆಕೆ ಆಗ ದೇವತೆಯಂತೆ  ಕಂಡಳು...ಪತಿ ಹಿಮಾಲಯದಲ್ಲಿ ಆಸೀನನಾಗಿದ್ದ...ಬದುಕು ಇದಕ್ಕಿಂತ ಸುಂದರವಾಗಿರಲು ಸಾಧ್ಯವೇ ಇರಲಿಲ್ಲ !!!

      ತೇಲಿಹೋಗಿದ್ದೆ....ಯಶಸ್ಸು, ಕೀರ್ತಿಯ ಅಭಿಲಾಶೆಯ ಸಂಗಡದ ಭಾವಮೈಥುನದಲ್ಲಿ ಮುಳುಗಿ ಪರಮರಾಗ ಸುಖಿಯಾದೆ. ಪತಿಯ ಅಪ್ಪುಗೆಯಲ್ಲಿ ಕರಗಿ ಹೋಗುವ ಸುಖವನ್ನೂ ಮೀರಿಸುವ ಸುಖವಿದು. ಆಗಸದಲ್ಲಿ ವಿಹರಿಸುವವಳಿಗೆ ಭೂಮಿಯಲ್ಲಿಹ ಜೀವಿಯ ಮಿಸುಕಾಟ ಅರಿವಿಗೇ ಬರಲಿಲ್ಲ. ಅದಾವ ಘಳಿಗೆಯಲ್ಲಿ ಆಕೆ ಆತನ ರಾಧೆಯಾದಳೋ ಗೊತ್ತೇ ಆಗಲಿಲ್ಲ!!...ಉಪ್ಪರಿಗೆಯಲ್ಲಿದ್ದ  ಗೋರಂಟಿ ಗಿಡದ ಒಡನಾಟದಲ್ಲಿ ವಿಹರಿಸುತ್ತಿದ್ದವಳಿಗೆ , ಕೆಳಗೆ ಅಂಗಳದಲ್ಲಿ ಮಲ್ಲಿಗೆಯ ಮೊಗ್ಗೊಂದು ಹೂವಾಗಿ ಅರಳಿ, ಒಂಟಿಯಾಗಿದ್ದ ಜೀವವೊಂದನ್ನು  ತನ್ನ  ಸುಕೋಮಲ ಪಕಳೆಗಳಲ್ಲಿ ಬಂಧಿಸಿ, ನೇವರಿಸುತ್ತಿದೆಯೆಂದು!!...ಅರ್ಥವಾಗುವ ಹೊತ್ತಿಗೆ ಅವನ ಮೈಯ ತುಂಬಾ ಮಲ್ಲಿಗೆಯ ಪರಿಮಳ...ಉಪ್ಪರಿಗೆಯಲ್ಲಿನ ಬಣ್ಣ ತುಂಬುವ ಗಿಡಕ್ಕಿಂತ, ನೆಲದ ಮೇಲೆ ಬಿರಿದ ತಿಳಿಬಿಳಿಯ ಮಲ್ಲೆಯೇ ಅವನ ಆಯ್ಕೆಯಾಗಿತ್ತು. ಬಣ್ಣದ ಗಿಡವನ್ನು ತಾನೇ ಉಪ್ಪರಿಗೆ ಏರುವಂತೆ ಮಾಡಿದ್ದೆಂದು ಮರೆಯುವಷ್ಟು ಅವನು ಮಲ್ಲೆಯ ಘಮಕ್ಕೆ ಒಗ್ಗಿಕೊಂಡಿದ್ದ!!   

   ನನ್ನ ಹೆಣ್ತನಕ್ಕೆ ಇದಕ್ಕಿಂತ ಬೇರೆ ಅವಮಾನ ಬೇಕೆ?...ಇದಕ್ಕಿಂತ ನಂಬಿಕೆ ದ್ರೋಹವುಂಟೆ?...ಹಪಹಪಯುವಿಕೆಯಲ್ಲಿ ಬೆಂದೆ...ಬೆಂದು ಸುಮ್ಮನಿರಲಿಲ್ಲ...ಆಕೆಯನ್ನು ಹೊರಗಟ್ಟಿದೆ. ಮಾನಸಿಕ ಅಸ್ವಸ್ಥ ತಮ್ಮನನ್ನು ಕಟ್ಟಿಕೊಂಡು ಎಲ್ಲಿ ಹೋಗಲಿ ಎಂಬ ಅವಳ ಪ್ರಶ್ನೆಗೆ ವ್ಯಂಗ್ಯವಾಗಿ ನಕ್ಕೆ!!...ಆಕೆ ಎಲ್ಲೋ ದೂರ ಹೋದಳು. ಅವಳು ಹೋದ ಜಾಗ ಅವನಿಗೆ ಗೊತ್ತು ಎಂಬುದನ್ನು ನಾನು ಕಂಡುಹಿಡಿದೆ. ನನ್ನ ವಲಯದಿಂದ ಅವನನ್ನು ಎಂದೋ ದೂರತಳ್ಳಿದ್ದೂ ಆಗಿತ್ತು!!...ಪ್ರೀತಿ ಇರಲಿಲ್ಲ...ದ್ವೇಷವೂ ಇರಲಿಲ್ಲ!...ಸಾಮಿಪ್ಯ ಮಾತ್ರ ಬೇಡವಾಗಿತ್ತು!!!

 ಅಂದು ಮನಸಿನಿಂದ ದೂರ ಹೊದವನು, ಇಂದು ಜಡವಾಗಿ ಬಂದು ಅಂಗಳದಲ್ಲಿ  ಮಲಗಿದ್ದಾನೆ....ನನ್ನ ಕಂಗಳಲ್ಲಿ ಒಂದು ಹನಿ ಕಣ್ಣೀರೂ ಜಿನುಗುತ್ತಿಲ್ಲ....ಆಕೆ ನೋಡಿದರೆ  ಆಘಾತಗೊಂಡು ಸ್ಪೃಹೆ ತಪ್ಪಿದ್ದಾಳಂತೆ!!...ಯಾರ ಪ್ರೀತಿಯ ತೂಕ ಹೆಚ್ಚಿನದು?...ಗೊತ್ತಾಗುತ್ತಿಲ್ಲ!!...ಅಷ್ಟರಲ್ಲಿ ಒಬ್ಬ ಬಂದು ಮೂರ್ತಿಯ ಕಿವಿಯಲ್ಲಿ ಪಿಸುಗುಟ್ಟಿದ. ಮೂರ್ತಿ ತನ್ನ ಜೇಬಿನಿಂದ ನೂರು ರೂ ತೆಗೆದುಕೊಟ್ಟ. ನನ್ನ ಪ್ರಶ್ನಾರ್ಥಕದ ನೋಟ ಕ್ಕೆ, " ಏನಿಲ್ಲ, ಆಕೆಗೆ ಎಚ್ಚರವೇ ಇಲ್ಲವಂತೆ...ಆಸ್ಪತ್ರೆಗೆ ಹೋಗಲೂ ದುಡ್ಡಿಲ್ಲ ಆಕೆಯ ಮನೆಯಲ್ಲಿ...ಅದಕ್ಕೆ ದುಡ್ಡು ಕೊಟ್ಟೆ...ತಮ್ಮನ ಗೋಳು ನೋಡುವುದಕ್ಕಾಗುತ್ತಿಲ್ಲವಂತೆ", ಅಗತ್ಯಕ್ಕಿಂತ  ಉದ್ದದ  ಉತ್ತರ ಕೊಟ್ಟನಾತ.
ನಾನು ಪ್ರತಿಕ್ರಯಿಸಲಿಲ್ಲ....

      ಅವನಿದ್ದೂ ಇಲ್ಲದ  ಎಷ್ಟೋ ರಾತ್ರಿಗಳನ್ನು ಕಳೆದಿದ್ದರೂ,  ಅವನ  ಉಸಿರು ಈ ಭುವಿಯ ಮೇಲಿಲ್ಲದಂತಾದ ಮೇಲೆ ಒಂದು ರಾತ್ರಿಯನ್ನು ಕಳೆದ ಮೇಲೆ ಮನಸ್ಸು ಖಾಲಿಯಾದ ಭಾವ!...ತುಂಬಾ ಹತ್ತಿರದವರು ಘಾಸಿಗೊಳಿಸಿದಾಗ, ಅವರ ಮೇಲಿನ ಛಲಕ್ಕಾಗಿಯಾದರೂ ಮತ್ತೆ ಮತ್ತೆ ಬದುಕುತ್ತಿರುತ್ತೇವೆ. ಏಕೆಂದರೆ ಸೋತುಬಿಟ್ಟರೆ ಘಾಸಿಗೊಳಿಸಿದವರನ್ನು ಗೆಲ್ಲಿಸಿದಂತಾಗಿಬಿಡುತ್ತದೆ. ಅವರನ್ನು ಗೆಲ್ಲಿಸಲು ಇಷ್ಟವಿಲ್ಲದೆ ನಾವು ಸೋಲನ್ನು ಅಪ್ಪಿಕೊಳ್ಳುವುದಿಲ್ಲ. ಹಠಕ್ಕಾಗಿಯಾದರೂ ನೋವನ್ನು ಆಳಲು ಬಿಡುವುದಿಲ್ಲ. ಆದರೆ ಅವರೇ ಇಲ್ಲವಾದಾಗ...ಗಮ್ಯ ಶೂನ್ಯವಾದಂತೆನಿಸುತ್ತದೆ....!! ಯಾರಿಗಾಗಿ ಗೆಲ್ಲಬೇಕು...ಪ್ರತಿಸ್ಪರ್ಧಿಯೇ ಇಲ್ಲವೆಂದಾದ ಮೇಲೆ ಪಂದ್ಯವಾಡುವುದರಲ್ಲಿ ಅರ್ಥವಿದೆಯೇ...?!...ಗೊಂದಲವಾಗುತ್ತಿದೆ.

      ಮೂರ್ತಿ ಬಂದು ತಲೆತಗ್ಗಿಸಿ ನಿಂತಾಗ, ನಾನಾಗಲೇ ಸ್ವಲ್ಪ ಬಾಗಿದ್ದೆ. "ಅಮ್ಮಾ, ಆಕೆಯಿನ್ನೂ ಆಸ್ಪತ್ರೆಯಲ್ಲಿದ್ದಾಳೆ...ಅಯ್ಯಾವ್ರಿಗೆ ಹುಷಾರಿಲ್ಲ ಎಂದಾಗಿನಿಂದಲೂ ಆಕೆ ಸರಿಯಾಗಿ ಆಹಾರ ಸೇವಿಸಿಲ್ಲ...ಈಗ ಸಾವಿನ ಸುದ್ದಿ ಕೇಳಿದ ಮೇಲೆ ತುಂಬಾ ನಿತ್ರಾಣವಾಗಿದ್ದಾಳೆ...ಒಳ್ಳೆ ಚಿಕಿತ್ಸೆ ಕೊಡಿಸೋಣ  ಎಂದರೆ ಆಕೆಯ ಬಳಿ ಬಿಡಿಗಾಸೂ ಇಲ್ಲ...ತಮ್ಮನಿಗೆ ಏನೂ ಗೊತ್ತಿಲ್ಲ...", ಒಂದೊಂದೇ ಮಾತನ್ನೂ ನಿಧಾನವಾಗಿ ಹೇಳಿದ. "ಯಾಕೆ, ಹಣ-ಅಂತಸ್ತಿಗಾಗಿ ಮರುಳು ಮಾಡಿ, ಒಡೆಯನನ್ನು ಬುಟ್ಟಿಗೆ ಹಾಕಿಕೊಂಡವಳು...ದುಡ್ಡಿಲ್ಲವೇ ಅವಳ ಬಳಿ?...ನಿನ್ನ ಅಯ್ಯ ಚೆನ್ನಾಗಿ ಕೊಟ್ಟಿರಬೇಕಲ್ಲ?...", 
ಈ ಮಾತಿಗೆ ಮೂರ್ತಿ ವಿಷಾದದಿಂದ ದಿಟ್ಟಿಸಿದ ಕೆಲಕ್ಷಣಗಳ ಕಾಲ...."ಅಮ್ಮಾ..., ನಿಮಗೆ ಗೊತ್ತಿಲ್ಲ. ಅಯ್ಯಾವ್ರು  ಒಂದು ಬಿಡಿಗಾಸನ್ನೂ  ಆಕೆಗೆ ಕೊಟ್ಟಿಲ್ಲ. ಅವರ ಬಳಿಯಿದ್ದ ಸಮಸ್ತ ಆಸ್ತಿ, ಹಣ ಎಲ್ಲವನ್ನೂ ನಿಮ್ಮ ಹೆಸರಿಗೇ ಬರೆದಿದ್ದಾರೆ. ಅವರು ಯಾವ ಹಣವನ್ನೂ ಈ ಮನೆಯಿಂದ ಮುಟ್ಟಲಿಲ್ಲ....ಏಕೆಂದರೆ ಕೈ ಹಿಡಿದ ಮಡದಿಗೆ ಅನ್ಯಾಯ ಮಾಡಿ, ಪ್ರೇಯಸಿಗೆ ಹಣ ಕೊಟ್ಟೆ ಎಂಬ ಮಾತು ತಮ್ಮ ಮೇಲೆ ಬರದಿರಲಿ ಎಂದು ಮತ್ತು   ಹಣ, ಅಂತಸ್ತಿನ ಆಸೆಗಾಗಿ  ಒಡೆಯನನ್ನು ಸೆಳೆದು, ಒಡತಿಗೆ ಅನ್ಯಾಯ ಮಾಡಿದಳು ಎಂದು ಆಕೆಗೂ ಕೆಟ್ಟ ಹೆಸರು ಬರಬಾರದೆಂದು, ಎಷ್ಟು ಕಷ್ಟ ಬಂದರೂ ಇಲ್ಲಿಯ ಹಣ ಮುಟ್ಟಲಿಲ್ಲ ಅಮ್ಮಾ...ಆಕೆಯ ತೀರ್ಮಾನವೂ ಅದೇ ಆಗಿತ್ತು..., ನೀವು ಅವರ ಮೇಲೆ ತೀರಾ ಅಸಹ್ಯಿಸಿಕೊಂಡದ್ದರಿಂದ  ಈ ವಿಷಯ ಯಾವುದನ್ನೂ ತಿಳಿದುಕೊಳ್ಳಲಿಲ್ಲ...ನಿಮಗೆ ತಿಳಿಸುವ ಧೈರ್ಯವನ್ನೂ ನಾವಾರೂ ಮಾಡಲಿಲ್ಲ...ಅಷ್ಟಕ್ಕೂ ಈ ವಿಷಯ ಬೇರಾರಿಗೂ ಗೊತ್ತಿದ್ದರೆ ತಾನೇ...ನೀವು, ಅಯ್ಯ, ಆಕೆ ಮತ್ತು ನಾನು ಮಾತ್ರ  ಬಲ್ಲೆವು...ಯಾರಿಗೂ ಗೊತ್ತಾಗಬಾರದೆಂದು ಅಯ್ಯಾವ್ರು ತಾಕೀತು ಮಾಡಿದ್ದರು...ನೀವು ಯಾರ ಮುಂದೂ ತಲೆತಗ್ಗಿಸಬಾರದೆಂದು, ಅನುಕಂಪಕ್ಕೆ ಈಡಾಗಬಾರದೆಂದು ಅವರ  ಇಚ್ಛೆಯಾಗಿತ್ತು...ಈಗಲೂ ಜಗತ್ತಿನ ಕಣ್ಣಿಗೆ ನೀವೊಬ್ಬರೇ ಅಯ್ಯಾವ್ರ ಸಂಗಾತಿ...", ಮೂರ್ತಿಯ ಕಣ್ಣಲ್ಲಿ ನೀರಿತ್ತು. "ಪರವಾಗಿಲ್ವೇ...ಅನೈತಿಕ ಹಾದಿಯಲ್ಲೂ  ನೈತಿಕ  ನಡೆ....", ವ್ಯಂಗ್ಯದ ಭಾವ ನನ್ನಿಂದ ಹೋಗಲಿಲ್ಲ! ಮೂರ್ತಿ ಮತ್ತೇ ವಿಷಾದದಿಂದ ನೋಡಿದ. "ಸರಿ...ಸರಿ...ಈಗ ಆಕೆಯ ಚಿಕಿತ್ಸೆಗೆ ದುಡ್ಡು ಬೇಕಾ...?", ಕೋಪದಿಂದಲೇ ಕೇಳಿದೆ. ಅವನು ಬೇಕು ಎಂದಮೇಲೆ ಇನ್ನಷ್ಟು ಹಂಗಿಸುವ  ಇಂಗಿತ ಒಳಗಿತ್ತು!  "ಇಲ್ಲಾ...ಇಲ್ಲಾ...ಅಯ್ಯಾವ್ರು ನನ್ನನ್ನು ಸ್ವಂತ ತಮ್ಮನ ಹಾಗೆ ನೋಡಿಕೊಂಡಿದ್ದಾರೆ...ಅವರಿಗೆ ಬೇಕಾದವರ ಬಗ್ಗೆ ಕಾಳಜಿ ವಹಿಸಬೇಕಾದ್ದು ನನ್ನ ಧರ್ಮ...ಆಕೆ ನನಗೆ ತಾಯಿಯ ಸಮಾನ...ನಾನೇ ಹಣ ಕೊಡುತ್ತೇನೆ...ಅದರ ಚಿಂತೆ ಬೇಡ...ಯಾಕೋ ನಿಮಗೆ ವಿಷಯ ತಿಳಿಸಬೇಕು ಅನ್ನಿಸ್ತು, ಅದಕ್ಕೇ ಹೇಳಿದೆ....ಆಕೆ ನನಗೆ ತಾಯಿಯ ಸಮಾನ  ಆಗಿದ್ರೆ, ನೀವು ನನಗೆ ತಾಯಿಯೇ...", ಮೂರ್ತಿ ಹೊರಡಲು ಎದ್ದ. ನಾನೂ ಎದ್ದು ನಿಲ್ಲಬೇಕೆಂದುಕೊಂಡೆ. ಆದರೆ ನಿಲ್ಲಲು ತ್ರಾಣವೇ ಇಲ್ಲದ ಹಾಗಾಗಿತ್ತು!!  "ಹಾಗಾದರೆ ಇಲ್ಲಿ ಕೆಟ್ಟವರು ಯಾರು?...ನಾನೇ ಖಳನಾಯಕಿಯಾ...?!...ಇಷ್ಟು ದಿನ ಅವರಿಬ್ಬರೇ ನೀಚರೆಂದು, ಕ್ಷಮಿಸಲು ಸಹ ಅಯೋಗ್ಯರೆಂದು ಭಾವಿಸಿದ್ದೆ...ಆ ಭಾವ ಹಾಗೇ ಇರಲೆಂದು ಗೋರಂಟಿ ಗಿಡವನ್ನು ಹಾಗೇ ಉಳಿಸಿಕೊಂಡಿದ್ದೆ. ಅದನ್ನು ನೋಡಿದಾಗಲೆಲ್ಲಾ ಅವರಿಬ್ಬರ ಮೇಲಿನ ಹಗೆ ಹಸಿರಾಗುತ್ತಿದ್ದಿತು...ಆದರೆ ಈ ಕ್ಷಣದಲ್ಲಿ ನನಗೆ ಹೀಗೇಕೆ ಅನ್ನಿಸಿತು...ಈ ತಪ್ಪಿನಲ್ಲಿ ನನ್ನದೂ ಪಾಲಿದೆಯಾ....ನನ್ನ ಪಾತ್ರವೂ ಇದೆಯಾ...?", ಸಣ್ಣಗೆ ಅಪರಾಧಿ ಪ್ರಜ್ಞೆಯೊಂದು ಇಣುಕಿತು. ಆ ಪ್ರಜ್ಞೆಯನ್ನು ಅಲ್ಲಿಗೇ ತುಂಡರಿಸಲು ಮಾತು ಪ್ರಾರಂಭಿಸಿದೆ...

   "ಆಸ್ಪತ್ರೆಯಿಂದ ಬಂದ ಮೇಲೆ ಎಲ್ಲಿಗೆ ಹೋಗುತ್ತಾಳೆ ಅವಳು...ನಿನ್ನ ಮನೆಯಲ್ಲಿ ಇರುತ್ತಾಳಾ...ಆ ತಮ್ಮನ ಜೊತೆ...?!", ದನಿಯಲ್ಲಿ ಬಲವಂತವಾಗಿ ಗತ್ತನ್ನು ತುಂಬಿಕೊಂಡು ಕೇಳಿದೆ. ಮತ್ತೇ ಮೂರ್ತಿಯ ಮುಖದಲ್ಲಿ ವಿಷಾದದ ನಗೆ. "ಅದೇ ಚಿಂತೆ ನನಗೆ...ಆಕೆ ಇದ್ದ ಮನೆ ಜೋಪಡಿಯಂತದ್ದು...ಯಾವಾಗ ಬೀಳುತ್ತೋ ಗೊತ್ತಿಲ್ಲ...ನನ್ನ ಮನೆಗೆ ಕರೆದುಕೊಂಡು ಹೋಗೋಣವೆಂದರೆ, ನನ್ನ ಮಡದಿಗೆ ಅಂಥ ಉದಾರ ಮನಸ್ಸಿಲ್ಲ...ನೋಡಬೇಕು...ಏನಾದರೂ ವ್ಯವಸ್ಥೆ ಮಾಡ್ತೇನೆ...ಇಲ್ಲದಿದ್ದರೆ ಆಕೆಯ ಹಳ್ಳಿಗೇ ವಾಪಸ್ಸು ಕಳಿಸುತ್ತೇನೆ...", ಮೂರ್ತಿ ನನ್ನ  ಉತ್ತರಕ್ಕೂ ಕಾಯದೆ ಹೊಸಿಲು ದಾಟಿದ. "ಅಲ್ಲಾ..., ಬೇಕಾದರೆ ಇಲ್ಲಿಗೆ ಬಂದಿರಲಿ...ಆಕೆ ಹೋದಾಗಿನಿಂದ ಔಟ್ ಹೌಸ್ ಖಾಲಿಯಾಗಿಯೇ ಇದೆ...ಆದರೆ, ಪುಕ್ಕಟೆ ಅಲ್ಲ...ಮೊದಲಿನಂತೆ ಮನೆ ಕೆಲಸ  ಎಲ್ಲಾ ಮಾಡ್ತಾ ಇರಬೇಕು...ಅಷ್ಟಾದರೂ  ಆಸರೆ ಕೊಡದಿರುವಷ್ಟು ನಿರ್ದಯಿ ನಾನಲ್ಲ...ಆದರೆ, ಸುಮ್ಮನೆ  ಆಸರೆ  ಕೊಡುವಷ್ಟು ಮಹಾತ್ಮಳೂ ನಾನಲ್ಲ...ಏನು ಮಾಡೋದು....ಎಷ್ಟೆಂದರೂ  ನನ್ನ ಗಂಡನಾಗಿದ್ದವನ ಉನ್ಮತ್ತ ಉಸಿರನ್ನು  ಗಾಳಿಯಲ್ಲಿ ಲೀನವಾಗಲು ಬಿಡದೆ ತನ್ನೊಡಲಲ್ಲಿ ಬಂಧಿಸಿದವಳಲ್ಲವೇ...", ದುಃಖ, ನಿರಾಸೆಯ ದನಿ ನನ್ನದು. ಅದರ ಜೊತೆಗೇ ಬಂದ  ಇನ್ನೊಂದು ಮಾತು "ಈಗ ಅವನೇ ಇಲ್ಲವೆಂದ ಮೇಲೆ ಆಕೆಯ ಮೇಲೆ ಕೋಪವೇಕೆ...ತಾಪವೇಕೆ....", ಎಂಬುದು ಕೊರಳ ಅಂಚಿನಲ್ಲೇ ಕರಗಿ ಹೋಗಿದ್ದರಿಂದ ಹೊರಗೆ ಬರಲಿಲ್ಲ! ಮೂರ್ತಿ ಮಾತ್ರ  ಒಂದೆರಡು ನಿಮಿಷ  ಮೌನವಾಗಿ ನಿಂತೇ ಇದ್ದ.  ಉತ್ತರಕ್ಕಾಗಿ  ಕಾಯುತ್ತಿದ್ದೆ...ಮೂರ್ತಿ ನನ್ನ ಕಂಗಳನ್ನೇ ದಿಟ್ಟಿಸುತ್ತಾ, "ಅಮ್ಮಾ, ಈಗಲಾದರೂ ಸತ್ಯವನ್ನು ನಾನು ಹೇಳಲೇ ಬೇಕು...ಯಾವಾಗಲೋ ಹೇಳಬೇಕೆಂದಿದ್ದೆ...ಆದರೆ ನೀವು ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ...ಆಗ ಹೇಳಿದ್ದರೂ  ನೀವು ನಂಬುತ್ತಲೂ ಇರಲಿಲ್ಲ...ಅಮ್ಮಾ..., ಅಯ್ಯಾವ್ರು ಮತ್ತು ಆಕೆಯ ಮಧ್ಯೆ ಇದ್ದದ್ದು ಊಹೆಗೆ ನಿಲುಕದ ಬಂಧ...ಅದನ್ನು ಸ್ನೇಹವೆನ್ನಬೇಕೋ, ಪ್ರೇಮವೆನ್ನಬೇಕೋ, ವಾತ್ಸಲ್ಯವೆನ್ನಬೇಕೋ....ತಿಳಿಯುತ್ತಿಲ್ಲ.  ನನ್ನ ಪ್ರಕಾರ ಅವರಿಬ್ಬರ ಮಧ್ಯೆ ಇದ್ದದ್ದು ಅನ್ಯೋನ್ಯತೆ...ಅವಲಂಬಿತ್ವ...ಇಬ್ಬರ ಭಾವನೆಗಳು ಜೊತೆಯಾಗಿದ್ದವು, ಬೆಸೆದಿದ್ದವು....ಆದರೆ ಎಂದೂ ಹಾಸಿಗೆಯನ್ನು ಹಂಚಿಕೊಂಡವರಲ್ಲ....ಆ ವಿಷಯದಲ್ಲಿ ಅಯ್ಯಾವ್ರು ನಿಮಗೆಂದೂ ದ್ರೋಹ ಮಾಡಲಿಲ್ಲ.... ಗಂಡಸು ಮತ್ತು ಹೆಂಗಸಿನ ನಡುವೆ ಪರಿಶುದ್ಧವಾದ ಸ್ನೇಹವಿರಲು, ಅನ್ಯೋನ್ಯತೆಯಿರಲು ಸಾಧ್ಯವೇ ಇಲ್ಲವೆಂಬ ಅಲಿಖಿತ ನಿಯಮ  ಈ ಜಗತ್ತಿನಲ್ಲಿ ಇರುವವರೆಗೂ ಈ ಅಭಿಪ್ರಾಯವೂ ಇದ್ದೇ ಇರುತ್ತದೆ....ಹಾಗಾಗಿ ನಿಮ್ಮದೂ ತಪ್ಪಿಲ್ಲ... ಈಗಲೂ ನಿಮಗೆ ಹೇಳಬಾರದು ಎಂದೂ ಅನ್ನಿಸಿದ್ದು ನಿಜ... ಆದರೆ ನೆನ್ನೆ ಅಯ್ಯಾವ್ರ ಶವವನ್ನೂ ನೋಡುವಾಗಲೂ ನಿಮ್ಮ ಕಣ್ಣಲ್ಲಿ ಕೋಪ, ತಿರಸ್ಕಾರದ ಭಾವ ಇದ್ದುದನ್ನು ನಾನು ಗುರುತಿಸಿದೆ...ಇನ್ನಾದರೂ ಅವರ ಬಗ್ಗೆ ನೀವು ಹಾಗೆ ಭಾವಿಸಬಾರದೆಂದು ಈ ಸತ್ಯವನ್ನು ಹೇಳಿದೆ, ಅಷ್ಟೇ...", ಮೂರ್ತಿ ಮುಂದೆ ಮಾತನಾಡಲಾಗದೆ ಅಲ್ಲಿಂದ ಸರಸರನೆ ನಡೆದು ಹೋಗಿಬಿಟ್ಟ....ನನ್ನ ಕೆನ್ನೆಗಳು ಮಾತ್ರ  ಜಲಪಾತದಲ್ಲಿ  ಮೀಯುತ್ತಿದ್ದವು...

                                                                            -ಕಿರಣ್ ಪ್ರಸಾದ್ ರಾಜನಹಳ್ಳಿ

# 691/ಸಿ, "ಅತೃ", 22ನೇ ಕ್ರಾಸ್, 19ನೇ ಮೇನ್,
ಹೆಚ್.ಎಸ್.ಆರ್ 2ನೇ ಸೆಕ್ಟರ್,
ಬೆಂಗಳೂರು-560102
ಫೋನ್: 9449459766
Show quoted text